Monthly Archive: October 2011

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು – 4

     ಉಪಾಸನಾ –  ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ. ಆಲಿಸಿರಿ:-

ಯುಂಜತೇ ಮನ ಉತ ಯುಂಜತೇ ಧಿಯೋ ವಿಪ್ರಾ ವಿಪ್ರಸ್ಯ ಬೃಹತೋ ವಿಪಶ್ಚಿತಃ |

ವಿ ಹೋತ್ರಾ ದಧೇ ವಯುನಾವಿದೇಕ ಇನ್ಮಹೀ ದೇವಸ್ಯ ಸವಿತುಃ ಪರಿಷ್ಟುತಿಃ || (ಯಜು. ೩೭.೨.)

     [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ [ವಿಪಶ್ಚಿತಃ] ವಿದ್ವಾಂಸರು [ಬೃಹತಃ ವಿಪ್ರಸ್ಯ] ಮಹಾನ್ ಹಾಗೂ ವಿಶಿಷ್ಟ ಪ್ರಜ್ಞನಾದ ಪ್ರಭುವಿನಲ್ಲಿ [ಮನಃ ಯುಂಜತೇ] ಮನಸ್ಸನ್ನು ನಿಲ್ಲಿಸುತ್ತಾರೆ. [ಉತ] ಹಾಗೆಯೇ [ಧಿಯಃ ಯುಂಜತೇ] ಬುದ್ಧಿಗಳನ್ನು ನಿಲ್ಲಿಸುತ್ತಾರೆ. [ಏಕ ಇತ್ ವಯುನಾವಿತ್] ಏಕಮಾತ್ರ ಪಥಜ್ಞನೂ, ಲೋಕಜ್ಞನೂ ಆದ ಪ್ರಭುವು [ಹೋತ್ರಾ] ಸಂಯೋಗಜನ್ಯವಾದ ನಾನಾ ಜಗತ್ತುಗಳನ್ನು [ವಿದಧೇ] ವಿವಿಧ ರೀತಿಯಲ್ಲಿ ಧರಿಸಿದ್ದಾನೆ. [ಸವಿತುಃ ದೇವಸ್ಯ] ಜಗದುತ್ಪಾದಕ ಹಾಗೂ ಪ್ರೇರಕನಾದ, ಸರ್ವದಾತೃ, ಪ್ರಕಾಶಸ್ವರೂಪ ಭಗವಂತನ, [ಪರಿಸ್ತುತಿಃ ಮಹೀ] ಉನ್ನತ ಸ್ತುತಿ ಮಹತ್ತಾದುದು.

     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗೆಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ.

     ಮನಸ್ಸು ಸಂಕಲ್ಪ-ವಿಕಲ್ಪ ಸಾಧನ. ಬುದ್ಧಿ ತತ್ತ್ವಗ್ರಹಣ ಸಾಧನ. ಮನಸ್ಸಿನ ಆಲೋಚನ-ವಿಲೋಚನಗಳನ್ನು ತಡೆಗಟ್ಟಿ ಬುದ್ಧಿಯನ್ನು ಬಾಹ್ಯ ವಿಷಯಗ್ರಹಣದಿಂದ ಬೇರ್ಪಡಿಸಿ, ಎರಡನ್ನೂ ಅಭ್ಯಂತರ ವೃತ್ತಿಯ ಪರಿಧಿಗಳೆತಂದು, ಭಗವದ್ಗುಣಗಳನ್ನು ಚಿಂತಿಸುತ್ತಾ, ಗ್ರಹಿಸುತ್ತಾ, ಎರಡನ್ನೂ ಆ ಕಾರ್ಯಗಳಲ್ಲಿಯೇ ವಿನಿಯೋಗಿಸುವುದು ಭಗವದುಪಾಸನೆ. ಇದು ಸರ್ವಥಾ ಅಭ್ಯಂತರ ಕರ್ಮ. ಈ ಉಪಾಸನೆಗೆ ಪೂರ್ವಹಂತಗಳಾಗಿ ಭಗವಂತನಲ್ಲಿ ಪ್ರೇಮ ಬೆಳೆಯಿಸುವ ಸ್ತುತಿ ಮತ್ತು ಹೃದಯದಲ್ಲಿ ನಮ್ರತೆಯನ್ನು ಬಿತ್ತುವ ಪ್ರಾರ್ಥನೆ. ಇವೆರಡನ್ನೂ ಉಪಯೋಗಿಸಿಕೊಳ್ಳಬೇಕು. ಈ ಬಗೆಯ ಸತ್ಯೋಪಾಸನೆಯಿಂದ ಹೃದಯದಲ್ಲಿ ಪವಿತ್ರವಾದ ಹಾಗೂ ವಿಶಾಲವಾದ ಭಾವನೆಗಳುದಿಸುವುದಲ್ಲದೆ, ಅನಿರ್ವಚನೀಯವಾದ ಶಾಂತಿ, ಆನಂದ ಹಾಗೂ ಸ್ಫೂರ್ತಿಗಳ ಉದಯವೂ ಆಗಿ , ಜೀವನ ಸರಸವೂ, ಬಲಿಷ್ಠವೂ ಆಗುತ್ತದೆ. ಭಗವದ್ಗುಣಧ್ಯಾನದಲ್ಲಿ ನಿಂತ ಚಿತ್ತ, ಕ್ರಮಕ್ರಮವಾಗಿ ಆ ಗುಣಗಳನ್ನು ಉಪಾಸಕನಾದ ಮಾನವನ ಜೀವನಕ್ಕೆ ತುಂಬುತ್ತಾ ಹೋಗುತ್ತದೆ. ಭಗವಂತನೊಂದಿಗೆ ಸಮಾನ ಗುಣಗಳನ್ನು ಹೊಂದಿದ ಭಕ್ತ, ಬೇಗನೇ ಭಗವಂತನ ಸಾಕ್ಷಾತ್ಕಾರವನ್ನು ಮಾಡಿಕೊಳ್ಳಲು ಸಮರ್ಥನಾಗುತ್ತಾನೆ. ಅವನು ಶಕ್ತಿ-ಸ್ಫೂರ್ತಿಗಳ, ಕೀರ್ತಿ-ಪ್ರೀತಿಗಳ ಬುಗ್ಗೆಯೇ ಆಗಿಹೋಗುತ್ತಾನೆ. ಋಗ್ವೇದ ಹೇಳುತ್ತದೆ:-

 

ತ್ವಂ ಹ್ಯಗ್ನೇ ಅಗ್ನಿನಾ ವಿಪ್ರೋ ವಿಪ್ರೇಣ ಸನ್ ತ್ಸತಾ|

 

ಸಖಾ ಸಖ್ಯಾ ಸಮಿಧುಸೇ || (ಋಕ್. ೮.೪೩.೧೪.)

 

     [ಅಗ್ನೇ] ಜ್ಞಾನಜ್ಯೋತಿರ್ಮಯನೇ! [ವಿಪ್ರಃ] ವಿಶೇಷ ಪ್ರಜ್ಞನೂ [ಸನ್] ಸತ್ಯಸ್ವರೂಪನೂ [ಸಖಾ] ಸರ್ವಮಿತ್ರನೂ ಆದ, [ತ್ವಮ್] ನೀನು, [ಹಿ] ನಿಜವಾಗಿ [ಅಗ್ನಿನಾ] ಜ್ಞಾನಜ್ಯೋತಿರ್ಮಯನೂ [ವಿಪ್ರೇಣ] ವಿಶೇಷ ಪ್ರಜ್ಞನೂ [ಸತಾ] ಸತ್ಯಮಯನೂ [ಸಖ್ಯಾ] ಮೈತ್ರೀಭಾವ ಪ್ರಧಾನನೂ ಆದ ಮಾನವನಿಂದ [ಸಂ ಇಧ್ಯಸೇ] ಚೆನ್ನಾಗಿ ಪ್ರಕಾಶಿಸಲ್ಪಡುತ್ತೀಯೆ.

 

     ಭಗವದ್ಗುಣಸದೃಶ ಗುಣಧಾರಣವೇ ವೈದಿಕೋಪಾಸನೆಯ ಆದರ್ಶ. ಈ ಉಪಾಸನೆ ಧರ್ಮದ ಹೃದಯವಿದ್ದಂತೆ. ಹೀಗೆ ಪೂರ್ಣಧರ್ಮ ಜೀವನದಲ್ಲಿ ಪ್ರಸ್ಫುಟಿತವಾಗಬೇಕಾದರೆ, ಜ್ಞಾನ-ಕರ್ಮ-ಉಪಾಸನಾ ಮೂರನ್ನೂ ರೂಢಿಸಿಕೊಳ್ಳಬೇಕು. 

***************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-7/

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು – 3

ಕೇಳಿರಿ:-

ಅನೃಣಾ ಅಸ್ಮಿನ್ನನೃಣಾಃ ಪರಸ್ಮಿನ ತೃತೀಯೇ ಲೋಕೇ ಅನೃಣಾಃ ಸ್ಯಾಮ |

ಯೇ ದೇವಯಾನಾಃ ಪಿತೃಯಾಣಾಶ್ಚ ಲೋಕಾಃ ಸರ್ವಾನ್ಪಥೋ ಅನೃಣಾ ಆ ಕ್ಷಿಯೇಮ || (ಅಥರ್ವ. ೬.೧೧೭.೩.)

     [ಅನೃಣಾಃ ಅಸ್ಮಿನ್] ಋಣರಹಿತರಾಗಿ ಈ ಬ್ರಹ್ಮಚರ್ಯದಲ್ಲಿರೋಣ. [ಪರಸ್ಮಿನ್] ಗಾರ್ಹಸ್ಥ್ಯದಲ್ಲಿಯೂ, [ಅನೃಣಾಃ] ಋಣರಹಿತರಾಗಿರೋಣ. [ತೃತೀಯೇ ಲೋಕೇ] ಮೂರನೆಯದಾದ ವಾನಪ್ರಸ್ಥದಲ್ಲಿಯೂ, [ಅನೃಣಾಃ ಸ್ಯಾಮ] ಋಣರಹಿತರಾಗಿರೋಣ. [ಯೇ ದೇವಯಾನಾಃ] ಯಾವ ಆಧ್ಯಾತ್ಮಿಕ ಗತಿಯ [ಚ] ಮತ್ತು, [ಪಿತೃಯಾಣಾಃ ಲೋಕಃ] ಸಾಂಸಾರಿಕಗತಿಯ ಸ್ಥಿತಿಗತಿಗಳಿವೆಯೋ, [ಸರ್ವಾನ್ ಪಥಃ] ಆ ಎಲ್ಲಾ ಮಾರ್ಗಗಳನ್ನೂ [ಅನೃಣಾಃ ಆ ಕ್ಷಿಯೇಷು] ಋಣರಹಿತರಾಗಿ ಸಂಕ್ರಮಿಸೋಣ.

     ವಾನಪ್ರಸ್ಥ ತೀರಿದ ಮೇಲೆ, ಸಂನ್ಯಾಸ ಸ್ವೀಕರಿಸಲು ಅರ್ಹರಾದವರು ಸಂನ್ಯಾಸಿಗಳು, ದೇವಯಾನ ಮಾರ್ಗಿಗಳಾಗುತ್ತಾರೆ. ಶಕ್ತಿಯಿಲ್ಲದವರು ಹಾಗೆಯೇ ಉಳಿಯುತ್ತಾರೆ. ಯಾವ ದಾರಿಯಲ್ಲೇ ಉಳಿಯಲಿ, ಋಣ ಮಾತ್ರ ಹೊರಬಾರದು. ಬೇರೆಯವರಿಗಾಗಿ ಏನನ್ನೂ ಒಳಿತನ್ನು ಮಾಡದೆ, ತಾನು ಬೇರೆಯವರಿಂದ ಏನನ್ನೂ ಪಡೆಯುವಂತಿಲ್ಲ.

 

     ಕರ್ಮ ಒಂದು ಬಗೆಯಲ್ಲ, ವೈಯಕ್ತಿಕ, ಪಾರಿವಾರಿಕ, ಸಾಮಾಜಿಕ, ರಾಷ್ಟ್ರೀಯ, ಆರ್ಥಿಕ, ನೈತಿಕ, ಆಧ್ಯಾತ್ಮಿಕ – ಹೀಗೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸಿರುತ್ತದೆ. ಕರ್ಮ, ಪರರಿಗೆ ಕೇಡಾಗದಂತೆ ತನ್ನ ಹಿತಕ್ಕಾಗಿ, ಸರ್ವಮುಖೀ ಉನ್ನತಿಗಾಗಿ ಮಾಡುವ, ಪರರ ಸರ್ವಮುಖೀ ಉನ್ನತಿಗಾಗಿ ನೆರವಾಗಿ ನಿಂತು ಮಾಡುವ, ಎಲ್ಲ ಕ್ಷೇತ್ರಗಳಲ್ಲಿನ ಕರ್ತವ್ಯಗಳೂ ವೇದಗಳ ದೃಷ್ಟಿಯಲ್ಲಿ ಅವಶ್ಯವಾಗಿ ಮಾಡಲ್ಪಡಲೇಬೇಕಾದುದಾಗಿದೆ. ಅದರಲ್ಲಿಯೂ ರಾಷ್ಟ್ರದ ಹಿತ ಎದುರು ನಿಂತಾಗ ತನ್ನ ಹಿತದ ಸ್ವಾರ್ಥವನ್ನೂ ಬಿಟ್ಟು ಕೇವಲ ಪರಾರ್ಥವನ್ನೇ ನೋಡಬೇಕಾಗುವುದು. ಕರ್ತವ್ಯಕ್ಷೇತ್ರದಿಂದ ಸಂನ್ಯಾಸದ ಅಥವಾ ತ್ಯಾಗದ ಹೆಸರಿನಲ್ಲಿ ಓಡಿಹೋಗುವ ಪ್ರಶ್ನೆ ವೈದಿಕ ಧರ್ಮದಲ್ಲಿ ಇಲ್ಲವೇ ಇಲ್ಲ. ಇಂತಹ ಸಮಸ್ತ ಕರ್ತವ್ಯಗಳನ್ನೂ ಒಟ್ಟು ಸೇರಿಸಿ, ವೇದಗಳು ಯಜ್ಞ ಎಂದು ಕರೆಯುತ್ತವೆ ಮತ್ತು ಯಜ್ಞದ ಬಗೆಗೆ ಈ ಸಂದೇಶವನ್ನು ನೀಡುತ್ತದೆ :-

ಯಜ್ಞೋ ಹಿ ತ ಇಂದ್ರ ವರ್ಧನೋ ಭೂದುತ ಪ್ರಿಯಃ ಸುತಸೋಮೋ ಮಿಯೇಧಃ |

ಯಜ್ಞೇನ ಯಜ್ಞಮವ ಯಜ್ಞಿಯಃ ಸನ್ ಯಜ್ಞಸ್ತೇ ವಜ್ರಮಹಿಹತ್ಯ ಆವತ್ || (ಋಕ್. ೩.೩೨.೧೨.)

     [ಇಂದ್ರ] ದೇಹಾಧೀಶನಾದ, ಇಂದ್ರಿಯವಾನ್ ಜೀವ! [ಹಿ] ನಿಜವಾಗಿ [ಯಜ್ಞಃ] ಯಜ್ಞವೇ [ತೇ ವರ್ಧನಃ] ನಿನಗೆ ಅಭಿವೃದ್ಧಿಕಾರಕವೂ [ಉತ] ಮತ್ತು [ಪ್ರಿಯಃ] ಪ್ರಿಯಕರವೂ [ಸುತಸೋಮಃ] ಹಿಂಡಲ್ಪಟ್ಟ ಆನಂದರಸವನ್ನುಳ್ಳದ್ದೂ [ಮಿಯೇಧಃ] ಮೈತ್ರಿಯನ್ನು ವರ್ಧಿಸತಕ್ಕುದೂ [ಭೂತ್] ಆಗಿದೆ. [ಯಜ್ಞಿಯಃ ಸನ್ ಯಜ್ಞೇನ] ಯಜ್ಞಕರ್ತೃವಾಗಿ ಸತ್ಕರ್ಮದಿಂದಲೇ [ಯಜ್ಞಂ ಅವ] ಯಜ್ಞವನ್ನು, ಸತ್ಕರ್ಮವನ್ನು ರಕ್ಷಿಸು. [ಅಹಿ ಹತ್ಯೇ] ಕುಟಿಲತನವನ್ನು ನಾಶಮಾಡುವುದರಲ್ಲಿ [ಯಜ್ಞಃ] ಯಜ್ಞವು [ತೇ ವಜ್ರಮ್] ನಿನ್ನ ವಜ್ರಾಯುಧವಾಗಿ [ಆ ಆವತ್] ರಕ್ಷಿಸುತ್ತದೆ.

     ಎಂತಹ ಭವ್ಯ ಆದೇಶ! ಸತ್ಕರ್ಮದಿಂದ ನಮ್ಮ ಆತ್ಮಗಳ ರಕ್ಷಣೆಯೂ ಆಗುತ್ತದೆ. ಯಜ್ಞವನ್ನು ನಾವು ರಕ್ಷಿಸಿದರೆ, ಯಜ್ಞ ನಮ್ಮನ್ನು ರಕ್ಷಿಸುತ್ತದೆ. ಯಜ್ಞ-ಸತ್ಕರ್ಮ, ಧರ್ಮದ ಕ್ರಿಯಾತ್ಮಕ ರೂಪ. ಸತ್ಕರ್ಮದಿಂದ ಪುಷ್ಟೀಕರಿಸಲ್ಪಡದ ಜ್ಞಾನ, ಕೇವಲ ಗ್ರಾಂಥಿಕ ಜ್ಞಾನವಾಗಿ ತಲೆಯಲ್ಲೇ ಉಳಿದುಹೋಗುತ್ತದೆ. ಅದೊಂದು ನಿರರ್ಥಕ ಭಾರವಾಗಿ ಪರಿಣಮಿಸುತ್ತದೆ. ಆದಕಾರಣ, ಜ್ಞಾನವನ್ನು ಸಾರ್ಥಕಪಡಿಸಲು ಸತ್ಕರ್ಮಗಳನ್ನು ಮಾಡುತ್ತಲೇ ಜೀವನ ಪೂರ್ತ ಉಸಿರಾಡಲಿಚ್ಛಿಸಬೇಕು.

 

     ಇನ್ನು ಧರ್ಮದ ಮೂರನೆಯ ಅವಿಚ್ಛಿನ್ನ ಅಂಗ, ವೈದಿಕ ಭಾಷೆಯಲ್ಲಿ ಇದನ್ನು ಉಪಾಸನಾ ಎನ್ನುತ್ತಾರೆ. ಭಕ್ತಿ, ಪೂಜೆ ಇದೆಲ್ಲಾ ಈಚೀಚೆಗೆ ಉದ್ಭವಿಸಿದ ಶಬ್ದಗಳು. ಜೀವಾತ್ಮನು ತನ್ನ ಚಿತ್ತವನ್ನು ಬಾಹ್ಯ ವಿಷಯಗಳಿಂದ ಸರ್ವಥಾ ಬೇರ್ಪಡಿಸಿ, ರೂಪ, ರಸ, ಗಂಧ, ಶಬ್ದ, ಸ್ಪರ್ಷ – ಈ ಐದು ಇಂದ್ರಿಯ ವಿಷಯಗಳಿಂದಲೂ ಅದನ್ನು ಒಳಕ್ಕೆಳೆದುಕೊಂಡು, ಏಕಾತ್ರಗೊಳಿಸಿ ಅದನ್ನು ಪರಮಾತ್ಮನಲ್ಲಿ ನಿಲ್ಲಿಸಿ, ಪ್ರಭುಸಾಮೀಪ್ಯವನ್ನು ಅನುಭವಿಸುವ ಕ್ರಿಯೆಯನ್ನೇ ಉಪಾಸನೆ ಎನ್ನುತ್ತಾರೆ. ವೈದಿಕ ಧರ್ಮದಲ್ಲಿ ಜೀವಂತ ಮೂರ್ತಿಗಳಾದ ತಾಯಿ-ತಂದೆ-ಆಚಾರ್ಯ-ಗುರು-ಹಿರಿಯರು ಇವರ ಪೂಜೆಗೆ, ಅಂದರೆ ಅವರ ಸತ್ಕಾರಕ್ಕೆ ಅವಕಾಶವಿದೆಯೇ ಹೊರತು, ಜಡಧಾತುಗಳ, ಕಲ್ಲು-ಮರಗಳ ವಿಗ್ರಹಗಳನ್ನು ದೇವರೆಂದು ತಿಳಿದು, ಧೂಪ-ದೀಪ-ನೈವೇದ್ಯಾದಿಗಳಿಂದ ಅರ್ಚಿಸುವ ಪದ್ಧತಿಗೆ ಅವಕಾಶವೇ ಇಲ್ಲ. ಪರಮಾತ್ಮನು ಸರ್ವವ್ಯಾಪಕ. ಅದೇ ಕಾರಣದಿಂದ ಸರ್ವಥಾ ನಿರಾಕಾರ. ಅವನು ಅವತಾರವನ್ನು ಎತ್ತುವ ಸಂಭವವಿಲ್ಲ ಎಂದು ಪಾಠಕರು ಮೊದಲೇ ಅರಿತಿದ್ದಾರೆ. ನಿರಾಕಾರನ ಮೂರ್ತಿ ರಚನೆ ಸರ್ವಥಾ ಅಸಂಭವ. ಚಿತ್ತದ ಏಕಾಗ್ರತೆಯ ಸಾಧನೆಗಾಗಿ ಮೂರ್ತಿಪೂಜೆ ಎಂದರೆ, ವ್ಯಾಪ್ಯದಲ್ಲಿ ಮನಸ್ಸನ್ನು ನಿಲ್ಲಿಸಲು ಕಲಿತರೂ, ವ್ಯಾಪಕನ ಧ್ಯಾನಕ್ಕೆ ಅದು ನೆರವಾಗಲಾರದು. ಅಲ್ಲದೆ ಉಪಾಸನೆ ಮಾಡುವುದು ಬೇರೆ ಎಲ್ಲಿಯೂ ಸಿಗದ ಆನಂದವನ್ನು ತುಂಬಿಕೊಳ್ಳುವುದಕ್ಕಾಗಿ. ಹೀಗಿರುವಾಗ, ಸಚ್ಚಿದಾನಂದ ಸ್ವರೂಪನಾದ ಪ್ರಭುವಿಗೆ ಬದಲು ನಿರಾನಂದನಾದ ಪ್ರಕೃತಿಯಲ್ಲಿ, ಪ್ರಾಕೃತ ವಿಗ್ರಹಗಳಲ್ಲಿ ಚಿತ್ತ ನಿಲ್ಲಿಸಲು ಕಲಿತು ಸಾಧಿಸುವುದಾದರೂ ಏನಿದೆ? ಸಚ್ಚಿತ್ಸ್ವರೂಪನಾದ ಜೀವ, ಸತ್ವರೂಪಿಣಿಯಾದ ಪ್ರಕೃತಿಗಿಂತ ಶ್ರೇಷ್ಠನಾಗಿರುವುದರಿಂದ, ವಿಗ್ರಹಗಳ ಮುಂದೆ ತಲೆ ಬಾಗುವುದರಲ್ಲಿ ಆತ್ಮಾಪಮಾನ ಒಂದನ್ನು ಬಿಟ್ಟು ಬೇರಾವ ಮಹತ್ವವಿದೆ?

 

     ವೇದಗಳಲ್ಲಿ ಮೂರ್ತಿಪೂಜಾ ವಿಧಾನವಿಲ್ಲ. ಅದಕ್ಕೆ ವಿರುದ್ಧವಾಗಿ, ಈ ಕೆಳಗಿನ ಮಂತ್ರದಂತಹ ವಿಚಾರ ಪ್ರಚೋದಕವಾದ ಮಂತ್ರಗಳು ಸಿಕ್ಕುತ್ತವೆ.

 

ಪ್ರ ತುವಿದ್ಯುಮ್ನಸ್ಯ ಸ್ಥವಿರಸ್ಯ ಘೃಷ್ವೇರ್ದಿವೋ ರರಪ್ಶೇ ಮಹಿಮಾ ಪೃಥಿವ್ಯಾಃ |

 

ನಾಸ್ಯ ಶತ್ರುರ್ನ ಪ್ರತಿಮಾನಮಸ್ತಿ ನ ಪ್ತತಿಷ್ಠಿಃ ಪುರುಮಾಯಸ್ಯ ಸಹ್ಯೋಃ || (ಋಕ್. ೬.೧೮.೧೨.)

 

     [ಪ್ರ ತುವಿದ್ಯುಮ್ನಸ್ಯ] ಮಹಾವೇಗಯುಕ್ತ ಶಕ್ತಿಸಂಪನ್ನನೂ [ಸ್ಥವಿರಸ್ಯ] ಅನಾದಿಯೂ, {ಘೃಷ್ವೇಃ] ಪರಮಾಣುಗಳಲ್ಲಿ ಚಲನೆ ನೀಡುವವನೂ ಆದ ಪರಮಾತ್ಮನ, [ಮಹಿಮಾ] ಮಹಿಮೆಯು, [ದಿವಃ ಪೃಥಿವ್ಯಾಃ ರರಪ್ಯೇ] ದ್ಯುಲೋಕ, ಪೃಥಿವೀ ಲೋಕಗಳನ್ನು ಮೀರಿಸಿದೆ. [ಅಸ್ಯ ಪುರುಮಾಯ ಸಹ್ಯೋಃ] ಈ ಮಹಾಪ್ರಜ್ಞನೂ, ಸಹನಶೀಲನೂ ಆದ ಪ್ರಭುವಿನ, [ಶತ್ರುಃ] ಶತ್ರುವು, [ನ] ಯಾವನೂ ಇಲ್ಲ. [ಪ್ರತಿಮಾನಂ ನ ಅಸ್ತಿ] ಪ್ರತಿಮಾನವೂ ಇಲ್ಲ. [ಪ್ರತಿಷ್ಠಿಃ ನ] ಆಧಾರವೂ ಇಲ್ಲ.

 

     ಇಷ್ಟು ಸ್ಪಷ್ಟವಾಗಿ ಪ್ರತಿಮಾರ್ಚನದ ನಿರಾಕರಣ ವೇದಗಳಲ್ಲಿ ಕಂಡುಬರುತ್ತದೆ. ಅಲ್ಲದೆ, ಯ ಏಕ ಇತ್ ತಮುಷ್ನುಹಿ (ಋಕ್.೬.೪೫.೧೬.) – ಯಾವನು ಕೇವಲ ಒಬ್ಬನೇ ಒಬ್ಬನಿದ್ದಾನೋ, ಅವನನ್ನು ಮಾತ್ರ ಸ್ತುತಿಸು.

 

ಮಾ ಚಿದನ್ಯದ್ ವಿ ಶಂಸತ ಸಖಾಯೋ ಮಾ ರಿಷಣ್ಯತ |

 

ಇಂದ್ರಮಿತ್ ಸ್ರೋತಾ ವೃಷಣಂ ಸಚಾ ಸುತೇ ಮುಹುರುಕ್ಥಾ ಚ ಶಂಸತ || (ಋಕ್. ೮.೧.೧.)

 

     [ಅನ್ಯತ್ ಚಿತ್] ಬೇರಾವುದನ್ನೂ [ಮಾ ವಿಶಂಸತಾ] ಪ್ರಶಂಸಿಸಬೇಡಿ. [ಸಖಾಯಃ] ಮಿತ್ರರೇ, [ಮಾ ರಿಷಣ್ಯತಾ] ನಾಶ ಹೊಂದಬೇಡಿ. [ಸುತೇ ಸಜಾ] ಈ ಸೃಷ್ಟಿಯಲ್ಲಿ ಒಟ್ಟಾಗಿ [ವೃಷಣಂ ಇಂದ್ರಂ ಇತ್] ಸುಖವರ್ಷಕನಾದ ಇಂದ್ರನನ್ನು, ಸರ್ವಶಕ್ತಿಮಾನ್ ಪ್ರಭುವನ್ನು ಮಾತ್ರ [ಶಂಸತ] ಸ್ತುತಿಸಿರಿ. [ಮುಹುರುಕ್ಥಾ ಚ] ಮತ್ತು ಬಾರಿ ಬಾರಿ ಸ್ತುತಿಪರರಾಗಿ [ಶಂಸತ] ಸ್ತುತಿಸಿರಿ.

 

    ಈ ರೀತಿ ಕೇವಲ ಒಬ್ಬನೇ ಪ್ರಭುವನ್ನು ಮಾತ್ರ ಸ್ತುತಿಸಿರಿ ಎಂದು ವೇದಗಳು ಸ್ಪಷ್ಟ ಆದೇಶ ನೀಡುತ್ತವೆ.

 

    ಹೀಗೆ ಜಡಾರ್ಚನೆ ಪರಿತ್ಯಾಜ್ಯ. ಚೇತನೋಪಾಸನೆಯೇ ವೇದೋಕ್ತ ಕ್ರಿಯೆ. ಉಪಾಸನಾ – ಎಂದರೆ ಉಪ+ಆಸನಾ, ಹತ್ತಿರ ಕುಳಿತುಕೊಳ್ಳುವುದು. ಭಗವಂತನ ಸಮೀಪದಲ್ಲಿ ಕುಳಿತುಕೊಳ್ಳುವುದೇ ಭಗವದುಪಾಸನೆ. ಭಗವಂತನೂ ಅನಾದಿ, ಜೀವರಾದ ನಾವೂ ಅನಾದಿ. ಹೀಗಾಗಿ ಅವನೂ, ನಾವೂ ಸಮಕಾಲೀನರು. ಕಾಲದ ದೃಷ್ಟಿಯಿಂದ ನಾವು ಅವನಿಂದ ದೂರವಿಲ್ಲ. ಅವನು ಸರ್ವವ್ಯಾಪಕನಾದ ಕಾರಣ, ನಮ್ಮೊಳಗೂ, ಹೊರಗೂ ಏಕಪ್ರಕಾರವಾಗಿ ವ್ಯಾಪಕನಾಗಿದ್ದೇನೆ. ಆದುದರಿಂದ ದೇಶದ ದೃಷ್ಟಿಯಿಂದಲೂ ಅವನು ನಮ್ಮಿಂದ ದೂರವಿಲ್ಲ. ಹೀಗೆ ಕಾಲ-ದೇಶಗಳ ದೃಷ್ಟಿಯಿಂದ ಉಪಾಸನೆ ನಮಗೆ ಸಹಜವಾಗಿಯೇ ಸಿದ್ಧಿಸಿದೆ. ಆದರೆ. ಸಂಪರ್ಕ ಸಾಧನವಾದ ಮನಸ್ಸು ಸಾಂಸಾರಿಕ ವ್ಯಾಪಾರಗಳಲ್ಲಿ ವ್ಯಾಪ್ರವಾಗಿರುವುದರಿಂದ, ಜ್ಞಾನದ ದೃಷ್ಟಿಯಿಂದ ನಾವು ಪರಮಾತ್ಮನಿಂದ ದೂರವೇ ಇದ್ದೇವೆ. ಈ ಜ್ಞಾನಸಂಬಂಧೀ ದೂರವನ್ನು ದೂರೀಕರಿಸಿ, ಮನಸ್ಸನ್ನು ಅವನಲ್ಲಿ ನಿಲ್ಲಿಸಿ, ಅವನ ಸಾಮೀಪ್ಯವನ್ನನುಭವಿಸುವುದೇ ಉಪಾಸನೆ.

 

*********************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-6/

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು – 2

ಇಂದ್ರ ಕ್ರತುಂ ನ ಆ ಭರ ಪಿತಾ ಪುತ್ರೇಭ್ಯೋ ಯಥಾ |

ಶಿಕ್ಷಾ ಣೋ ಅಸ್ಮಿನ್ ಪುರುಹೂತ ಯಾಮನಿ ಜೀವಾ ಜ್ಯೋತಿರಶೀಮಹಿ || (ಋಕ್. ೭.೩೨.೨೬.)

     [ಇಂದ್ರ] ಓ ಶಕ್ತಿಮಾನ್ ಪ್ರಭೋ! [ಯಥಾ ಪಿತಾ ಪುತ್ರೇಭ್ಯಃ] ಯಾವ ರೀತಿ ತಂದೆಯು ತನ್ನ ಮಕ್ಕಳಿಗೆ ತುಂಬಿಕೊಡುತ್ತಾನೋ ಅದೇ ರೀತಿ, [ ನಃ ಕ್ರತುಂ ಆಭರ] ನಮಗೆ ಉತ್ತಮ ಆಲೋಚನೆಗಳನ್ನು ತುಂಬಿಕೊಡು. [ಜೀವಾಃ] ಜೀವರಾದ ನಾವು, [ಜ್ಯೋತಿಃ ಆಶೀಮಹಿ] ಜ್ಯೋತಿಯನ್ನು ಸೇವಿಸೋಣ.

     ಈ ಜ್ಯೋತಿ, ಜೀವನಪಥವನ್ನು ಬೆಳಗುವ ನಿರ್ಮಲಜ್ಞಾನ ಎಂಬುದನ್ನು ನೆನಪಿಟ್ಟರೆ, ವೈದಿಕ ಧರ್ಮದ ಸೌಂದರ್ಯ ವ್ಯಕ್ತವಾಗುತ್ತದೆ. ಈ ಜಾನ, ಪ್ರಾಕೃತಿಕ ಜಗತ್ತಿನಿಂದಾರಂಭಿಸಿ, ಪರಮಾತ್ಮನವರೆಗಿನ ಸಮಸ್ತ ತತ್ತ್ವಗಳನ್ನೂ ಯಥಾವತ್ತಾಗಿ ಅರಿಯುವುದೇ ಆಗಿದೆ. ಈ ಬಗೆಯ ಅರಿವಿಲ್ಲದೆ, ಮಾನವಜೀವನದ ವಿಕಾಸವಾಗುವುದು ಹಾಗೂ ಅವನು ತನ್ನ ಗುರಿಯನ್ನು ಮುಟ್ಟುವುದು ಅಸಂಭವ. ಅದಕ್ಕಾಗಿಯೇ ವೈದಿಕ ಧರ್ಮೀಯರು ಪ್ರತಿದಿನವೂ ಮಾಡುವ ಸಂಧ್ಯಾವಂದನೆಯಲ್ಲಿ ನಾವು ಈ ಮಂತ್ರವನ್ನು ಕಾಣುತ್ತೇವೆ:-

ಉದ್ವಯಂ ತಮಸಸ್ಪರಿ ಸ್ವಃ ಪಶ್ಯಂತ ಉತ್ತರಮ್ |

ದೇವಂ ದೇವತ್ರಾ ಸೂರ್ಯಮಗನ್ಮ ಜ್ಯೋತಿರುತ್ತಮಮ್ || (ಯಜು. ೩೫.೧೪.)

     [ವಯಮ್] ನಾವು, [ತಮಸಃ ಪರಿ] ಅಂಧಕಾರದಿಂದ ಮೇಲೆದ್ದು, [ಉತ್] ಜಗದುತ್ಪತ್ತಿಗೆ ಉಪಾದಾನವಾದ ಪ್ರಕೃತಿಯನ್ನೂ, [ಉತ್ತರಂ ಸ್ವಃ] ಅದಕಿಂತ ಶ್ರೇಷ್ಠನಾದ, ಸುಖರೂಪನಾದ ಜೀವಾತ್ಮನನ್ನೂ, [ಪಶ್ಶಂತಃ] ನೋಡುತ್ತಾ, [ದೇವತ್ರ] ವಿದ್ವನ್ಮಂಡಲದಲ್ಲಿ [ಉತ್ತಮಂ ಜ್ಯೋತಿಃ] ಸರ್ವಶ್ರೇಷ್ಠನಾದ ಜ್ಞಾನಸ್ವರೂಪನೂ, [ದೇವಂ ಸೂರ್ಯಮ್] ಪ್ರಕಾಶಮಯನೂ, ಸರ್ವಧಾತೃವೂ ಆದ ವಿಶ್ವಸಂಚಾಲಕ ಪ್ರಭುವನ್ನು, [ಅಗನ್ಮ] ಸಾಕ್ಷಾತ್ಕಾರ ಮಾಡಿಕೊಳ್ಳೋಣ.

     ಪ್ರಕೃತಿಯ ಜ್ಞಾನದಿಂದ ಇಹಲೋಕದ ಸುಧಾರಣೆ; ಸ್ವಂತ ಆತ್ಮನ ಜ್ಞಾನದಿಂದ ತನ್ನ ವ್ಯಕ್ತಿಗತ ಸುಧಾರಣೆ ಹಾಗೂ ಪರಮಾತ್ಮ ಜ್ಞಾನದಿಂದ ಮೋಕ್ಷಸಾಧನೆ – ಹೀಗೆ ಮಾನವಜೀವನದ ಸಾಫಲ್ಯ ಸಿದ್ಧಿಸುತ್ತದೆ. ವೇದೋಕ್ತವಾದ ಈ ಜ್ಞಾನ ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸಂಬಂಧಿಸಿದುದಲ್ಲ; ಕೇವಲ ದಾರ್ಶನಿಕ ಉಗ್ಗಡಣೆಯಲ್ಲ; ಈ ಪ್ರಪಂಚದಲ್ಲಿ ಸಾಂಸಾರಿಕ ಜೀವನವನ್ನು ಉತ್ತಮ ಮಟ್ಟಕ್ಕೇರಿಸಲು ಸುಖೋತ್ಕರ್ಷದ ಪ್ರಾಪ್ತಿಗಾಗಿ ವೈಜ್ಞಾನಿಕ ಆವಿಷ್ಕಾರಗಳನ್ನೂ, ಇತರ ಸಾಮಾಜಿಕ – ಆರ್ಥಿಕ – ರಾಜಕೀಯ – ಪಾರಿವಾರಿಕ ಹಾಗೂ ವೈಜ್ಞಾನಿಕ ಜೀವನಗಳನ್ನು ಉನ್ನತಗೊಳಿಸುವ ಸಾಧನವಾದ ಲೌಕಿಕ ಜ್ಞಾನವನ್ನೂ ಒಳಗೊಂಡಿದೆ ಎಂಬುದನ್ನು ಯಾರೂ ಮರೆಯಬಾರದು. ಪ್ರಾಪಂಚಿಕ ಅಥವಾ ಭೌತಿಕವಿದ್ಯೆಗೆ ತಿಲಾಂಜಲಿಯಿತ್ತು, ಕೇವಲ ಆಧ್ಯಾತ್ಮಿಕ ವಿದ್ಯೆಯನ್ನೇ ಸಾಧಿಸಲು ಹೊರಟವರು, ಆಧ್ಯಾತ್ಮಿಕ ವಿದ್ಯೆಗೆ ತಿಲಾಂಜಲಿಯಿತ್ತು ಕೇವಲ ಭೌತಿಕ ವಿದ್ಯೆಗೆ ಗಮನ ಕೊಡುವವರಿಗಿಂತ ಹೆಚ್ಚು ಗಾಢವಾದ ಅಂಧಕಾರದಲ್ಲಿ ಬೀಳುವರು ಎಂದು ಯಜುರ್ವೇದ ಹೇಳುತ್ತದೆ. ಕೊನೆಗೆ,

ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ |

ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಮೃತಮಶ್ನುತೇ || (ಯಜು. ೪೦.೧೧.)

ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ |

ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಮೃತಮಶ್ನುತೇ || (ಯಜು.೪೦.೧೪.)

     [ಸಂಭೂತಿಮ್] ಉತ್ಕೃಷ್ಟವಾದ ತತ್ತ್ವವಾದ ಪರಮಾತ್ಮನನ್ನೂ, [ಚ] ಮತ್ತು, [ವಿನಾಶಂಚ] ನಾಶವಾನ್ ಜಗತ್ತನ್ನೂ, [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ವಿನಾಶೇನ] ನಾಶವಾನ್ ಜಗತ್ತಿನ ಜ್ಞಾನದಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ಸಂಭೂತ್ಮಾ] ಉತ್ಕೃಷ್ಟನಾದ ಪರಮಾತ್ಮನ ಜ್ಞಾನದಿಂದ, [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.

     [ವಿದ್ಯಾಂ ಚ] ಆಧ್ಯಾತ್ಮಿಕ ವಿದ್ಯೆಯನ್ನೂ [ಅವಿದ್ಯಾಂ ಚ] ಭೌತಿಕ ವಿದ್ಯೆಯನ್ನೂ. [ಯಃ] ಯಾವನು, [ತತ್ ಉಭಯಂ ಸಹ] ಎರಡನ್ನೂ ಜೊತೆಯಲ್ಲಿಯೇ, [ವೇದ] ತಿಳಿಯುತ್ತಾನೋ ಅವನು, [ಅವಿದ್ಯಯಾ] ಭೌತಿಕ ವಿದ್ಯೆಯಿಂದ, [ಮೃತ್ಯುಂ ತೀರ್ತ್ವಾ] ಮರ್ತ್ಯಲೋಕವನ್ನು ದಾಟಿ, [ವಿದ್ಯಯಾ] ವಿದ್ಯೆಯಿಂದ [ಅಮೃತಂ ಅಶ್ನುತೇ] ಅಮರತ್ವವನ್ನು ಪಡೆಯುತ್ತಾನೆ.

     ಈ ಮಂತ್ರಗಳ ಮೇಲೆ ಟೀಕೆ ಅನಾವಶ್ಯಕ. ವೈದಿಕ ಧರ್ಮ ಜ್ಞಾನಾಶ್ರಿತ ಧರ್ಮ. ಇದರಲ್ಲಿ ಅಜ್ಞಾನಕ್ಕೆಡೆಯಿಲ್ಲ. ಈ ಜ್ಞಾನ ಸರ್ವವಿಷಯಾಚ್ಛಾದಕ, ಶಾಶ್ವತ ತತ್ತ್ವಗಳ ಹಾಗೂ ಅಶಾಶ್ವತ ತತ್ತ್ವಗಳ ನಿರ್ಭ್ರಾಂತ ಜ್ಞಾನ ಪಡೆದೇ ಮಾನವನು ಆದರ್ಶಮಾನವನಾಗಿ, ಇಹಪರಗಳೆರಡರಲ್ಲೂ ಸಾಧಿಸಿಕೊಳ್ಳುವನು. ಅಂಧವಿಶ್ವಾಸಕ್ಕೆ, ಅಜ್ಞಾನದ ಆಡಳಿತಕ್ಕೆ ವೈದಿಕ ಧರ್ಮದಲ್ಲಿ ಸೂಜಿಯ ಮೊನೆಯಷ್ಟೂ ಜಾಗವಿಲ್ಲ.

     ಇನ್ನು ಧರ್ಮದ ಎರಡನೆಯ ಅಭಿನ್ನ ಅಂಗವಾದ ಕರ್ಮದ ಬಗೆಗೆ ಆಲೋಚಿಸೋಣ. ಜ್ಞಾನ, ಧರ್ಮದ ಶಿರಸ್ಸಿದ್ದಂತೆ ಎಂದು ಹೇಳಿದ್ದೇವೆ. ಅದೇ ರೂಪಕವನ್ನು ಮುಂದುವರೆಸಿ, ಕರ್ಮ, ಧರ್ಮದ ಕೈಕಾಲುಗಳಿದ್ದಂತೆ ಎನ್ನಬಹುದು. ಕರ್ಮರಹಿತವಾದ ಜ್ಞಾನ ಕೇವಲ ಸಿದ್ಧಾಂತ ಮಾತ್ರ. ಅದಕ್ಕನುಸಾರವಾದ ಕರ್ಮವಿಲ್ಲದಿದ್ದರೆ ಧರ್ಮ ಕೈಕಾಲಿಲ್ಲದ ಹೆಳವನಂತೆ ಪಂಗುವಾಗಿ ಹೋಗುವುದು. ಆದುದರಿಂದ, ಯಜುರ್ವೇದ ಹೇಳುತ್ತಲಿದೆ:-

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |

ಏವಂ ತ್ವಯ ನಾನ್ಯಥೇತೋsಸ್ತಿ ಕರ್ಮ ಲಿಪ್ಯತೇ ನರೇ || (ಯಜು.೪೦.೨.)

     [ಇಹ] ಈ ಲೋಕದಲ್ಲಿ [ಕರ್ಮಾಣಿ ಕುರ್ವನ್ ಏವ] ಕರ್ಮಗಳನ್ನು ಮಾಡುತ್ತಲೇ, [ಶತಂ ಸಮಾಃ] ನೂರು ವರ್ಷಗಳವರೆಗೆ, [ಜಿಜೀವಿಷೇತ್] ಜೀವಿಸಲಿಚ್ಛಿಸಬೇಕು. [ತ್ವಯಿ ನರೇ] ಮಾನವನಾದ ನಿನ್ನಲ್ಲಿ [ಏವಂ ಕರ್ಮ ನ ಲಿಪ್ಯತೇ] ಹೀಗೆ ಕರ್ಮ ಅಂಟಿಕೊಳ್ಳುವುದಿಲ್ಲ. [ಇತಃ] ಇಲ್ಲಿಂದ [ಅನ್ಯಥಾ ನ ಅಸ್ತಿ] ಬೇರೆ ಮಾರ್ಗವಿಲ್ಲ.

     ಇದೂ ವೈದಿಕ ಧರ್ಮದ ಅದ್ಭುತ ಸೌಂದರ್ಯವೇ. ನಾವು ವೇದಾಂತಿಗಳು, ನಾವು ನಿಷ್ಕರ್ಮರು, ಕರ್ಮ ಮಾಡಿದರೆ ಜಗತ್ತಿಗಂಟಿಕೊಳ್ಳುವೆವು. ಆದುದರಿಂದ ನಾವು ಯಾವ ಕರ್ಮಕ್ಕೂ ಕೈ ಹಾಕುವುದಿಲ್ಲ – ಎಂದು ಹೇಳುವವರಿಗೆ ವೈದಿಕ ಧರ್ಮದಲ್ಲಿ ಸ್ಥಳವಿಲ್ಲ. ನೈಷ್ಕರ್ಮ ಆಲಸ್ಯದ ಮತ್ತೊಂದು ಹೆಸರು. ಶರೀರ – ಆತ್ಮ ಎರಡೂ ಒಟ್ಟಿಗಿರುವವರೆಗೆ ಭೌತಿಕ ಆವಶ್ಯಕತೆಗಳನ್ನು, ಆಹಾರ-ಪಾನೀಯ-ವಸ್ತ್ರಾದಿಗಳನ್ನು ಪಡೆಯಲೇ ಬೇಕಾಗುತ್ತದೆ. ಅದನ್ನು ಪಡೆಯುವುದಕ್ಕಾಗಿ ಮಾತ್ರ ಸಮಾಜವನ್ನಾಶ್ರಯಿಸುವುದು, ಆದರೆ ಸಮಾಜಕ್ಕಾಗಿ ಏನನ್ನೂ ಮಾಡದಿರುವುದು ಮಹಾಪಾಪ. ಏಕೆಂದರೆ, ಆ ಆಲಸ್ಯವೃತ್ತಿ ಆತ್ಮನ ಮೇಲೆ ಮಹಾನ್ ಋಣದ ಹೊರೆಯನ್ನು ಹೇರುತ್ತದೆ. ಋಣಿಯಾದವನು ಸಮಾಜದ್ರೋಹಿ ಮಾತ್ರವಲ್ಲ, ಆಧ್ಯಾತ್ಮಿಕ ಉನ್ನತಿಗೂ ಅನರ್ಹನಾಗಿ ಹೋಗುತ್ತಾನೆ. ಸಮಾಜದಿಂದ ಪಡೆದ ಮೇಲೆ ಏನಾದರೂ ಕೊಡಲೂ ಬೇಕಾಗುತ್ತದೆ. ನಾವು ಯಾವುದೇ ಆಶ್ರಮದಲ್ಲಿರಲಿ, ಜಗತ್ತಿಗೆ ಹೊರೆಯಾಗಿ, ಋಣಿಗಳಾಗಿ, ಅನ್ನಶತ್ರುಗಳಾಗಿ ಬಾಳಬಾರದು.

************************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-5/

ವೇದೋಕ್ತ ಜೀವನ ಪಥ: ಮಾನವಧರ್ಮದ ಮೂರು ಅಭಿನ್ನ ಅಂಗಗಳು – 1

     ಋತದ, ಅಂದರೆ, ಈಶ್ವರೀಯ ವಿಧಾನವಾದ ಧರ್ಮದ ರಕ್ಷಕನು ತನ್ನ ಹೃದಯದಲ್ಲಿ ಮೂರು ಪವಿತ್ರ ತತ್ತ್ವಗಳನ್ನು ರೂಢಿಸಿಕೊಳ್ಳುತ್ತಾನೆ, ಜ್ಞಾನ, ಕರ್ಮ, ಉಪಾಸನೆಗಳೇ ಆ ಮೂರು ತತ್ತ್ವಗಳು ಎಂದು ಹೇಳಿದ್ದೇವಷ್ಟೇ? ಅವು ಮೂರೂ ಧರ್ಮದ ಕೇವಲ ಅಂಗಗಳಲ್ಲ, ಧರ್ಮದ ಅಭಿನ್ನವಾದ, ಅವಿಚ್ಛಿನ್ನವಾದ ಅಂಗಗಳು. ಆ ಮೂರರಲ್ಲಿ ಯಾವುದೊಂದು ನಷ್ಟವಾದರೂ, ಧರ್ಮ ಪರಿಪೂರ್ಣವಾಗಿ ಉಳಿಯುವುದಿಲ್ಲ. ವೇದ ಎಂಬ ಶಬ್ದದ ಅರ್ಥ, ಜ್ಞಾನ ಎಂದು. ಋಗ್ವೇದ – ಅಥರ್ವವೇದಗಳಲ್ಲಿ ಮುಖ್ಯತಃ ಆಧ್ಯಾತ್ಮಿಕ, ಭೌತಿಕ ಜ್ಞಾನ-ವಿಜ್ಞಾನಗಳೂ, ಯಜುರ್ವೇದದಲ್ಲಿ ಮುಖ್ಯತಃ ಕರ್ಮವಿಧಾನವೂ, ಸಾಮವೇದದಲ್ಲಿ ಮುಖ್ಯತಃ ಉಪಾಸನಾ ಸಂವಿಧಾನವೂ ಉಪದೇಶಿಸಲ್ಪಟ್ಟಿವೆ. ಇದೇ ಕಾರಣದಿಂದ, ಈಶ್ವರೋಕ್ತ ವೇದಗಳು ಸಂಖ್ಯೆಯಲ್ಲಿ ನಾಲ್ಕು ಇದ್ದರೂ, ಚತುರ್ವೇದವೇತ್ತರನ್ನು ತ್ರೈವಿದ್ಯರು ಎಂದು ವೈದಿಕ ಸಾಹಿತ್ಯದಲ್ಲಿ ಹೇಳಲಾಗಿದೆ.

     ಧರ್ಮದ ಪ್ರಥಮ ಅಂಗವಾದ ಜ್ಞಾನವನ್ನು ತೆಗೆದುಕೊಳ್ಳೋಣ. ಜ್ಞಾನವು ಧರ್ಮದ ಶಿರಸ್ಸಿದ್ದಂತೆ. ವೇದವು ಹೇಳುತ್ತಲಿದೆ:-

ಜ್ಯೋತಿರ್ವೃಣೀತ ತಮಸೋ ವಿಜಾನನ್ನಾರೇ ಸ್ಯಾಮ ದುರಿತಾದಭೀಕೇ |

ಇಮಾ ಗಿರಃ ಸೋಮಪಾಃ ಸೋಮವೃದ್ಧ ಜುಷಸ್ವೇಂದ್ರ ಪುರುತಮಸ್ಯ ಕಾರೋಃ || (ಋಕ್. ೩.೩೯.೭.)

     ಮಾನವನು, [ತಮಸಃ] ಅಂಧಕಾರದಿಂದ ಸರಿದು, [ವಿಜಾನನ್] ಜ್ಞಾನವನ್ನು ಗಳಿಸಿ, [ಜ್ಯೋತಿರ್ವೃಣೀತ] ಜ್ಯೋತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದಾಗಲೇ, ದುರಿತಾತ್ ಅರೇ] ದುರ್ಗತಿಯಿಂದ ದೂರಸರಿದು, [ಅಭೀಕೇ ಸ್ಯಾಮ] ನಿರ್ಭಯನಾದ ಸ್ಥಿತಿಯಲ್ಲಿ ಇರಬಲ್ಲೆವು. ಆದಕಾರಣ, [ಸೋಮಪಾಃ] ವಿವೇಚನೆಯನ್ನು ಕಾಪಾಡಿಕೊಳ್ಳುವ, [ಸೋಮವೃದ್ಧ] ವಿವೇಕದಿಂದಲೇ ವರ್ಧಿತನಾಗುವ [ಇಂದ್ರ] ದೇಹಾಧೀಶನಾದ ಇಂದ್ರಿಯವಂತನಾದ ಜೀವನೇ! [ಪುರುತಮಸ್ಯ] ಪೂರ್ಣತಮನಾದ [ಕಾರೋಃ] ಜಗತ್ಕರ್ತೃವಿನ, [ಇಮಾ ಗಿರಃ] ಈ ಮಾತುಗಳನ್ನು [ಜುಷಸ್ವ] ಪ್ರೀತಿಯಿಂದ ಆಲಿಸು.

     ಈ ಮಂತ್ರದಲ್ಲಿ ಉಕ್ತವಾಗಿರುವ ಅಂಧಕಾರ, ಭೌತಿಕ ಪ್ರಕಾಶದ ಅಭಾವವಲ್ಲ, ಆಧ್ಯಾತ್ಮಿಕವಾದ ಅಂಧಕಾರ, ಎಂದರೆ ಅಜ್ಞಾನ. ಇಲ್ಲಿ ಹೇಳಿರುವ ಜ್ಯೀತಿಯೂ ಭೌತಿಕ ಪ್ರಕಾಶವಲ್ಲ, ಆಧ್ಯಾತ್ಮಿಕ ಪ್ರಕಾಶ, ಎಂದರೆ ಜ್ಞಾನ. ದುರಿತದಿಂದ, ದುರ್ವೃತ್ತಿಯಿಂದ, ದುರಾಚಾರದಿಂದ ಸರಿದು ಅಭಯದ ಸ್ಥಿತಿಯನ್ನು ಮುಟ್ಟುವ ಉಪದೇಶವಿರುವುದರಿಂದ, ಈ ನಮ್ಮ ಕಥನದ ಔಚಿತ್ಯ ಸ್ಪಷ್ಟವಾಗುವುದು. ಈ ಬಗೆಯ ನಿರ್ಮಲಜ್ಞಾನ ಪಡೆಯಲಾರದ ಮಾನವ, ಆಕಾರದಿಂದ ಮಾತ್ರ ಮಾನವನಾಗಿ ಕಂಡರೂ, ವಸ್ತುತಃ ಪಶುವಿಗಿಂತ ನೀಚ ಮಟ್ಟದಲ್ಲಿರುತ್ತಾನೆ. ಕಾರಣವೇನೆಂದರೆ, ಕೇವಲ ಸ್ವಾಭಾವಿಕ ಪ್ರವೃತ್ತಿಯಿಂದ ಜೀವನ ನಡೆಯಿಸುವ ಪಶುಗಳು ಮತ್ತು ಪಕ್ಷಿಗಳೂ ಕೂಡ, ಮಾರ್ಗ ತಪ್ಪಿ ನಡೆಯುವ ಸಂಭವವಿಲ್ಲ. ಆದರೆ ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ.

     ಜ್ಞಾನವಿಹೀನನಾದ ಮಾನವ, ಕರ್ತವ್ಯಾಕರ್ತವ್ಯಗಳ ನಿರ್ಣಯ ಮಾಡಲಾರದೆ, ಪಾಪಮಾರ್ಗದಲ್ಲಿ ಕಾಲಿಡುತ್ತಾನೆ. ನಿಜವಾಗಿ ಅಜ್ಞಾನದೆಶೆಯಲ್ಲಿ ನಡೆಯುವುದೆಂದರೆ, ಕತ್ತಲಿನಲ್ಲಿ ಎಡವಿದಂತೆಯೇ ಸರಿ. ಅಜ್ಞಾನವೆಂದರೆ ಆಧ್ಯಾತ್ಮಿಕ ಕತ್ತಲೆಯೆಂದು ಹೇಳಿಯೇ ಇದ್ದೇವೆ. ಅದೇ ಕಾರಣದಿಂದ, ವಿವಿಧ ಜ್ಞಾನಸಂಪನ್ನರಾದ ವಿದ್ವಾಂಸರಲ್ಲಿ ಜಿಜ್ಞಾಸುವಾದ ಜೀವನು ಈ ರೀತಿ ಮೊರೆಯಿಡುತ್ತಾನೆ:-

 

ಅದಿತೇ ಮಿತ್ರ ವರುಣೋತ ಮೃಳ ಯದ್ ವೋ ವಯಂ ಚಕ್ರುಮಾ ಕಚ್ಚಿದಾಗಃ |

 

ಉರ್ವಶ್ಯಾಮಭಯಂ ಜ್ಯೋತಿರಿಂದ್ರ ಮಾ ನೋ ದೀರ್ಘಾ ಅಭಿ ನಶನ್ತಮಿಸ್ರಾಃ || (ಋಕ್. ೨.೨೭.೧೪.)

 

    [ಅದಿತೇ] ಓ, ಪ್ರಾಮಾಣಿಕನಾದ ವಿದ್ವಾಂಸನೇ, [ವಯಮ್] ನಾವು [ಯತ್ಕಚ್ಚಿದಾಗಃ] ಏನೊಂದು ಪಾಪವನ್ನೂ, [ವಃ] ನಿನ್ನಂತಹ ಜ್ಞಾನಿಗಳ ಬಗೆಗೆ [ಚಕೃಮಾ] ಮಾಡುತ್ತೇವೋ, ಅದನ್ನು [ಮೃಳ] ಸುಧಾರಿಸು. [ಮಿತ್ರ] ಸ್ನೇಹಪರ ವಿದ್ವಾಂಸನೇ, ನೀನೂ ಸುಧಾರಿಸು. [ಉತ] ಹಾಗೆಯೇ [ವರುಣ] ದುಃಖನಿವಾರಕನಾದ ಜ್ಞಾನಿಯೇ, [ಮೃಳ] ನೀನೂ ಸುಧಾರಿಸು. [ಇಂದ್ರ] ಓ, ಜಿತೇಂದ್ರಿಯನಾದ ವಿದ್ವಾಂಸನೇ, [ಉರು ಅಭಯಂ ಜ್ಯೋತಿಃ] ಮಹತ್ತಾದ, ಅಭಯಪ್ರದವಾದ, ಜ್ಞಾನಜ್ಯೋತಿಯನ್ನು, [ಅಶ್ಯಾಮ್] ಅನುಭವಿಸುವೆ. ದೀರ್ಘಾಃ ತಮಿಸ್ರಾಃ] ದೀರ್ಘವಾದ ಅಜ್ಞಾನಾಂಧಕಾರಗಳು, [ನಃ ಮಾನಶನ್] ನನ್ನನ್ನು ಆವರಿಸದಿರಲಿ. 

 

     ಈ ಜ್ಯೋತಿಯ ಕಾಮನೆ ಮತ್ತು ಜ್ಯೋತಿರ್ಧಾರಣೆ ಆದರ್ಶ ಜೀವನ ಮಾರ್ಗದ ವೈಶಿಷ್ಟ್ಯವೇ ಆಗಿದೆ. ಪ್ರಜ್ಞಾನ ಸ್ವರೂಪನಾದ ಪರಮಾತ್ಮನಲ್ಲಿಯೂ ವೇದಾನುಯಾಯಿಗಳ ಮೊರೆಯೂ ಇದೇ ಆಗಿದೆ. 

 

***********

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-4/

ವೇದೋಕ್ತ ಜೀವನ ಪಥ: ಮಾನವಧರ್ಮ – 3

     ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ. ಹೀಗೆ ಹೇಳಿದರೆ, ಅದೆಷ್ಟು ಸದ್ಗುಣಗಳಿವೆಯೋ, ಎಷ್ಟನ್ನು ಅವಲಂಬಿಸಿದರೆ ಧರ್ಮವನ್ನು ಮೈಗೂಡಿಸಿಕೊಂಡಂತಾಗುವುದೋ ಯಾರ ಕಲ್ಪನೆಯ ಹಿಡಿತಕ್ಕೂ ಸಿಕ್ಕುವುದಿಲ್ಲ. ಆದುದರಿಂದ ಋಗ್ವೇದ ಸ್ಪಷ್ಟವಾದ ಮಾತಿನಲ್ಲಿ ಹೇಳುತ್ತಿದೆ:

ಋತಸ್ಯ ಗೋಪಾ ನ ದಭಾಯ ಸುಕ್ರತುಸ್ತ್ರೀ ಷ ಪವಿತ್ರಾ ಹೃದ್ಯಂತರಾ ದಧೇ |

ವಿದ್ವಾನ್ ತ್ಸ ವಿಶ್ವಾ ಭುವನಾಭ ಪಶ್ಯತ್ಯವಾಜುಷ್ಟಾನ್ ವಿಧ್ಯತಿ ಕರ್ತೇ ಅವ್ರತಾನ್ || (ಋಕ್. ೯.೭೩.೮.)

     [ಋತಸ್ಯ ಗೋಪಾ] ಋತದ, ಈಶ್ವರೀಯ ವಿಧಾನದ, ಧರ್ಮದ ರಕ್ಷಕನು, [ನ ದಭಾಯ] ಎಂದಿಗೂ ತುಳಿಯಲ್ಪಡಲಿಕ್ಕಿಲ್ಲ. [ಸ ಸುಕ್ತುಃ] ಆ ಉತ್ತಮ ವಿಚಾರಶೀಲನೂ, ಆಚರಣವಂತನೂ ಆದ ಮಾನವನು, [ಹೃದಿ ಅಂತಃ] ತನ್ನ ಹೃದಯದಲ್ಲಿ, [ತ್ರೀ ಪವಿತ್ರಾ] ಮೂರು ಪವಿತ್ರ ತತ್ತ್ವಗಳನ್ನು, ಉಪಾಸನೆಗಳನ್ನು, [ಆ ದಧೇ] ಸದಾ ಧರಿಸಿರುತ್ತಾನೆ. [ಸ ವಿದ್ವಾನ್] ಆ ಜ್ಞಾನಿಯಾದ ಮಾನವನು, [ವಿಶ್ವಾ ಭುವನಾ ಅಭಿಪಶ್ಯತಿ] ಸಮಸ್ತ ಲೋಕಗಳನ್ನೂ, ಎಲ್ಲೆಡೆಯಿಂದಲೂ ಯಥಾರ್ಥ ರೂಪದಲ್ಲಿ ನೋಡುತ್ತಾನೆ. [ಆಜುಷ್ಟಾನ್ ಅವ್ರತಾನ್] ಅಪ್ರಿಯರಾದ ವ್ರತರಹಿತರನ್ನು [ಕರ್ತೇ ಆವ ವಿಧ್ಯತಿ] ಪತನರೂಪದಲ್ಲಿ ಕೆಳಗೆ ಬಿದ್ದವರನ್ನೂ ಕೂಡ, ಉತ್ತಮ ಶಾಸನಕ್ಕೆ ಗುರಿಪಡಿಸುತ್ತಾನೆ.

     ವೇದಗಳ ಸಂದೇಶ ಬಹು ಗಂಭೀರ, ಬಹಳ ಆಳ. ಋತವನ್ನು ಈಶ್ವರೀಯ ವಿಧಾನವಾದ ಧರ್ಮವನ್ನು ಪಾಲಿಸುವವನ ವರ್ಣನೆ ಮಾಡುವಾಗ, ಋಗ್ವೇದ ಆ ಮಹಾಪುರುಷನು ಧರಿಸುವ ಮೂರು ಪವಿತ್ರ ಧರ್ಮಾಂಗಗಳನ್ನು, ಜ್ಞಾನಕರ್ಮೋಪಾಸನಾತ್ರಯವನ್ನು ಸೂಚಿಸುತ್ತದೆ. ಸತ್ಯ, ನ್ಯಾಯ, ದಯೆ, ತ್ಯಾಗ, ಸಂಯಮ, ದಾನ, ಮೈತ್ರಿ, ಅಹಿಂಸೆ ಮೊದಲಾದ ಮಾನವನ ಊಹೆಗಂದಬಹುದಾದ ಸಮಸ್ತ ಆತ್ಮೋದ್ಧಾರಕ ಗುಣಗಳೂ ಜ್ಞಾನ-ಕರ್ಮ-ಉಪಾಸನಾ ಎಂಬ ಮೂರು ಅಂಗಗಳಲ್ಲಿ ಅಡಕವಾಗಿ ಹೋಗುತ್ತವೆ. ಜ್ಞಾನಿ ಅನುದಾರನಾಗಲಾರ, ಸತ್ಕರ್ಮನಿರತನು ರಾಗ-ದ್ವೇಷಗಳಿಗೆ ಸಿಕ್ಕಲಾರನು, ಉಪಾಸಕನು ಯಾರ ವೈರಿಯೂ ಆಗಿರಲಾರನು. ಈ ಮೂರು ಅಂಗಗಳನ್ನೂ ತನ್ನ ಬಾಳಿಗೆ ಹೊಂದಿಸಿಕೊಂಡ ಧನ್ಯಾತ್ಮನು, ತನ್ನ ಸ್ವಂತ ದೌರ್ಬಲ್ಯದಿಂದಲೋ, ಪರರ ಒತ್ತಡದಿಂದಲೋ ಲೋಕಕ್ಕೆ ಅಪ್ರಿಯರಾದ, ವ್ರತಬಾಹಿರರಾದ ಅಧರ್ಮನಿರತರನ್ನು ಕಂಡು ಹೇಸಿಗೆಯಿಂದ ಮೂಗು ಮುರಿಯುವುದಿಲ್ಲ. ತಿರಸ್ಕಾರದಿಂದ ಧಿಕ್ಕರಿಸುವುದಿಲ್ಲ. ಪತನದ ಹಳ್ಳಕ್ಕೆ ಬಿದ್ದವರನ್ನೂ ಕೂಡ ಮೇಲೆತ್ತಿ, ಉತ್ತಮ ಶಾಸನಕ್ಕೆ, ಈಶ್ವರೀಯ ವಿಧಾನಕ್ಕೆ ಅವರೂ ಕೂಡ ತಲೆಬಾಗುವಂತೆ ಮಾಡುತ್ತಾನೆ.

ವೇದಗಳ ದೃಷ್ಟಿಯಲ್ಲಿ ಧಾರ್ಮಿಕರಾದವರನ್ನು ವರ್ಣಿಸುತ್ತಾ ಋಗ್ವೇದ ಹೇಳುತ್ತದೆ:-

ಏತೇ ಅಸೃಗ್ರಮಾಶವೋssತಿ ಹ್ವರಾಂಸಿ ಬಭ್ರವಃ  |

ಸೋಮಾ ಋತಸ್ಯ ಧಾರಯಾ || (ಋಕ್. ೯.೬೩.೪.)

ಇಂದ್ರಂ ವರ್ಧಂತೋ ಅಪ್ತುರಃ ಕೃಣ್ವಂತೋ ವಿಶ್ವಮಾರ್ಯಮ್ |

ಅಪಘ್ನಂತೋ ಅರಾವ್ಣಃ || (ಋಕ್. ೯.೬೩.೫.)

ಸುತಾ ಅನು ಸ್ವಮಾ ರಜೋsಭ್ಯರ್ಷಂತಿ ಬಭ್ರವಃ |

ಇಂದ್ರಂ ಗಚ್ಛಂತ ಇಂದವಃ || (ಋಕ್. ೯.೬೩.೬.)

     [ಏತೇ ಆಶವಃ ಸೋಮಾಃ] ಈ ಆಲಸ್ಯ-ಪ್ರಮಾದರಹಿತರೂ, ಶುಭ್ರವಾದ ಆಚಾರ-ವಿಚಾರಗಳನ್ನುಳ್ಳವರೂ, ಶಾಂತಿಗುಣಪ್ರಧಾನರೂ ಆದ ಉತ್ತಮ ಮಾನವರು, [ಋತಸ್ಯ ಧಾರಯಾ] ಧರ್ಮದ ಪ್ರವಾಹದೊಂದಿಗೆ ನಡೆಯುತ್ತಾ, [ಹ್ವರಾಂಸಿ ಅತಿ] ಕುಟಿಲ ಭಾವನೆಗಳನ್ನು ದಾಟಿ, [ಅಸೃಗ್ರಮ್] ಮುಂದೆ ಸಾಗುತ್ತಾರೆ. 

     [ಅಪ್ತುರಃ] ಕಾರ್ಯ ಮಾಡುವುದರಲ್ಲಿ ವೇಗಶಾಲಿಗಳಾದ ಇವರು, [ಇಂದ್ರಂ ವರ್ಧಂತಃ] ತಮ್ಮ ಆತ್ಮವಿಶ್ವಾಸ ಮಾಡಿಕೊಳ್ಳುತ್ತಾ, [ವಿಶ್ವಂ ಆರ್ಯಂ ಕೃಣ್ವಂತಃ] ಸಂಕುಚಿತ ಭಾವನೆಗಳನ್ನು ತುಂಡರಿಸಿ ಚೆಲ್ಲುತ್ತಾರೆ.

     [ಸುತಾಃ ಬಭ್ರವಃ ಇಂದವಃ] ಭಗವಂತನ ಮಕ್ಕಳಾದ ನಿರ್ಮಲಚರಿತರಾದ, ನೀರಸಜೀವನವನ್ನು ಸರಸಗೊಳಿಸುವ ಇವರು, [ಇಂದ್ರಮ ಗಚ್ಛಂತಃ] ಸರ್ವಶಕ್ತಿಮಾನ್ ಪ್ರಭುವಿನೆಡೆಗೆ ಹೋಗುತ್ತಾ, [ಸ್ವಂ ರಜಃ ಅನು] ತಮ್ಮ ತಮ್ಮ ಸಾಮರ್ಥ್ಯಕ್ಕನುಸಾರವಾಗಿ, [ಆ ಅಭಿ ಅರ್ಷಂತಿ] ನಿರಂತರವಾಗಿ ಜೀವನದ ಎಲ್ಲ ಮುಖಗಳಿಂದಲೂ ಮುಂದುವರೆಯುತ್ತಾರೆ.

     ಮಂತ್ರಗಳು ಅತೀ ಸ್ಪಷ್ಟವಾಗಿವೆ. ಆದರ್ಶ ಜೀವನಪಥದ ವೈಭವವಿದು. ತಾವು ಒಳ್ಳೆಯವರಾದರೆ ಸಾಲದು. ಸಂಪೂರ್ಣ ಮಾನವ ಸಮಾಜವನ್ನೇ ಒಳಿತಾಗಿ ಮಾಡಬೇಕು. ಈರೀತಿ ಆಗುವ ಮತ್ತು ಮಾಡುವ ಶಕ್ತಿ ಸಿದ್ಧಿಸುವುದು ನಿಷ್ಕಳ ಜ್ಞಾನಪ್ರಾಪ್ತಿಯಿಂದ, ಪರಿಶುದ್ಧ ಕರ್ಮಾನುಷ್ಠಾನದಿಂದ, ಪವಿತ್ರ ಪ್ರಭೂಪಾಸನಾಚರಣದಿಂದ. ಆದುದರಿಂದ, ಮುಂದಿನ ಅಧ್ಯಾಯದಲ್ಲಿ ಈ ಮೂರು ಧರ್ಮಾಂಗಗಳ ನಿಜವಾದ ಸ್ವರೂಪವನ್ನರಿತುಕೊಳ್ಳೋಣ ಬನ್ನಿ.

************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-3/

ವೇದೋಕ್ತ ಜೀವನ ಪಥ: ಮಾನವಧರ್ಮ – 2

     ಅದೇ ಅಥರ್ವವೇದ ಮತ್ತೆ ಹೇಳುತ್ತಲಿದೆ:

ಉದ್ಯಾನಂ ತೇ ಪುರುಷ ನಾವಯಾನಂ ಜೀವಾತುಂ ತೇ ದಕ್ಷತಾತಿಂ ಕೃಣೋಮಿ |

ಆ ಹಿ ರೋಹೇಮಮಮೃತಂ ಸುಖಂ ರಥಮಥ ಜಿರ್ವಿರ್ವಿದಥಮಾ ವದಾಸಿ || (ಅಥರ್ವ. ೮.೧.೬.)

     [ಪುರುಷ] ಓ ದೇಹಧಾರಿ ಜೀವ! [ತೇ ಯಾನಂ ಉತ್] ನಿನ್ನ ಮಾರ್ಗ ಮೇಲಕ್ಕಿದೆ. [ನ ಆವಯಾನಮ್] ಕೆಳಕ್ಕೆ ಹೋಗುವುದಲ್ಲ. [ತೇ] ನಿನಗಾಗಿ, [ಜೀವಾತುಮ್] ಜೀವನಕಲೆಯನ್ನೂ, [ದಕ್ಷತಾತಿಮ್] ಜೀವನಸಾಮರ್ಥ್ಯವನ್ನೂ, [ಕೃಣೋಮಿ] ಉಂಟುಮಾಡುತ್ತೇನೆ. [ಇಮಮ್ ಅಮೃತಂ ಸುಖಂ ರಥಮ್] ಈ ಜೀವಂತವಾದ ಸುಖಕರವಾದ ಜೀವನರಥವನ್ನು, [ಹಿ ಆರೋಹ] ನಿಜವಾಗಿ ಏರು. [ಅಥ] ಆಮೇಲೆ [ಜಿರ್ವಿ] ವಾರ್ಧ್ಯಕ್ಯ ಪಡೆದು [ವಿದಥಮ್] ಜ್ಞೇಯವಾದ ಸತ್ಯಜ್ಞಾನವನ್ನು, [ಆ ವದಾಸಿ] ಪ್ರಸರಿಸುತ್ತಾ ಓಡಾಡುವೆ.

     ಹೌದು, ಧರ್ಮದ ಮಾರ್ಗ ಧಾರಕಮಾರ್ಗ, ಎತ್ತಿ ಹಿಡಿಯುವ ಮಾರ್ಗ. ಪತನಕ್ಕಿಲ್ಲಿ ಅವಕಾಶವೇ ಇಲ್ಲ. ಇಹದಲ್ಲಿ ಸೊಗಸಾಗಿ ಬಾಳಿ, ಇತರರನ್ನೂ ಸೊಗಸಾಗಿ ಬಾಳಿಸಿ, ಪರದಲ್ಲಿ ಅವಿಚ್ಛಿನ್ನ ಆನಂದವನ್ನು ಪಡೆದುಕೊಳ್ಳುವ ಜೀವನಕಲೆಯ ಮತ್ತು ಜೀವನಸಾಮರ್ಥ್ಯದ ದಿವ್ಯಮಾರ್ಗ. ನಾವು ಹಿಂದೆ ಹೇಳಿರುವಂತೆ, ಧರ್ಮವಿರುವುದು ಮಾನವ ಮಾತ್ರರಿಗೆಲ್ಲಾ ಒಂದೇ. ಅದು ಮತಗಳಂತೆ ಸಾವಿರಾರು ಇಲ್ಲ. ಆದರೂ ವೇದಗಳಲ್ಲಿ ಧರ್ಮ ಎಂಬ ಶಬ್ದವನ್ನು ಏಕವಚನ, ಬಹುವಚನ ಎರಡರಲ್ಲಿಯೂ ಬಳಸಲಾಗಿದೆ. ಉದಾಹರಣೆಗೆ, ’ತಾನಿ ಧರ್ಮಾಣಿ ಪ್ರಥಮಾನ್ಯಾಸನ್’ (ಯಜು.೩೧.೧೬.) – ಅವು ಪ್ರಥಮ ಧರ್ಮಗಳಾದವು, ಎಂಬಲ್ಲಿ ಬಹುವಚನಪ್ರಯೋಗವಿದೆ. ‘ಧರ್ಮಣಾ ಮಿತ್ರಾವರುಣಾ ವಿಪಶ್ಚಿತಾ’(ಋಕ್. ೫.೬೩.೭.) – ಧರ್ಮದಿಂದ ಸ್ನೇಹಪರ ಹಾಗೂ ವರಣೀಯ ನರ-ನಾರಿಯರು ಜ್ಞಾನಿಗಳಾಗುತ್ತರೆ, ಎಂಬಲ್ಲಿ ಏಕವಚನ ಪ್ರಯೋಗವಿದೆ. ಬಹುವಚನ ಪ್ರಯೋಗ ಕಂಡು ಪಾಠಕರು ವೇದಗಳು ಅನೇಕ ಧರ್ಮಗಳನ್ನು ಉಪದೇಶಿಸುತ್ತವೆ ಎಂದು ಭ್ರಾಂತರಾಗುವ ಸಂಭವವಿದೆ. ಆದರೆ, ಅಂತಹ ಭ್ರಾಂತಿಗೆ ಅವಕಾಶವಿಲ್ಲ. ಏಕೆಂದರೆ, ನಾವು ಈಗ ಯಾವ ಭಾವನೆಯನ್ನು ಧರ್ಮ ಎಂಬ ಶಬ್ದವನ್ನು ಗ್ರಹಿಸುತ್ತೇವೋ, ಅದನ್ನು ಸೂಚಿಸಲು ವೇದಗಳು ಋತ ಎಂಬ ಶಬ್ದವನ್ನು ಬಳಸುತ್ತವೆ. ಧರ್ಮ ಎಂಬ ಶಬ್ದದ ಅರ್ಥ ಧಾರಕ ಎಂದು. ವಸ್ತುತಃ ಸದ್ಗುಣವೇ ಧಾರಕತತ್ವ. ಅಂತಹ ಸದ್ಗುಣ ಒಂದೇ ಅಲ್ಲ ಇರುವುದು. ಅನೆಕ ಸದ್ಗುಣಗಳಿವೆ. ಯಾವುದಾದರೂ ಸದ್ಗುಣವನ್ನು ಸೂಚಿಸುವಾಗ ವೇದ ಧರ್ಮ ಎಂಬ ಶಬ್ದವನ್ನೂ, ಅನೇಕ ಧರ್ಮಗಳನ್ನು ಸೂಚಿಸಬೇಕಾದಾಗ ಧರ್ಮಗಳು ಎಂಬ ಶಬ್ದವನ್ನೂ ಉಪಯೋಗಿಸುತ್ತವೆ. ಎಲ್ಲ ಧರ್ಮಗಳು ಎಂದರೆ ಆತ್ಮೋದ್ಧಾರಕವಾದ ಸದ್ಗುಣಗಳ ಮೊತ್ತವನ್ನು, ಒಟ್ಟನ್ನು ಸೂಚಿಸುವಾಗ, ವೇದ ಋತ ಎಂಬ ವ್ಯಾಪಕ ಶಬ್ದವನ್ನು ಬಳಸುತ್ತದೆ. ವೇದಗಳ ಶೈಲಿಯಲ್ಲಿ ಧರ್ಮ ಒಂದು ಸದ್ಗುಣವಾದರೆ, ಋತ ಸಮಸ್ತ ಸದ್ಗುಣಗಳ ರಾಶಿ. ಸಾರ್ವಭೌಮ ಈಶ್ವರೀಯ ವಿಧಾನವೇ, ಆತ್ಮನ ಉನ್ನಾಯಕವಾದ ಜೀವನಕ್ರಮವೇ ಋತ. ಆ ಈಶ್ವರೀಯ ವಿಧಾನ ವೇದಗಳಲ್ಲಿ ಪ್ರಕಟವಾಗಿರುವುದರಿಂದ, ವೇದಗಳನ್ನೂ ಕೂಡ ಋತ ಎಂದು ನಿರ್ದೇಶಿಸುವುದುಂಟು. ಸುಲಭವಾದ ಮಾತುಗಳಲ್ಲಿ ಹೇಳಬೇಕಾದರೆ, ಆತ್ಮೋದ್ಧಾರದ ಸಮಸ್ತ ಸದ್ಗುಣಗಳ ಸಂಘಾತವೇ ಋತ, ಈಗಿನ ಬಳಕೆಯ ಮಾತಿನಲ್ಲಿ ಅದೇ ಧರ್ಮ. ಆ ಸದ್ಗುಣಗಳು ಜೀವನಕ್ಕಿಳಿದು ಬಂದಾಗ, ಅವೆಲ್ಲಾ ಸೇರಿ ಒಂದು ಜೀವನಮಾರ್ಗಕ್ಕೆ ರೂಪ ಕೊಡುತ್ತವೆ.

ಋಗ್ವೇದದ ಈ ಮಂತ್ರವನ್ನು ಗಮನಿಸಿರಿ:

ಪ್ರತ್ಯಾನ್ಮಾನಾದಧ್ಯಾ ಯೇ ಸಮಸ್ವರನ್ಶ್ಲೋಕಯಂತ್ರಾಸೋ ರಭಸಸ್ಯ ಮಂತವಃ |

ಅಪಾನಕ್ಷಾಸೋ ಬಧಿರಾ ಅಹಾಸತ ಋತಸ್ಯ ಪಂಥಾಂ ನ ತರಂತಿ ದುಷ್ಕೃತಃ || (ಋಕ್. ೯.೭೩.೬.)

     [ಯೇ] ಯಾರು [ಪ್ರತ್ಯಾತ್ ಮಾನಾತ್ ಅಧಿ] ಶಾಶ್ವತ ಪ್ರಮಾಣವಾದ ವೇದಜ್ಞಾನದ ಆಶ್ರಯದಲ್ಲಿ [ಆ ಸಂ ಅಸ್ವರನ್] ಎಲ್ಲೆಡೆಯಿಂದಲೂ ಒಳಿತಾಗಿ ಜ್ಞಾನವನ್ನು ಪಡೆದುಕೊಳ್ಳುತ್ತಾರೋ ಅವರು [ಶ್ಲೋಕ ಯಂತ್ರಾಸಃ] ವೇದಮಂತ್ರಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವರೂ [ರಭಸಸ್ಯ ಮಂತವಃ] ಸರ್ವಶಕ್ತಿಮಾನ್ ಪ್ರಭುವನ್ನು ತಿಳಿದವರೂ ಆಗುತ್ತಾರೆ. [ಆಪಾನಕ್ಷಾಸಃ] ಜ್ಞಾನದೃಷ್ಟಿಯಿಂದ ಕುರುಡರೂ [ಬಧಿರಾಃ] ಕಿವುಡರೂ ಆದವರು [ಋತಸ್ಯ ಪಂಥಾಮ್] ಋತದ, ಈಶ್ವರೀಯ ವಿಧಾನದ, ಧರ್ಮದ ಮಾರ್ಗವನ್ನು [ಆಹಾಸತ] ತ್ಯಜಿಸುತ್ತಾರೆ. [ದುಷ್ಕೃತಃ] ದುಷ್ಕರ್ಮನಿರತರು [ನ ತರಮತಿ] ಪಾರುಗಾಣುವುದಿಲ್ಲ. 

     ವೇದಗಳೇ ಶಾಶ್ವತವಾದ, ಸಾರ್ವಕಾಲಿಕವೂ, ಸಾರ್ವಭೌಮವೂ ಆದ ಸತ್ಯಶಾಶ್ತ್ರಗಳು. ಅದು ಬೋಧಿಸುವ ಮಾರ್ಗ ಋತದ ಮಾರ್ಗ, ಧರ್ಮದ ಮಾರ್ಗ. ವೇದಗಳ ನಿರ್ಮಲಜ್ಞಾನ ಪಡೆದು, ಜ್ಞಾನದಾಯಕ ಮಂತ್ರಗಳ ಮೇಲೆ ಅಧಿಕಾರ ಪಡೆದು, ಪ್ರಭು ಸಾಕ್ಷಾತ್ಕಾರವನ್ನೂ ಮಾಡಿಕೊಳ್ಳಬಹುದು. ಆದರೆ, ಜ್ಞಾನದ ಬೆಳಕನ್ನು ನೋಡಲಾರದ, ಜ್ಞಾನದ ಉಪದೇಶವನ್ನು ಕೇಳಲಾರದ, ಮೂಢಜನರು ಋತದ ಮಾರ್ಗವನ್ನು, ಧರ್ಮಪಥವನ್ನು ಬಿಟ್ಟುಬಿಡುತ್ತಾರೆ. ಅಮತಹ ದುಷ್ಕರ್ಮಿಗಳು ಜೀವನದ ಪಥವನ್ನು ಎಂದಿಗೂ ಕಾಣಲಾರರು. ನಾವು ಈ ಅಧ್ಯಾಯದ ಪ್ರಾರಂಭದಲ್ಲಿಯೇ ಹೇಳಿರುವಂತೆ, ಧರ್ಮದ ಮಾರ್ಗ ಕೇವಲ ಇಹಕ್ಕೆ ಸಂಬಂಧಿಸಿದುದಲ್ಲ, ಕೇವಲ ಪರಕ್ಕೆ ಸಂಬಂಧಿಸಿದುದೂ ಅಲ್ಲ, ಜೀವನಕ್ಕೆ ಎರಡು ಮುಖಗಳಿವೆ, ಒಂದು ಚೇತನಾಂಗ, ಮತ್ತೊಂದು ಜಡಾಂಗ. ಚೇತನಾಂಗಕ್ಕೆ ಅಧ್ಯಾತ್ಮಿಕ ಪೋಷಣೆ ಬೇಕು, ಜಡಾಂಗಕ್ಕೆ ಭೌತಿಕ ಪೋಷಣೆ ಬೇಕು. ಇದರರ್ಥ ಆತ್ಮೋದ್ಧಾರಕ್ಕಾಗಿ ಸಾಧನೆಯನ್ನೂ, ದೇಹಪೋಷಣೆಗಾಗಿ ಲೌಕಿಕ ಕರ್ಮಗಳನ್ನೂ ನಡೆಯಿಸಿಕೊಂಡು ಹೋಗುವಂತಹ ಜೀವನಕ್ರಮವನ್ನು ಅವಲಂಬಿಸಬೇಕು. ಸಾಂಸಾರಿಕಾಭ್ಯುದಯ, ಪಾರಮಾರ್ಥಿಕೋತ್ಕರ್ಷ – ಎರಡನ್ನೂ ಸಾಧಿಸಿಕೊಡುವ ಜೀವನಪಥವೇ ಧರ್ಮ. 

ಕೇಳಿರಿ:-

ಪರಾ ಯಾಹಿ ಮಘವನ್ನಾ ಚ ಯಾಹೀಂದ್ರ ಭ್ರಾತರುಭಯತ್ರಾ ತೇ ಅರ್ಥಮ್ |

ಯತ್ರಾ ರಥಸ್ಯ ಬೃಹತೋ ನಿಧಾನಂ ವಿಮೋಚನಂ ವಾಜಿನೋ ರಾಸಭಸ್ಯ || (ಋಕ್. ೩.೫೩.೫.)

     [ಮಘವನ್] ಓ ಸೌಭಾಗ್ಯಶಾಲಿ, [ಭ್ರಾತಃ] ಸೋದರ, [ಇಂದ್ರ] ಇಂದ್ರಿಯವಾನ್ ಜೀವಾತ್ಮನ್, [ಯತ್ರ] ಎಲ್ಲಿ [ಬೃಹತಃ ರಥಸ್ಯ] ಮಹಾನ್ ಶರೀರದ [ನಿಧಾನಮ್] ಆಶ್ರಯವಿದೆಯೋ [ರಾಸಭಸ್ಯ] ಮೋಕ್ಷಕ್ಕಾಗಿ ಹಾತೊರೆದು ಕೂಗುವ [ವಾಜಿನಃ] ಜ್ಞಾನವಾನ್ ಆತ್ಮನ [ವಿಮೋಚನಮ್] ಮುಕ್ತಿಯಿದೆಯೋ [ಉಭಯತ್ರಾ] ಆ ಎರಡೂ ಕಡೆಗೂ [ತೇ ಅರ್ಥಮ್] ನಿನ್ನ ಹಿತದ ಸಲುವಾಗಿ [ಆ ಯಾಹಿ] ಬಾ [ಚ] ಮತ್ತು [ಪರಾಯಾಹಿ] ಹೋಗು.

     ಭಾವನೆ ಸ್ಪಷ್ಟವಾಗಿದೆ. ಧರ್ಮವು ಕೇವಲ ಐಹಿಕಸುಖದ ಸಾಧನವೂ ಅಲ್ಲ, ಕೇವಲ ಆಮುಷ್ಮಿಕ ಸುಖದ ಸಾಧನವೂ ಅಲ್ಲ, ಇಹ-ಪರಗಳೆರಡಕ್ಕೂ ಗಮನವಿತ್ತು, ಎರಡನ್ನೂ ಸಾಧಿಸಿಕೊಡಬಲ್ಲ ಮಾರ್ಗವೇ ಧರ್ಮ. ಆ ಜೀವನಮಾರ್ಗ ರೂಪಗೊಳ್ಳುವುದು ಆತ್ಮೋದ್ಧಾರಕಾರಿಗಳಾದ ಸದ್ಗುಣಗಳ ಸಮೂಹದಿಂದ.

*****************************

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae-2/

ವೇದೋಕ್ತ ಜೀವನ ಪಥ: ಮಾನವಧರ್ಮ – ೧

ಸಹೃದಯರೇ,

     ಮೂರು ಶಾಶ್ವತ ಪದಾರ್ಥಗಳ, ಅನಾದಿ ತತ್ತ್ವಗಳ – ಅಂದರೆ, ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ – ಪರಿಚಯ ಈಗಾಗಲೇ ಮಾಡಿಕೊಡಲಾಗಿದೆ. ಇನ್ನುಮುಂದೆ ಮಾನವಧರ್ಮದ ಬಗ್ಗೆ ಪಂಡಿತ ಸುಧಾಕರ ಚತುರ್ವೇದಿಯವರು ಏನು ಹೇಳಿದ್ದಾರೆ ಎಂಬುದನ್ನು ನೋಡೋಣ, ಜಿಜ್ಞಾಸೆ ಮುಂದುವರೆಸೋಣ.

ವೇದೋಕ್ತ ಜೀವನ ಪಥ: ಮಾನವಧರ್ಮ – ೧

     ಪರಮಾತ್ಮ ಮತ್ತು ಪ್ರಕೃತಿಯ ನಡುವೆ, ಅಲ್ಪಜ್ಞನೂ, ಅಲ್ಪಶಕ್ತನೂ, ಪರಿಚ್ಛಿನ್ನನೂ ಆದ ಜೀವಾತ್ಮನಿದ್ದಾನೆ. ಪರಮಾತ್ಮ ಸರ್ವಥಾ ನಿರಾಕಾರ, ನಿರ್ವಿಕಾರ, ಅವನು ಪತನ ಹೊಂದುವ ಪರಿಸ್ಥಿತಿ ಮೂರು ಕಾಲಕ್ಕೂ ಇಲ್ಲ. ಪ್ರಕೃತಿ ಜಡವಾದ ಕಾರಣ, ಪೂರ್ಣತಃ ಅನುಭವರಹಿತ. ಅದರ ಉತ್ಥಾನ-ಪತನಗಳಿಗೆ ಏನೂ ಅರ್ಥವಿಲ್ಲ. ಉಳಿದವನು ಜೀವಾತ್ಮ. ಅವನು ಸ್ವರೂಪತಃ ಪರಿಚ್ಛಿನ್ನನಾಗಿರುವುದರಿಂದ ಅವನ ಶಕ್ತಿಗಳಿಗೂ, ಜ್ಞಾನಕ್ಕೂ ಸಹ ಒಂದು ಪರಿಮಿತಿಯಿದೆ. ಈ ಪರಿಮಿತಿಯ ಕಾರಣದಿಂದ ಜೀವಾತ್ಮನು ತನ್ನ ಉದ್ಧಾರಕ್ಕಾಗಿ ಭಗವಂತನಿಂದ ಕೊಡಲ್ಪಟ್ಟ ಮನಸ್ಸು, ಇಂದ್ರಿಯಗಳು, ದೇಹ ಇವುಗಳನ್ನು ತನ್ನ ವಶದಲ್ಲಿಟ್ಟುಕೊಳ್ಳುವುದನ್ನು ಬಿಟ್ಟು, ತಾನೇ ಅವುಗಳಿಗೆ ವಶೀಭೂತನಾಗಿ ಹೋಗುತ್ತಾನೆ. ಈ ದೌರ್ಬಲ್ಯದ ಪರಿಣಾಮವಾಗಿ ಅವನು ಭಗವಂತನ ಸೃಷ್ಟಿಯನ್ನು ಸುಖ-ಶಾಂತಿಗಳ ಬೀಡಾಗಿ ಮಾಡುವ ಬದಲು, ಅದನ್ನು ನಾರಕೀಯ ಸಂಕಟಗಳ ವೇದಿಕೆಯನ್ನಾಗಿ ಮಾಡುತ್ತಾನೆ. ಈ ರೀತಿ, ತನ್ನ ಇಹವನ್ನು ಕೆಡಿಸಿಕೊಳ್ಳುವುದಲ್ಲದೆ, ಇತರರ ಇಹವನ್ನೂ ಹಾಳುಮಾಡುತ್ತಾನೆ. ಇಹವನ್ನೇ ಸುಧಾರಿಸಿಕೊಳ್ಳಲಾರದವನ ಮುಂದೆ ಪರದ ಪ್ರಶ್ನೆ ನಿರರ್ಥಕ. ಏಕೆಂದರೆ, ಪರದ ಆಧಾರ ಇಹವೇ ಆಗಿರುತ್ತದೆ. ಪರವನ್ನು ಗುರಿಯಾಗಿಟ್ಟುಕೊಂಡು ಇಹವನ್ನು ಹದಗೊಳಿಸಿಕೊಳ್ಳುವುದು, ಸುಧಾರಿತವಾದ ಇಹದ ಆಧಾರದ ಮೇಲೆ ಪರವನ್ನು ಸಾಧಿಸುವುದು. ಬೇರೆಯ ರೀತಿಯಲ್ಲಿ ಹೇಳಬೇಕೆಂದರೆ, ಇಹ-ಪರಗಳೆರಡನ್ನೂ ಸಾಧಿಸಿಕೊಳ್ಳುವುದು. ಇದಕ್ಕೆ ಒಂದು ನಿರ್ದಿಷ್ಟ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಆ ನಿರ್ದಿಷ್ಟ ಮಾರ್ಗವನ್ನು ಋಗ್ವೇದ ಈ ರೀತಿ ವರ್ಣಿಸುತ್ತದೆ:-

ತೇ ನಸ್ತ್ರಾಧ್ವಂ ತೇsವತ ತ ಉ ನೋ ಅಧಿ ವೋಚತ |

ಮಾ ನಃ ಪಥಃ ಪಿತ್ರ್ಯಾನ್ಮಾನವಾದಧಿ ದೂರಂ ನೈಷ್ಟ ಪರಾವತಃ ||(ಋಕ್. ೮.೩೦.೩)

     ವಿದ್ವಜ್ಜನರೇ! [ತೇ ನಃ ತ್ರಾಧ್ವಮ್] ಆ ನೀವು ನಮಗೆ ಬಲ ಕೊಡಿರಿ. [ತೇ ಆವತ] ಆ ನೀವು ರಕ್ಷಿಸಿರಿ. [ತ ಉ ನೋ ಅಧಿ ವೋಚತ] ಆ ನೀವೇ ನಮಗೆ ಉಪದೇಶ ಕೊಡಿರಿ. [ನಃ ಪಿತ್ರ್ಯಾತ್ ಮಾನವಾತ್ ಪರಾವತಃ ಪಥಃ ಅಧಿ] ನಮ್ಮನ್ನು ಪಾಲಕನ ಶಕ್ತಿಸಂಪನ್ನವಾದ, ಮಾನವೀಯವಾದ, ಪರಪ್ರಾಪ್ತಿ ಸಾಧಕವಾದ ಮಾರ್ಗದಿಂದ, [ಮಾ ದೂರಂ ನೈಷ್ಟ] ದೂರಕ್ಕೆ ಕರೆದೊಯ್ಯಬೇಡಿ.

     ವೇದಗಳ ಶೈಲಿ ತನ್ನದೇ ಆದ ಅದ್ಭುತ ಶೈಲಿ. ಇಹ-ಪರಗಳೆರಡನ್ನೂ ಶಾಧಿಸುವ ನಿರ್ದಿಷ್ಟ ಮಾರ್ಗವನ್ನು ತಿಳಿಯಲಪೇಕ್ಷಿಸುವ ನಿಜವಾದ ಜಿಜ್ಞಾಸುಗಳು ಜ್ಞಾನಿಗಳಲ್ಲಿ ಬೇಡಿಕೊಳ್ಳುವ ರೀತಿಯದು. ಪ್ರತಿಯೊಬ್ಬ ಧರ್ಮಜಿಜ್ಞಾಸುವಿನ ಹೃದಯಾಂತರಾಳದಲ್ಲಿಯೂ ಅಡಗಿರಬೇಕಾದ ಮೂರು ಅಂಶಗಳು ಈ ಮಂತ್ರದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ. ಧರ್ಮದ ಆ ನಿರ್ದಿಷ್ಟವಾದ ಮಾರ್ಗ, ಈ ಲೋಕದಲ್ಲಿ ಪಾಲನೆ-ಪೋಷಣೆ ನೀಡುವ ಶಕ್ತಿ ಹೊಂದಿರಬೇಕು. ಎರಡನೆಯದಾಗಿ, ಅದು ಯಾವುದಾದರೊಂದು ಸಂಪ್ರದಾಯಕ್ಕೆ ಅಥವಾ ಜನಾಂಗಕ್ಕೆ ಅನ್ವಯಿಸುವ ಮಾರ್ಗವಾಗಿರದೆ, ಸಂಪೂರ್ಣ ಮಾನವ ಜಾತಿಗೆ ಅನ್ವಯಿಸುವ ಮಾರ್ಗವಾಗಿರಬೇಕು. ಮೂರನೆಯದಾಗಿ, ಅದು ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಿ, ಪರಲೋಕವನ್ನೂ ಕೂಡ ಗಳಿಸಿಕೊಡುವ ಮಾರ್ಗವಾಗಿರಬೇಕು. ಈ ಮೂರರಲ್ಲಿ ಯಾವುದೇ ಒಂದು ಅಂಶಕ್ಕೆ ಲೋಪ ಬಂದರೂ, ಅದು ಪೂರ್ಣವಾದ ಧರ್ಮಮಾರ್ಗವೆನ್ನಿಸಲಾರದು. ಇಂತಹ ಇಹ-ಪರ ಸಾಧಕವಾದ ಮಾನವ ಪಥವನ್ನೇ ‘ಧರ್ಮ’ ಎಂದು ಕರೆಯುತ್ತಾರೆ. ಯಾವುದೇ ಒಂದು ಮತ-ಸಂಪ್ರದಾಯದಲ್ಲಿಯೂ, ಧರ್ಮದ ಯಾವುದಾದರೊಂದು ಅಂಶ ಅಡಕವಾಗಿರಬಲ್ಲದೇ ಹೊರತು, ಅದರ ಸಂಕುಚಿತ ಪರಿಧಿಯಲ್ಲಿ ಸಂಪೂರ್ಣ ಧರ್ಮದ ವಿಶಾಲ ತತ್ತ್ವ ಹಿಡಿಸಲಾರದು. ಮತಗಳು ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಬೌದ್ಧ ಎಂದು ಹಲವಾರು ಇರಬಲ್ಲವು. ಅವುಗಳ ಹಿಂದೆ ವ್ಯವಚ್ಛೇದಕವಾದ ವಿಶೇಷಣಗಳನ್ನೂ ಉಪಯೋಗಿಸಬಹುದು. ಅದರೆ, ಧರ್ಮ ಸಾರ್ವಭೌಮ ಹಾಗೂ ಸಾರ್ವಕಾಲಿಕವಾದ ಏಕಮಾತ್ರ ತತ್ತ್ವವಾಗಿರುವುದರಿಂದ ಅದರ ಹಿಂದೆ ಇಂತಹ ಯಾವ ವಿಶೇಷಣಗಳನ್ನೂ ಉಪಯೋಗಿಸಲು ಸಾಧ್ಯವಿಲ್ಲ. ವಿಶೇಷಣವಿಡಲೇಬೇಕಾದರೆ ಅದು ಜ್ಞಾನಾಶ್ರಿತವಾದುದರಿಂದ ‘ವೈದಿಕ ಧರ್ಮ’ ಎನ್ನಬಹುದು. ಸಂಪೂರ್ಣ ಮಾನವ ಸಮಾಜಕ್ಕೆ ಅನ್ವಯಿಸಬಹುದಾದ ಕಾರಣ ‘ಮಾನವ ಧರ್ಮ’ ಎನ್ನಬಹುದು. ಈ ಧರ್ಮ, ಜೀವಾತ್ಮನು ಪತಿತನಾಗದಂತೆ ಅವನನ್ನು ಎತ್ತಿಹಿಡಿಯುವುದರಿಂದ ಅದನ್ನು ಧರುಣ ಎಂದರೆ ಧಾರಕತತ್ತ್ವ ಎಂದು ವೇದಗಳಲ್ಲಿ ಕರೆದಿದೆ. ಉದಾಹರಣೆಗೆ ಋಗ್ವೇದ - ದಿವೋ ಧರ್ಮನ್ ಧರುಣೀ (ಋಕ್.೫.೧೫.೨.) – ಧರುಣ ಎಂದರೆ ಧಾರಕವಾದ ಜ್ಯೋತಿಯ ಧರ್ಮದಲ್ಲಿ ಎಂದು ಹೇಳಿರುವುದನ್ನು ನಾವು ನೋಡಬಹುದು. ಧರ್ಮದ ಉದ್ದೇಶ್ಯ, ಕರ್ಮ-ಭೋಗ-ಯೋನಿಯಲ್ಲಿರುವ ಮಾನವನ ಆತ್ಮವನ್ನು ಪತನ ಹೊಂದಲು ಅವಕಾಶ ಕೊಡದೆ, ಆಧ್ಯಾತ್ಮಿಕ ದೃಷ್ಟಿಯಿಂದ ಅವನನ್ನು ಎತ್ತಿ ಹಿಡಿದು, ಇಹ-ಪರಗಳೆರಡನ್ನೂ ಸಾಧಿಸುವ ಸಾಮರ್ಥ್ಯವನ್ನು ಅವನಲ್ಲಿ ತುಂಬಿಕೊಡುವುದೇ ಆಗಿದೆ.

ಅಥರ್ವವೇದ ಕೂಗಿ ಕೂಗಿ ಹೇಳುತ್ತಲಿದೆ:-

ಉತ್ಕ್ರಾಮಾತಃ ಪುರುಷ ಮಾವ ಪತ್ಥಾ ಮೃತ್ಯೋಃ ಪಡ್ವೀಶಮವಮುಂಚಮಾನಃ |

ಮಾ ಚ್ಛಿತ್ಥಾ ಅಸ್ಮಾಲ್ಲೋಕಾದಗ್ನೇಃ ಸೂರ್ಯಸ್ಯ ಸಂದೃಶಃ || (ಅಥರ್ವ.೮.೧.೪.)

     [ಪುರುಷ] ಹೇ ದೇಹನಿವಾಸೀ ಜೀವ! [ಮೃತ್ಯೋಃ ಪಡ್ವೀಷಂ ಅವಮುಂಚಮಾನಃ] ಸಾವಿನ ಬಂಧವನ್ನು ಕೆಳಕ್ಕೆ ಸರಿಸಿ ಹಾಕುತ್ತಾ, [ಆತಃ ಉತ್ಕ್ರಾಮ] ಇಲ್ಲಿಂದ ಮೇಲಕ್ಕೆದ್ದು ನಡೆ. [ಮಾ ಅವ ಪತ್ಥಾ] ಕೆಳಗೆ ಬೀಳಬೇಡ. [ಅಸ್ಮಾತ್ ಲೋಕಾತ್] ಈ ಲೋಕದಿಂದ, [ಮಾ ಚ್ಛಿತ್ಥಾ] ಕಡಿದು ಹೋಗಬೇಡ. [ಅಗ್ನೇಃ] ರಾತ್ರಿಯಲ್ಲಿ ಅಗ್ನಿಯ, [ಸೂರ್ಯಸ್ಯ] ಹಗಲಿನಲ್ಲಿ ಸೂರ್ಯನ, [ಸಂದೃಶಃ] ಸಮಾನವಾಗಿ ಪ್ರಕಾಶಿಸು.

     ಒಂದೊಂದು ಶಬ್ದವೂ ಸ್ಫೂರ್ತಿಯ ಬುಗ್ಗೆ! ಮಾನವ, ಸಾವಿನ ಭಯವನ್ನು ದೂರ ಸರಿಸಿ, ಮೇಲಕ್ಕೇರಬೇಕು, ಕೆಳಕ್ಕೆ ಬೀಳಬಾರದು. ಆಧ್ಯಾತ್ಮಿಕ ಜೀವನದ ಗುಂಗಿನಲ್ಲಿ ಈ ಲೋಕದಿಂದ, ಲೌಕಿಕ ಕರ್ತವ್ಯಗಳಿಂದ ದೂರ ಓಡಬಾರದು, ಜೀವನದ ರಾತ್ರಿಯಲ್ಲಿ ಅಂದರೆ ದುಃಖಮಯ ಸ್ಥಿತಿಯಲ್ಲಿ, ಬೆಂಕಿಯಂತೆ ಉರಿದು ದುಃಖವನ್ನು ದಹಿಸಬೇಕು. ಜೀವನದ ಹಗಲಿನಲ್ಲಿ, ಅಂದರೆ ಸುಖಮಯ ಸ್ಥಿತಿಯಲ್ಲಿ ಸೂರ್ಯನಂತೆ ಬೆಳಗಿ, ಎಲ್ಲರಿಗೂ ಆ ಸುಖವನ್ನು ಹಂಚಿಕೊಡಬೇಕು. ಇದೀಗ ಧರ್ಮಮಾರ್ಗದ, ಉತ್ಥಾನ ಮಾರ್ಗದ ಒಂದು ಆಕರ್ಷಕವಾದ ಚಿತ್ರ.

******************************


Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b3%8b%e0%b2%95%e0%b3%8d%e0%b2%a4-%e0%b2%9c%e0%b3%80%e0%b2%b5%e0%b2%a8-%e0%b2%aa%e0%b2%a5-%e0%b2%ae%e0%b2%be%e0%b2%a8%e0%b2%b5%e0%b2%a7%e0%b2%b0%e0%b3%8d%e0%b2%ae/

“ಈಶಾವಾಸ್ಯಮ್”




ಸತ್ಸಂಗಕ್ಕಾಗಿ ನನ್ನ ಮನೆಯ ಮೇಲೊ೦ದು ಹಾಲ್ ನಿರ್ಮಾಣ ಮಾಡಬೇಕೆಂಬ ಮಹದಾಸೆ. ಭಗವಂತನ ಕೃಪೆಯಿಂದ ಅದು ನೆರವೇರಿದೆ. ಬರುವ ನವಂಬರ್ ೨ ರಂದು “ಈಶಾವಾಸ್ಯಮ್” ಪ್ರವೇಶೋತ್ಸವವು ನಿಶ್ಚಯ ವಾಗಿದೆ. ಅಷ್ಟರಲ್ಲಿ ಅನಾಯಾಸವಾಗಿ ಲಭ್ಯವಾದ ಅವಕಾಶವನ್ನು ಉಪಯೋಗಿಸಿಕೊಳ್ಳ ಬಾರದೇಕೆ? ಎಂಬ ಆಲೋಚನೆಯ ಪರಿಣಾಮ , ನಿನ್ನೆ ವಿಜಯದಶಮಿಯ ಶುಭ ದಿನ ದಂದು ಒಂದು ದಿಢೀರ್ ಸತ್ಸಂಗವು ಅದೇ ಹಾಲ್ ನಲ್ಲಿ ನಡೆಯಿತು. ಹಾಸನದ ಶಂಕರ ಮಠಕ್ಕೆ ಪ್ರವಚನಕ್ಕಾಗಿ ಆಗಮಿಸಿದ್ದ ಬೆಂಗಳೂರು ಜೆ.ಪಿ.ನಗರ ಚಿನ್ಮಯಾ ಮಿಷನ್ನಿನ ಪೂಜ್ಯ ಕೃತಾತ್ಮಾ ನಂದರನ್ನು ನಮ್ಮ ನಿರ್ಮಾಣ ಹಂತದ ಸತ್ಸಂಗದ ಹಾಲ್ ಗೆ ಆಹ್ವಾನಿಸಿದೆ. ಪೂಜ್ಯರು ಸಂತೋಷದಿಂದ ಆಗಮಿಸಿ ಸತ್ಸಂಗವನ್ನು ನಡೆಸಿ ಕೊಟ್ಟರು. ಅದರ ಕೆಲವು ದೃಶ್ಯಗಳು ಇಲ್ಲಿವೆ.

Permanent link to this article: http://www.vedasudhe.com/294/

Older posts «