ಋಗ್ವೇದದಲ್ಲಿ:-
ಯೇ ತ್ರಿಂಶತಿ ತ್ರಯಸ್ಪರೋ ದೇವಾಸೋ ಬರ್ಹಿರಾಸದನ್|
ವಿದನ್ನಹ ದ್ವಿತಾಸನನ್|| (ಋಕ್. 8.28.1)
[ಯೇ] ಯಾವ, [ತ್ರಿಂಶತಿ ತ್ರಯಃ ಪರಃ ದೇವಾಸಃ] ಮೂವತ್ತಮೂರು ದೇವತೆಗಳು, [ಬರ್ಹಿ ಆಸದನ್] ಆಸನಾರೂಢರಾಗಿದ್ದಾರೋ [ದ್ವಿತಾಸನನ್] ಜಡರೂಪದಲ್ಲಿಯೂ ದಾನ ನೀಡುತ್ತಾ [ನಃ ವಿದನ್] ನಮಗೆ ಪ್ರಾಪ್ತರಾಗಲಿ;ಎಂದು ಓದುತ್ತೇವೆ.
ಅಥರ್ವವೇದದಲ್ಲಿ:-
ತ್ರಯಂಸ್ತ್ರಿಂಶತ್ತ್ರಿಶತಾಃ ಷಟ್ ಸಹಸ್ರಾಃ ಸರ್ವಾಂತ್ಸ ದೇವಾಂಸ್ತಪಸಾ ಪಿಪರ್ತಿ|| (ಅಥರ್ವ.11.5.2.)
ಆ ತಪಸ್ವಿಯು 6333 ದೇವತೆಗಳನ್ನು ತನ್ನ ತಪಸ್ಸಿನಿಂದ ತೃಪ್ತಿಗೊಳಿಸುತ್ತಾನೆ- ಎಂದು ಹೇಳಿದೆ.
ಯಜುರ್ವೇದದಲ್ಲಿ:-
ಅಗ್ನಿರ್ದೇವತಾ ವಾತೋ ದೇವತಾ ಸೂರ್ಯೋ ದೇವತಾ ಚಂದ್ರಮಾ ದೇವತಾ
ವಸವೋ ದೇವತಾ ರುದ್ರಾ ದೇವತಾssದಿತ್ಯಾ ದೇವತಾ ಮರುತೋ ದೇವತಾ
ವಿಶ್ವೇ ದೇವಾ ದೇವತಾ ಬೃಹಸ್ಪತಿರ್ದೇವತೇಂದ್ರೋ ದೇವತಾ ವರುಣೋ ದೇವತಾ|| (ಯಜು. 14.20)
ಎಂಬ ಮಂತ್ರದಲ್ಲಿ ಅಗ್ನಿ, ವಾಯು, ಸೂರ್ಯ, ಚಂದ್ರ, ವಸುಗಳು, ಬೃಹಸ್ಪತಿ, ಇಂದ್ರ, ವರುಣ ಅವರೆಲ್ಲಾ ದೇವತೆಗಳು ಎಂದು ಹೇಳಿದೆ. ಆದರೆ ವೇದಗಳಲ್ಲೆಲ್ಲಿಯೂ ಈ ದೇವತೆಗಳೇ ಪರಮಾತ್ಮ ಎಂದು ಹೇಳಿಲ್ಲ. ಉಪಾಸನೆಯ ಪ್ರಕರಣದಲ್ಲಿ ಈ ದೇವತೆಗಳು ಉಪಾಸ್ಯರು ಎಂದು ಅಂಗೀಕರಿಸಿಲ್ಲ. ಈ ವಿದ್ವಾಂಸರಿಗೆ ಭ್ರಾಂತಿಯುಂಟಾಗಲು, ಈ ದೇವತೆಗಳ ಹೆಸರಿನಿಂದಲೇ ಪರಮಾತ್ಮನನ್ನು ನಿರ್ದೇಶಿಸಿರುವುದೂ ಒಂದು ಕಾರಣವಾಗಿದೆ. ಆದರೂ ವೇದಗಳು ಅತಿ ಸ್ಪಷ್ಟವಾಗಿ, ನಾನಾ ಹೆಸರುಗಳಿದ್ದರೂ ಪರಮಾತ್ಮನಿರುವುದೇನೋ ಒಬ್ಬನೇ ಎಂದು ಸ್ಪಷ್ಟವಾಗಿ ಸಾರಿವೆ. ಉದಾಹರಣೆಗೆ:
ಇಂದ್ರಂ ಮಿತ್ರಂ ವರುಣಮಗ್ನಿಮಾಹುರಥೋ ದಿವ್ಯಃ ಸ ಸುಪರ್ಣೋ ಗರುತ್ಮಾನ್|
ಏಕಂ ಸದ್ ವಿಪ್ರಾ ಬಹುಧಾ ವದಂತ್ಯಗ್ನಿಂ ಯಮಂ ಮಾತರಿಶ್ವಾನಮಾಹುಃ|| (ಋಕ್. 1.164.46)
[ಅಗ್ನಿಂ] ತೇಜೋಮಯ ಪ್ರಭುವನ್ನು [ಇಂದ್ರಂ, ಮಿತ್ರಂ, ವರುಣಮ್] ಇಂದ್ರ, ಮಿತ್ರ, ವರುಣ ಎಂದು [ಅಹುಃ] ಕರೆಯುತ್ತಾರೆ. [ಅಥೋ] ಹಾಗೆಯೇ [ಸಃ] ಆ ಪ್ರಭುವು [ದಿವ್ಯಃ] ದಿವ್ಯನೂ [ಸುಪರ್ಣಃ} ಸುಪರ್ಣನೂ [ಗರುತ್ಮಾನ್] ಗರುತ್ಮಂತನೂ ಅಹುದು. [ಸತ್ ಏಕಮ್] ಸತ್ತತ್ವ ಇರುವುದೇನೋ ಒಂದೇ. [ವಿಪ್ರಾಃ] ವಿಶೇಷ ಪ್ರಜ್ಞಾವಂತರಾದ ಜ್ಞಾನಿಗಳು [ಬಹುಧಾ ವದಂತಿ] ಅನೇಕ ರೀತಿಯಲ್ಲಿ ವರ್ಣಿಸುತ್ತಾರೆ. [ಅಗ್ನಿಂ] ಅದೇ ತೇಜೋರೂಪವನ್ನು [ಯಮಂ ಮಾತರಿಶ್ವಾನಂ ಅಹುಃ]ಯಮ, ಮಾತರಿಶ್ವಾ – ಎನ್ನುತ್ತಾರೆ.
ಇನ್ನು ಭ್ರಾಂತಿಗವಕಾಶವೆಲ್ಲಿ? ಇದೇ ಹೆಸರುಗಳಿಂದ ಬೇರೆ ದೇವತೆಗಳನ್ನು ನಿರ್ದೇಶಿಸಿದ ಮಾತ್ರಕ್ಕೆ ಅಥವಾ ಪರಮಾತ್ಮನನ್ನು ಬೇರೆ ಬೇರೆ ಹೆಸರುಗಳಿಂದ ಕರೆದ ಮಾತ್ರಕ್ಕೆ ಒಬ್ಬ ಪರಮಾತ್ಮ ನೂರಾರು ಪರಮಾತ್ಮರುಗಳಾಗಿ ಹೋಗುವುದಿಲ್ಲ. ಇದೊಂದು ಮಂತ್ರದ ಕಡೆ ದೃಷ್ಟಿ ಹರಿಸೋಣ:-
ಯೋ ನಃ ಪಿತಾ ಜನಿತಾ ಯೋ ವಿಧಾತಾ ಧಾಮಾನಿ ವೇದ ಭುವನಾನಿ ವಿಶ್ವಾ|
ಯೋ ದೇವಾನಾಂ ನಾಮಧಾ ಏಕ ಏವ ತಂ ಸಂಪ್ರಶ್ನಂ ಭುವನಾ ಯಂತ್ಯನ್ಯಾ|| (ಯಜು.10.82.3)
[ಯಃ] ಯಾವನು [ನಃ ಪಿತಾ] ನಮ್ಮ ತಂದೆಯೋ [ಜನಿತಾ] ಉತ್ಪಾದಕನೋ [ಯಃ] ಯಾವನು [ವಿಧಾತಾ] ನಿಯಾಮಕನೋ [ವಿಶ್ವಾ ಧಾಮಾನಿ ಭುವನಾನಿ ವೇದ] ಸಮಸ್ತ ನೆಲೆಗಳನ್ನೂ, ಲೋಕಗಳನ್ನೂ ಬಲ್ಲನೋ [ಯಃ] ಯಾವನು [ಏಕ ಏವ] ಒಬ್ಬನೇ ಒಬ್ಬನು [ದೇವಾನಾಂ ನಾಮಧಾ] ದೇವತೆಗಳ ಹೆಸರನ್ನೆಲ್ಲಾ ಧರಿಸುವವನಾಗಿದ್ದಾನೋ [ತಂ ಸಂಪ್ರಶ್ನಂ] ಆ ಮಹಾಜಿಜ್ಞಾಸುವಾದ ಪ್ರಭುವನ್ನು [ಅನ್ಯಾ ಭುವನಾ ಯಂತಿ] ಬೇರೆಲ್ಲಾ ಲೋಕಗಳನ್ನು ಪಡೆದುಕೊಳ್ಳುತ್ತವೆ.
ಒಬ್ಬನೇ ಒಬ್ಬ ಎಲ್ಲಾ ಎಲ್ಲಾ ದೇವತೆಗಳ ಹೆಸರನ್ನೂ ಧರಿಸುತ್ತಾನೆ – ಎಂದು ವೇದವೇ ಘೋಷಿಸುತ್ತಿರುವಾಗ, ವೇದಗಳಲ್ಲಿ ಅನೇಕೇಶ್ವರವಾದವಿದೆ ಎನ್ನುವುದಕ್ಕೆ ಅವಕಾಶವಾದರೂ ಎಲ್ಲಿದೆ? ಈ ವಾದಕ್ಕೆ ಪೂರ್ಣವಿರಾಮ ಹಾಕುವ ಈ ಕೆಳಗಿನ ಮಂತ್ರವನ್ನು ನೋಡಿರಿ:-
ನ ದ್ವಿತೀಯೋ ನ ತೃತೀಯಶ್ಚತುರ್ಥೋ ನಾಪ್ಯುಚ್ಚತೇ|
ನ ಪಂಚಮೋ ನ ಷಷ್ಠಃ ಸಪ್ತಮೋ ನಾಪ್ಯುಚ್ಚತೇ|
ನಾಷ್ಟಮೋ ನಾ ನವಮೋ ದಶಮೋ ನಾಪ್ಯುಚ್ಚತೇ|
ತಮಿದಂ ನಿಗತಂ ಸಹಃ ಸ ಏಷ ಏಕ ಏಕವೃದೇಕ ಏವ|| (ಅಥರ್ವ.13.4.16-18,20)
[ನ ದ್ವಿತೀಯಃ] ಎರಡನೆಯ ಪರಮಾತ್ಮನಿಲ್ಲ. [ನ ತೃತೀಯಃ] ಮೂರನೆಯವನೂ ಇಲ್ಲ. [ಚತುರ್ಥಃ ಅಪಿ ನ ಉಚ್ಯತೇ] ನಾಲ್ಜನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಪಂಚಮಃ] ಐದನೆಯವನಿಲ್ಲ. [ನ ಷಷ್ಠಃ] ಆರನೆಯವನಿಲ್ಲ. [ಸಪ್ತಮಃ ಅಪಿ ನ ಉಚ್ಯತೇ] ಏಳನೆಯವನೂ ವರ್ಣಿಸಲ್ಪಡುವುದಿಲ್ಲ. [ನ ಅಷ್ಟಮಃ] ಎಂಟನೆಯವನಿಲ್ಲ. [ನ ನವಮಃ] ಒಂಬತ್ತನೆಯವನಿಲ್ಲ. [ದಶಮಃ ಅಪಿ ನ ಉಚ್ಯತೇ] ಹತ್ತನೆಯವನ ನಿರ್ದೇಶನವೂ ಇಲ್ಲ. [ಇದಂ ಸಹಃ] ಈ ಶಕ್ತಿ [ತಂ ನಿಗತಮ್] ಅವನಲ್ಲಿಯೇ ಅಡಕವಾಗಿದೆ. [ಸಃ ಏಷಃ] ಆ, ಈ ಪ್ರಭುವು [ಏಕಃ] ಒಬ್ಬನೇ ಆಗಿದ್ದಾನೆ. [ಏಕವೃತ್] ಒಬ್ಬನೇ ವ್ಯಾಪಕನಾಗಿದ್ದಾನೆ. [ಏಕ ಏವ] ಇರುವುದು ಒಬ್ಬನೇ ಒಬ್ಬನು.
ಈ ರೀತಿ ಎಲ್ಲಾ ಸಂದೇಹಗಳು ಅಡಗಿಹೋಗುತ್ತವೆ. ಭಗವಂತನಿರುವುದು ಒಬ್ಬನೇ. ಅವನು ನಿರಾಕಾರ-ನಿರ್ವಿಕಾರನು, ಸರ್ವಜ್ಞ-ಸರ್ವವ್ಯಾಪಕ-ಸರ್ವದ್ರಷ್ಟನು. ಅವನು ಸದಾ ಅಶರೀರನೇ. ಅವನು ಶಕ್ತಿರೂಪನು; ವ್ಯಕ್ತಿರೂಪನಲ್ಲ. ಅವನು ಮೇಲಿಂದ ಕೆಳಗಿಳಿದು ಬರುವನು, ಅವತಾರವೆತ್ತುವನು – ಎನ್ನುವುದು ಕೇವಲ ಭ್ರಾಂತಿ ಮಾತ್ರ. ಅವನೇ ಸೃಷ್ಟಿಕರ್ತನು.
ಋಗ್ವೇದವು:
ವಿಶ್ವಕರ್ಮಾ ವಿಮನಾ ಅದ್ವಿಹಾಯಾ|| (ಋಕ್. 10.82.2)
ಮನೋಬಂದನವಿಲ್ಲದ, ಸರ್ವವ್ಯಾಪಕ ಪ್ರಭುವೇ ಸೃಷ್ಟಕರ್ತನು ಎನ್ನುತ್ತಲಿದೆ. ಅವನೇ ಸ್ಥಿತಿಗೂ, ಪಾಲನೆಗೂ ಕಾರಣನು.
ಯಜುರ್ವೇದವು:
ಯೇನ ದ್ಯೌರುಗ್ರಾ ಪೃಥಿವೀ ಚ ಧೃಢಾ ಯೇನ ಸ್ವ ಸ್ತಭಿತಂ ಯೇನ ನಾಕಃ|
ಯೋ ಅಂತರಿಕ್ಷೇ ರಜಸೋ ವಿಮಾನಃ ಕಸ್ಮೈ ದೇವಾಯ ಹವಿಷಾ ವಿಧೇಮ|| (ಯಜು. 32.6)
ಎನ್ನುತ್ತಲಿದೆ.
[ಯೇನ] ಯಾವನಿಂದ [ಉಗ್ರಾ ದ್ಯೌಃ ಪೃಥವೀ ಚ ಧೃಢಾ] ಉಗ್ರವಾದ ದ್ಯುಲೋಕವೂ, ಪೃಥಿವಿಯೂ ಧೃಢವಾಗಿದೆಯೋ [ಯೇನ ಸ್ವ ಸ್ತಭಿತಂ] ಯಾವನಿಂದ ಆನಂದಮಯ ಮೋಕ್ಷವು ಧೃಢೀಕೃತವಾಗಿದೆಯೋ [ಯೇನ ನಾಕಃ] ಯಾವನಿಂದ ಸುಖಮಯ ಇರುವಿಕೆ ಧೃಢವಾಗಿದೆಯೋ [ಯಃ ಅಂತರಿಕ್ಷೇ ರಜಸಃ] ಯಾವನು ಅಂತರಿಕ್ಷದಲ್ಲಿಯೂ ಲೋಕ ರಚಿಸಿ [ವಿಮಾನಃ] ವಿಶೇಷ ಮಾನಾರ್ಹನಾಗಿದ್ದಾನೋ [ಕಸ್ಮೈ ದೇವಾಃ] ಆ ಆನಂದಮಯ ದೇವನಿಗೆ [ಹವಿಷಾ ವಿಧೇಮ] ಸಚ್ಚಾರಿತ್ರದಿಂದ ವಿನೀತರಾಗೋಣ- ಎಂದು ಹೇಳುತ್ತಲಿದೆ. ಅವನೇ ಪ್ರಳಯ ಕರ್ತೃವೂ ಆಗಿದ್ದಾನೆ.
ಋಗ್ವೇದವು :
ಯ ಏಕ ಇಚ್ಚ್ಯಾವಯತಿ ಪ್ರ ಭೂಮಾ ರಾಜಾ ಕೃಷ್ಟೀನಾಂ ಪುರುಹೂತ ಇಂದ್ರಃ|| (ಋಕ್. 4.17.5)
[ಯಃ ಏಕ ಇತ್] ಯಾವನೊಬ್ಬನೇ [ಪ್ರ ಭೂಮಾ] ಈ ವಿಸ್ತೃತ ಬ್ರಹ್ಮಾಂಡವನ್ನು [ಚ್ಯಾವಯತಿ] ಲಯಗೊಳಿಸುತ್ತಾನೋ, ಅವನು [ಕೃಷ್ಟೀನಾಂ ರಾಜಾ] ಪ್ರಜೆಗಳೆಲ್ಲರಿಗೂ ರಾಜನಾದ [ಪುರುಹೂತಃ ಇಂದ್ರಃ] ಬಹುಸ್ತುತ್ಯನಾದ ಸರ್ವಶಕ್ತಿಮಾನ್ ಪ್ರಭುವಾಗಿದ್ದಾನೆ - ಎಂದು ಹೇಳುತ್ತಲಿದೆ.
ವೇದಗಳ ಪ್ರಕಾರ ಅವನು (ಪರಮಾತ್ಮನು) ಸಚ್ಚಿದಾನಂದಸ್ವರೂಪನಾಗಿದ್ದಾನೆ. ಸತ್ ಎಂದರೆ ಸತ್ಯಸ್ವರೂಪನು. ಋಗ್ವೇದ;
ಸೈನಂ ಸಶ್ಚದ್ ದೇವೋ ದೇವಂ ಸತ್ಯಮಿಂದ್ರಂ ಸತ್ಯ ಇಂದುಃ|| (ಋಕ್. ೨.೨೨.೧)
-ಎಂದರೆ, [ಸ ದೇವಃ ಸತ್ಯ ಇಂದುಃ] ಆ ಉದಾರನಾದ ಸತ್ಯನಾದ ಜೀವಾತ್ಮನು [ಏನಂ ದೇವಂ ಸತ್ಯಂ ಇಂದ್ರಂ] ಈ ದೇವನಾದ ಸತ್ಯನಾದ ಸರ್ವಶಕ್ತಿಮಾನ್ ಪ್ರಭುವನ್ನು [ಸಶ್ಚತ್] ಸೇರುತ್ತಾನೆ - ಎಂದು ವರ್ಣಿಸಿದೆ. ಆ ಪರಮಾತ್ಮನು ಚಿತ್ ಎಂದರೆ ಚೇತನನಾಗಿದ್ದಾನೆ.
ಋಗ್ವೇದ,
ಹೋತಾಜನಿಷ್ಟ ಚೇತನಃ ಪಿತಾ ಪಿತೃಭ್ಯ ಊತಯೇ|| (ಋಕ್. ೨.೫.೧.) -
ಎಂದರೆ [ಚೇತನಾ ಹೋತಾ ಪಿತಾ] ಚೇತನನೂ, ಸರ್ವಧಾತೃವೂ, ಎಲ್ಲರ ತಂದೆಯೂ ಆದ ಭಗವಂತನು [ಪಿತೃಭ್ಯ ಊತಯೇ] ಪಾಲಕರಾದ ಲೌಕಿಕ ಪಿತೃಗಳ ರಕ್ಷಣೆಗೆ [ಅಜನಿಷ್ಟ] ಪ್ರಸಿದ್ಧನಾಗಿದ್ದಾನೆ - ಎಂದು ಸಾರಿದೆ. ಅದೇ ರೀತಿ ಪರಮಾತ್ಮ, ಆನಂದಸ್ವರೂಪನೂ ಆಗಿದ್ದಾನೆ.
ನಾವು ಅಥರ್ವವೇದದಲ್ಲಿ -
ಸ್ವರ್ಯಸ್ಯ ಚ ಕೇವಲಂ ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ|| (ಅಥರ್ವ. ೧೦.೮.೧)
ಎಂದರೆ [ಯಸ್ಯ ಸ್ವಃ ಕೇವಲಂ] ಯಾವನ ಆನಂದವು ಪರಿಶುದ್ಧವಾಗಿದೆಯೋ, [ತಸ್ಮೈ ಜ್ಯೇಷ್ಟಾಯ ಬ್ರಹ್ಮಣೇ ನಮಃ] ಆ ಜ್ಯೇಷ್ಟ ಪ್ರಭುವಿಗೆ ನಮಸ್ಕಾರ -
ಎಂದು ಓದುತ್ತೇವೆ.
Recent Comments