Monthly Archive: May 2012

ಸಾರಗ್ರಾಹಿಯ ರಸೋದ್ಗಾರಗಳು – 7

     ಪಂ. ಸುಧಾಕರ  ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡು ಹದಿಮೂರು ವರ್ಷಗಳ ಕಾಲ ಸೆರೆವಾಸ ಅನುಭವಿಸಿದವರು. ಕ್ರಾಂತಿಕಾರಿ ಭಗತ್ ಸಿಂಹನ ಗುರುವಾಗಿದ್ದವರು. ಶಿಷ್ಯ ಕುಪ್ರಸಿದ್ಧ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸೇಡು ತೀರಿಸಿ ಗಲ್ಲಿಗೇರಿಸಲ್ಪಟ್ಟು ಹುತಾತ್ಮನಾದರೆ, ಗುರು ಹತ್ಯಾಕಾಂಡದ ಪ್ರತ್ಯಕ್ಷ ಸಾಕ್ಷಿಯಾಗಿದ್ದವರು. ಅಷ್ಟೇ ಅಲ್ಲ, ಗಾಂಧೀಜಿಯವರ ಸೂಚನೆಯಂತೆ ಅಲ್ಲಿ ಸತ್ತವರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಿದವರು. 116 ವರ್ಷಗಳ ಪಂಡಿತರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿ, ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 
-ಕ.ವೆಂ.ನಾಗರಾಜ್.
****************
ಆತ್ಮವಂಚನೆ ಬೇಡ

 ಸರ್ದಾರ್ ಭಗತ್ ಸಿಂಗ್ ಹೆಸರು ಕೇಳಿದ್ದೀರಿ, ಮಹಾನ್ ಕ್ರಾಂತಿಕಾರಿ, ಅವನು ನನ್ನ ಶಿಷ್ಯ. ಲಾಹೋರಿನಲ್ಲಿ ದಯಾನಂದ ಆರ್ಯ ವೇದಿಕ್ ಕಾಲೇಜಿನಲ್ಲಿ ಅವನು ಓದುತ್ತಿದ್ದಾಗ ನಾನು ಗಣಿತದ ಪಾಠ ಹೇಳಲು ಹೋಗುತ್ತಿದ್ದೆ. ಒಂದು ಸಲ ಅವನು ನನ್ನ ಹತ್ತಿರ ಬಂದು ಹೇಳಿದ್ದ – “ಪಂಡಿತಜಿ, ನಾನು ಲೆಕ್ಕದಲ್ಲಿ ಸ್ವಲ್ಪ ಹಿಂದೆ. ಕಡಿಮೆ ಅಂಕ ಬಂದರೆ, ಕರುಣೆ ಇದ್ದರೆ ನನಗೆ ಐದು ಅಂಕ ಸೇರಿಸಿ ಕೊಟ್ಟರೆ ಉಪಕಾರವಾಗುತ್ತದೆ”. ನಾನು ಹೇಳಿದ್ದೆ- “ಲಕ್ಷಣವಾಗಿ ಫೇಲಾಗು. ನಾನು ಅಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ”. ‘ಇವನು ನನ್ನ ಶಿಷ್ಯ, ಇವನು ಉದ್ಧಾರವಾಗಲಿ’ ಎಂದು ನಾನು ಅಂಕ ಸೇರಿಸಿಕೊಟ್ಟು ನನ್ನ ಆತ್ಮವಂಚನೆ ಮಾಡಿಕೊಳ್ಳಲು ನಾನು ಸಿದ್ಧನಿರಲಿಲ್ಲ.
ಬದುಕೋಣ
    ಸ್ವಲ್ಪ ಯೋಚನೆ ಮಾಡಿ, ಒಂದು ಜೈಲಿನಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಳಿತುಕೊಂಡರೆ ಎಷ್ಟು ಬೇಸರವಾಗುತ್ತದೆ. ಅಂತಹುದರಲ್ಲಿ ಒಟ್ಟು ೧೩ ವರ್ಷ ಜೈಲಿನಲ್ಲಿ -ಕರಾಚಿಯಿಂದ ಹಿಡಿದು ಬೆಂಗಳೂರು ಸೆಂಟ್ರಲ್ ಜೈಲಿನವರೆಗೆ, ಕೊಚ್ಚಿ, ಆಂಧ್ರ ಸೇರಿ ಹಲವು ಜೈಲುಗಳಲ್ಲಿ -ಕಳೆದಿದ್ದೇನೆ. ಅಲ್ಲಿನ ರೊಟ್ಟಿ, ಅನ್ನ ಎಲ್ಲಾ ತಿಂದಿದ್ದೇನೆ. ಅದೂ ಎಂತಹ ರೊಟ್ಟಿ? ಹಿಟ್ಟಿನಲ್ಲಿ ಬೇಕಂತಲೇ ಮರಳು ಸೇರಿಸಿ ತಿನ್ನಕ್ಕಾಗಬಾರದು ಎಂದು ಮಾಡಿದ್ದ ರೊಟ್ಟಿ. ಸಾರಿನಲ್ಲೂ ಬೇಳೆಕಾಳು ಕಡಿಮೆ, ಮರಳೇ ಜಾಸ್ತಿ. ಅದನ್ನೇ ತಿಂದು ಬದುಕಬೇಕು. ಭಗವಂತನ ದಯೆ ಅಂತ ಕಾಣುತ್ತೆ, ಅಂತಹುದನ್ನು ತಿಂದೂ ಸಹ ಈಗಲೂ ಬದುಕಿದ್ದೀನಿ, ಇನ್ನೂ ಸಾಯುವ ಯೋಚನೆಯಿಲ್ಲ್ಲ. ಏಕೆಂದರೆ ಬದುಕುವುದು ಕಷ್ಟ, ಸಾಯುವುದು ಸುಲಭ, ಬಹಳ ಸುಲಭ. ಸುಲಭವೆಂದು ಹೇಳಿ ಸಾಯಲು ಹೋಗಬಾರದು. ಪೂರ್ಣವಾಗಿ ಬದುಕಬೇಕು.
Optimism is life, Pessimism is death itself!
     ವೇದ ಹೇಳುತ್ತೆ, ಸರಿಯಾಗಿ ಬಾಳಿದರೆ ಜಮದಗ್ನಿಗೆ ೩೦೦ ವರ್ಷ ಆಯಸ್ಸು ಅಂತ. ಜಮದಗ್ನಿ ಅಂದರೆ ಋಷಿಯ ಹೆಸರಲ್ಲ, ಅಗ್ನಿಯನ್ನು ತನ್ನ ವಶದಲ್ಲಿಟ್ಟುಕೊಂಡವನು, ಅಗ್ನಿಹೋತ್ರ ಮಾಡುವವನು -ಗೃಹಸ್ಥ/ಗೃಹಿಣಿ – ಅವರು ಜಮದಗ್ನಿ ಎಂದು ಅರ್ಥ. ನಿಜವಾಗಿ ಅರ್ಥ ಇಟ್ಟುಕೊಂಡು ಮಾಡಿದರೆ ಅಂದರೆ ಅಗ್ನಿಯನ್ನು ವಶದಲ್ಲಿಟ್ಟುಕೊಂಡರೆ ೩೦೦ ವರ್ಷ ಬದುಕಬಹುದು. ಅಷ್ಟೊಂದು ಭಗವಂತ ನಮಗೆ ಹೇಳಿರುವಾಗ ನಾವು ಯಾಕೆ ಸಾಯಬೇಕು, ಸಾಯಬೇಕು ಅನ್ನಬೇಕು? ಆ ಸಾವು ಇದೆಯಲ್ಲಾ, ಅದು ನಿರ್ಲಜ್ಜ. ನೀವು ಕರೆದರೂ ಬರುತ್ತೆ, ಕರೆಯದಿದ್ದರೂ ಬರುತ್ತೆ. ಯಾವತ್ತೂ ನೀವು ಸಾಯಬೇಕು ಎಂದು ಆಸೆಪಡಲೇಬೇಡಿ. ‘ಜೀವೇದ ಶರದಶ್ಶತಮ್’ ಕನಿಷ್ಠ ಪಕ್ಷ ನೂರು ವರ್ಷ ಆದರೂ ಬದುಕಿರಬೇಕು, ನೂರು ವರ್ಷಕ್ಕಿಂತ ಹೆಚ್ಚುಕಾಲ ಬದುಕೋಣ. ಲೋಕಾರೂಢಿ ‘ಶತಾಯುರ್ ವಯ ಪುರುಷಃ’ ಅಂತ, ಒಬ್ಬ ಮನುಷ್ಯನ ವಯಸ್ಸು ನೂರು ವರ್ಷ, ನೂರು! ಆಶ್ಚರ್ಯ ಪಡಬೇಡಿ, ನಾವು ಆಸ್ತಿಕರು, ಭಗವಂತನಲ್ಲಿ ನಂಬಿಕೆ ಇರುವವರು, ಜೀವನವನ್ನು ಪರಿಪಕ್ವವಾಗಿ ಇಟ್ಟುಕೊಳ್ಳಬೇಕು ಅನ್ನುವವರು, ನಾವು ಏಕೆ ಆಸೆ ಕಳೆದುಕೊಳ್ಳಬೇಕು? ರಷ್ಯಾದಲ್ಲಿ ಕೆಲವು ಪ್ರದೇಶಗಳಿವೆ, ಡಡ್ ಸೀ ಅಂತ, ಸತ್ತ ಸಮುದ್ರ, ಅದು ಯಾವ ಕಾಲದಲ್ಲಿ ನೀರಿತ್ತೋ, ಈಗ ನೀರಿಲ್ಲ, ಅದರ ಸುತ್ತಮುತ್ತ ಎಲ್ಲಾ ಸಾವೇ! ಅಂತಹ ಕಡೆ ಕೂಡ ಒಬ್ಬ ಮುದುಕ ೧೯೦ ವರ್ಷ ಬದುಕಿದ್ದನಂತೆ. ತಿನ್ನಬಾರದ್ದೆಲ್ಲಾ ತಿಂದುಕೊಂಡು, ಕುಡಿಯಬಾರದ್ದೆಲ್ಲಾ ಕುಡಿದುಕೊಂಡು, ಮಾಡಬಾರದ್ದೆಲ್ಲಾ ಮಾಡಿಕೊಂಡು ೧೯೦ ವರ್ಷ ಬದುಕಿದ್ದ. ಅಂಥವನೇ ಅಷ್ಟು ಕಾಲ ಬದುಕಿದ್ದಾಗ ಪವಿತ್ರವಾಗಿ ಬಾಳುವ ನಮಗೇಕೆ ಸಾಧ್ಯವಿಲ್ಲ? ನಾವು ಸೋತುಬಿಡುತ್ತೇವೆ, ಅದೇ ಕಷ್ಟ,  ಸೋಲಿನ ಮನೋಭಾವ ಇದೆಯಲ್ಲಾ, ನಿರಾಶಾವಾದ ಅದು ತುಂಬಾ ಕೆಟ್ಟದ್ದು. ನಾನು ದುರ್ಯೋಧನನ ಉದಾಹರಣೆ ಕೊಡುತ್ತೇನೆ. ಭೀಷ್ಮ ಹೋದರು, ದ್ರೋಣ ಹೋದರು, ಕರ್ಣನೂ ಹೋದ. ಆದರೆ ಶಲ್ಯ ಇನ್ನೂ ಇದ್ದಾನೆ, ಅವನು ಪಾಂಡವರನ್ನು ಜಯಿಸಿ ನನಗೆ ಗೆಲುವು ತಂದುಕೊಡುತ್ತಾನೆ ಎಂಬ ವಿಶ್ವಾಸ ಅವನಿಗೆ. ಶಲ್ಯನೂ ಹೋದ, ದುರ್ಯೋಧನನೂ ಸತ್ತ, ಅದು ಬೇರೆ ವಿಷಯ. ಬದುಕುವ ಅವನ ಆತ್ಮವಿಶ್ವಾಸ ಮೆಚ್ಚುವಂತಹುದು. ಮುಖ್ಯವಾಗಿ ನನ್ನ ಗುರು ಸ್ವಾಮಿ ಶ್ರದ್ಧಾನಂದಜೀಯವರು ಹೇಳುತ್ತಿದ್ದರು -’Optimism is life, Pessimism is death itself!’
ಸಾವನ್ನು ಸ್ವಾಗತಿಸುವ ಧೈರ್ಯ
     ಸಾವನ್ನು ಏಕೆ ಬಯಸಬೇಕು? ಅದು ಬಂದೇ ಬರುತ್ತೆ, ಬಂದಾಗ ಹೋಗೋಣ, ಸಾವು ಬಂದಾಗ ಸ್ವಾಗತಿಸೋಣ, ಯಮನಿಗೆ ನಮಸ್ಕರಿಸಿ ಹೊರಡೋಣ. ಯಮ ಅಂದರೆ ಕೋಣನ ಮೇಲೆ ಕುಳಿತುಕೊಂಡು ಬರುತ್ತಾನೆ ಅಂತಾರಲ್ಲ, ಅವನಲ್ಲ, ಸಂಪೂರ್ಣ ಜಗತ್ತನ್ನೇ ತನ್ನ ವಶದಲ್ಲಿಟ್ಟುಕೊಂಡಿದ್ದಾನಲ್ಲಾ, ಜಗನ್ನಿಯಾಮಕ ಭಗವಂತ, ಅವನು ಯಮ! ಅವನು ಅನ್ಯಾಯವಾಗಿ ಯಾರಿಗೂ ಸಾವು ಕೊಡುವುದಿಲ್ಲ, ಯಾವನ ಇಚ್ಛೆಯಿಂದಲೇ ಅಮೃತ ಸಿಕ್ಕುತ್ತೋ, ಯಾವನ ಇಚ್ಛೆಯಿಂದ ಸಾವು ಸಿಗುತ್ತದೋ ಆ ಯಮನಿಗೆ ನಮಸ್ಕಾರ! ಸಾವು, ಬಾಳು ಎರಡೂ ಅವನ ವಶದಲ್ಲೇ ಇದೆ, ಆ ಪರಮಾತ್ಮ ಯಾವ ಜೀವ ಎಷ್ಟು ಬಾಳಬೇಕು, ಬದುಕಬೇಕು ಅದನ್ನು ನಿರ್ಧರಿಸಿರುತ್ತಾನೆ, ಅದು ತೀರುವವರೆಗೂ ಸಾಯುವಹಾಗಿಲ್ಲ, ಬಾವಿಗೆ ಬಿದ್ದು, ನೇಣು ಹಾಕಿಕೊಂಡು ಮುಂಚೆಯೇ ಸತ್ತರೆ ಅದು ಭಗವದಿಚ್ಛೆಗೆ ವಿರುದ್ಧ, ನಿಜವಾದ ಸಾವಲ್ಲ, ಅಪಮೃತ್ಯು, ಅದು ಯಾರಿಗೂ ಬೇಡ, ಅದಾಗೇ ಸಾವು ಬಂದಾಗ ಬಾ ಮೃತ್ಯು, ಕರೆದುಕೊಂಡು ಹೋಗು ಎಂದು ಹೇಳುವ ಧೈರ್ಯ ನಮಗೆಲ್ಲಿ ಬರಬೇಕು! ಸ್ವಾಮಿ ದಯಾನಂದರಿಗೆ ಸಾವು ಬಂದಾಗ ಅವರು ಅಳುಕಲಿಲ್ಲ, ಭಗವಂತ, ನಿನ್ನ ಇಚ್ಛೆ, ಕರೆದುಕೊಂಡು ಹೋಗು ಎಂದರು.* ಅವರಿಗೆ ಸಾಯಬೇಕೆಂದಿರಲಿಲ್ಲ. ಭಗವಂತನ ಇಚ್ಛೆಯಿದ್ದರಿಂದ ಸಾಯಲು ಸಿದ್ಧರಾದರು, ಅಷ್ಟೆ. ಬದುಕುವುದಕ್ಕೆ ಆ ಹಟ ಇರಬೇಕು. ಯಾವತ್ತೂ ಸಾಯಬೇಕೆಂದು ಬಯಸಬೇಡಿ. ಏಕೆಂದರೆ ಆ ಆಸೆ ಇದೆಯಲ್ಲಾ ಅದು ದುರಾಸೆ, ಅದು ನಮ್ಮ ನಿಜವಾದ ನಿಶ್ಚಯ ಶಕ್ತಿಯನ್ನೇ ಹಾಳುಮಾಡಿಬಿಡುತ್ತದೆ.
*********************************
[*ಟಿಪ್ಪಣಿ: ಸ್ವಾಮಿ ದಯಾನಂದರ ಸಾವು:

 

  ಮಹರ್ಷಿ ದಯಾನಂದ ಸರಸ್ವತಿಯವರದು ಸಹಜ ಸಾವಲ್ಲ. ಕೊಲೆ ಎನ್ನಬಹುದು. ೧೮೮೩ರಲ್ಲಿ ಜೋಧಪುರದ ಮಹಾರಾಜರ ಆಹ್ವಾನದ ಮೇಲೆ ಅವರ ಅತಿಥಿಯಾಗಿ ಹೋಗಿ ಅರಮನೆಯಲ್ಲಿ ತಂಗಿದ್ದರು. ಮಹಾರಾಜನಿಗೆ ಅವರ ಶಿಷ್ಯನಾಗಿ ಉಪದೇಶಗಳನ್ನು ತಿಳಿಯುವ ಆಸಕ್ತಿಯಿತ್ತು. ಒಮ್ಮೆ ದಯಾನಂದರು ಮಹಾರಾಜರ ವಿಶ್ರಾಂತಿ ಕೊಠಡಿಗೆ ಹೋದ ಸಂದರ್ಭದಲ್ಲಿ ಮಹಾರಾಜರು ನನ್ಹಿಜಾನ್ ಎಂಬ ನೃತ್ಯಗಾತಿಯ ಜೊತೆಗೆ ಇದ್ದುದನ್ನು ಕಂಡರು. ದಯಾನಂದರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಧೈರ್ಯವಾಗಿ ಮತ್ತು ನೇರವಾಗಿ ಮಹಾರಾಜರಿಗೆ ಸ್ತ್ರೀ ಸಹವಾಸ ಬಿಡಲು ಮತ್ತು ಒಬ್ಬ ನಿಜವಾದ ಆರ್ಯ(ಸಭ್ಯ)ನಂತೆ ಧರ್ಮ ಪಾಲನೆ ಮಾಡುವಂತೆ ಹೇಳಿದರು. ದಯಾನಂದರ ಸಲಹೆ ಆ ನೃತ್ಯಗಾತಿಯನ್ನು ಕೆರಳಿಸಿತು ಮತ್ತು ಸೇಡಿಗಾಗಿ ಹಪಹಪಿಸುವಂತೆ ಮಾಡಿತು. ಅಡಿಗೆ ಭಟ್ಟನಿಗೆ ಆಕೆ ಲಂಚ ನೀಡಿ ದಯಾನಂದರಿಗೆ ಆಹಾರದಲ್ಲಿ ವಿಷ ಬೆರೆಸಿ ಕೊಡಲು ಒಪ್ಪಿಸಿದಳು. ಅಡಿಗೆ ಭಟ್ಟ ರಾತ್ರಿಯ ಮಲಗುವ ಸಮಯದಲ್ಲಿ ವಿಷ ಮತ್ತು ನುಣ್ಣಗೆ ಪುಡಿ ಮಾಡಿದ ಗಾಜಿನ ಹರಳುಗಳನ್ನು ಸೇರಿಸಿದ ಹಾಲನ್ನು ದಯಾನಂದರಿಗೆ ಕುಡಿಯಲು ಕೊಟ್ಟ. ಹಾಲು ಕುಡಿದು ಮಲಗಿದ ದಯಾನಂದರಿಗೆ ಕೆಲ ಸಮಯದಲ್ಲಿಯೇ ಹೊಟ್ಟೆಯ ಒಳಗೆ ಸುಡುವ ಅನುಭವವಾದಾಗ ಎಚ್ಚರವಾಗಿ ತಮಗೆ ವಿಷ ಉಣಿಸಿದ್ದಾರೆಂದು ಗೊತ್ತಾಗಿ ವಿಷವನ್ನು ಹೊರಹಾಕಲು ಪ್ರಯತ್ನಿಸಿದರು. ಆದರೆ ಅದಾಗಲೇ ತಡವಾಗಿತ್ತು. ವಿಷವಾಗಲೇ ರಕ್ತ ಸೇರಿಬಿಟ್ಟಿತ್ತು. ಅವರು ಹಾಸಿಗೆ ಹಿಡಿದು ಅಸಾಧ್ಯ ನೋವನ್ನು ಸಹಿಸಬೇಕಾಯಿತು. ಅನೇಕ ವೈದ್ಯರುಗಳು ನೀಡಿದ ಚಿಕಿತ್ಸೆ ಫಲಕಾರಿ ಆಗಲಿಲ್ಲ. ಅವರ ದೇಹದಲ್ಲಿ ಎಲ್ಲೆಲ್ಲೂ ರಕ್ತ ಸೋರುವ ಹುಣ್ಣುಗಳಾದವು. ಅವರ ಸ್ಥಿತಿಯನ್ನು ನೋಡಲಾಗದ ಅಡಿಗೆ ಭಟ್ಟ ಕಣ್ಣೀರು ಸುರಿಸುತ್ತಾ ಬಂದು ದಯಾನಂದರಲ್ಲಿ ತನ್ನ ತಪ್ಪು ಒಪ್ಪಿಕೊಂಡ. ಅಂತಹ ಸಾವಿನ ಸಮೀಪದಲ್ಲಿ ಇದ್ದಾಗಲೂ ದಯಾನಂದರು ಆತನನ್ನು ಕ್ಷಮಿಸಿದ್ದಲ್ಲದೆ, ಅವನಿಗೆ ಒಂದು ಥೈಲಿಯಲ್ಲಿ ಹಣ ನೀಡಿ ಆದಷ್ಟು ಬೇಗ ರಾಜ್ಯ ತೊರೆದು ಹೋಗಿ ಮಹಾರಾಜರ ಭಟರಿಂದ ಜೀವ ಉಳಿಸಿಕೊಳ್ಳಲು ಸಲಹೆ ನೀಡಿದ್ದರು. ೩೦-೧೦-೧೯೮೩ರಲ್ಲಿ ಅವರು ದೇಹತ್ಯಾಗ ಮಾಡಿದರು. ಅಂತಹ ಸಾವನ್ನೂ ಸಹ ಅವರು ಆದರದಿಂದ ಬರಮಾಡಿಕೊಂಡಿದ್ದರು.
ಲಗತ್ತು ಚಿತ್ರ: ಮಹರ್ಷಿ ದಯಾನಂದ ಸರಸ್ವತಿಯವರ ನೆನಪಿಗೆ ಬಿಡುಗಡೆಯಾಗಿದ್ದ 15 ನಯಾಪೈಸೆಗಳ ಅಂಚೆ ಚೀಟಿ.]
***********************
ಹಿಂದಿನ ಲೇಖನಕ್ಕೆ ಲಿಂಕ್:

 

 

Permanent link to this article: http://www.vedasudhe.com/1200/

ಸಾರಗ್ರಾಹಿಯ ರಸೋದ್ಗಾರಗಳು – 6

     ಪಂ. ಸುಧಾಕರ ಚತುರ್ವೇದಿಯವರು ಗಾಂಧೀಜಿಯ ಒಡನಾಡಿಯಾಗಿದ್ದವರು.    ನೇರವಾಗಿ ಅವರ ಕುರಿತು ತಮ್ಮ ಅನಿಸಿಕೆಗಳನ್ನು ಅವರಿಗೇ ಹೇಳುತ್ತಿದ್ದವರು.    ಗಾಂಧೀಜಿ ಸಹ ಅವರ ಕುರಿತು ಗೌರವವುಳ್ಳವರಾಗಿದ್ದರು. 116 ವರ್ಷಗಳಾಗಿರುವ ಪಂಡಿತರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ ಅವರ ವಿಚಾರಗಳು ಸ್ವವಿಮರ್ಶೆಗೆ, ಆಲೋಚನೆಗೆ ಎಡೆ ಮಾಡಿಕೊಟ್ಟಲ್ಲಿ ಲೇಖನ ಸಾರ್ಥಕವಾದಂತೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.

****************

ಗಾಂಧೀಜಿ ಮತ್ತು ಉಪವಾಸ

     ಗಾಂಧೀಜಿ ಜೊತೆ ಮಾತನಾಡುವಾಗ ನಾನು ಹೇಳುತ್ತಿದ್ದೆ – “ಗಾಂಧೀಜಿ, ನೀವು ಮಾತುಮಾತಿಗೆ ಉಪವಾಸ, ಉಪವಾಸ ಅಂತ ಮಾಡ್ತೀರಲ್ಲಾ, ಅದು ಹಿಂಸೆಯಲ್ಲವೋ?” ಗಾಂಧೀಜಿ “ಯಾಕಪ್ಪಾ ಹಾಗೆ ಹೇಳ್ತೀಯಾ?” ಅಂದಾಗ ನಾನು ಕೇಳಿದ್ದೆ: “ನೀವು ಬೇರೆಯವರನ್ನು  ಉಪವಾಸ ಕೆಡವಿದರೆ ಅದೂ ಪಾಪವೇ, ನೀವು ಉಪವಾಸ ಮಾಡಿದರೆ ನಿಮ್ಮ ಆತ್ಮಕ್ಕೆ ಉಪವಾಸ ಮಾಡಿಸಿದ ಹಾಗೆ ಆಯಿತು, ಇದು ಎಲ್ಲಿಯ ಪುಣ್ಯ? ಇದರಿಂದ ಯಾರಿಗೆ ಲಾಭ?” ಗಾಂಧಿ ಒಂದೇ ಮಾತು ಹೇಳಿಬಿಟ್ಟರು: “ಅಪ್ಪಾ, ನೀನೇ ಮಹಾತ್ಮ, ನಾನಲ್ಲ.”  ನನ್ನದು ಸ್ವಲ್ಪ ಚೇಷ್ಟೆ ಸ್ವಭಾವ, ಹೇಳಿದೆ: “ಗಾಂಧೀಜಿ, ದಯವಿಟ್ಟು ನನ್ನನ್ನು ಮಹಾತ್ಮ ಅಂತ ಕರೀಬೇಡಿ, ಯಾಕೆ ಅಂದರೆ, ಮಹಾತ್ಮನಾದ ರಾವಣ ಸೀತೆಯನ್ನು ಅಪಹರಿಸಿದ ಅಂತ ರಾಮಾಯಣದಲ್ಲಿದೆ. ನಾನು ಯಾವ ಸೀತೆಯನ್ನೂ ಅಪಹರಿಸಿಲ್ಲ. ಆದ್ದರಿಂದ ನನಗೆ ಮಹಾತ್ಮ ಅನ್ನಬೇಡಿ, ಅದನ್ನು ನೀವೇ ಇಟ್ಟುಕೊಳ್ಳಿ.” “ನಿನ್ನ ಹತ್ತಿರ ತರ್ಕ ಮಾಡುವುದಿಲ್ಲಪ್ಪಾ” ಎಂದು ನಗುತ್ತಾ ಹೇಳಿದ ಗಾಂಧೀಜಿ ಸುಮ್ಮನಾಗಿಬಿಟ್ಟರು.

      ಬಡತನ ಅನ್ನುವುದು ಒಂದು ಅಭಿಶಾಪ. ಭಗವಂತ ಸರ್ವೈಶ್ಯರ್ಯ ಸಂಪನ್ನ. ಅವನ ಮಕ್ಕಳು ನಾವು ಬಡತನದಲ್ಲಿದ್ದರೆ ಅವನಿಗೆ ಸಂತೋಷವಿರುತ್ತೇನು? ಅವನ ಮಕ್ಕಳು ನಾವು ಚೆನ್ನಾಗಿ ತಿನ್ನಬೇಕು, ಸುಖವಾಗಿರಬೇಕು, ಅದು ಭಗವಂತನ ಆಸೆ. ನಾವು ಬಲವಂತವಾಗಿ ಉಪವಾಸ ಮಾಡಿದರೆ ಅವನಿಗೆ ಸಂತೋಷ ಆಗುತ್ತೆ ಅಂತ ಮಾಡಿದ್ದೀರಾ?

      ಗಾಂಧೀಜಿ ಪತ್ನಿ ಕಸ್ತೂರಿಬಾ ಹೇಳುತ್ತಿದ್ದರು, “ನಮ್ಮ ಯಜಮಾನರು ೭ ದಿನ, ೧೫ ದಿನ, ೨೧ ದಿನ ಹೀಗೆಲ್ಲಾ ಉಪವಾಸ ಮಾಡುತ್ತಾರೆ,  ಸ್ವಲ್ಪ ಸ್ವಲ್ಪ ದಿನ ಏಕೆ, ಪೂರ್ಣ ಸಾಯುವವರೆಗೂ ಉಪವಾಸ ಮಾಡಿ ಸತ್ತುಬಿಡಲಿ, ನಾಲ್ಕು ದಿನ ಅತ್ತು ಸುಮ್ಮನಾಗುತ್ತೇನೆ, ನಂತರ ಮರೆತುಬಿಡುತ್ತೇನೆ” ಅಂತ. ಆ ಸಾಧ್ವಿಯ ಬಾಯಲ್ಲಿ, ಮಹಾಪತಿವ್ರತೆಯ ಬಾಯಲ್ಲಿ ಅಂತಹ ಮಾತು ಬರಬೇಕಾದರೆ ಎಷ್ಟು ನೊಂದಿರಬೇಕು, ಊಹಿಸಿ.

ಭಗವಂತನಿಗೆ ಪ್ರಿಯವಾದ ಕೆಲಸ

     ಭಗವಂತನಿಗೆ ಅನೇಕ ಹೆಸರುಗಳಿವೆ, ಸೋಮ ಅನ್ನುವುದೂ ಅವನ ಹೆಸರೇ. ಆ ಸೋಮ ಅನ್ನುವುದಕ್ಕೆ ಬೇಕಾದಷ್ಟು ಅರ್ಥ ಇದೆ. ಭಕ್ತಿರಸ ಅಂತಲೂ ಅರ್ಥ ಇದೆ, ಜಗತ್ತಿನ ಪ್ರೇರಕ, ಉತ್ಪಾದಕ ಅನ್ನುವ ಅರ್ಥವೂ ಇದೆ. ದೇವತೆಗಳ ಉತ್ಪಾದಕ, ಪ್ರೇರಕನೂ ಅವನೇ. ಅವನನ್ನು ಪ್ರಾರ್ಥನೆ ಮಾಡುವುದನ್ನು ಬಿಟ್ಟು ಅವನ ಹೆಸರಿನಲ್ಲಿ ಬೇರೆ ಯಾವ ಯಾವುದನ್ನೋ ಪೂಜೆ ಮಾಡುತ್ತಾ ಹೋದರೆ ಫಲ ಸಿಗುತ್ತಾ? ಮತ್ತೆ ಆ ಸೋಮ ವಿಶ್ವಪ್ರಿಯ.  ಪ್ರತಿದಿನ ಅವನಿಗೆ ಪ್ರಿಯವಾದ ಕೆಲಸವನ್ನು ಮಾಡಿಕೊಂಡು ಹೋಗುವುದೇ ಪೂಜೆ. ಭಗವಂತನಿಗೆ ಪ್ರಿಯವಾದ ಕೆಲಸ ಯಾವುದು? ಅವನಿಗೇನು ಉದ್ಧಾರ ಆಗಬೇಕಿಲ್ಲ. ಉದ್ಧಾರ ಆಗಬೇಕಾಗಿರುವುದು ನಮಗೆ. ನಾವು ಅಂದರೆ ನಮ್ಮ ಸಮೂಹ. ನಮ್ಮ ಸಮೂಹದ ಉದ್ಧಾರಕ್ಕಾಗಿ ನಾವು ಕೆಲಸ ಮಾಡಬೇಕಾಗಿದೆ. ಪೀಡಿಸೋದು, ಎಲ್ಲರನ್ನೂ ಗೋಳು ಹುಯ್ಕೊಳ್ಳೋದು, ಅನ್ಯಾಯ ಮಾಡೋದು, ಮತ್ತೆ ನಾನು ಭಗವದ್ಭಕ್ತ ಕಣಯ್ಯಾ ಅನ್ನೋದು, ಎಂಥಾ ಭಕ್ತರು? ಅವನಿಗೆ ಪ್ರಿಯರಾಗಿ, ಭಗವಂತನ ಮಕ್ಕಳು ನಾವೆಲ್ಲಾ, ಕಷ್ಟ, ಕಾರ್ಪಣ್ಯದಲ್ಲಿರುವವರಿಗೆ, ಬಡವರಿಗೆ, ಬಗ್ಗರಿಗೆ, ದೀನ ದಲಿತರಿಗೆ ಸಹಾಯ ಮಾಡಿದರೆ ನಿಜವಾದ ಭಗವಂತನ ಭಕ್ತರು ಅನ್ನಬಹುದು.

ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ

     ಅಯ್ಯೋ, ಅವನು ನಾಸ್ತಿಕ, ದೇವಸ್ಥಾನಕ್ಕೇ ಹೋಗೋದಿಲ್ಲ, ಅವನ ಮಾತು ಕೇಳ್ಬೇಡಿ ಅಂತ ಹೇಳ್ತಾರೆ. ಒಳ್ಳೇ ತಮಾಷೆ ಆಯ್ತಲ್ಲಾ ಇದು! ದೇವಸ್ಥಾನದಲ್ಲಿ ಮಾತ್ರ ಅವನಿದ್ದಿದ್ದರೆ ಬೇರೆ ಇನ್ನೆಲ್ಲೂ ಇಲ್ಲ ಅಂತಿದ್ದರೆ ಅಲ್ಲಿಗೆ ಹೋಗಬೇಕಾಗಿತ್ತು. ಸರ್ವವ್ಯಾಪಕ ಅಂತೀರಿ, ಎಲ್ಲಾ ಕಡೆಯೂ ಇದ್ದಾನೆ ಅಂತೀರಿ, ನಿಮ್ಮ ಹೃದಯಕ್ಕಿಂತ ದೊಡ್ಡ ಮಂದಿರ ಬೇಕಾ? ನಿಮ್ಮ ಹೃದಯದಲ್ಲೂ ಪರಮಾತ್ಮನಿದ್ದಾನೆ. ಸುಖವಾಗಿ ಆ ಪರಮಾತ್ಮನ ಕುರಿತು ಧ್ಯಾನ ಮಾಡಿ. ನಿಜವಾಗಿ ನಿಮಗೆ ಆನಂದ ಸಿಕ್ಕುತ್ತೆ. ಈ ಮಾತನ್ನು ನಾನು ನೂರು ವರ್ಷಗಳ ಅನುಭವದಿಂದ ಹೇಳುತ್ತಿದ್ದೇನೆ. ನಾನು ಆ ಸ್ಥಿತಿಯಲ್ಲಿ ಇರುವಾಗ ಈ ಪ್ರಪಂಚ ಏನೂ ಇರುವುದೇ ಇಲ್ಲ. ನನ್ನ ದೃಷ್ಟಿಯ ಒಳಗೆ ಈ ಪ್ರಪಂಚ ಇರೋದೆ ಇಲ್ಲ, ಇರೋದು ನನ್ನೊಳಗಿನ ಪರಮಾತ್ಮ ಒಬ್ಬನೇ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು;  ಭಗವಂತನ ಮಕ್ಕಳ ಸೇವೆ ಭಗವಂತನ ಸೇವೆ. 

     ದೇವಸ್ಥಾನಗಳನ್ನು ಕಟ್ಟುವ ಬದಲು ಧರ್ಮಶಾಲೆ ಕಟ್ಟಿಸಿ, ಅನಾಥಾಲಯಗಳನ್ನು ಕಟ್ಟಿಸಿ, ಛತ್ರಗಳನ್ನು ನಿರ್ಮಾಣ ಮಾಡಿ, ಜನ ವಾಸ ಮಾಡಲಾದರೂ ಆಗುತ್ತೆ, ಅದು ಬಿಟ್ಟು ದೇವಸ್ಥಾನದಲ್ಲಿ ಮಾತ್ರ ಅವನಿದ್ದಾನೆ, ಬೇರೆ ಕಡೆ ಇಲ್ಲ ಅನ್ನೋದು ಸರಿಯಲ್ಲ. ಮೊದಲೇ ಅಜ್ಞಾನದಲ್ಲಿ ನರಳುತ್ತಿದ್ದೇವೆ, ನಮ್ಮನ್ನು ಇನ್ನೂ ಅಜ್ಞಾನಕ್ಕೆ ತಳ್ಳಿ ನೋಡೋದು ಎಷ್ಟು ಸರಿ? ಇದು ತಪ್ಪಬೇಕು. ಭಗವಂತನ ಮಕ್ಕಳ ಸೇವೆ ಮಾಡುವುದಕ್ಕೆ ನಮಗೆ ಉದಾರವಾದ ಮನಸ್ಸು ಕೊಡು ಅಂತ ದೇವರಲ್ಲಿ ಪ್ರಾರ್ಥಿಸಬೇಕು.

ಒಳ್ಳೆಯ ರೀತಿ ಬಾಳೋಣ

      ಯಾರು ಏನೇ ಅನ್ನಲಿ, ನಿಮ್ಮನ್ನು ಶತ್ರುವಾಗೇ ಕಾಣಲಿ, ನೀವು ಮಾತ್ರಾ ನಾನು ಎಲ್ಲರ ಮಿತ್ರ ಎಂದುಕೊಳ್ಳಿ, ಇತರರು ನಿಮ್ಮನ್ನು ದ್ವೇಶಿಸಲಿ, ಪ್ರತಿಯಾಗಿ ನೀವು ದ್ವೇಶಿಸಲು ಹೋಗಬೇಡಿ. ದೊಡ್ಡಮಾತು, ಮಹಾತ್ಮರಿಗೆ ಅರ್ಥವಾಗುತ್ತೆ, ನಮಗೆ ಅರ್ಥವಾಗಲ್ಲ, ನಮಗೆ ಯಾಕೆ? ಅಂದುಕೊಂಡು ಅವನು ಎರಡು ಮಾತು ಬೈದನಲ್ಲಾ, ಹತ್ತು ಮಾತು ಜಾಡಿಸಿಬಿಡುತ್ತೇನೆ ಅಂದರೆ ಅವನದು ಎರಡು, ನಿಮ್ಮದು ಹತ್ತು, ಹನ್ನೆರಡು ಮಾತು ಕೇಳಿ ಬಂತು, ಯಾರ ಉದ್ಧಾರಕ್ಕೆ? ನಾವು ಈರೀತಿ ಯೋಚನೆ ಮಾಡುವುದನ್ನು ಕಲಿಯಬೇಕು, ಯೋಚನೆ ಮಾಡದೆ ಯಾವ ಕೆಲಸವನ್ನೂ ಮಾಡಬಾರದು, ವಿದ್ಯೆ, ಜ್ಞಾನದಿಂದ ಮಾಡುವ ಕೆಲಸದಲ್ಲಿ ಶಕ್ತಿ ತುಂಬಿಕೊಂಡಿರುತ್ತದೆ,  ಎಲ್ಲರೊಡನೆ ಮೃದುವಾಗಿ, ಮಧುರವಾಗಿ ಮಾತನಾಡಬೇಕೆಂದು ವೇದ ಹೇಳುತ್ತದೆ. ಜೇನುತುಪ್ಪದಂತಿರಬೇಕೆಂದು ಹೇಳುತ್ತದೆ. ಒಳ್ಳೆಯ ಮಾತು ಎಲ್ಲಿ ಕೇಳುತ್ತೇವೆ, ಒಬ್ಬರನ್ನೊಬ್ಬರು ಬಯ್ಯುವುದು, ಒಬ್ಬರನ್ನೊಬ್ಬರು ಹಂಗಿಸುವುದು, ಇದರಲ್ಲೆ ಕಳೆಯುತ್ತೇವೆ. ಆಲೋಚನೆ ಮಾಡೋಣ, ಒಳ್ಳೆಯ ರೀತಿ ಬಾಳೋಣ. 

ಭೇದ ಮಾಡದ ಭಗವಂತ     

     ಸರ್ಕಾರಿ ಚಿಹ್ನೆ ಹಾಕ್ತಾರೆ – ‘ಸತ್ಯಮೇವ ಜಯತೇ’. ಯಾರ ಜೀವನದಲ್ಲೂ ಇಲ್ಲ, ಪ್ರೈಮ್ ಮಿನಿಸ್ಟರಿಂದ ಹಿಡಿದು ಚೀಫ್ ಮಿನಿಸ್ಟರ್, ಒಬ್ಬ ಸಾಧಾರಣ ಮಿನಿಸ್ಟರ್‌ವರೆಗೂ ಯಾರಿಗೂ ಇಲ್ಲ. ಒಂದು ಸಲ ಒಬ್ಬ ಅಂತಿದ್ದನಂತೆ; ‘ಪರಮಾತ್ಮ ನೀನು ಬಲೇ ಕಂತ್ರಿ, ಯಾಕೆ? ನಾನಾಗಲಿಲ್ಲ ಮಂತ್ರಿ! ನನ್ನನ್ನು ಮಂತ್ರಿನೂ ಮಾಡಲಿಲ್ಲ, ನೀನೆಂಥಾ ದೇವ್ರು, ಕಂತ್ರಿ ನೀನು’. ನಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕೆ ಆ ದೌರ್ಬಲ್ಯವನ್ನು ಪರಮಾತ್ಮನ ಮೇಲೆ ಹಾಕೋದು. ಇಷ್ಟು ತಿಳ್ಕೊಳ್ಳಿ, ನಿಮ್ಮ ನಿಂದೆ, ನಿಮ್ಮ ಸ್ತುತಿ ಯಾವುದೂ ಭಗವಂತನ ಮೇಲೆ ಪರಿಣಾಮ ಬೀರುವುದಿಲ್ಲ. ಹೊಗಳಿದರು ಅಂತ ಕೇಳಿದ್ದನ್ನೆಲ್ಲಾ ಕೊಟ್ಟುಬಿಡುವುದಿಲ್ಲ, ಬೈದುಬಿಟ್ಟರು, ಅವರು ನಾಸ್ತಿಕರು ಅಂತ ಅವರ ಆಹಾರವನ್ನು ಕಿತ್ತುಕೊಳ್ಳುವುದಿಲ್ಲ, ನಾಸ್ತಿಕರು ಹೆಚ್ಚಿರುವ ರಷ್ಯದವರು ನಮಗಿಂತ ಚೆನ್ನಾಗಿ ಊಟ ಮಾಡ್ತಾರೆ. ಭಗವಂತ ಅವರ ಅನ್ನ ಕಿತ್ತುಕೊಳ್ಳಲಿಲ್ಲ. ನನ್ನನ್ನೇ ಇಲ್ಲ ಅಂತ ಹೇಳ್ತಾರಲ್ಲಾ, ಅವರೆಲ್ಲಾ ನಾಸ್ತಿಕರು ಅಂತ ಅನ್ನ ಕಿತ್ತುಕೊಳ್ಳೋದಿಲ್ಲ, ಆಸ್ತಿಕರಿಗೂ ಅನ್ನ ಕೊಡ್ತಾನೆ, ನಾಸ್ತಿಕರಿಗೂ ಅನ್ನ ಕೊಡ್ತಾನೆ. ನಮ್ಮ ಕುಂದುಕೊರತೆಗಳನ್ನು ಭಗವಂತನ ಮೇಲೆ ಹೊರಿಸುವುದು ಸರಿಯಲ್ಲ.

ಸತ್ಯವನ್ನೇ ಹೇಳುತ್ತೇನೆ . .

      ಈಗ ಕೋರ್ಟುಗಳಲ್ಲಿ ಪ್ರಮಾಣ ಮಾಡಿಸುತ್ತಾರೆ: ‘ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾನು ಹೇಳುವುದೆಲ್ಲಾ ಸತ್ಯ’ ಅಂತ. ಆದರೆ ಲಾಯರ್ ಹೇಳಿಕೊಟ್ಟಿರುತ್ತಾರೆ -”ಸತ್ಯ ಅಂತ ಎಲ್ಲಾ ಹೇಳಿದರೆ ಕೆಡುತ್ತೀಯ, ನಾನು ಹೇಳಿಕೊಟ್ಟದ್ದೇ ಸತ್ಯ , ಅದನ್ನೇ ಹೇಳು” ಅಂತ. (ನಾನು ತಮಾಷೆ ಮಾಡುತ್ತಿರುತ್ತೇನೆ) ಲಾಯರ್ ಅಂದರೆ ಲೈಯರ್ ಅಂತ! ಮಾಡುತ್ತಾ ಇರುವುದು ಹಾಗೇನೇ, ಇವತ್ತು ಇರುವುದೂ ಹಾಗೇನೇ. ಇಂದಿನ ಸತ್ಯದ ಸ್ಥಿತಿ ಇದು.

. . .ಮುಂದುವರೆಯುವುದು. . 

[ಗಾಂಧೀಜಿ ಮತ್ತು ಕಸ್ತೂರ ಬಾ ಚಿತ್ರ ಕೃಪೆ: ಅಂತರ್ಜಾಲದಿಂದ ಹೆಕ್ಕಿದ್ದು]

*********************

ಹಿಂದಿನ ಲೇಖನಕ್ಕೆ ಲಿಂಕ್: 

Permanent link to this article: http://www.vedasudhe.com/%e0%b2%b8%e0%b2%be%e0%b2%b0%e0%b2%97%e0%b3%8d%e0%b2%b0%e0%b2%be%e0%b2%b9%e0%b2%bf%e0%b2%af-%e0%b2%b0%e0%b2%b8%e0%b3%8b%e0%b2%a6%e0%b3%8d%e0%b2%97%e0%b2%be%e0%b2%b0%e0%b2%97%e0%b2%b3%e0%b3%81-6/

ಸಾರಗ್ರಾಹಿಯ ರಸೋದ್ಗಾರಗಳು – 5


     ಪಂ. ಸುಧಾಕರ ಚತುರ್ವೇದಿಯವರೇ ಹಾಗೆ. ನಡೆಯೊಂದು ತರಹ, ನುಡಿಯೊಂದು ತರಹದವರಲ್ಲ. ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಸ್ತ್ರೀಯರು ವೇದ ಮಂತ್ರಗಳನ್ನು ಹೇಳಬಾರದು ಎಂಬ ವಿಚಾರ ಸಂಪೂರ್ಣ ಅವೈದಿಕ ಎಂದು ಸಾಧಾರ ಹೇಳುವ ಅವರ ಪ್ರತಿವಾರದ ಸತ್ಸಂಗದಲ್ಲಿ ನಡೆಯುವ ಅಗ್ನಿಹೋತ್ರದ    ಕಾರ್ಯವನ್ನು ಮಂತ್ರಸಹಿತವಾಗಿ ಮಹಿಳೆಯರೇ ಮಾಡುತ್ತಾರೆ. ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.

****************

ಮೂರ್ತಿಪೂಜೆಯ ತಪ್ಪು ಕಲ್ಪನೆ

     ಒಮ್ಮೆ ಆರ್ಯ ಸಮಾಜದ ಒಬ್ಬ ದೊಡ್ಡ ವಿದ್ವಾಂಸರು ಮತ್ತು ಮಾಧವಾಚಾರ್ಯ ಅನ್ನುವ ಪೌರಾಣಿಕರ ಜೊತೆ ಹೈದರಾಬಾದಿನಲ್ಲಿ ಮೂರ್ತಿಪೂಜೆ ಕುರಿತು ಚರ್ಚೆ, ಜಿಜ್ಞಾಸೆ ನಡೆಯುತ್ತಿತ್ತು. ಆ ಮಾಧವಾಚಾರ್ಯರಿಗೆ ಇನ್ನೇನೂ ಉಪಾಯ ಹೊಳೆಯಲಿಲ್ಲ, ದಯಾನಂದರ ಫೋಟೋ ತಂದು ಎದುರಿಗೆ ಇಟ್ಟರು. “ನೀವು ಮೂರ್ತಿ ಪೂಜೆ ಮಾಡಲ್ಲ ಅಲ್ವಾ? ಹಾಗಾದರೆ ಈ ದಯಾನಂದರ ಫೋಟೋಗೆ ಎಕ್ಕಡದಿಂದ ಹೊಡೀರಿ, ನೋಡೋಣ” ಅಂದರು. ಆ ವಿದ್ವಾಂಸ ಪುಣ್ಯಾತ್ಮ ಯೋಚನೆ ಮಾಡಲಿಲ್ಲ, ಆ ದಯಾನಂದರ ಫೋಟೋಗೆ ಚಚ್ಚಿಯೇ ಬಿಟ್ಟರು. ನಾನು ಹೇಳಿದೆ, “ಪಂಡಿತಜಿ, ನಿಮ್ಮ ಬುದ್ಧೀನೂ ಜೇಡಿ ಮಣ್ಣಾಯಿತಾ? ಆ ಫೋಟೋ ಯಾರದು? ದಯಾನಂದರದು. ಆ ದಯಾನಂದರಿಗೆ ಒಂದು ಆಕಾರ ಇತ್ತು. ಅದರ ಫೋಟೋ ಹಿಡಿಯುವುದು ಸಾಧ್ಯವಿತ್ತು. ಹಾಗಾಗಿ ನೀವು ಮಾಡಿದ್ದು ಸರಿಯಲ್ಲ. ನಿರಾಕಾರನಾದ ಭಗವಂತನ ಫೋಟೋ ಹಿಡಿಯುವುದಕ್ಕೆ ಸಾಧ್ಯವಿದೆಯೇ? ಇಲ್ಲದಿರುವಾಗ ಕಲ್ಪನೆಯ ಆಕಾರವನ್ನು ಭಗವಂತ ಅನ್ನಬಹುದೇ ಎಂದು ಕೇಳಬಹುದಿತ್ತಲ್ಲವೇ?”

ಪರಮಾತ್ಮ ಎಲ್ಲಿದ್ದಾನೆ?

     ನನಗೆ ಒಂದು ಟೈಟಲ್ಲು ಸಿಕ್ಕಿದೆ, ಪಂಡಿತಜಿ ಸುಮ್ಮನೆ ವೇದ, ವೇದ ಅಂತ ಹೇಳ್ತಾರೆ, ಅವರು ನಾಸ್ತಿಕರು, ದೇವಸ್ಥಾನಕ್ಕೆ ಹೋಗೋದಿಲ್ಲ, ಮಸೀದಿಗೆ ಹೋಗೋದಿಲ್ಲ, ಚರ್ಚಿಗೂ ಹೋಗೋದಿಲ್ಲ. ಹೌದು, ನಾನು ಎಲ್ಲಿಗೂ ಹೋಗುವುದಿಲ್ಲ. ಆ ಎಲ್ಲಾ ನನ್ನ ಎದೆಯಲ್ಲೇ ಇದೆ. ದೇವಸ್ಥಾನವೂ ನನ್ನ ಎದೆಯಲ್ಲಿದೆ, ಮಸೀದಿಯೂ ನನ್ನ ಎದೆಯಲ್ಲಿದೆ, ಚರ್ಚೂ ನನ್ನ ಎದೆಯಲ್ಲಿದೆ. ಪರಮಾತ್ಮ ಇಲ್ಲೇ ಇದ್ದಾನೆ. ನಾನು ಹೊರಗೆ ಇನ್ನೆಲ್ಲಿ ಅವನನ್ನು ಹುಡುಕಲು ಹೋಗಬೇಕು? ಇದು ಒಂದು ಪ್ರಶ್ನೆ, ಇದನ್ನು ಸ್ವಲ್ಪ ದರ್ಶನ ಶಾಸ್ತ್ರಕ್ಕೆ ಹೋಗಬೇಕು. ವ್ಯಾಪ್ಯ-ವ್ಯಾಪಕ- ವ್ಯಾಪಕ ಪರಮಾತ್ಮ, ಬೊಂಬೆಯಲ್ಲೂ ಇದ್ದಾನೆ, ಬೊಂಬೆಯ ಹೊರಗೂ ಇದ್ದಾನೆ, ಎಲ್ಲಾ ಕಡೆಯೂ ಇದ್ದಾನೆ, ನೀವು ಪೂಜೆ ಮಾಡುವುದು ವ್ಯಾಪ್ಯನನ್ನೋ, ವ್ಯಾಪಕನನ್ನೋ? ವಿಗ್ರಹ ಪೂಜೆ ಮಾಡ್ತಾ ಇದ್ದರೆ, ಸ್ಪಷ್ಟವಾಗಿದೆ, ನೀವು ವ್ಯಾಪಕನನ್ನಲ್ಲ, ವ್ಯಾಪ್ಯನನ್ನು ಪೂಜೆ ಮಾಡ್ತಾ ಇದೀರಿ. ಬಲ್ಬು ಇದೆ, ಅದರಲ್ಲಿ ವಿದ್ಯುತ್ ಇದೆ, ಸ್ವಿಚ್ ಹಾಕಿದರೆ ಅದರಲ್ಲಿ ಲೈಟು ಹತ್ತುತ್ತದೆ, ಆ ಸ್ವಿಚ್ಚೇ ಇಲ್ಲದಿದ್ದರೆ ಆ ಬಲ್ಬು ೧೦೦ ವೋಲ್ಟಿನದಾಗಿರಲಿ, ೧೦೦೦ ವೋಲ್ಟಿನದಾಗಿರಲಿ, ಹತ್ತುತ್ತಾ? ಸ್ವಿಚ್ಚು ಒತ್ತಿದರೇ ಹತ್ತುವುದು, ಇಲ್ಲದಿದ್ದರೆ ಹತ್ತುವುದಿಲ್ಲ, ಹಾಗೆಯೇ ನಿಮಗೆ ಧ್ಯಾನ ಅನ್ನುವುದು ಸ್ವಿಚ್ಚು, ಆ ಸ್ವಿಚ್ಚಿರಬೇಕು, ಆ ಸ್ವಿಚ್ಚು ನಿಮ್ಮ ಎದೆಯಲ್ಲೇ ಇದೆ. ಆಗ ಪರಮಾತ್ಮನನ್ನು ನೀವು ಕಂಡುಕೊಳ್ಳುತ್ತೀರಿ, ಜ್ಞಾನಕ್ಕೇ ಸೊನ್ನೆ ಬಿದ್ದಿದ್ದರೆ ಪರಮಾತ್ಮನೂ ಇಲ್ಲ, ಜೀವಾತ್ಮನೂ ಇಲ್ಲ, ಎಲ್ಲಾ ಬರೀ ಮಾತು, ಟೊಳ್ಳು ಮಾತು,

ಆಲೋಚನೆ ಮಾಡೋಣ

      ಪಕ್ಕಾ ಮೂರ್ತಿಪೂಜಕರಾದ ಮಧ್ವಾಚಾರ್ಯರೂ ಕೂಡ ಒಪ್ಪಿಕೊಳ್ಳುತ್ತಾರೆ. ‘ಯಾವುದು ವಿಷ್ಣುವಲ್ಲವೋ ಅದನ್ನು ವಿಷ್ಣು ಅಂತ ಪೂಜೆ ಮಾಡೋನು, ಯಾವುದರಲ್ಲಿ ವಿಷ್ಣು ಇದ್ದಾನೋ ಅದನ್ನು ಬಿಟ್ಟು ಬೇರೆ ಪದಾರ್ಥಗಳನ್ನು ಪೂಜೆ ಮಾಡೋನು, ಅವನಿಗೆ ನೂರು ಜನ್ಮಕ್ಕೂ ಉದ್ಧಾರ ಇಲ್ಲ’ ಅಂತಾ ಹೇಳ್ತಾರೆ. ಮಧ್ವಾಚಾರ್ಯರು ಕೃಷ್ಣನ ಪ್ರತಿಮೆ ಇಟ್ಟುಕೊಂಡು ಪೂಜೆ ಮಾಡೋರು, ಅವರ ಬಾಯಲ್ಲೇ ಈ ಮಾತು ಬರುತ್ತೆ. ಚತುರರು, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ, ಧ್ಯಾನ ಅನ್ನುವ ಪದ ಉಪಯೋಗಿಸುತ್ತಾರೆಯೇ ಹೊರತು ಪೂಜೆ ಅನ್ನುವ ಪದ ಉಪಯೋಗಿಸುವುದಿಲ್ಲ. ಮೂರ್ತಿಪೂಜೆ ಅಂತ ಹೇಳುವುದಿಲ್ಲ ಅವರು – ಧ್ಯಾನ – ಅದರೊಳಗೆ ಪರಮಾತ್ಮ ಇದಾನೆ ಅಂತ ಧ್ಯಾನ ಮಾಡಿ ಅಂತಾರೆ, ಮತ್ತೆ ಅದೇ ಪ್ರಶ್ನೆ ಬರುತ್ತೆ, ಅಲ್ಲೇ ಇದಾನಾ ಅವನು? ಸರ್ವವ್ಯಾಪಕನನ್ನು ಒಂದು ಕಲ್ಲಿನ ಮೂರ್ತಿಯ ಒಳಗೆ ಅಡಕ ಮಾಡೋಕಾಗುತ್ತಾ? ಆಗುವುದಿಲ್ಲ. ಆದ್ದರಿಂದ ನಾವು, ಜೀವಾತ್ಮರು, ಚೇತನ ಸ್ವರೂಪರು, ಅದರಲ್ಲೂ ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ನಾವೇನೇ ಹಾಗೆ ಮಾಡುತ್ತಾ ಕುಳಿತುಕೊಂಡರೆ ಇನ್ನು ತಿಳಿಯದವರು  ಇನ್ನೇನು ಮಾಡ್ತಾರೆ? ನಮ್ಮನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ

ಸುಪ್ಪತ್ತಿಗೆ

     ಪುರಾಣದ ಕಥೆಗಳು, ನಾಟಕ, ನೃತ್ಯ ಇವುಗಳನ್ನು ನೋಡ್ತಾ ಇದ್ದರೆ ರಾತ್ರಿ ಪೂರ್ತಾ ನಿದ್ದೆ ಬರುವುದಿಲ್ಲ, ವೇದ, ಉಪನಿಷತ್ತುಗಳ ವಿಚಾರ ಕೇಳ್ತಾ ಇದ್ದರೆ ಸ್ವಲ್ಪ ಹೊತ್ತಿಗೇ ನಿದ್ದೆ ಬಂದುಬಿಡುತ್ತೆ. ಒಬ್ಬ ಭಕ್ತ ಕೇಳಿದ, “ಯಾಕೆ ಸ್ವಾಮಿ, ಹೀಗಾಗುತ್ತೆ? ” ಅದಕ್ಕೆ ದಯಾನಂದರು ಹೇಳಿದರು: “ಪುರಾಣದ ಕಥೆಗಳು, ನಾಟಕ, ನೃತ್ಯ, ಎಲ್ಲಾ ಮುಳ್ಳಿನ ಹಾಸಿಗೆ ಇದ್ದಂತೆ, ವೇದ, ಉಪನಿಷತ್ತುಗಳು ಸುಪ್ಪತ್ತಿಗೆ ಇದ್ದಂತೆ. ಮುಳ್ಳಿನ ಹಾಸಿಗೆ ಮೇಲೆ ಮಲಗಿದರೆ ನಿದ್ದೆ ಹೇಗೆ ಬರಬೇಕು? ಸುಪ್ಪತ್ತಿಗೆ ಮೇಲೆ ಮಲಗಿದರೆ ನಿದ್ದೆ ಬರದೆ ಇದ್ದರೆ ಇನ್ನು ಯಾವುದರ ಮೇಲೆ ಬರಬೇಕು?”

ಸ್ತ್ರೀಯರು ಮತ್ತು ವೇದ

     ನಮ್ಮ ತಾಯಿ, ತಂದೆ ರಾತ್ರಿ ಹೊತ್ತು ಹವನಕ್ಕೆ ಕುಳಿತುಕೊಳ್ಳೋರು, ತಂದೆ ಮಂತ್ರ ಹೇಳೋರು, ತಾಯಿ ಬಾಯಿ ಮುಚ್ಚಿಕೊಂಡು ಕೂರೋರು, ನಾನು ಕೇಳ್ತಾ ಇದ್ದೆ, ‘ಅಮ್ಮಾ, ಯಾಕೆ ಹೀಗೆ?’ ಅವರು ಹೇಳುತ್ತಿದ್ದರು: “ಅಯ್ಯೋ, ಹೆಂಗಸರು ವೇದ ಹೇಳೋದು ಉಂಟಾ? ಮಹಾ ಪಾಪ”.  [ಉತ್ತರ ಕೊಡೋಕ್ಕೆ ಆಗದೇ ಹೋದರೆ ಇಂತಹಾ ಮಾತುಗಳನ್ನು ಆಡುವ ಇತರ ಪಂಡಿತರೆನಿಸಿಕೊಂಡವರ ಮಾತನ್ನೇ ಅವರು ಹೇಳಿದ್ದರು.]  ವೇದದಲ್ಲಿ ಋಷಿಗಳಿದ್ದಾರಲ್ಲಾ, ಹಾಗೆಯೇ ಋಷಿಕೆಯರೂ ಇದ್ದಾರೆ. ನಾನೇ ಒಂದು ಋಗ್ವೇದದಲ್ಲಿ ೯೭ ಋಷಿಕೆಯರನ್ನು ಗುರುತಿಸಿದ್ದೇನೆ. ಇನ್ನು ಅಥರ್ವವೇದ, ಯಜುರ್ವೇದ ಇವನ್ನೆಲ್ಲಾ ತೆಗೆದುಕೊಂಡರೆ ಇನ್ನು ಎಷ್ಟು ಜನ ಋಷಿಕೆಯರನ್ನು ಗುರುತಿಸಬಹುದು ಊಹಿಸಿ. ಅವರೆಲ್ಲಾ ಪಾಪ ಮಾಡಿದರಾ? ಋಷಿಕೆಯರೆಲ್ಲಾ ವೇದಮಂತ್ರಗಳಿಗೆ ವ್ಯಾಖ್ಯಾನ ಮಾಡಿದ್ದಾರೆ, ಅವರೆಲ್ಲಾ ಪಾಪ ಮಾಡಿದರಾ? ಅವರೆಲ್ಲಾ ಪಾಪ ಮಾಡಿದ್ದರೆ ಅವರ ಹಿಂದೆಯೇ ನಾವೂ ಹೋಗೋಣ, ಈ ಪುಣ್ಯಾತ್ಮರು ಇದ್ದಾರಲ್ಲಾ, ಕಲ್ಲು, ಮಣ್ಣು ಪೂಜೆ ಮಾಡೋರು ಅವರು ಇಲ್ಲೇ ಇರಲಿ, ನಾವು ಪಾಪ ಮಾಡಿದೋರ ಜೊತೆ ಹೋಗೋಣ!

..ಮುಂದುವರೆಯುವುದು.

***************

ಹಿಂದಿನ ಲೇಖನಕ್ಕೆ ಲಿಂಕ್:

Permanent link to this article: http://www.vedasudhe.com/%e0%b2%b8%e0%b2%be%e0%b2%b0%e0%b2%97%e0%b3%8d%e0%b2%b0%e0%b2%be%e0%b2%b9%e0%b2%bf%e0%b2%af-%e0%b2%b0%e0%b2%b8%e0%b3%8b%e0%b2%a6%e0%b3%8d%e0%b2%97%e0%b2%be%e0%b2%b0%e0%b2%97%e0%b2%b3%e0%b3%81-5/

ಸಾರಗ್ರಾಹಿಯ ರಸೋದ್ಗಾರಗಳು -4

     ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು.  ೧೧೬ ವರ್ಷಗಳಾಗಿರುವ ಅವರ ಬತ್ತದ ಜೀವನೋತ್ಸಾಹದ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ. ಅವರ ಕೆಲವು ವಿಚಾರಗಳು ಎಲ್ಲರಿಗೂ ಹಿಡಿಸಲಾರವು. ಆದರೆ, ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.

****************

ಅರ್ಪಣಾಭಾವ

     ಅಗ್ನಿಹೋತ್ರ ಮಾಡುವಾಗ  ಮೊದಲು ಒಂದುಸಲ ‘ಅಯಂತ ಇಧ್ಮ. ‘ ಎಂದು ಹೇಳುತ್ತೇವೆ. ಆಮೇಲೆ ೫ ಸಲ . ‘ಅಯಂತ ಇಧ್ಮ’. ಎಂದು ಹೇಳುತ್ತೇವೆ. ಅಗ್ನಿಹೋತ್ರ ಮಾಡುವ ವಿಚಾರದಲ್ಲಿ ತಿಳಿದುಕೊಳ್ಳಬೇಕಾದ್ದಿದೆ. ವಾಯುಶುದ್ಧಿ, ಜಲಶುದ್ದಿ ಇವೆಲ್ಲಾ ಇದ್ದದ್ದೇ. ಎಲ್ಲರಿಗೂ ಅರ್ಥವಾಗುತ್ತೆ. ಆಧ್ಯಾತ್ಮಿಕ ಭಾವನೆಯನ್ನು ಸಹ ಅರ್ಥ ಮಾಡಿಕೊಳ್ಳಬೇಕು. ಹೋಮ, ಹವನ ಮಾಡಿದೆವು ಅಂತೀವಿ, ನಮ್ಮ ಉದ್ಧಾರವಾಗುತ್ತೋ, ಭಗವಂತನ ಉದ್ಧಾರವಾಗುತ್ತೋ ತಿಳಿದುಕೊಳ್ಳುವುದಿಲ್ಲ., ಭಗವಂತ, ನೀನು ಮಹಾನ್ ಅಗ್ನಿ, ‘ಅಯಂ ಆತ್ಮಾ ತೇ ಇಧ್ಮ’ – ನನ್ನ ಆತ್ಮ ಇದು ನಿನಗೆ ಸಮಿತ್ತು-  ಅಂತ. ನಾನು ಸಮಿತ್ತು. ನನ್ನ ಆತ್ಮ ಇದೆಯಲ್ಲಾ, ಭಗವಂತಾ, ಅದನ್ನು ನಿನಗೆ ಸಮರ್ಪಿಸುತ್ತಿದ್ದೇನೆ, ಅಂತ. ಅರ್ಥ ಮಾಡಿಕೊಳ್ಳಿ, ಅಗ್ನಿಯಲ್ಲಿ ಬೆಳಕಿದೆ, ಸಮಿತ್ತಿನಲ್ಲಿ ಸ್ವತಃ ಬೆಳಕಿಲ್ಲ. ಅಗ್ನಿಯೊಡನೆ ಬೆರೆತಾಗ ಸಮಿತ್ತು ಉರಿದು ಬೆಳಕು ಕೊಡುತ್ತದೆ. ಹೀಗೆ, ಪರಮಾತ್ಮ ಜ್ಯೋತಿಸ್ವರೂಪ, ಸರ್ವಶಕ್ತ, ನಮ್ಮ ಆತ್ಮ ಅಲ್ಪಜ್ಞ, ಅಲ್ಪಶಕ್ತ. ಒಳ್ಳೆ ಕೆಲಸಾನೂ ಮಾಡ್ತೇವೆ, ಕೆಟ್ಟ ಕೆಲಸಾನೂ ಮಾಡ್ತೇವೆ. ಒಳ್ಳೆ ಕೆಲಸ ಮಾಡಿದಾಗ ಸ್ವಲ್ಪ ಮೇಲೇರುತ್ತೇವೆ, ಕೆಟ್ಟ ಕೆಲಸ ಮಾಡಿದಾಗ ಕೆಳಕ್ಕೆ ಬೀಳುತ್ತೇವೆ. ಈ ಏಳೋದು, ಬೀಳೋದು ನಮ್ಮ ಹಣೆಬರಹ. ಅದರ ಫಲವೇನೇ ಈ ಸುಖ-ದುಃಖ ಅನ್ನುವುದು,.ಒಳ್ಳೆ ಕೆಲಸ ಮಾಡಿದಾಗ ಸುಖ, ಕೆಟ್ಟ ಕೆಲಸ ಮಾಡಿದಾಗ ದುಃಖ. ಇದು ಇದ್ದದ್ದೇ. ಇದನ್ನು ಇಲ್ಲವೆನ್ನುವಂತಿಲ್ಲ. ಇದನ್ನು ಮೀರಿ, ಪರಮಾತ್ಮನಲ್ಲಿ ಆತ್ಮ ಸಮರ್ಪಣೆ ಮಾಡಿಕೊಂಡರೆ ಜೀವಾತ್ಮಕ್ಕೆ ಪ್ರಕಾಶ ಬರುತ್ತದೆ. ಜೀವಾತ್ಮ ಸಮಿತ್ತಿದ್ದಂತೆ, ಅದಕ್ಕೆ ಸ್ವಯಂಪ್ರಕಾಶವಿಲ್ಲ, ಪರಮಾತ್ಮನೆಂಬ ಅಗ್ನಿಯೊಂದಿಗೆ ಒಂದಾದಾಗ ಅದಕ್ಕೆ ಪ್ರಕಾಶ ಬರುತ್ತದೆ.  .ಈಶ್ವರ ಸನ್ನಿಧಾನ ಅಂತ ಹೇಳ್ತೀವಲ್ಲಾ, ಏನಿದರ ಅರ್ಥ?  ತ್ರಿಕರಣ ಪೂರ್ವಕವಾಗಿ ನಮ್ಮನ್ನು ಅಂದರೆ  ಆತ್ಮನನ್ನು ಪರಮಾತ್ಮನೊಂದಿಗೆ ಅರ್ಪಿಸಿಕೊಂಡಾಗ ನಮಗೆ ಪರಮಾನಂದ ಸಿಕ್ಕುತ್ತೆ. 

ನಾವೆಲ್ಲರೂ ದೇವರ ಮಕ್ಕಳು

     ಯಾರೋ ಒಬ್ಬರನ್ನು ದೇವರ ಮಗ ಅನ್ನುವುದು ಎಷ್ಟು ಸರಿ? ಆ ರೀತಿ ಹೇಳುವವರಿಗೆ ಒಬ್ಬ ಕೇಳಿಯೇ ಬಿಟ್ಟ: ‘ನಾವು ಭಗವಂತನ ಮಕ್ಕಳಲ್ಲ ಅಂತೀರಲ್ಲಾ, ಹಾಗಾದರೆ ನಾವೆಲ್ಲಾ ಏನು ಶೈತಾನನ ಮಕ್ಕಳಾ? ಪಿಶಾಚಿಗಳ ಮಕ್ಕಳಾ?’ ವೇದ ಹೇಳುತ್ತೆ: ‘ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ  . . . .’   ಈ ದಿವ್ಯವಾದ ಲೋಕ ಲೋಕಾಂತರದಲ್ಲಿ ಎಷ್ಟು ಜನ ಬದುಕಿದ್ದಾರೆ, ಜೀವಿಸಿದ್ದಾರೆ, ಅವರೆಲ್ಲಾ ’ಅಮೃತಸ್ಯ ಪುತ್ರಾಃ’ - ಅವರೆಲ್ಲರೂ ಆ ಅಮರನಾದ ಪರಮಾತ್ಮನ ಮಕ್ಕಳೇ. ಯಾರೋ ಒಬ್ಬರನ್ನು ಮಾತ್ರ ದೇವರ ಮಗ ಅನ್ನುವುದು ಸರಿಯಲ್ಲ. 

ಚೇತನ ಅಚೇತನ ವಸ್ತುವನ್ನು ಪೂಜಿಸಬೇಕೆ?

     ಯಥಾ ಪ್ರಕಾರ ಸತ್ಸಂಗಕ್ಕೆ ಬಂದ್ರು, ಕೂತ್ಕೊಂಡ್ರು, ‘ಪಂಡಿತಜಿ ಬಹಳ ಸೊಗಸಾಗಿ ಮಾತನಾಡಿದರು’ ಅನ್ನೋದು. ಹೊರಗೆ ಹೋಗುವಾಗ ಕೇಳಿದ್ದನ್ನೆಲ್ಲಾ ಪಂಡಿತಜಿಗೇ ಬಿಟ್ಟು ಹೋಗೋದು. ತೆಗೆದುಕೊಂಡು ಹೋಗೋದು ಏನೂ ಇಲ್ಲ, ಮನೆಗೆ ಹೋದ ಮೇಲೆ ಅದೇ ಪ್ರಕಾರ ಮೂರ್ತಿ ಪೂಜೆ, ಅದೇ ಪ್ರಕಾರ ನಡೆದುಕೊಳ್ಳುವುದು, ಮೂರ್ತಿಪೂಜೆ ಮಾಡಲೇಬೇಕು ಅನ್ನುವ ಹಟ ಇದ್ದರೆ, ಪರಮಾತ್ಮನ ಮೂರ್ತಿ ಆಚಾರ್ಯ, ತಂದೆಗೆ ಪ್ರಜಾಪತಿ ಸ್ಥಾನ, ತಾಯಿಯೇ ಪೃಥ್ವಿ, ಅವರುಗಳನ್ನು ಪೂಜೆ ಮಾಡಿ, ಅದು ಬಿಟ್ಟು ಜೀವ ಇಲ್ಲದ ಅಚೇತನವಾದ ವಸ್ತುಗಳನ್ನು ಎದುರಿಗೆ ಇಟ್ಟುಕೊಂಡು ಅಡ್ಡ ಬೀಳುವುದೇಕೆ? ಅವಕ್ಕೆ ಗೊತ್ತಾಗುತ್ತಾ? 

ಭಗವಂತನ ಭಕ್ತರ ಭಯ!

     ನನಗೆ ಭಕ್ತರ ಭಯ, ಭಗವಂತನ ಭಯವಿಲ್ಲ, ಭಗವಂತನ ಭಕ್ತರಿದ್ದಾರಲ್ಲಾ, ಅವರದ್ದೇ ಯಾವಾಗಲೂ ಅಪಾಯವೇ. ಹಿಂದೆ ಒಮ್ಮೆ ಗ್ರಾಮದೇವತೆಯ ಉತ್ಸವ ಮೂರ್ತಿ ಹೊತ್ತುಕೊಂಡು ಬಂದು ನಮ್ಮ ಬಾಡಿಗೆ ಮನೆಯ ಮುಂದೆ ನಿಲ್ಲಿಸಿದರು. ಉತ್ಸವ ಮಾಡುವಾಗ ಗ್ರಾಮದೇವತೆಯ ಕಥೆ ಹೇಳುವುದಿಲ್ಲ, ಸಂಬಂಧವಿಲ್ಲದ ಸಿನೆಮಾ ಸಾಂಗ್ಸು ಹಾಕಿಕೊಂಡು ಕುಣೀತಾ ಹೋಗೋದು. ಅದೆಂಥಾ ಭಕ್ತಿ? ನಾನು ಹೇಳಿದೆ: “ತೆಗೆದುಕೊಂಡು ಹೋಗ್ರಪ್ಪಾ, ಬೇರೆ ಎಲ್ಲಾದರೂ ಕೂಡಿಸಿಕೊಳ್ಳಿ, ಯಾಕೆ ನಮ್ಮ ಪ್ರಾಣ ತಿಂತೀರಿ?” ಅವರುಗಳು, “ಅಯ್ಯಯ್ಯೋ, ಅಮ್ಮ, ತಾಯಿ, ಹೋಗು ಅಂತ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡೋದಿಲ್ಲ, ಶಿಕ್ಷೆ ಕೊಡ್ತಾಳೆ”. ಆವಾಗ ನಾನು ಹೇಳಿದೆ: “ನೀವು ಭಕ್ತರು ಇದ್ದೀರಲ್ಲಾ, ನೀವು ಏನೂ ಮಾಡೋದಿಲ್ಲ ಅಂತ ಭರವಸೆ ಕೊಡಿ, ಆಗ ನಾನು ಈ ಮೂರ್ತಿಗೆ ನಾನು ಮಾಡುವ ರೀತಿಯಲ್ಲಿ ಪೂಜೆ ಮಾಡ್ತೀನಿ, ಏನಾಗುತ್ತೋ ನೋಡೋಣ”. ಏನಾಗುತ್ತೆ? ಏನೂ ಆಗಲ್ಲ. 

ವಿದ್ವಾಂಸರಲ್ಲಿ ದೇವರನ್ನು ಕಾಣೋಣ

     ಈ ಪ್ರಪಂಚದಲ್ಲಿ ಯಾರು ವಿದ್ವಾಂಸರು ಇರುತ್ತಾರೋ ಅವರನ್ನೇ ದೇವರು ಅನ್ನಬಹುದು. ಆ ವಿದ್ವಾಂಸರಲ್ಲಿ ಫಟಿಂಗರೂ ಇರುತ್ತಾರೆ, ಎಲ್ಲರೂ ಒಳ್ಳೆಯವರಿರುವುದಿಲ್ಲ. ಜನರಿಗೆ  ಟೋಪಿ ಹಾಕುವುದಕ್ಕೆ ಏನು ಬೇಕೋ ಅದನ್ನು ಹೇಳುವವರು ಇರುತ್ತಾರೆ. ಋಜು ಮಾರ್ಗದಲ್ಲಿ, ನೇರ ಮಾರ್ಗದಲ್ಲಿ ಯಾರು ನಡೆಯುತ್ತಾರೋ ಅಂತಹ ವಿದ್ವಾಂಸರ ಬುದ್ಧಿ ನಮಗೆ ಬರಲಿ, ವಿದ್ವಾಂಸರುಗಳು ನೇರವಾದ ಮಾರ್ಗವನ್ನು ತೋರಿಸಬೇಕು. ‘ಜ್ಞಾನ ಕೊಡುವ, ಫಲ ಕೊಡುವ ವಿದ್ವಾಂಸರೇ ನಮಗೆ ಉಪದೇಶ ಕೊಡಿ’ ಇದು ವೇದ ಹೇಳುವ ಮಾತು. ಆ ಪುಣ್ಯಾತ್ಮನಿಗೇ ಜ್ಞಾನ ಇಲ್ಲದೇ ಹೋದರೆ, ಅವನೇ ಅವಿದ್ಯಾವಂತನಾದರೆ ಅವನಿಂದ ನಮಗೆ ಏನು ಸಿಕ್ಕುತ್ತೆ? ಆದ್ದರಿಂದ ವಿದ್ವಾಂಸರಿಗೆ ಶರಣಾಗಬೇಕು, ಜ್ಞಾನಿಗಳಿಗೆ ಶರಣಾಗಬೇಕು, ಅವರನ್ನು ನಾವು ಪ್ರಾರ್ಥನೆ ಮಾಡಬೇಕು.

     ಗಂಭೀರವಾಗಿ ಯೋಚಿಸಿ, ಆಲೋಚಿಸಿ, ವೇದದ ಮಂತ್ರ ಹೇಳುತ್ತೆ, ಸತ್ಕರ್ಮ ಮಾಡುವುದನ್ನು ಬಿಟ್ಟು ಬೇರೆಡೆ ಹೊರಳದಿರೋಣ, ನಾವು ಯಾವ ದಾರಿಯಲ್ಲಿ ಹೋಗಬೇಕೋ ಆ ದಾರಿಯನ್ನು ಬಿಟ್ಟು ಹೋಗದಿರೋಣ, ಸರ್ವೈಶ್ವರ್ಯನಾದ ಪರಮಾತ್ಮ ನಮಗೆ ಬದುಕು ಕೊಟ್ಟಿದ್ದಾನೆ, ಜೊತೆಗೆ ಐಶ್ವರ್ಯವನ್ನೂ ಕೊಟ್ಟಿದ್ದಾನೆ. ಸೋಮ ಅನ್ನುವ ಪದ ಇದೆ, ಆ ಪದಕ್ಕೆ ೪೦ ಅರ್ಥ ಇದೆ. ಎಲ್ಲಾ ಬೇಡ, ೨-೩ ಅರ್ಥ ನೋಡೋಣ, ಒಂದು ಮಥನ ಮಾಡು ಅಂತ. ಹಾಲನ್ನು ಸುಮ್ಮನೆ ಇಟ್ಟರೆ ಕೆನೆ ಸಿಕ್ಕುವುದಿಲ್ಲ, ಕಾಯಿಸಿ ಹೆಪ್ಪಿಟ್ಟರೆ ಮೊಸರಾಗುತ್ತದೆ, ಮಥಿಸಿದರೆ ಬೆಣ್ಣೆ ಸಿಗುತ್ತದೆ, ಆ ಮಥನ ಶಕ್ತಿ ನಿಮ್ಮಲ್ಲಿರಬೇಕು.  ಇನ್ನೊಂದು ವಿಚಾರ ಮಾಡುವ ಶಕ್ತಿ, ಆಲೋಚನೆ ಮಾಡುವ ಶಕ್ತಿ. ಗುರೂಜಿ ಎಲ್ಲಾ ಯೋಚನೆ ಮಾಡಿಬಿಟ್ಟಿದ್ದಾರೆ, ನಾವೇನು ಯೋಚನೆ ಮಾಡುವುದು ಬೇಡ, ಅವರು ಹೇಳಿದಂತೆ ನಡೆದರೆ ಸಾಕು ಎಂದು ಭಾವಿಸುವುದು ಸರಿಯಲ್ಲ. ಗುರು ಅಂದರೆ ಎರಡು ನಮೂನೆ – ಒಂದು ಸತ್ಯೋಪದೇಶ ಮಾಡುವವನು, ಇನ್ನೊಂದು ಭಾರ ಅಂತ. ಈಗ ಹೆಚ್ಚಿನ ಗುರುಗಳು ಭಾರವಾಗಿರುವವರೇ.

***************

ಹಿಂದಿನ ಲೇಖನಕ್ಕೆ ಲಿಂಕ್: 

http://vedajeevana.blogspot.in/2012/04/3.html

Permanent link to this article: http://www.vedasudhe.com/%e0%b2%b8%e0%b2%be%e0%b2%b0%e0%b2%97%e0%b3%8d%e0%b2%b0%e0%b2%be%e0%b2%b9%e0%b2%bf%e0%b2%af-%e0%b2%b0%e0%b2%b8%e0%b3%8b%e0%b2%a6%e0%b3%8d%e0%b2%97%e0%b2%be%e0%b2%b0%e0%b2%97%e0%b2%b3%e0%b3%81-4/

ಮಗನ ವಿವಾಹಕ್ಕೆ ಬನ್ನಿ

ಆತ್ಮೀಯ ವೇದಸುಧೆಯ ಅಭಿಮಾನಿಗಳೇ,

 

            ವೇದಸುಧೆಯ ಆರಂಭದಿಂದ ನೂರಾರು ಜನ ಅಭಿಮಾನಿ ಬಂಧುಗಳು ವೇದಸುಧೆಯನ್ನು ಪ್ರೀತಿಯಿಂದ ಓದುತ್ತಿದ್ದೀರಿ. ನಮ್ಮಲ್ಲಿ ಹಲವರಿಗೆ ಪರಸ್ಪರ ಪರಿಚಯವಿಲ್ಲ. ಆದರೂ ಒಂದು ಕುಟುಂಬದವರಂತೆ ನಮ್ಮೆಲ್ಲರ ಮನಸ್ಸು ಇದೆ. ಕುಟುಂಬದ ಒಬ್ಬ ಸದಸ್ಯನಾಗಿ ನಾನು ತಮ್ಮೆಲ್ಲರನ್ನೂ ನನ್ನ ಮಗನ ಮದುವೆಗೆ ಆಹ್ವಾನಿಸಲು  ನನ್ನ ಈ ತಾಣವನ್ನೇ      ಮಾಧ್ಯಮವನ್ನಾಗಿ ಮಾಡಿಕೊಂಡಿರುವೆ. ಇದನ್ನು ತಪ್ಪಾಗಿ ಭಾವಿಸದೆ ಪರಸ್ಪರ ಪರಿಚಯ ಮಾಡಿಕೊಳ್ಳಲು  ಈ ಅವಕಾಶವನ್ನು ಉಪಯೋಗಿಸಿಕೊಳ್ಳೋಣ, ಆಗಬಹುದೇ?

————————————————————————————————————

 

ನಮ್ಮ ಜ್ಯೇಷ್ಠ ಪುತ್ರ

ಚಿ||ರಾ|| ಶ್ರೀಕಂಠ  ಹೆಚ್.ಎಸ್.

ಮತ್ತು 

ಚಿ||ಸೌ|| ರಶ್ಮಿ ವಿ.

[ಬೆಂಗಳೂರು ವಿವೇಕಾನಂದ ಕಾಲೊನಿಯ ನಿವಾಸಿ

ಶ್ರೀಮತಿ ಸಾವಿತ್ರಿ ಮತ್ತು ಶ್ರೀ ಹೆಚ್. ಡಿ. ವೆಂಕಟೇಶ್ ಇವರ ಜ್ಯೇಷ್ಠಪುತ್ರಿ]

ಇವರ ವಿವಾಹ ಕ್ಕೆ

ತಾವು ಬಂಧುಮಿತ್ರರೊಡಗೂಡಿ ಆಗಮಿಸಿ ಆಶೀರ್ವದಿಸಬೇಕಾಗಿ ಕೋರುತ್ತೇವೆ.

ಮುಹೂರ್ತ:  7.05.2012  ರಂದು ಸೋಮವಾರ ,ಬೆಳಿಗ್ಗೆ  11.45 ರಿಂದ 12.00 ಕ್ಕೆ

ಆರತಕ್ಷತೆ: ಸಂಜೆ 6.30 ರಿಂದ

ಸ್ಥಳ: MKP .ಕಲ್ಯಾಣ ಮಂಟಪ ,

        ಬನಶಂಕರಿ ಎರಡನೆಯ ಹಂತ, ಕೆ.ಆರ್. ರಸ್ತೆ , ಬೆಂಗಳೂರು

ಹಾಸನದಲ್ಲಿ  ಆರತಕ್ಷತೆ:

ದಿನಾಂಕ: 13.5.2012  ಭಾನುವಾರ  ಬೆಳಿಗ್ಗೆ 10.00 ಕ್ಕೆ

ಸ್ಥಳ:  ಶ್ರೀ ಸೀತಾರಾಮಾಂಜನೇಯ ಪ್ರವಚನ ಮಂದಿರ,

ಮಹಾರಾಜಾ ಪಾರ್ಕ್ ಹಿಂಬಾಗ, ಉತ್ತರ ಬಡಾವಣೆ, ಹಾಸನ

ತಮ್ಮ ಆಗಮನಾಭಿಲಾಶಿಗಳು

ಶ್ರೀಮತಿ ಸರ್ವಮಂಗಳ ಮತ್ತು ಹರಿಹರಪುರ ಶ್ರೀಧರ

ಮತ್ತು ಬಂಧು ಮಿತ್ರರು

ಮಾಹಿತಿಗಾಗಿ:  9663572406    

Permanent link to this article: http://www.vedasudhe.com/%e0%b2%ae%e0%b2%97%e0%b2%a8-%e0%b2%b5%e0%b2%bf%e0%b2%b5%e0%b2%be%e0%b2%b9%e0%b2%95%e0%b3%8d%e0%b2%95%e0%b3%86-%e0%b2%ac%e0%b2%a8%e0%b3%8d%e0%b2%a8%e0%b2%bf/

ಸಾರಗ್ರಾಹಿಯ ರಸೋದ್ಗಾರಗಳು -3

      ೧೧೬ ವರ್ಷಗಳ ಪಂ. ಸುಧಾಕರ ಚತುರ್ವೇದಿಯವರು ದೇಹ, ಮನಸ್ಸು ಮತ್ತು  ಬುದ್ಧಿಗಳ ಮೇಲೆ ನಿಯಂತ್ರಣ ಸಾಧಿಸಿದವರು. ಬತ್ತದ ಜೀವನೋತ್ಸಾಹದ ಅವರ ವಿಚಾರಗಳು ಇಂದಿಗೂ ತಮ್ಮ ಎಂದಿನ ಪ್ರಖರತೆಯನ್ನು ಕಳೆದುಕೊಂಡಿಲ್ಲ. ಅವರ ನೇರ ಮಾತುಗಳು, ಅದರಲ್ಲಿನ ಖಚಿತತೆಗಳು ಬೆರಗು ಮೂಡಿಸುತ್ತವೆ. ನಾಲ್ಕೂ ವೇದಗಳನ್ನು ಗುರುಮುಖೇನ ಅಭ್ಯಸಿಸಿ ಅದರ ಸಾರವನ್ನು ಗ್ರಹಿಸಿದ ನಿಜವಾದ ಅರ್ಥದಲ್ಲಿ ಚತುರ್ವೇದಿಗಳೆನಿಸಿದವರು ಅವರು. ಜನರೊಡನೆ ಬೆರೆತು ಗಳಿಸಿರುವ ಅವರ ನೂರು ವರ್ಷಗಳಿಗೂ ಮೇಲ್ಪಟ್ಟ ಅಪೂರ್ವ ಜೀವನಾನುಭವ ಅವರೊಡನಿದೆ. ನೇರ ನಡೆ-ನುಡಿಯ, ಪ್ರಚಾರ ಬಯಸದ ಸರಳ ವ್ಯಕ್ತಿತ್ವದ ಅವರ ಮನೆಯಲ್ಲಿ ಪ್ರತಿ ಶನಿವಾರ ಸಾಯಂಕಾಲ ಸತ್ಸಂಗವಿರುತ್ತದೆ. ಸತ್ಸಂಗದಲ್ಲಿ ಅವರು ಯಾವುದಾದರೂ ವಿಷಯ ಕುರಿತು ಮಾತನಾಡುತ್ತಾರೆ. ಅಂತಹ ಕೆಲವು ಸತ್ಸಂಗಗಳಲ್ಲಿ ಅವರು ಹೇಳಿದ ಮಾತುಗಳನ್ನು ಗುರುತು ಹಾಕಿಕೊಂಡು ಅಕ್ಷರ ರೂಪ ಕೊಡುವ ಪ್ರಯತ್ನ ಮಾಡಿದ್ದೇನೆ. ಅವರ ಮಾತುಗಳು ನಮ್ಮಲ್ಲಿ ವಿಚಾರ ತರಂಗಗಳನ್ನೆಬ್ಬಿಸುತ್ತವೆ, ಅಂತರಂಗವನ್ನು ಬಡಿದೆಬ್ಬಿಸುತ್ತವೆ.  ಚತುರ್ವೇದಿಗಳೇ ಹೇಳುವಂತೆ ಅವರ ಮಾತುಗಳನ್ನು ಒಪ್ಪಲೇಬೇಕೆಂದಿಲ್ಲ. ಆಲೋಚಿಸಿ, ವಿಮರ್ಶಿಸಿ ಸರಿ ಅನ್ನಿಸಿದರೆ ಮಾತ್ರ ಒಪ್ಪಬಹುದು. ಇಲ್ಲದಿದ್ದರೆ ಪಕ್ಕಕ್ಕೆ ಸರಿಸಿಬಿಡಬಹುದು. ಇಲ್ಲಿವೆ ಅವರ ವಿಚಾರದ ತುಣುಕುಗಳ ಮುಂದುವರೆದ ಭಾಗ . . 

-ಕ.ವೆಂ.ನಾಗರಾಜ್.

****************

ಯಾಂತ್ರಿಕ ಪೂಜೆಯ ಫಲ

     ಭಗವಂತನ ಪ್ರಾರ್ಥನೆ, ಪೂಜೆಯನ್ನು ಯಾಂತ್ರಿಕವಾಗಿ ಮಾಡಿದರೆ ಫಲವಿಲ್ಲ. ನಮ್ಮ ಪ್ರಾರ್ಥನೆ ಮಾಡುವ ಮಂತ್ರದ ಅರ್ಥದ ಮನನ ಮಾಡಿಕೊಂಡು ಅಳವಡಿಸಿಕೊಂಡರೆ ಮಾತ್ರ ಅದರಲ್ಲಿ ಅರ್ಥವಿರುತ್ತದೆ. ಇಲ್ಲದಿದ್ದರೆ ಅದು ಕೇವಲ ನಾಲಿಗೆಗೆ ವ್ಯಾಯಾಮ ಅಷ್ಟೆ. ನಾವು ಈಗ ಅಗ್ನಿಹೋತ್ರ ಮಾಡುವಾಗ ಮೂರು ಸಲ ಗಾಯತ್ರಿ ಮಂತ್ರದ ಉಚ್ಛಾರ ಮಾಡಿದೆವು ಅದರ ಅರ್ಥ ನಮ್ಮ ಅರಿವಿಗೆ ಬಂತೇ, ನಮ್ಮ ಮನಸ್ಸನ್ನು ತಟ್ಟಿತೇ ಎಂಬುದನ್ನು ಅರಿಯೋಣ. ಇಲ್ಲದಿದ್ದರೆ ಸಾವಿರ ಸಲ ಗಾಯತ್ರಿ ಮಂತ್ರ ಹೇಳಿದರೂ ಫಲ ಮಾತ್ರ ಶೂನ್ಯ. ಸ್ನಾನ ಮಾಡಿದರೆ ದೇಹದ ಕೊಳಕು ಹೋಗುತ್ತದೆ. ಆತ್ಮಕ್ಕೆ ಅಂಟಿದ ಕೊಳಕು ಹೋಗಬೇಕೆಂದರೆ ಸತ್ಕರ್ಮದಿಂದ ಮಾತ್ರ ಸಾಧ್ಯ.

ಸಂಸ್ಕಾರ

     ನಾನು ಒಂದು ಉಪನಯನ ಸಮಾರಂಭಕ್ಕೆ ಹೋಗಿದ್ದೆ. ನೆಂಟರು, ಇಷ್ಟರನ್ನೆಲ್ಲಾ ಕರೆದಿದ್ದರು. ದೊಡ್ಡ ಗುಂಪೇ ಸೇರಿತ್ತು. ಪುರೋಹಿತರು ಅವರ ಪಾಡಿಗೆ ಅವರು ಮಂತ್ರ ಹೇಳ್ತಾ ಇದ್ದರು. ಬಂದವರೆಲ್ಲಾ ಸಬ್ ಕಮಿಟಿಗಳನ್ನು ಮಾಡಿಕೊಂಡು ಕಾಡುಹರಟೆ ಹೊಡೆಯುತ್ತಾ ಕೂತಿದ್ದರು. ಉಪನಯನ ಮಾಡಿದವರಿಗಾಗಲೀ, ಮಾಡಿಸಿಕೊಂಡವರಿಗಾಗಲೀ, ಮಂತ್ರ ಹೇಳುತ್ತಿದ್ದವರಿಗಾಗಲೀ ಅದರ ಅರ್ಥ ಗೊತ್ತಿತ್ತೋ ಇಲ್ಲವೋ! ಇಂತಹ ಆಚರಣೆಗಳನ್ನಾದರೂ ಮಾಡಿದರೂ ಒಂದೇ, ಮಾಡದಿದ್ದರೂ ಒಂದೇ! ಅರ್ಥ ತಿಳಿದು, ಎಲ್ಲರೂ ಮನಃಪೂರ್ವಕ ಭಾಗವಹಿಸಿದರೆ ಅದರಲ್ಲಿ ಸಾರ್ಥಕ್ಯವಿದೆ.

Thinking by proxy

     ಮಾನವ ಜನ್ಮ ಎತ್ತಿರುವ ನಾವು ಆಲೋಚನೆ ಮಾಡುವ ಶಕ್ತಿ ಉಪಯೋಗಿಸಿಕೊಳ್ಳಬೇಕು, ತಿಳಿದವರು, ವಿದ್ವಾಂಸರು ಎನ್ನಿಸಿಕೊಂಡವರೇ ವಿವೇಚನೆ ಮಾಡದೆ ಹಿಂದಿನವರು ಮಾಡುತ್ತಿದ್ದರು, ನಾವೂ ಮಾಡೋಣ, ಎಂಬಂತೆ ವರ್ತಿಸಿದರೆ, ಇನ್ನು ಮೂಢರು ಇನ್ನೇನು ಮಾಡ್ತಾರೆ? ಅವರನ್ನೇ ಅನುಸರಿಸುತ್ತಾರೆ. ಬೇರೆಯವರು ಏನು ಮಾಡ್ತಾರೋ ಅದನ್ನು ನೋಡಿಕೊಂಡು ಮಾಡ್ತಾ ಹೋಗೋದು, ಅಷ್ಟೆ. ಯಾವುದಕ್ಕೂ ಯೋಚನೆ ಮಾಡುವುದಕ್ಕೇ ಹೋಗುವುದಿಲ್ಲ. ಕೇಳಿದರೆ ‘ನಮ್ಮ ಗುರುಗಳು ಯೋಚನೆ ಮಾಡಿದ್ದಾರೆ, ಅವರಿಗೆ ಎಲ್ಲಾ ತಿಳಿದಿದೆ, ಅವರು ಹೇಳಿದ ಮೇಲೆ ಆಯಿತು’ ಅನ್ನುತ್ತಾರೆ - Thinking by proxy- ಇದು ಸರಿಯೇ? ನಮಗಾಗಿ ನಾವು ಯೋಚನೆ ಮಾಡಬೇಕೇ ಹೊರತು, ನಮಗಾಗಿ ಬೇರೆಯವರು ಯೋಚಿಸುವುದಲ್ಲ.

 ಅರಿತು ಆಚರಿಸುವುದೇ ಜ್ಞಾನದ ತಳಹದಿ 

     ಯಾಸ್ಕರು ಕೇವಲ ವ್ಯಾಕರಣ ಅಲ್ಲ, ಇತಿಹಾಸವನ್ನೂ ತಿಳಿದುಕೊಂಡು ಆಲೋಚನೆ ಮಾಡಿ ಒಂದು ಮಾತು ಹೇಳುತ್ತಾರೆ- ಯಾವನು ತಪಸ್ವಿಯಲ್ಲವೋ, ಇಂದ್ರಿಯ ನಿಗ್ರಹ ಮಾಡುವುದಿಲ್ಲವೋ ಕೇವಲ ವೇದಪಾಠ ಮಾಡುತ್ತಾ ಹೋಗುತ್ತಾನೋ ಅದರಿಂದ ಏನೂ ಪ್ರಯೋಜನವಿಲ್ಲ. ಪ್ರತ್ಯಕ್ಷ ಅರ್ಥ ಆಗಬೇಕು. ತಪಸ್ವಿ ಆಗಬೇಕು, ಬ್ರಹ್ಮಚಾರಿ ಆಗಬೇಕು, ಆಮೇಲೆ ಇಂದ್ರಿಯ ನಿಗ್ರಹ ಮಾಡಬೇಕು, ಆನಂತರವೇ ನಮಗೆ ಅರ್ಥವಾಗುವುದು. ಮಾಡಬಾರದ್ದನ್ನು ಮಾಡಿಕೊಂಡು, ತಿನ್ನಬಾರದ್ದನ್ನು ತಿಂದುಕೊಂಡು, ಆಡಬಾರದ್ದನ್ನು ಆಡಿಕೊಂಡು ‘ಓಹೋ, ನಾನು ಅಗ್ನಿಹೋತ್ರ ಮಾಡಿಬಿಟ್ಟೆ’ ಅಂದರೆ ಏನೂ ಪ್ರಯೋಜನ ಇಲ್ಲ. ಹಾಗೆಯೇ ವಾಯುಶುದ್ಧಿ ಆಗಬೇಕು ಅಂದುಕೊಂಡು ಈ ಮಂತ್ರ ಎಲ್ಲಾ ಹೇಳಿಕೊಂಡು ಅಗ್ನಿಹೋತ್ರ ಮಾಡೋದು ಏಕೆ? ಮಂತ್ರ ಹೇಳದೇ ಮಾಡಬಹುದಲ್ಲಾ! ಆಗಲೂ ವಾಯುಶುದ್ಧಿ ಆಗುತ್ತಲ್ಲಾ! ಹಾಗಲ್ಲ, ಈ ಮಂತ್ರದಲ್ಲಿ ಆಧ್ಯಾತ್ಮ ತುಂಬಿಕೊಂಡಿದೆ. ಅನೇಕ ಸಾರಿ ನಾನು ಹೇಳಿದ್ದೇನೆ ‘ಅಯಂತ ಇದ್ಮ ಆತ್ಮ ಜಾತ ವೇದ’ ಅಂತ ಮೊದಲು ಒಂದು ಸಲ ಹೇಳ್ತೀವಿ, ಆಮೇಲೆ ೫ ಸಲ ಹೇಳ್ತೀವಿ, ಯಾತಕ್ಕೆ? ಮೊದಲು ಒಂದು ಸಲ ಹೇಳುವಾಗ ‘ಭಗವಂತ ನನ್ನ ಜೀವನ, ಈ ಆತ್ಮ ನಿನಗೆ ಕಾಷ್ಠ, ಸಮಿತ್ತು ಇದ್ದ ಹಾಗೆ’  ಎಂದು ಇದರ ಅರ್ಥ. ಭಗವಂತ ಬ್ರಹ್ಮಾಂಡ, ದೊಡ್ಡ ಅಗ್ನಿ, ಆ ಅಗ್ನಿಯಲ್ಲಿ ನಮ್ಮ ಆತ್ಮವನ್ನು ಹಾಕಿದರೆ, ನಮ್ಮ ಆತ್ಮ ಇಲ್ಲದಂತಹ ಅದ್ಭುತ ಜ್ಞಾನ ನಮಗೆ ಬರುತ್ತದೆ. ನೀವು ಸುಳ್ಳು ಅಂತ ತಿಳಿದುಕೊಳ್ಳಬೇಡಿ, ಈಗಲಾದರೋ ನೀವು ವಿಮಾನ ನೋಡುತ್ತೀರಿ, ಸ್ಪೇಸ್ ಶಿಪ್ಪುಗಳನ್ನು ನೋಡ್ತೀರಿ. ಅವು ಯಾವುವೂ ಗೊತ್ತಿಲ್ಲದೇ ಇರುವಾಗ ಜ್ಯೋತಿಷಿಗಳು ೧೦೦ ವರ್ಷ ಆದಮೇಲೆ ಯಾವ ದೇಶದಲ್ಲಿ ಯಾವಾಗ ಸೂರ್ಯಗ್ರಹಣ ಆಗುತ್ತೆ, ಚಂದ್ರ ಗ್ರಹಣ ಆಗುತ್ತೆ, ಎಷ್ಟು ಕಾಲ ಇರುತ್ತೆ, ಇದನ್ನೆಲ್ಲಾ ಹೇಳಿಬಿಡುತ್ತಿದ್ದರಲ್ಲಾ, ಹೇಗೆ? ಅವರೇನು ಪ್ರಾಪಂಚಿಕ ವಿಷಯದಲ್ಲಿ ಯಾವುದೇ ಬಿ.ಎ., ಎಂ.ಎ. ಪಾಸು ಮಾಡಿದವರಲ್ಲ. ನಮ್ಮ ಋಷಿಗಳೂ ಅಷ್ಟೆ, ವಸಿಷ್ಠ ಋಷಿ, ವಸಿಷ್ಠ, ಬಿ.ಎ., ಎಂ.ಎ. ಅಂತ ಹೆಸರಿನ ಮುಂದೆ ಹಾಕಿಕೊಂಡಿದ್ದರಾ? ಏನೂ ಇಲ್ಲ, ಡಿಗ್ರಿಗಳು ಬೇಕೇ ಇಲ್ಲ. ನನ್ನ ಗುರು ಸ್ವಾಮಿ ಶ್ರದ್ಧಾನಂದರು ಹೇಳುತ್ತಿದ್ದರು: ‘ನಿಮಗೆ ನಾವು ಡಿಗ್ರಿ ಕೊಡುತ್ತೇವೆ, ವಿದ್ಯಾಲಂಕಾರ, ವೇದಾಲಂಕಾರ, ವಿದ್ಯಾವಾಚಸ್ಪತಿ, ಡಿಗ್ರಿ ಕೊಡುತ್ತೇವೆ. ಅದರಿಂದ ನೀವು ಉದ್ಧಾರವಾಗುವುದಿಲ್ಲ. ಅದು ತಳಹದಿ. ಅದರ ಮೇಲೆ ನೀವು ಕಟ್ಟಡ ಕಟ್ಟಬೇಕು. ಹೊಟ್ಟೆಪಾಡಿಗಲ್ಲ, ಹೊಟ್ಟೇಪಾಡೂ ಬೇಕು, ಸಿಕ್ಕುತ್ತೆ.’ ಸಂಸಾರಿಗಳು ಹೇಳೋರು, “ಸ್ವಾಮೀಜಿ, ನಿಮಗೇನೋ ಪರವಾಗಿಲ್ಲ, ಸಂಸಾರವಿಲ್ಲ, ಹೆಂಡರಿಲ್ಲ, ಮಕ್ಕಳಿಲ್ಲ, ಹ್ಯಾಗೋ ನಡೆದುಹೋಗುತ್ತೆ, ನಾವು ಗೃಹಸ್ಥರು, ಪೂಜೆ ಮಾಡೋದು ಬಿಟ್ಟುಬಿಟ್ರೆ, ನಮಗೆ ನೈವೇದ್ಯ ಕೊಡೋರು ಯಾರು? ದಕ್ಷಿಣೆ ಕೊಡೋರು ಯಾರು?ದಾನ ಕೊಡೋರು ಯಾರು? ನಮ್ಮ ಹೊಟ್ಟೆಪಾಡು?”  ದಯಾನಂದರು ಹೇಳೋರು: “ನಿಮ್ಮ ಪ್ರಾರಬ್ಧ ನಿಮ್ಮ ಜೊತೆಯಲ್ಲಿದೆ, ನಿಮಗೆ ಇದೊಂದೇ ಜನ್ಮ ಅಲ್ಲ, ಹಿಂದೆ ಯಾವ ಯಾವುದೋ ಜನ್ಮ ಎತ್ತಿದ್ದೀರಾ. ಅವುಗಳ ಫಲ ನಿಮ್ಮ ಜೊತೆಯಲ್ಲೇ ಇರುತ್ತೆ. ನಿಮಗೆ ಅನ್ನ ಸಿಕ್ಕೇ ಸಿಕ್ಕುತ್ತೆ. ಜನರಿಗೆ ಟೋಪಿ ಹಾಕಿ, ಸುಳ್ಳು ಹೇಳಿ ನೀವು ನಿಮ್ಮ ಅನ್ನ ದುಡಿಯಬೇಕಿಲ್ಲ.”

. . . . .ಮುಂದುವರೆಯುವುದು.

*************

ಹಿಂದಿನ ಲೇಖನಕ್ಕೆ ಲಿಂಕ್:

Permanent link to this article: http://www.vedasudhe.com/%e0%b2%b8%e0%b2%be%e0%b2%b0%e0%b2%97%e0%b3%8d%e0%b2%b0%e0%b2%be%e0%b2%b9%e0%b2%bf%e0%b2%af-%e0%b2%b0%e0%b2%b8%e0%b3%8b%e0%b2%a6%e0%b3%8d%e0%b2%97%e0%b2%be%e0%b2%b0%e0%b2%97%e0%b2%b3%e0%b3%81-3/