Monthly Archive: December 2011

ಸಮಾನೋ ಮಂತ್ರ: ಸಮಿತಿ: ಸಮಾನೀ-ಒಂದು ಚಿಂತನೆ

ಅನೇಕ ದಿನಗಳಿಂದ ನನ್ನ ಮನದೊಳಗೆ ಒಂದು ಚಿಂತೆ ಕಾಡುತ್ತಿದೆ.ನಮಗೆಲ್ಲಾ ಜನ್ಮಕೊಟ್ಟಈ ನೆಲಕ್ಕೆ ಪುಣ್ಯಭೂಮಿ, ಮೋಕ್ಷಭೂಮಿ, ತ್ಯಾಗಭೂಮಿ,ದೇವಭೂಮಿ, ಎಂದೆಲ್ಲಾ ಕವಿಗಳು ಬಣ್ಣಿಸಿದ್ದಾರೆ.ನಮ್ಮ ಋಷಿಪುಂಗವರ ತಪಸ್ಸಿನಿಂದ, ಅವರ ಆದರ್ಶಮಯ ಜೀವನದಿಂದ ನಮ್ಮ ದೇಶಕ್ಕೆ “ವಿಶ್ವಗುರುವಿನ” ಸ್ಥಾನ ಲಭಿಸಿತ್ತು ಎಂಬ ವಿಚಾರವನ್ನೂ ಸಹ ಕೇಳುತ್ತೇವೆ.ನಮ್ಮ ಈ ನೆಲದಲ್ಲಿಯೇ “ಮುತ್ತು ರತ್ನಗಳನ್ನು ಬಳ್ಳದಿಂದ ಅಳೆದು ಮಾರುತ್ತಿದರೆಂದೂ” ಕೇಳಿದ್ದೇವೆ.ಇವೆಲ್ಲದರ ಜೊತೆಗೆ ನಮ್ಮ ನಿತ್ಯ ಸಂಕಲ್ಪವಾದರೋ ” ಸರ್ವೇ ಭವಂತು ಸುಖಿನ:…….ಮಾ ಕಶ್ಚಿತ್ ದು:ಖ ಭಾಗ್ಭವೇತ್”-ಎಲ್ಲರೂ ಸುಖವಾಗಿರಬೇಕು…….., ಯಾರಿಗೂ ದು:ಖ ಬರುವುದು ಬೇಡ”. ಇದು ನಮ್ಮ ನಿತ್ಯ ಪ್ರಾರ್ಥನೆ ಯಾಗಿತ್ತು. ಆದರೆ ಎಲ್ಲೋ ಎನೋ ತಪ್ಪಾಗಿದೆಯಲ್ಲಾ! ಯಾವುದೋ ಕೊಂಡಿ ಕಳಚಿದೆಯಲ್ಲಾ!!


ಮೊನ್ನೆ ನಾನು ಅಗ್ನಿಹೋತ್ರ ಮಾಡುತ್ತಾ ಕುಳಿತಿದ್ದೆ. ನಮ್ಮಕ್ಕ ನಮ್ಮ ಮನೆಗೆ ಬಂದವರು ” ಇದೇನೋ ನೀನು “ಹೋಮ ಮಾಡುತ್ತಿದ್ದೀಯಾ? ಯಜುರ್ವೇದವರು ಮಾಡಬೇಕಾದ್ದು,ಋಗ್ವೇದಿಯಾದ ನೀನು ಮಾಡುತ್ತಿದ್ದೀಯಲ್ಲಾ!!” ವೇದಸುಧೆಯ ವಾರ್ಷಿಕೋತ್ಸವದಲ್ಲಿ ನಡೆದ ಅಗ್ನಿಹೋತ್ರ ಕಾರ್ಯಕ್ರಮದಲ್ಲಿ ಸ್ವತ: ಅಗ್ನಿಹೋತ್ರ ಮಾಡಿದ್ದ ನಮ್ಮ ಅಕ್ಕ ಶ್ರೀ ಸುಧಾಕರ ಶರ್ಮರಿಂದ ಅಗ್ನಿಹೋತ್ರದ ಅರ್ಥವಿವರಣೆಯನ್ನು ಸವಿಸ್ತಾರವಾಗಿ ಕೇಳಿದ್ದರು. ಅಂದು ಮೆಚ್ಚುಗೆ ವ್ಯಕ್ತಪಡಿಸಿದ್ದವರು. ಇವರೇ. ಆದರೆ ಅವರ ಬಾಯಲ್ಲಿಯೇ ಈ ಪ್ರಶ್ನೆ. ನಾನು ನಮ್ಮಕ್ಕನಿಗೆ ಹೇಳಿದೆ” ಆರೋಗ್ಯ ನಿಮಗೆ ಮಾತ್ರ ಬೇಕೋ? ಬೇರೆಯವರಿಗೆ ಬೇಡವೋ?

ಅವರು ನಿರುತ್ತರರಾಗಿದ್ದರು.

ಬ್ರಾಹ್ಮಣರೆಂದು ಕರೆಸಿಕೊಳ್ಳುವ , ಅಲ್ಪಸ್ವಲ್ಪ ಸಾಮಾಜಿಕ ಅರಿವು ಹೊಂದಿರುವ ಇವರೇ ಹೀಗೆ ಚಿಂತಿಸಿದರೆ ಹಿಂದುಸಮಾಜವು ಇನ್ನೂ ಯಾವ ಬಗೆಯ ಅಜ್ಞಾನದ ಸುಳಿಯಲ್ಲಿ ಸಿಲುಕಿ ಬಳಲುತ್ತಿರಬಹುದೆಂದು ಚಿಂತೆಗೊಳಗಾಗುತ್ತೇನೆ. ಚಿಂತೆಗೆ ಕಾರಣವಿದೆ. ಯಜ್ಞೋಪವೀತವನ್ನು ಧಾರಣೆ ಮಾಡಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಅದರ ಮಹತ್ವವನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ, ಸಂಧ್ಯಾವಂದನೆ ಮಾಡುವ, ಗಾಯತ್ರಿ ಮಂತ್ರ ಜಪಿಸುವ, ಊಟಮಾಡುವಾಗಿನ ಪರಿಶಂಚನೆಗೂ ಅರ್ಥ ವಿವರಣೆ ಕೊಟ್ಟು ಅದರಿಂದಾಗಿ ನಮ್ಮ ಆರೋಗ್ಯದ ಮೇಲಾಗುವ ಸತ್ಪರಿಣಾಮದ ಬಗೆಗೆ ಅರಿವು ಮಾಡಿಸಲಾಗುತ್ತದೆ.ಆದರೆ ” ಸರ್ವೇ ಭವಂತು ಸುಖಿನ:……. ಮಾ ಕಶ್ಚಿತ್ ದು:ಖ ಭಾಗ್ಭವೇತ್”-ಎಂದು ಪ್ರಾರ್ಥಿಸುವ ನಾವು ನಮ್ಮೊಡನೆ ಉಪನಯನ ಸಂಸ್ಕಾರದಿಂದ, ವೇದಾಧ್ಯಯನದಿಂದ ಎಷ್ಟು ಜನ ನಮ್ಮ ಸೋದರರು ವಂಚಿತರಾಗಿದ್ದಾರೆಂಬ ಬಗ್ಗೆ ಯೋಚಿಸಿದ್ದೇವೆಯೇ? ” ಆತ್ಮವತ್ ಸರ್ವ ಭೂತೇಶು” ಎನ್ನುವ ನಮಗೆ ಮಾನವ ಜಾತಿಯಲ್ಲೂ ಒಂದುಬಹುದೊಡ್ದ ಭಾಗ ಈ ಸಂಸ್ಕಾರಗಳಿಂದ ವಂಚಿತವಾಗಿದೆ, ಎಂದು ಅನಿಸುವುದಿಲ್ಲವೇ?ಅವರಿಗೆ ಉತ್ತಮ ಆರೋಗ್ಯ ಬೇಡವೇ? ಉತ್ತಮ ಬದುಕು ಬೇಡವೇ?

ನನಗೆ ಚಿಂತೆ ಕಾಡಲೂ ಇನ್ನೂ ಕಾರಣಗಳಿವೆ. ವೇದಾಧ್ಯಯನವನ್ನು ಮಾಡಿರುವ ಅದೆಷ್ಟು ವಿದ್ವಾಂಸರುಗಳಿಲ್ಲ! ಅವರಲ್ಲಿ ಈ ಚಿಂತೆ ಯಾಕೆ ಕಾಡುತ್ತಿಲ್ಲ? ನಮ್ಮ ವೈದಿಕ ಪರಂಪರೆಯಿಂದ ಒಂದು ಆರೋಗ್ಯಯುತವಾದ ಜೀವನ ನಡೆಸಬಹುದೆಂದಾದರೆ ಆ ಜೀವನ ಕೆಲವರಿಗೆ ದಕ್ಕಿದರೆ ಸಾಕೇ?


ಸಮಾನೋ ಮಂತ್ರ: ಸಮಿತಿ: ಸಮಾನೀ

ಸಮಾನಂ ವ್ರತಂ ಸಹ ಚಿತ್ತಮೇಷಾಮ್|

ಸಮಾನೇನ ವೋ ಹವಿಷಾ ಜುಹೋಮಿ

ಸಮಾನಂ ಚೇತೋ ಅಭಿಸಂವಿಶಧ್ವಮ್||

[ಅಥರ್ವ-೬.೬೪.೨]


ಅಥರ್ವ ವೇದದ ಈ ಮಂತ್ರ ಏನು ಹೇಳುತ್ತದೆ?


ಸಮಾನೋ ಮಂತ್ರ: = ಮಾನವರೆಲ್ಲರ ಮಂತ್ರವು ಸಮಾನವಾಗಿರಲಿ

ಸಮಿತಿ: ಸಮಾನೀ= ಸಮಿತಿಯು ಸಮಾನವಾಗಿರಲಿ[ ಸಮಿತಿ ಎಂದರೆ ಸಭೆ, ಕೂಟ, ಸಂಸ್ಥೆ,ಸಮಾಜ,ಸೇರುವಿಕೆ]

ಸಮಾನಂ ವ್ರತಂ=ವ್ರತವೂ ಸಮಾನವಾಗಿರಲಿ[ವ್ರತವೆಂದರೆ ಕಟ್ಟು, ಕಟ್ಟಳೆ,ನಿಯಮ,ಶಾಸನ,ವಿಧಿ, ಯಜ್ಞ,ಪೂಜೆ,ಧಾರ್ಮಿಕ ಪ್ರತಿಜ್ಞೆ ]


ಸಹ ಚಿತ್ತಮೇಷಾಮ್= ಇವರೆಲ್ಲರ ಚಿತ್ತವು ಒಂದೇ ದಿಕ್ಕಿನಲ್ಲಿ ಹರಿಯಲಿ

ವ:=ನಿಮ್ಮೆಲ್ಲರಿಗೂ

ಸಮಾನೇನ ಹವಿಷಾ=ಸಮಾನವಾದ ಖಾದ್ಯ,ಪೇಯಗಳನ್ನೇ

ಜುಹೋಮಿ=ದಾನ ಮಾಡುತ್ತೇನೆ

ಸಮಾನಂ ಚೇತ:=ಸಮಾನವಾದ ಚೈತನ್ಯದಲ್ಲಿಯೇ

ಅಭಿಸಂವಿಶಧ್ವಮ್= ಎಲ್ಲೆಡೆಯಿಂದಲೂ ಪ್ರವೇಶಿಸಿರಿ



ಈ ಮಂತ್ರದ ಅರ್ಥವನ್ನು ತಿಳಿದಾಗ ಆ ಭಗವಂತನೇ ನೀಡಿರುವ ಸವಲತ್ತನ್ನೂ ಕೂಡ ನಾವು ಸರಿಯಾಗಿ ಎಲ್ಲರೂ ಅನುಭವಿಸಲು ಸಾಧ್ಯವಾಗಿಲ್ಲವಲ್ಲಾ! [ಸುಪ್ರೀಮ್ ಕೋರ್ಟ್ ಆದೇಶವಿದ್ದರೂ ಸಹ ಸರ್ಕಾರವು ಕಾರ್ಯಕ್ರಮವನ್ನು ಅನುಷ್ಠಾನ ಮಾಡದಿರುವಂತೆ]

ಯಾಕೆ ಹೀಗೆ? ಯಾಕೆ ಹೀಗೆ? ಚಿಂತೆ ಕಾಡುತ್ತಿರುವುದು ತಪ್ಪೇ?

ಸಾಮಾಜಿಕ ಸಾಮರಸ್ಯದ ಬಗೆಗೆ ಚಿಂತನೆ ಮಾಡುವಾಗ ನಿಜವಾಗಿ ಮತ್ತೊಂದು ಸಮಸ್ಯೆ ಎದುರಾಗುತ್ತದೆ. ಅದು ಮಾಂಸಾಹಾರ ಸೇವನೆ ಯ ಸಮಸ್ಯೆ. ಈ ಸಮಸ್ಯೆಯನ್ನು ಪರಿಹರಿಸುವುದೇನೂ ಕಷ್ಟವಿಲ್ಲ. ಆದರೂ ಬೆಳೆದುಬಂದಿರುವ ರೂಢಿಯಿಂದ ಹಲವರು ಮಾಂಸಾಹಾರದ ಅಭ್ಯಾಸವನ್ನು ಮಾಡಿಕೊಂಡಿರುವುದು ಸುಳ್ಳಲ್ಲ. ಮಾಂಸಾಹಾರಿ ಮಿತ್ರರನ್ನು ಬಹಳ ಆತ್ಮೀಯವಾಗಿ ವಿಚಾರಿಸಿದಾಗ ಅವರಿಂದ ಪ್ರಾಮಾಣಿಕವಾಗಿ ಬರುವ ಉತ್ತರವೇನು ಗೊತ್ತೇ? “ ಬಾಯಿ ಚಪಲ ದಿಂದಾಗಿ ಮಾಂಸಾಹರ ಬಿಡಲು ಆಗುತ್ತಿಲ್ಲ” ಸಸ್ಯಾಹಾರವು ಆರೋಗ್ಯಕ್ಕೆ ಉತ್ತಮವೆಂದು ಹೇಳಿದರೆ ಉತ್ತರ ಒಂದು ಸಿದ್ಧವಾಗಿರುತ್ತದೆ” ಬಹುತೇಕ ವಿಜ್ಞಾನಿಗಳು ಭಾರತೀಯರಲ್ಲ. ಪಾಶ್ಚಿಮಾತ್ಯರಲ್ಲಿ ಮಾಂಸಾಹಾರ ಸರ್ವೇ ಸಾಮಾನ್ಯ. ಆದ್ದರಿಂದ ಮಾಂಸಾಹಾರಿ ವಿಜ್ಞಾನಿಗಳಿರಲಿಲ್ಲವೇ?

ನಿಜವಾಗಿ ಪಾಶ್ಚಿಮಾತ್ಯ ವಿಜ್ಞಾನಿಗಳ ಆಹಾರ ಕ್ರಮವನ್ನು ಇವರೇನೂ ಅಧ್ಯಯನ ಮಾಡಿಲ್ಲ. ಆದರೂ ಅವರೆಲ್ಲರನ್ನೂ ಮಾಂಸಾಹಾರಿಗಳೆಂದು ಪರಿಗಣಿಸಿ ಮಾಂಸಾಹಾರ ಸೇವನೆಗೂ ಜ್ಞಾನಕ್ಕೂ ಸಬಂಧವಿಲ್ಲ” ಎಂಬ ಸ್ವಂತ ತೀರ್ಮಾನಕ್ಕೆ ಬಂದು ಅದಕ್ಕೇ ಅಂಟಿಕೊಳ್ಳುವರಿಗೇನೆನ್ನಬೇಕು?

ಯಜ್ಞಕ್ಕೆ ಅಧ್ವರ ಎಂಬ ಸಮಾನ ಪದವೂ ಇದೆ. ಧ್ವರ ಎಂದರೆ ಹಿಂಸೆ. ಅಧ್ವರ ಎಂದರೆ ಅಹಿಂಸೆ ಎಂದಾಯ್ತು. ಹಾಗಾಗಿ ಹಿಂಸೆ ಮಾಡದೆ ,ಪ್ರಾಣಿಯನ್ನು ಕೊಲ್ಲದೆ ಮಾಂಸಾಹಾರ ಸೇವನೆ ಸಾಧ್ಯವೇ? ಆದ್ದರಿಂದ ಯಜ್ಞವನ್ನು ಮಾಡಬೇಕಾದ ಎಲ್ಲಾ ಮಾನವರೂ ಕೂಡ ಸಸ್ಯಾಹಾರಿಗಳೇ ಆಗಿರಬೇಕಲ್ಲವೇ?

ಈ ಮಾತು ಹೇಳುವಾಗ ಮಾಂಸಪ್ರಿಯರು ಕೂಡಲೇ ಉತ್ತರಿಸುತ್ತಾರೆ “ ನಾವು ಕುರಿ-ಕೋಳಿ ಕೊಂದು ತಿನ್ನದಿದ್ದರೆ , ಅವುಗಳ ಸಂಖ್ಯೆ ಎಷ್ಟಾಗುತ್ತಿತ್ತು ಗೊತ್ತಾ?

ಎಂತಹಾ ಪ್ರಶ್ನೆ!

ಸಿಂಹ, ಹುಲಿ ಇತ್ಯಾದಿ ಪ್ರಾಣಿಗಳ ಆಹಾರವೇ ಮತ್ತೊಂದು ಪ್ರಾಣಿಯ ಮಾಂಸ. ಸಿಂಹ, ಹುಲಿಗಳಿಗೆ ಸಸ್ಯಾಹಾರ ಉಣಿಸಲು ಸಾಧ್ಯವೇ? ಒಂದು ಪ್ರಾಣಿ ಮತ್ತೊಂದು ಪ್ರಾಣಿಗೆ ಆಹಾರ. ಆದರೆ ಯಾವ ಪ್ರಾಣಿಯೂ ಮನುಷ್ಯನಿಗೆ ಆಹಾರವಾಗಬಾರದು. ಮನುಷ್ಯನ ದೇಹದ ರಚನೆಯೂ ಕೂಡ ಸಸ್ಯಾಹಾರಕ್ಕೇ ರಚಿತವಾಗಿದ್ದು.

ಇಂತಹ ಸೂಕ್ಷ್ಮ ವಿಷಯಗಳ ಬಗೆಗೆ ಚಿಂತನ-ಮಂಥನ ಮಾಡಬಾರದೇ?

ಬದಲಾಗಬೇಕಾದವರು ಕೇವಲ ಒಂದು ವರ್ಗವಲ್ಲ. ವೇದಜ್ಞಾನವನ್ನು ಹೊಂದಿರುವವರು ವೇದಜ್ಞಾನವಿಲ್ಲದ ಆದರೆ ಅದನ್ನು ಕಲಿಯುವ ಆಸಕ್ತಿ ಇರುವ ಯಾವುದೇ ವ್ಯಕ್ತಿಗಾಗಲೀ ಕಲಿಸಿಕೊಡಲು ಮುಂದೆ ಬರಬೇಕು, ಅಂತೆಯೇ ವೇದಜ್ಞಾನವಿಲ್ಲದವರು ವೇದಜ್ಞಾನವನ್ನು ಪಡೆಯಲು ಬೇಕಾದ ಮಾನಸಿಕತೆಯನ್ನು ಹೊಂದಬೇಕು. ಅಲ್ಲವೇ?

ಇಡೀ ವಿಶ್ವಕ್ಕೆ ಉತ್ತಮ ಬದುಕು ನೀಡುವ ಸಾಮರ್ಥ್ಯವು ವೇದದಲ್ಲಿದ್ದು ಅದನ್ನು ಬಲ್ಲವರು ಆಸಕ್ತರಿಗೆ ನೀಡಲು

ಮನಸ್ಸು ಮಾಡಬೇಕು,ಪಡೆಯುವವರೂ ಕೂಡ ಪಡೆಯಲು ಬೇಕಾದ ಮಾನಸಿಕತೆಯನ್ನು ಬೆಳಸಿಕೊ ಳ್ಳಬೇಕು. ಏನಂತೀರಾ?

-ಹರಿಹರಪುರಶ್ರೀಧರ್

Permanent link to this article: http://www.vedasudhe.com/%e0%b2%b8%e0%b2%ae%e0%b2%be%e0%b2%a8%e0%b3%8b-%e0%b2%ae%e0%b2%82%e0%b2%a4%e0%b3%8d%e0%b2%b0-%e0%b2%b8%e0%b2%ae%e0%b2%bf%e0%b2%a4%e0%b2%bf-%e0%b2%b8%e0%b2%ae%e0%b2%be%e0%b2%a8%e0%b3%80-%e0%b2%92/

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು – ೪

ಋಗ್ವೇದ ಹೇಳುತ್ತಲಿದೆ:
ನಾನಾನಂ ವಾ ನೋ ಧಿಯೋ ವಿ ವ್ರತಾನಿ ಜನಾನಾಮ್| (ಋಕ್.೯.೧೧೨.೧)
[ನಃ ಜನಾನಾಮ್] ಮಾನವರಾದ ನಮ್ಮ [ಧಿಯಃ] ಬುದ್ಧಿಗಳು [ನಾನಾನಮ್] ನಾನಾ ಬಗೆಯವು. [ವಾ ಉ] ಮತ್ತು ಅದೇ ರೀತಿ, [ವ್ರತಾನಿ] ಸಂಕಲ್ಪಗಳೂ ಕೂಡ, [ವಿ] ವಿವಿಧವಾದವು. ಈ ಮೌಲಿಕ ಸತ್ಯವನ್ನು ಗುರುತಿಸಿ, ಪ್ರತಿಯೊಬ್ಬನೂ ತನ್ನದೇ ಆದ ಮಾರ್ಗ ಹಿಡಿದು, ಮಾನವಸಮಾಜಕ್ಕೂ ಸೇವೆ ಸಲ್ಲಿಸುತ್ತಾ, ತನ್ನ ವೈಯಕ್ತಿಕ ಅಭಿವೃದ್ಧಿಯನ್ನೂ ಸಾಧಿಸಿಕೊಳ್ಳುವುದಕ್ಕಾಗಿ ಸೌಲಭ್ಯ ನೀಡುವ ಉದ್ದೇಶದಿಂದ, ವೇದಗಳು ಪರಮ ವೈಜ್ಞಾನಿಕವಾದ ವರ್ಣವ್ಯವಸ್ಥೆಯ ನಿರೂಪಣವನ್ನು ಮಾಡುತ್ತವೆ. ಪಾಠಕರು ಒಂದು ಅಂಶವನ್ನು ಸ್ಪಷ್ಟವಾಗಿ ಮನಸ್ಸಿನಲ್ಲಿ ಅಂಕಿತಗೊಳಿಸಿಕೊಳ್ಳಬೇಕು. ಹುಟ್ಟಿನಿಂದ ಬರುವುದೆಂದು ಭಾವಿಸಲ್ಪಡುವ, ಯಾವುದೋ ಸುದೂರ ಅತೀತದಲ್ಲಿ ವರ್ಣವ್ಯವಸ್ಥೆಗೆ ಕುರೂಪವನ್ನಿತ್ತು ಸ್ವಾರ್ಥವನ್ನೇ ಸರ್ವಸ್ವವೆಂದು ಭಾವಿಸಿ, ಪ್ರತಿಯೊಬ್ಬ ವ್ಯಕ್ತಿಯ ಘನತೆ ಗಾಂಭೀರ್ಯಗಳಿಗೆ ಗಮನ ನೀಡದೆ, ಮೇಲು-ಕೀಳೆಂಬ ಹೊಲಸು ಭಾವನೆಗೆ ಆಶ್ರಯವಿತ್ತು ಆಚರಿಸಲ್ಪಡುವ ಇಂದಿನ ಜಾತಿಪದ್ಧತಿಗೂ, ಪರಮ ವೈಜ್ಞಾನಿಕವೂ, ಸರ್ವಥಾ ಬುದ್ಧಿಸಂಗತವೂ, ಸರ್ವೋತ್ಕರ್ಷಸಾಧಕವೂ ಆದ ಪವಿತ್ರ ವರ್ಣವ್ಯವಸ್ಥೆಗೂ ಯಾವ ಸಂಬಂಧವೂ ಇಲ್ಲ.

***********************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ac%e0%b3%8d%e0%b2%b0%e0%b2%be%e0%b2%b9%e0%b3%8d%e0%b2%ae%e0%b2%a3-4/

ವೇದೋಕ್ತ ಜೀವನ ಪಥ: ಬ್ರಾಹ್ಮಣಾದಿ ಚತುರ್ವರ್ಣಗಳು – ೩

     ಎಷ್ಟಾದರೂ ವೇದ ಭ್ರಾಂತಿಪೂರ್ಣವಾದ ಪೌರುಷೇಯ ಕೃತಿಯಲ್ಲ. ಅದು ಸರ್ವಜ್ಞ ಭಗವದುಕ್ತ. ಆದುದರಿಂದ, ಪರಮ ವೈಜ್ಞಾನಿಕ. ಮಾನವರೆಲ್ಲರನ್ನೂ ಸಮಾನ ದೃಷ್ಟಿಯಿಂದಲೇ ನೋಡಬೇಕೆಂಬುದು ಸತ್ಯ ಸಿದ್ಧಾಂತ. ಆದರೆ ಮಾನವರು ಯಾಂತ್ರೀಕೃತರಲ್ಲ, ಎಲ್ಲಾ ವಿಷಯಗಳಲ್ಲಿಯೂ ಸರ್ವಥಾ ಸಮಾನವಾಗಿರುವುದಕ್ಕೆ. ಒಂದು ಯಂತ್ರಾಗಾರದಿಂದ ಒಂದೇ ರೂಪದ, ಒಂದೇ ತೂಕದ, ಒಂದೇ ಬಣ್ಣದ, ಒಂದೇ ಶಕ್ತಿಯ ಸಹಸ್ರಾರು ಮೋಟಾರುಗಳನ್ನು ನಿರ್ಮಿಸಬಹುದು. ಆದರೆ ಅತ್ಯಂತ ಸಮರ್ಥನಾದ ಆಚಾರ್ಯನೂ ಕೂಡ ಒಂದೇ ಶಕ್ತಿಯ, ಒಂದೇ ಅಭಿರುಚಿಯ, ಒಂದೇ ಭಾವನೆಯ ಸಾವಿರ, ಏಕೆ, ನೂರು ಶಿಷ್ಯರನ್ನೂ ತಯಾರು ಮಾಡಲಾರನು. ಅದಕ್ಕೆ ಕಾರಣವೂ ಇದೆ. ಪ್ರತಿಯೊಬ್ಬ ಜೀವಾತ್ಮನೂ ತನ್ನದೇ ಆದ ಸಂಸ್ಕಾರಗಳನ್ನು ಹೊತ್ತು, ಒಂದು ಜನ್ಮದಿಂದ ಮತ್ತೊಂದು ಜನ್ಮಕ್ಕೆ ಬರುತ್ತಾನೆ. ಪರಿಚ್ಛಿನ್ನ ಚೇತನ ಎಂಬ ಅಧ್ಯಾಯದಲ್ಲಿ ಪಾಠಕರು ಈ ವಿಷಯವನ್ನು ಓದಿದ್ದಾರೆ. ಋಗ್ವೇದ ಹೇಳುತ್ತಲಿದೆ:-
ಆದಹ ಸ್ವಧಾಮನು ಪುನರ್ಗರ್ಭತ್ವಮೇರಿರೇ |
ದಧಾನಾ ನಾಮ ಯಜ್ಞಿಯಮ್ || (ಋಕ್. ೧.೬.೪.)
    ಈ ಜೀವಾತ್ಮನು [ಯಜ್ಞಿಯಮ್ ನಾಮ ದಧಾನಾಃ] ಆದರಯೋಗ್ಯ ಪದವನ್ನು ಪಡೆಯುತ್ತಾ [ಆತ್ ಅಹ] ನಿರಂತರ ಕ್ರಮದಲ್ಲಿ [ಸ್ವಧಾಂ ಅನು] ತಮ್ಮ ಧಾರಣಶಕ್ತಿಗಳಿಗೆ ಅಂದರೆ ಸಂಸ್ಕಾರಗಳ ದೃಷ್ಟಿಯಿಂದ ಯೋಗ್ಯತೆಗೆ ಅನುಸಾರವಾಗಿ [ಪುನಃ ಗರ್ಭತ್ವಂ ಏರಿರೇ] ಮರಳಿ ಗರ್ಭತ್ವವನ್ನು - ಮಾತೃಯೋನಿಯಲ್ಲಿನ ಇರುವಿಕೆಯನ್ನು ಪಡೆಯುತ್ತಾರೆ. ಮಾನವಯೋನಿ ಏನೋ ಒಂದೇ, ಮಾನವತ್ವ ಸಾಮಾನ್ಯ ಧರ್ಮವೂ ಅಹುದು. ಈ ದೃಷ್ಟಿಯಿಂದ ಮಾನವರೆಲ್ಲಾ ಸಮಾನರೇ ಸರಿ. ಆದರೆ ಸಂಸ್ಕಾರಜನಿತವಾದ ಸಾಮರ್ಥ್ಯಗಳಲ್ಲಿ ಮತ್ತು ಒಲವುಗಳಲ್ಲಿ ಸಹಜವಾದ ಭೇದವಿರುತ್ತದೆ. ಅದನ್ನು ಗಮನಿಸಿ, ಪ್ರತಿಯೊಬ್ಬನಿಗೂ ತನ್ನದೇ ಆದ ರೀತಿಯಲ್ಲಿ ಏಳಿಗೆ ಸಾಧಿಸುವ ಅನುಕೂಲವನ್ನು ಕಲ್ಪಿಸಿಕೊಡುವುದೇ ಮನೋವಿಜ್ಞಾನಕ್ಕನುಗುಣವಾದ ಕ್ರಮ.
*************************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ac%e0%b3%8d%e0%b2%b0%e0%b2%be%e0%b2%b9%e0%b3%8d%e0%b2%ae%e0%b2%a3-3/

ಶ್ರೀ ಶೃತಿ ಪ್ರಿಯರ ಸಂದರ್ಶನ

ವೇದ ತರಂಗ ಮಾಸ ಪತ್ರಿಕೆಯ ಸಂಪಾದಕರಾದ ಶ್ರೀ ಶೃತಿಪ್ರಿಯರ ಸಂದರ್ಶನ. ಸಂದರ್ಶಿಸುವವರು ವೇದಾಧ್ಯಾಯೀ ಶ್ರೀ ಸುಧಾಕರಶರ್ಮ.

Permanent link to this article: http://www.vedasudhe.com/%e0%b2%b6%e0%b3%8d%e0%b2%b0%e0%b3%80-%e0%b2%b6%e0%b3%83%e0%b2%a4%e0%b2%bf-%e0%b2%aa%e0%b3%8d%e0%b2%b0%e0%b2%bf%e0%b2%af%e0%b2%b0-%e0%b2%b8%e0%b2%82%e0%b2%a6%e0%b2%b0%e0%b3%8d%e0%b2%b6%e0%b2%a8/