Category Archive: ಸಂಪಾದಕೀಯ

ಬಾಲ ಸಂಸ್ಕಾರ ಶಿಬಿರ

ವೇದಾಭಿಮಾನಿಗಳೇ,

ಕಳೆದ ಕೆಲವು ದಿನಗಳಿಂದ ವೇದ ಪಾಠವನ್ನು ಅಪ್ ಲೋಡ್ ಮಾಡಲು ಸಮಯಾವಕಾಶ ಆಗಿರಲಿಲ್ಲ. ಈಗಾಗಲೇ ಆಗಿರುವ ಪಾಠಗಳು ಇನ್ನೂ ಇವೆ. ಕಳೆದ ಭಾನುವಾರದ ಪಾಠವನ್ನು  ವೇದಸುಧೆ ಪ್ರಕಟಿಸಿದೆ.

ಬಾಲ ಸಂಸ್ಕಾರ ಶಿಬಿರ:

ಬರುವ ಏಪ್ರಿಲ್ 7 ರಿಂದ 17 ರ ವರಗೆ ಹಾಸನದಲ್ಲಿ ಬಾಲ ಸಂಸ್ಕಾರ ಶಿಬಿರವನ್ನು ನಡೆಸಲಾಗುವುದು. ಬೆಳಿಗ್ಗೆ 9.30 ರಿಂದ 12.30 ರವರಗೆ ನಡೆಯುವ  ಈ ಶಿಬಿರದಲ್ಲಿ ಐದನೇ ತರಗತಿಯಿಂದ ಒಂಬತ್ತನೇ ತರಗತಿಯ ಮಕ್ಕಳು ಭಾಗವಹಿಸಬಹುದು. ಮಕ್ಕಳಿಗೆ ವೇದದ ಪರಿಚಯದ ಜೊತೆಗೆ ನೀತಿ ಕಥೆಗಳು, ರಾಷ್ಟ್ರ ಭಕ್ತಿ ಪ್ರೇರೇಪಿಸುವ  ಹಾಡುಗಳನ್ನು ಕಲಿಸಲಾಗುವುದು.

Permanent link to this article: http://www.vedasudhe.com/%e0%b2%ac%e0%b2%be%e0%b2%b2-%e0%b2%b8%e0%b2%82%e0%b2%b8%e0%b3%8d%e0%b2%95%e0%b2%be%e0%b2%b0-%e0%b2%b6%e0%b2%bf%e0%b2%ac%e0%b2%bf%e0%b2%b0/

ಯಾರು ನಮಸ್ಕಾರಕ್ಕೆ ಯೋಗ್ಯರು?

ಯಾರು ನಮಸ್ಕಾರಕ್ಕೆ ಯೋಗ್ಯರು?  ಎಂಬುದಕ್ಕೆ ನಮ್ಮ ಸೂಕ್ತಕಾರರು ಕೊಡುವ ವಿವರಣೆಯನ್ನು ನೋಡಿದರೆ ಆಶ್ಚರ್ಯವಾಗದಿರದು. ಒಂದು ಸೂಕ್ತದ ಸುತ್ತ ಇಂದಿನ ಚಿಂತನ ನಡೆಸಬೇಕೆನಿಸಿದೆ.

ವಾಂಛಾ ಸಜ್ಜನ ಸಂಗತೌ ಪರಗುಣೇ ಪ್ರೀತಿರ್ಗುರೌ ನಮ್ರತಾ |

ವಿದ್ಯಾಯಾಂ ವ್ಯಸನಂ  ಸ್ವಯೋಷಿತಿ ರತಿರ್ಲೋಕಾಪವಾದಾದ್ಭಯಮ್ ||

ಭಕ್ತಿಃ ಶೂಲಿನಿ  ಶಕ್ತಿರ್ ಆತ್ಮ ದಮನೇ ಸಂಸರ್ಗ ಮುಕ್ತಿಃ ಖಲೈಃ |

 ಏತೇ ಯೇಷು ವಸಂತಿ  ನಿರ್ಮಲಗುಣಾಸ್ತೇಭ್ಯೋ ಮಹದ್ಭ್ಯೋ ನಮಃ || 

ಸಜ್ಜನರ ಸಹವಾಸದಲ್ಲಿ ಆಸೆ, ಪರರ ಗುಣಗಳಲ್ಲಿ ಪ್ರೀತಿ, ಗುರುವಿನಲ್ಲಿ ವಿಧೇಯತೆ, ವಿದ್ಯೆಯಲ್ಲಿ ಆಸಕ್ತಿ,ತನ್ನ ಪತ್ನಿಯಲ್ಲಿ ಸುಖಪಡುವಿಕೆ, ಲೋಕಾಪವಾದದದೆಸೆಯಿಂದ ಹೆದರಿಕೆ, ದೇವರಲ್ಲಿ ಭಕ್ತಿ, ಮನಸ್ಸನ್ನು ನಿಗ್ರಹಿಸುವುದರಲ್ಲಿ ಶಕ್ತಿ, ದುರ್ಜನರೊಡನೆ ಸಹವಾಸತ್ಯಾಗ, ಈ ನಿರ್ಮಲವಾದ ಗುಣಗಳು ಯಾರಲ್ಲಿರುತ್ತವೆಯೋ ಅಂತಹ ಮಹಾತ್ಮರಿಗೆ ನಮಸ್ಕಾರ.”

ಸಜ್ಜನರ ಸಹವಾಸ:

ಎಂತಹ ಜನರಿಗೆ ನಮಸ್ಕರಿಸಬೇಕು? ನಮಸ್ಕಾರಕ್ಕೆ  ಅರ್ಹ ವ್ಯಕ್ತಿಗಳ ಮೊದಲನೆಯ ಗುಣವೇ ಸಜ್ಜನ ಸಹವಾಸ. ಸರ್ವಜ್ಞ ವಚನದಲ್ಲಿ ಸಜ್ಜನರ ಸಹವಾಸವನ್ನು ಚೆನ್ನಾಗಿ ಬಣ್ಣಿಸಲಾಗಿದೆ. “ ಸಜ್ಜನರ ಒಡನಾಟ ಹೆಜ್ಜೇನು ಸವಿದಂತೆ, ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ. ಸಜ್ಜನನಾರು, ದುರ್ಜನನಾರು ಎಂದು ತಿಳಿಯಲು ಬಹಳಕಾಲ ಬೇಕಾಗುವುದಿಲ್ಲ. ಸೂಕ್ತಕಾರರು ಹೇಳುತ್ತಾರೆ….. “ ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಂ” ಅಂದರೆ ಮನಸ್ಸಿನಲ್ಲೂ ಮಾತಿನಲ್ಲೂ ಮತ್ತು ಕರ್ಮದಲ್ಲೂ ಒಂದೇ ಆಗಿರುವವರು ಮಹಾತ್ಮರು ಅಥವಾ ಸಜ್ಜನರು.  ವ್ಯಕ್ತಿಗಳ ನಡವಳಿಕೆಗಳಲ್ಲಿಯೇ ವೆತ್ಯಾಸವು ತಿಳಿಯದೆ ಇರದು. ಹೀಗೆ ಸಜ್ಜನನಾರು ಎಂದು ತಿಳಿದು ಅಂತವರ ಸಹವಾಸ ಮಾಡುವಂತಹ ಆಸೆಯುಳ್ಳವನು ನಮಸ್ಕಾರಕ್ಕೆ ಯೋಗ್ಯನು.

ಪರರ ಗುಣಗಳಲ್ಲಿ ಪ್ರೀತಿ:

ಎರಡನೆಯ ಯೋಗ್ಯತೆ ಎಂದರೆ ಪರರ ಗುಣಗಳಲ್ಲಿ ಪ್ರೀತಿ. ಸಾಮಾನ್ಯವಾಗಿ ಎಲ್ಲರಿಗೂ ತನ್ನನ್ನು ಬಣ್ಣಿಸಿಕೊಳ್ಳುವ ಪರಿಪಾಠ. ಅಂತರಂಗ ಶುದ್ಧಿಯ ಬಗ್ಗೆ  ಬಸವಣ್ಣನವರು ಹೇಳುತ್ತಾರೆ ” ತನ್ನ ಬಣ್ಣಿಸಬೇಡ, ಇದಿರಹಳಿಯಲು ಬೇಡ” ಮನುಶ್ಯನಿಗಿರುವ ಈ ದೌರ್ಬಲ್ಯವನ್ನು ಮೆಟ್ಟಿನಿಲ್ಲುವುದು ಬಲು ಕಷ್ಟ.ಸಾಮಾನ್ಯವಾಗಿ ಒಂದು ಚಿಕ್ಕ ಸಹಾಯವನ್ನು ನಾವು ಇತರರಿಗೆ ಮಾಡಿದ್ದರೂ ಅದನ್ನು ಬಲು ದೊಡ್ಡದು ಮಾಡಿ ಸಿಕ್ಕಿದವರಿಗೆಲ್ಲಾ ಹೇಲಿದ್ದೇ ಹೇಳಿದ್ದು, ಜಂಬಾ ಕೊಚ್ಚಿಕೊಂಡಿದ್ದೇ ಕೊಚ್ಚಿಕೊಂಡಿದ್ದು! ಅದು ಎಷ್ಟೇ ದೊಡ್ದದಿರಲಿ ಮತ್ತೊಬ್ಬರ ಸದ್ಗುಣಗಳನ್ನು ಗುರುತಿಸುವ ಕೆಲಸವನ್ನು ನಾವು ಮಾಡುವುದಿಲ್ಲ.ಆದರೆರು  ಯಾರು ಇನ್ನೊಬ್ಬರ ಸದ್ಗುಣವನ್ನು ಪ್ರೀತಿಸುತ್ತಾನೆ, ಅವನಿಗೆ ನಮಸ್ಕರಿಸು, ಎಂದು ಈ ಸೂಕ್ತವು ಕರೆಕೊಡುತ್ತದೆ. 

ಗುರುವಿನಲ್ಲಿ ವಿಧೇಯತೆ:

“ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ” ಗುರುವಿನ ಮಹತ್ವವನ್ನು ದಾಸರು ಚೆನ್ನಾಗಿ ಬಣ್ಣಿಸಿದ್ದಾರೆ. ಗುರು ಅಂದರೆ ಯಾರು?  ಎಂಬ ಪ್ರಶ್ನೆ ಸಹಜವಾಗಿ ಬರುತ್ತದೆ. ಯಾರು ಅಜ್ಞಾನದ ಅಂಧಕಾರದಿಂದ ಸುಜ್ಞಾನದ ದ ಕಡೆಗೆ ಕರೆದುಕೊಂಡು    ಹೋಗುತ್ತಾನೋ ಅವನು ಗುರು ಎನಿಸಿಕೊಳ್ಳುತ್ತಾನೆ. ಜೀವನದಲ್ಲಿ ಮುನ್ನಡೆಯಬೇಕಾದರೆ ಒಬ್ಬ ಗುರುವಿನ ಅವಶ್ಯಕತೆ ಇದೆ. ಅಂತವನಿಗೆ ವಿಧೇಯನಾಗಿರು. ಅಂತವನು ನಮಸ್ಕರಿಸಿಕೊಳ್ಳಲು ಯೋಗ್ಯ.

ವಿದ್ಯೆಯಲ್ಲಿ ಆಸಕ್ತಿ:

ವಿದ್ಯೆಯಲ್ಲಿ ಆಸಕ್ತಿಹೊಂದಿದವನು ನಮಸ್ಕಾರಕ್ಕೆ ಯೋಗ್ಯ. ಹಾಗಾದರೆ ವಿದ್ಯೆ ಎಂದರೇನು? ಎಂಬ ಅರಿವಿರಬೇಕಲ್ಲವೇ? ವೇದವು ಹೇಳುತ್ತದೆ “ ಸಾ ವಿದ್ಯಾ  ಯಾ ವಿಮುಕ್ತಯೇ” ಅಂದರೆ ಮನುಷ್ಯನನ್ನು ಎಲ್ಲಾ ಬಂಧನದಿಂದ ಬಿಡುಗಡೆಗೊಳಿಸುವುದು ವಿದ್ಯೆ. ವಿದ್ಯೆ ಅಂದರೆ ನಾವೆಲ್ಲಾ ತಿಳಿದಿರುವುದೇ ಬೇರೆಯಲ್ಲವೇ? ವಿದ್ಯಾವಂತನೆಂದರೆ ಅವನು ಯಾವುದಾದರೂ ಪದವಿ[ಡಿಗ್ರೀ] ಪಡೆದಿರಬೇಕು. ಪದವಿ ಯಾಕಾಗಿ? ಒಂದು ನೌಕರಿಗಾಗಿ. ಯಾರೋ ಒಬ್ಬರ ಕೈ ಕೆಳಗೆ ಕೆಲಸ ಮಾಡಲು ಪಡೆಯುವ ಪದವಿಯು ವಿದ್ಯೆ ಎನಿಸಿಕೊಳ್ಳುತ್ತದೆಯೇ? ಎರಡುಹೊತ್ತಿನ ಹೊಟ್ಟೆಪಾಡಿಗೆ ಅಗತ್ಯವಾದ ನೌಕರಿ ಮಾಡಲು ಅಗತ್ಯವಿರುವ ಯಾವುದೇ ಪದವಿಯನ್ನು  ವಿದ್ಯೆ ಎನ್ನಲಾದೀತೇ? ವೇದದ ಪ್ರಕಾರ ಇದೆಲ್ಲಾ ವಿದ್ಯೆಯೇ ಅಲ್ಲ. ಕಾರಣ. ಹೆಚ್ಚು ಹೆಚ್ಚು ಪದವಿ ಪಡೆದಷ್ಟೂ ಹೆಚ್ಚು ಹೆಚ್ಚು ಬಂಧನಗಳು ಅಂಟಿಕೊಳ್ಳುತ್ತವೆ. ಪಡೆದ ಪದವಿಯಿಂದ ಉದ್ಯೋಗ, ಕೀರ್ತಿ, ಪ್ರಸಿದ್ಧಿ, ಸಂಸಾರ, ಹೀಗೆ ಒಂದರಮೇಲೊಂದು ಬಂಧನಗಳು ಸೇರಿಕೊಳ್ಳುತ್ತಾ ಹೋಗುತ್ತವೆ. ಅಂದರೆ ಮದುವೆಯಾಗುವುದಾಗಲೀ, ನೌಕರೀ ಮಾಡುವುದಾಗಲೀ ಬಂಧನವೆಂದು ತಿಳಿಯಬೇಕಾಗಿಲ್ಲ. ಆದರೆ ಸಾಮಾನ್ಯವಾಗಿ   ಮನುಷ್ಯನು ಅಲ್ಪ ತೃಪ್ತನಲ್ಲ.ಒಂದು ಪಡೆದ ನಂತರ ಮತ್ತೊಂದು ಪಡೆಯುವ ಆಸೆ ಸಹಜವಾಗಿರುತ್ತದೆ. ಆದರೆ ಇಷ್ತಕ್ಕೇ ನಿಲ್ಲದೆ ವಿದ್ಯೆಯ ನಿಜವಾದ ಅರ್ಥ ತಿಳಿದು ಕಮಲದ ಎಲೆಯ ಮೇಲಿನ ನೀರಿನಂತೆ ಸಂಸಾರದಲ್ಲಿ ಇದ್ದೂ ಅದಕ್ಕೇ ಅಂಟಿಕೊಳ್ಳದೆ ಎಲ್ಲಾ ಬಂಧನಗಳಿಂದಲೂ ಮುಕ್ತನಾಗಿರುವ ಸ್ವಭಾವವನ್ನು ಕಲಿತರೆ ಅದು ವಿದ್ಯೆ. ಅಂತಹ ವಿದ್ಯೆಯಲ್ಲಿ ಆಸಕ್ತಿ ಇರಬೇಕು. 

ತನ್ನ ಪತ್ನಿಯಲ್ಲಿ ಸುಖ:

ಇದು ಒಬ್ಬ ಸದ್ಗೃಹಸ್ತನಿಗೆ ಇರಲೇಬೇಕಾದ ಗುಣ. ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಯುವಜನತೆಯ ಕಣ್ ತೆರೆಸುವ ಉಕ್ತಿ ಇದಾಗಿದೆ. ಶ್ರೀ ರಾಮಚಂದ್ರನಿಗೆ ಏಕ ಪತ್ನೀವ್ರತಸ್ಥನೆಂಬುದೇ ಹೆಗ್ಗಳಿಕೆ. ಇಂದಿನ ಸಮಾಜವು ಸ್ವಾಸ್ಥ್ಯಪೂರ್ಣವಾಗಿರಬೇಕಾದರೆ ಈ ವ್ರತವನ್ನು ಎಲ್ಲರೂ ಆಚರಿಸುವುದು ಅನಿವಾರ್ಯ. ಈ ವ್ರತಬಂಗದ ಕಾರಣದಿಂದಲೇ    ಸಮಾಜದಲ್ಲಿ ಹರಡುತ್ತಿರುವ ಗುಪ್ತರೋಗಗಳು ಮತ್ತು ಮಾನಸಿಕ ಅಸ್ವಾಸ್ಥ್ಯ! ಅಪರಾಧಗಳು! ಆತ್ಮಹತ್ಯೆಗಳು!! ಕಾಯ ವಾಚಾ ಮನಸಾ ಈ ವ್ರತವನ್ನು ಪಾಲಿಸಿದ್ದೇ ಆದರೆ ಆ ಕುಟುಂಬವೇ ಸುಖೀ ಕುಟುಂಬ. 

ಲೋಕಾಪವಾದದದೆಸೆಯಿಂದ ಹೆದರಿಕೆ:

ಲೋಕಕ್ಕೆ ಅಂಜಿ ನಡೆಯುವ ಬುದ್ಧಿ. ಇದು ಒಬ್ಬ ಸಜ್ಜನನಿಗೆ ಇರಲೇ ಬೇಕಾದ ಒಂದು ಗುಣ.ತಾನು ಏನು ಕೆಲಸ ಮಾಡುತ್ತಿದ್ದರೂ ಸಹ ತಾನು ಮಾಡುವ ಕೆಲಸವನ್ನು ಈ ಸಮಾಜವು ಗಮನಿಸುತ್ತಿದೆ! ಎಂಬ ಭಯ ಇರಬೇಕು. ಆಗ ತನ್ನಿಂದ ಕೆಟ್ಟ   ಕೆಲಸ ಆಗುವ ಅವಕಾಶವೇ ಇಲ್ಲ. ಮನುಷ್ಯನ ಸಹಜ ಗುಣವೆಂದರೆ ಆಸೆ. ಈ ಆಸೆ ಎಂಬುದು ಹಲವು ವೇಳೆ ವ್ಯಕ್ತಿಯನ್ನು ಅಂಧನನ್ನಾಗಿ ಮಾಡಿರುತ್ತದೆ. ನಮ್ಮ ಪಂಚೇಂದ್ರಿಯಗಳೆಲ್ಲವೂ ಹೊರಮುಖವಾಗಿಯೇ ಇವೆ. ಯಾವಾಗಲೂ ಹೊರಗಿನ ಆಕರ್ಷಣೆಗಳು ನಮ್ಮನ್ನು ಸಹಜವಾಗಿ ಸೆಳೆಯುತ್ತವೆ. ಆಗ ಸಮಾಜವೆಂಬುದು ಸಾಕ್ಷಿಯಾಗಲಿದೆ ಎಂಬ ಭಯವಿದ್ದರೆ ತನ್ನಿಂದ ಕೆಟ್ಟ  ಕೆಲಸಗಳಾಗಲಾರವು. 

ದೇವರಲ್ಲಿ ಭಕ್ತಿ:

ಮನುಷ್ಯನು ಎಷ್ಟೇ ಬುದ್ಧಿವಂತನಾದರೂ ಅವನ ಕಲ್ಪನೆಗೆ ನಿಲುಕದ ಹಲವು ಸಂಗತಿಗಳ ನಿತ್ಯ ಅನುಭವ ಮನುಷ್ಯನಿಗೆ ಆಗುತ್ತದೆ. ಆದ್ದರಿಂದ ಮನುಷ್ಯನು ತಾನು ಏನೇ ಪ್ರಯತ್ನ ಮಾಡಿದರೂ, ಎಷ್ಟೇ ಶ್ರಮವನ್ನು ಹಾಕಿದರೂ ಸಹ ತನ್ನ ಕಲ್ಪನೆಯನ್ನು ಮೀರಿದ ಒಂದು ಶಕ್ತಿ ಇದೆಯಾದ್ದರಿಂದ ಆ ಭಗವಚ್ಚಕ್ತಿಗೆ ತಲೆಬಾಗಿ ತಾನು ಮಾಡುವ ಎಲ್ಲಾ ಕರ್ತವ್ಯವನ್ನೂ ನಿರ್ವಹಿಸಿ ಪರಿಣಾಮವನ್ನು ಭಗವಚ್ಚಕ್ತಿಗೆ ಬಿಟ್ಟುಬಿಟ್ಟರೆ ಮನುಷ್ಯನು ನಿರಾಳವಾಗಿರಬಹುದು. ಆದ್ದರಿಂದ  ದೇವರಲ್ಲಿ ಭಕ್ತಿಯಿಟ್ಟು ತನ್ನ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡಿ ಇನ್ನು  “ ಎಲ್ಲವೂ ಅವನದೇ ಎಂದು” ನಂಬುವವನು ನಮಸ್ಕಾರಕ್ಕೆ ಯೋಗ್ಯನಾಗಿರುತ್ತಾನೆ. 

ಮನೋನಿಗ್ರಹ:

ಮನೋನಿಗ್ರಹ ವೆಂಬುದು ಅತಿ ಕಷ್ಟಕರ ಸಂಗತಿ. ಮನುಷ್ಯನಿಗೆ ಅದು ಬೇಕು, ಇದು ಬೇಕು, ಎಲ್ಲವೂ ಬೇಕೆಂಬುದು ಅತ್ಯಂತ ಸಹಜವಾದ ಗುಣ. ಬಾಯಲ್ಲಿ ನೀರೂರಿದಾಗ ಬೇಡವೆಂದು ಕಡಿವಾಣ ಹಾಕುವುದು ನಿಗ್ರಹ.ಇದು ಎಲ್ಲರಿಗೂ ಸಾಧ್ಯವಿಲ್ಲ. ಇದಕ್ಕೆ ತಪಸ್ಸು ಬೇಕು, ಸಾಧನೆ ಬೇಕು.  ಈ ಒಂದು ಸಾಧನೆ ಮಾಡಿದ್ದೇ ಆದರೆ ಮನುಷ್ಯನು ಅತ್ಯಂತ ಸುಖಿ. ಇವನೇ ಮಹಾತ್ಮ.

 ದುರ್ಜನರ ಸಂಗ ತ್ಯಜಿಸುವುದು:

ದುರ್ಜನರ ಕೂಟ ಬಚ್ಚಲಿನ ಕೊಚ್ಚೆಯಂತಕ್ಕು ಸರ್ವಜ್ಞ.ಎಂಬುದನ್ನು ಈಗಾಗಲೇ ನೆನಪು ಮಾಡಿದ್ದಾಗಿದೆ. ಇವನು ದುರ್ಜನನೆಂದು ಅರಿಯುವುದು ಹೇಗೆ? ಅದಕ್ಕೆ ಹಿರಿಯರು ಹೇಳುತ್ತಾರೆ….

“ಮನಸ್ಸನ್ಯತ್, ವಚಸ್ಸನ್ಯತ್,ಕರ್ಮಣ್ಯನ್ಯತ್ ದುರಾತ್ಮನಾಮ್” ಅಂದರೆ ಮನಸ್ಸಿನಲ್ಲಿ ಒಂದು,ಮಾತಿನಲ್ಲಿ ಒಂದು ಮತ್ತು  ಕ್ರಿಯೆಯಲ್ಲಿ ಮತ್ತೊಂದು ಮಾಡುವವನು ದುರಾತ್ಮನು. ಅವನ ಸಹವಾಸ ಮಾಡಬೇಡ. ಅಂತವರ ಸಂಗವನ್ನು ತ್ಯಜಿಸುವವನು ನಮಸ್ಕಾರಕ್ಕೆ    ಯೋಗ್ಯನು.

Permanent link to this article: http://www.vedasudhe.com/%e0%b2%af%e0%b2%be%e0%b2%b0%e0%b3%81-%e0%b2%a8%e0%b2%ae%e0%b2%b8%e0%b3%8d%e0%b2%95%e0%b2%be%e0%b2%b0%e0%b2%95%e0%b3%8d%e0%b2%95%e0%b3%86-%e0%b2%af%e0%b3%8b%e0%b2%97%e0%b3%8d%e0%b2%af%e0%b2%b0%e0%b3%81/

ಕಲ್ಯಾಣಮಾರ್ಗದಲ್ಲಿ ನಿಮ್ಮ ಜೀವನ ರಥ ಸಾಗಲಿ…..

ವೇದಮಂತ್ರಗಳ ಅರ್ಥ ತಿಳಿಯುತ್ತಾ ಹೋದಂತೆ ಮನಸ್ಸು ಮುದಗೊಳ್ಳುತ್ತದೆ,ಜೊತೆಯಲ್ಲೇ ಇಂತಾ ಜ್ಞಾನದ ಸರಿಯಾದ ಪ್ರಚಾರ ಪ್ರಸಾರ ಆಗಲಿಲ್ಲವಲ್ಲಾ! ಎಂಬ ಬಗ್ಗೆ ಮನಸ್ಸು ಚಿಂತೆಗೀಡಾಗುತ್ತದೆ.ಕಾರಣ ಏನಾದರೇನು, ಇನ್ನೂ ಅಳಿಯದೆ ಉಳಿದಿದೆಯಲ್ಲಾ!! ಅದೇ ಸಮಾಧಾನ. ವೇದ ಮಂತ್ರವನ್ನು ಕಲಿಸುತ್ತಿರುವ ವೇದ ವಿದ್ವಾಂಸರು ಮಂತ್ರಗಳ ಅರ್ಥವನ್ನೂ ತಿಳಿಸುತ್ತಾ ಅರ್ಥಾನುಸಂಧಾನ ಮಾಡಿಸುತ್ತಾ ವೇದಪಾಠವನ್ನು ಮಾಡಿದಾಗ ಕಲಿಯುತ್ತಿರುವ ವಿದ್ಯಾರ್ಥಿಯು ಸಮಾಜಾಭಿಮುಖವಾಗಿ ಬೆಳೆಯಲು ಅವಕಾಶವಾಗುತ್ತದೆ.

ಇಂದಿನ ವೇದ ಮಂತ್ರದ ಬಗ್ಗೆ ಸ್ವಲ್ಪ ವಿಮರ್ಶೆ ಮಾಡೋಣ.
ಋಗ್ವೇದ ಮಂಡಲ: 5 ಸೂಕ್ತ: 55 ಮಂತ್ರ: 8

ಯತ್ ಪೂರ್ವ್ಯಂ ಮರುತೋ ಯಚ್ಚ ನೂತನಂ ಯದುದ್ಯತೇ
ವಸವೋ ಯಚ್ಚ ಶಸ್ಯತೇ|
ವಿಶ್ವಸ್ಯ ತಸ್ಯ ಭವಥಾ ನವೇದಸ:
ಶುಭಂ ಯಾತಾಮನು ರಥಾ ಅವೃತ್ಸತಾ||

ಮರುತ:= ಸತ್ಯಕ್ಕಾಗಿ ಪ್ರಾಣ ನೀಡಲು ಸಿದ್ಧರಿರುವ ಧೀರರೇ
ವಸವ:= ಮಾನವರೇ
ನವೇದಸ:= ನೀವು ವಿದ್ಯಾರಹಿತರಾಗಿದ್ದೀರಿ
ಯತ್ ಪೂರ್ವ್ಯಂ = ಯಾವುದು ಪ್ರಾಚೀನವೋ ಚ= ಮತ್ತು
ಯತ್ ನೂತನಂ= ಯಾವುದು ನೂತನವೋ
ಯತ್ ಉದ್ಯತೇ= ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುತ್ತದೋ
ಚ = ಮತ್ತು
ಯತ್ ಶಸ್ಯತೇ = ಯಾವುದು ಶಾಸ್ತ್ರ ರೂಪದಲ್ಲಿ ಉಪದೇಶಿಸಲ್ಪಡುತ್ತದೋ
ತಸ್ಯ ವಿಶ್ವಸ್ಯ ಭವಥ = ಅಂತಹ ಎಲ್ಲದಕ್ಕೂ ಕಿವಿಗೊಡಿ
ಶುಭಂ ಯಾತಾಂ ಅನು = ಕಲ್ಯಾಣ ಮಾರ್ಗದಲ್ಲಿ ನಡೆವವರ ಹಿಂದೆ
ರಥಾ: ಅವೃತ್ಸತ = ನಿಮ್ಮ ಜೀವನ ರಥಗಳು ತೆರಳಲಿ

ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ…

ಹೇ ಮನುಜರೇ, ನೀವು ವಿದ್ಯಾರಹಿತರಾಗಿದ್ದೀರಿ[ ವಿದ್ಯೆ ಅವಿದ್ಯೆ ಯ ಅರ್ಥವನ್ನು ಮುಂದಿನ ದಿನಗಳಲ್ಲಿ ನೋಡೋಣ] ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ….
ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡಿ….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…..
ವೇದದ ಈ ಕರೆ ಯಾರಿಗೆ ಬೇಡ ? ಯಾವ ಕಾಲಕ್ಕೆ ಬೇಡ ? ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ? ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ!! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

Permanent link to this article: http://www.vedasudhe.com/%e0%b2%95%e0%b2%b2%e0%b3%8d%e0%b2%af%e0%b2%be%e0%b2%a3%e0%b2%ae%e0%b2%be%e0%b2%b0%e0%b3%8d%e0%b2%97%e0%b2%a6%e0%b2%b2%e0%b3%8d%e0%b2%b2%e0%b2%bf-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%9c/

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ

ಪಂಡಿತ್ ಸುಧಾಕರ ಚತುರ್ವೇದಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿದೆ.  ಇದೇ ಗುರುವಾರ ಬೆಂಗಳೂರಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಸರ್ಕಾರವು ಪಂಡಿತರನ್ನು ಸನ್ಮಾನಿಸಲಿದೆ. 116 ವರ್ಷ ವಯೋವೃದ್ಧರಾದ        ಚತುರ್ವೇದಿಗಳು ಒಂದು ನೂರುವರ್ಷಗಳಿಂದ ನಾಲ್ಕೂ ವೇದಗಳನ್ನು ಅಭ್ಯಾಸಮಾಡುತ್ತಿದ್ದಾರೆಂಬುದು ಅತ್ಯಂತ ಸಂತಸದ ಮತ್ತು ಆಶ್ಚರ್ಯದ ಸಂಗತಿಯೂ ಹೌದು. ವೇದಸುಧೆಯು ಪಂಡಿತರಿಗೆ ಸಾಸ್ಟಾಂಗ ಪ್ರಣಾಮಗಳನ್ನು ಸಲ್ಲಿಸುತ್ತದೆ.

 

-ಹರಿಹರಪುರಶ್ರೀಧರ್

ಸಂಪಾದಕ, ವೇದಸುಧೆ/ವೇದಭಾರತೀ

Permanent link to this article: http://www.vedasudhe.com/%e0%b2%aa%e0%b2%82%e0%b2%a1%e0%b2%bf%e0%b2%a4%e0%b3%8d-%e0%b2%b8%e0%b3%81%e0%b2%a7%e0%b2%be%e0%b2%95%e0%b2%b0-%e0%b2%9a%e0%b2%a4%e0%b3%81%e0%b2%b0%e0%b3%8d%e0%b2%b5%e0%b3%87%e0%b2%a6%e0%b2%bf%e0%b2%97/

ಮುಕ್ತ ಸಂವಾದವು ವಿಶೇಷ ವೇದಪಾಠವೇ ಆಗಿದೆ

ಮಿತ್ರ ಮಹೇಶ್ ಪ್ರಸಾದ್ ರವರನ್ನು ವೇದಸುಧೆ ಮರೆತಿದೆ ಎಂದು ಭಾವಿಸಿ ನೆನಪು ಮಾಡಿ ಮೇಲ್ ಮಾಡಿದ್ದಾರೆ. ವೆಬ್ ಸೈಟ್ ಮೂಲಕ ಮಂತ್ರ ಕಲಿಯುತ್ತಿರುವವರ ಸಾಲಿನಲ್ಲಿ ಮಹೇಶ್ ಪ್ರಸಾದರೂ ಸೇರಿದ್ದಾರೆಂಬುದು ವೇದಸುಧೆಗೆ ಸಂತಸದ ವಿಷಯ. ಇನ್ನೂ ನೂರಾರು ಜನರಿಗೆ ಶ್ರೀಯುತರ ಪತ್ರ ಪ್ರೇರಣೆ ನೀಡಲಿ, ಎಂಬುದಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ. ದಿನಾಂಕ 30.9.2012 ರಂದು ಶ್ರೀ ಸುಧಾಕರಶರ್ಮರೊಡನೆ ನಡೆದ ಮುಕ್ತ ಸಂವಾದ ಕಾರ್ಯಕ್ರಮದ ನಂತರ ವೇದಪಾಠಕ್ಕೆ ಹೊಸದಾಗಿ ಸೇರುತ್ತಿರುವವರ ಸಂಖ್ಯೆ ಹೆಚ್ಚಿದೆ. ಆಕಾರಣದಿಂದ ಹೊಸಬರನ್ನು ಎಲ್ಲರೊಡನೆ ಕರೆದುಕೊಂದು ಹೋಗಬೇಕಾದ್ದರಿಂದ ಇನ್ನು ಎರಡು ಮೂರು ಪಾಠಗಳು ಪುನಾರವರ್ತನೆಯಾಗುತ್ತವೆ.ಶ್ರೀ ಸುಧಾಕರಶರ್ಮರೊಡನೆ ನಡೆದ ಮುಕ್ತ ಸಂವಾದ ವೀಡಿಯೋ ವನ್ನು ಹಳೆಯ ವಿದ್ಯಾರ್ಥಿಗಳು ದಿನಕ್ಕೆ ಹತ್ತು ನಿಮಿಷ ನೋಡಬೇಕೆಂದು ವೇದಸುಧೆಯು ಬಯಸುತ್ತದೆ. ಕಾರಣ ಇದೂ ಕೂಡ ವಿಶೇಷ ವೇದಪಾಠವೇ ಆಗಿದೆ.ಮುಕ್ತ ಸಂವಾದದ ಪೂರ್ಣ ವೀಡಿಯೋ ಕ್ಲಿಪ್ ಗಳು ಹಂತ ಹಂತವಾಗಿ ನಿತ್ಯವೂ ಪ್ರಕಟ ಗೊಳ್ಳುತ್ತವೆ. ನಿಮಗೆ ಎದುರಾಗುವ ಸಂದೇಹಗಳನ್ನು ವೇದಸುಧೆಗೆ ಬರೆದರೆ ಶ್ರೀ ಸುಧಾಕರಶರ್ಮರು ಉತ್ತರಿಸುವರು.

————————————————————–

ಮಾನ್ಯ ಶ್ರೀಧರ್ ಅವರೇ,

ನನ್ನ ಹೆಸರು ತಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಹಾಸನದಲ್ಲಿ ನಡೆದ ವೇದಸುಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ನಾನು. ಇತ್ತೀಚೆಗೆ ಕಾರ್ಯನಿಮಿತ್ತ ಅಷ್ಟೊಂದು ಬಿಡುವಿಲ್ಲದಿದ್ದರಿಂದ ವೇದಸುಧೆ ಕಡೆಗೆ ಗಮನ ಕಡಿಮೆಯಾಗಿತ್ತು. ಆದರೆ ನಮ್ಮ ವೇದದ ಚಿಂತನೆಗಳು ನನ್ನನ್ನು ಸುಮ್ಮನೆ ಬಿಡುತ್ತವೆಯೇ? ಹಾಗಾಗಿ ವೇದಸುಧೆ ಮೇಲೆ ಹೀಗೆಯೇ ಕಣ್ಣಾಡಿಸುತ್ತಿದ್ದಾಗ ವೇದಪಾಠ ಕಣ್ಣಿಗೆ ಬಿತ್ತು. ಹಾಗಾಗಿ ಅಲ್ಲಿ ಲಭ್ಯವಿದ್ದ ಪಾಠಗಳನ್ನೆಲ್ಲ ಕೇಳಿ ಒಂದು ಬಾರಿ ಅವರ ಜೊತೆ ಕಲಿತೆ (ಅದೂ ಈಗ ತಾನೇ ಮುಗಿಸಿದೆ). ಇದನ್ನು ಇನ್ನೂ ಕೂಡ ಮುಂದುವರೆಸಬೇಕೆಂದು ಅಪೇಕ್ಷೆ. ಅದಕ್ಕಾಗಿ ಮೇಲ್ ಮೂಲಕ ಪಾಠ ಕೇಳುವವರ ಲಿಸ್ಟ್ ಗೆ ನನ್ನನ್ನೂ ಸೇರಿಸಿ. ವೇದಸುಧೆಯಲ್ಲೇ ಪಾಠ ಗಳು ಲಭ್ಯವಿದ್ದರೂ ಕೆಲವೊಂದು ಬಾರಿ ಕೆಲವು ಪಾಠಗಳು ಬಿಟ್ಟು ಹೋಗಿವೆಯೋ ಅಂತ ಅನಿಸಿದ್ದಿದೆ (ಈ ವರೆಗೆ ಎರಡು ಮಂತ್ರ ದ ಪಾಠಗಳು ಮಾತ್ರ ಸಿಕ್ಕಿತು ನನಗೆ. ಈವರೆಗಿನ ಆರು ತರಗತಿಗಳಲ್ಲಿ ಎರಡು ಮಂತ್ರಗಳು ಮಾತ್ರ ಆಗಿವೆ ಅಂತ ಅಂದುಕೊಂಡಿದ್ದೇನೆ). ಹಾಗಾಗಿ ನಿಮ್ಮ ಮೇಲ್ ಲಿಸ್ಟ್ ಗೆ ನನ್ನನ್ನೂ ಸೇರಿಸಿದರೆ ಸಂಶಯಗಳು ಪರಿಹಾರವಾದೀತು.

ವೇದಸುಧೆ ಆರಂಭವಾದಾಗಿನಿಂದ ವೇದ ಪಾಠ ಕ್ಕಾಗಿ ಕಾಯುತ್ತಿದ್ದೆ ನಾನು. ಅದು ಈಗ ಕೈಗೂಡಿದೆ. ಅದಕ್ಕಾಗಿ ವೇದಸುಧೆ ಬಳಗಕ್ಕೆ ಅನಂತ ವಂದನೆಗಳು.


ಧನ್ಯವಾದಗಳೊಂದಿಗೆ,
ಮಹೇಶ ಪ್ರಸಾದ ನೀರ್ಕಜೆ

Permanent link to this article: http://www.vedasudhe.com/%e0%b2%ae%e0%b3%81%e0%b2%95%e0%b3%8d%e0%b2%a4-%e0%b2%b8%e0%b2%82%e0%b2%b5%e0%b2%be%e0%b2%a6%e0%b2%b5%e0%b3%81-%e0%b2%b5%e0%b2%bf%e0%b2%b6%e0%b3%87%e0%b2%b7-%e0%b2%b5%e0%b3%87%e0%b2%a6%e0%b2%aa/

ವಿಮರ್ಶೆ ಮಾಡೋಣ ಬನ್ನಿ

ವೇದಸುಧೆಯ ಆತ್ಮೀಯ ಬಂಧುಗಳೇ,

“ಎಲ್ಲರಿಗಾಗಿ ವೇದ” ಎಂಬ ವಿಚಾರವನ್ನಿಟ್ಟುಕೊಂಡು ವೇದಸುಧೆಯು ಹೆಜ್ಜೆ ಇಡುವಾಗ ನಮಗೆ ಅತ್ಯಂತ ಸರಳವಾಗಿ, ಅತ್ಯಂತ ನಿಷ್ಟುರವಾಗಿ ಸತ್ಯದ ದಾರಿಯನ್ನು ಬಿಚ್ಚಿಡುತ್ತಿರುವ   ವೇದಾಧ್ಯಾಯೀ ಶ್ರೀ ಸುಧಾಕರಶರ್ಮರು ಮಾತ್ರವೇ ಎಟುಕುತ್ತಾರೆ.  ನೂರಾರು ವರ್ಷಗಳಿಂದ  ಹಲವಾರು ಅರ್ಥರಹಿತ ಆಚರಣೆಗಳಿಗೆ ನಾವು ಒಗ್ಗಿ ಹೋಗಿದ್ದೇವೆ. ಆ ಕಾರಣದಿಂದ ಶರ್ಮರ ಮಾತುಗಳು     ಸ್ವಲ್ಪ ಕಠಿಣವಾಗಿಯೇ ತೋರುತ್ತದೆ. ಆದರೆ ತಾಳ್ಮೆಯಿಂದ ಅವರ ಮಾತುಗಳನ್ನು ಕೇಳಿ ನಂತರ ಆಳವಾಗಿ ನಮ್ಮೊಳಗೆ ಚಿಂತನ-ಮಂಥನ ನಡೆಸಿದರೆ “ಹೌದಲ್ವಾ? ಶರ್ಮರು ಸತ್ಯವನ್ನೇ ಹೇಳುತ್ತಿದ್ದಾರೆಂಬ ಅಭಿಪ್ರಾಯಕ್ಕೆ ಬರಬೇಕಾಗುತ್ತದೆ.ನಾನು ಇಷ್ಟು ಸ್ಪಷ್ಟವಾಗಿ ಈ ಮಾತು ಹೇಳಲು ಕಾರಣವಿದೆ. ನಾಲ್ಕೈದು ವರ್ಷಗಳಿಂದ ಅವರೊಡನೆ ಬಹಳ ಚರ್ಚೆ ಮಾಡಿ ಕೊನೆಗೆ  ಅವರ ಮಾತನ್ನು[ವೇದಾಧಾರಿತ]  ಒಪ್ಪುವ ಅನಿವಾರ್ಯತೆ ನನಗೆ ಬಂದಿದೆ. ಅವರ ಮಾತುಗಳು ವೇದಾಧಾರಿತ ಅಲ್ಲಾ ,ಎಂದು ಯಾರೂ ಈವರಗೆ ಹೇಳಲೇ ಇಲ್ಲ. ಶರ್ಮರ ಮಾತುಗಳನ್ನು    ಅವಲೋಕಿಸಲು      ಎಲ್ಲಾ ವೇದ ಪಂಡಿತರಲ್ಲಿ ವೇದಸುಧೆಯು ಈಗಲೂ ವಿನಂತಿಸುತ್ತದೆ. ಅವರ ಮಾತುಗಳಿಗೆ ವೇದದ ಆಧಾರವಿಲ್ಲ. ಅಥವಾ ವೇದದ ಈ ಆಧಾರದಂತೆ ಅವರ ಮಾತುಗಳು ತಪ್ಪು ಎಂದು ಯಾರೇ ಪಂಡಿತರು ನಿರೂಪಿಸಿದರೂ ವೇದಸುಧೆಯು ಅವರ ಮಾತನ್ನು ಸ್ವೀಕರಿಸಲು ಸಿದ್ಧವಿದೆ. ವೇದಸುಧೆಗೆ ಬೇಕಾಗಿರುವುದು ಸತ್ಯ ಪಥ.  ಎಲ್ಲಾ ವೇದ ವಿದ್ವಾಂಸರನ್ನೂ ಈ ಒಂದು ವಿಚಾರದಲ್ಲಿ “ಸತ್ಯ ಪಥ” ಮುನ್ನಡೆಯಲು ಮಾರ್ಗದರ್ಶನ ಮಾಡಿ-ಎಂದು ವೇದಸುಧೆಯು ವಿನಂತಿಸುತ್ತದೆ. ಇಲ್ಲಿ ಇಷ್ಟು ವಿಚಾರವನ್ನು ಪ್ರಸ್ತಾಪಿಸಲು ಕಾರಣ ಇದೆ. ಮೊನ್ನೆ ಹಾಸನದಲ್ಲಿ ಶ್ರೀ ಸುಧಾಕರಶರ್ಮರೊಂದಿದೆ ಮುಕ್ತ ಸಂವಾದವು ನಡೆದಿದೆ. ಅದರ ವೀಡಿಯೋ ಕ್ಲಿಪ್ ಗಳನ್ನು  ಇನ್ನು ಮುಂದೆ ಒಂದೊಂದಾಗಿ ಇಲ್ಲಿ ಪ್ರಕಟ ಮಾಡಲಾಗುವುದು. ವಿದ್ವಜ್ಜನರು ದಯಮಾಡಿ  ಇಂತಹ  ಸತ್ಯ ಶೋಧನ ಪ್ರಯತ್ನಕ್ಕೆ ಕೈ ಜೋಡಿಸಬೇಕೆಂದರೆ  ದಿನಕ್ಕೆ ಹತ್ತು ನಿಮಿಷ ಇಲ್ಲಿನ ವೀಡಿಯೋ ಕ್ಲಿಪ್ ಗಳನ್ನು ವೀಕ್ಷಿಸಬೇಕೆಂಬುದು ವೇದಸುಧೆಯ ಕಳಕಳಿಯ ಮನವಿ. ಆಗ ನಿಮ್ಮ  ಅಭಿಪ್ರಾಯಗಳನ್ನು ವೇದದ ಆಧಾರದಲ್ಲಿ ಬಿಚ್ಚಿಡಲು ಅನುಕೂಲವಾಗುತ್ತದೆ. ಅಲ್ಲದೆ ಕೆಲವು ಸಂದರ್ಭದಲ್ಲಿ ಶರ್ಮರು ವೇದ ಮಂತ್ರ ದ ಅರ್ಥವನ್ನಷ್ಟೇ ಹೇಳಿದ್ದಾರೆ. ಅದರ ಮೂಲ ಮಂತ್ರವನ್ನು  ಅಪೇಕ್ಷಿಸುವವರು ಖಂಡಿತವಾಗಿಯೂ  ವೇದಸುಧೆಗೆ ಬರೆಯಿರಿ . ಶರ್ಮರಿಂದ ಆಧಾರ ಮಂತ್ರಗಳನ್ನು  ಪಡೆದು ಪ್ರಕಟಿಸಲಾಗುವುದು. ನಮ್ಮ ಈ ಮೇಲ್ ವಿಳಾಸ’ mail@vedasudhe.com

Permanent link to this article: http://www.vedasudhe.com/%e0%b2%b5%e0%b2%bf%e0%b2%ae%e0%b2%b0%e0%b3%8d%e0%b2%b6%e0%b3%86-%e0%b2%ae%e0%b2%be%e0%b2%a1%e0%b3%8b%e0%b2%a3-%e0%b2%ac%e0%b2%a8%e0%b3%8d%e0%b2%a8%e0%b2%bf/

ವೇದದಿಂದ ಮಾತ್ರ ಎಲ್ಲರಿಗೂ ಸೂಕ್ತ ಉತ್ತರ ಸಿಗಬಲ್ಲದು

ಶ್ರೀ ವಾಸುದೇವರಾವ್  ಅವರು ವೇದಸುಧೆಯ ಅಭಿಮಾನಿ, ಆರ್ಯಸಮಾಜಿ ಇರಬಹುದು. ಆದರೆ  ಇವರು ಆರ್ಯ ಸಮಾಜಿಯ? ಬ್ರಹ್ಮಸಮಾಜಿಯಾ? ಅಥವಾ ಬಲಪಂತೀಯರೇ? ಎಡಪಂತೀಯರೇ? ಯಾವುದರ ಅಗತ್ಯವೂ ವೇದಸುಧೆಗೆ ಇಲ್ಲ. ಸತ್ಯ ಎಂದು ತಿಳಿದದ್ದನ್ನು ಹಂಚಿಕೊಳ್ಳಬೇಕು. ಯಾವ ಪೂರ್ವಾಗ್ರಹವೂ ವೇದಸುಧೆಗೆ ಇಲ್ಲ. ಒಂದೇ ಆಗ್ರಹ” ವೇದವನ್ನು ಅರ್ಥಮಾಡಿಕೊಳ್ಳಬೇಕು. ಕುರುಡುನಂಬಿಕೆ ದೂರವಾಗಬೇಕು. ಇದು ವೇದಸುಧೆಯ ಕಟು ನಿಲುವು. ವೇದಸುಧೆಯಲ್ಲಿ  ಪ್ರಕಟವಾದ “ವೇದಗಳು ಎಲ್ಲಾ ಕಾಲಕ್ಕೂ ಪ್ರಸ್ತುತ” ಲೇಖನಕ್ಕೆ ಶ್ರೀಯುತರು ಬರೆದಿರುವ ಕಾಮೆಂಟ್  ಪ್ರತ್ಯೇಕ ಲೇಖನಕ್ಕೆ ಅರ್ಹವಾಗಿ ಕಂಡಿದ್ದರಿಂದ ಇಲ್ಲಿ ಪ್ರಕಟಿಸಲಾಗಿದೆ. ಶ್ರೀಯುತರು ತಿಳಿಸಿರುವ  ಘಟನೆಯ ಸಂದರ್ಭದಲ್ಲಿ ಮತ್ಯಾರಾದರೂ ವೇದಸುಧೆಯ ಓದುಗರು ಉಪಸ್ಥಿತರಿದ್ದರೆ ಅಲ್ಲಿನ ಘಟನೆಯ ಬಗ್ಗೆ ವೇದಸುಧೆಯೊಡನೆ ನಿಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳಬಹುದು.
Some years ago there was a discussion on Hinduism and its relevancy at palace grounds. Dr zakir Naik well known Islamic evengalist was the main speaker. Hundreds of Muslims were there to cheer him. From Hindu side, Ravishankar guruji of Art of Living fame spoke on Hinduism. Ravishankar’s bland approach was in total contrast to the aggressive approach of Naik. Needless to say that Ravishankar was a total failure. The problem with Ravishankar was he did not consult of Vedas for point to point reply but relied on some slokas which were neither here nor there.In fact if he had consulted even once the 14th chapter of Satyarth Prakash written by Swami Dayanand and readied himself to
reply he would have won the day. The problem with our Hindu leaders is that they rarely study the religious text of other communities and repeat blindly some of their pet points which needless to say are often anti-vedic and bound to fail. I therefore urge these hindu leaders to study the books of other religions and learn to reply the way Swami Dayanand did in his famous book Satyarth Prakash. The minimum these so called leaders is to read the above book and prepare themselves to confront other religionists, Until this is done take it from me they would never taste success.One point that I would like to tell is these evengelists always avoid scholars from Aryasamaj. Why? Dr Naik was invited to participate in ” Shastrath” number of times by Arysamaj bodies but cleverly he avoids but participates eagerly in debates organised by Non-Aryasamaj forums. In all these forums he would win the day because the Hindu bodies relie on trash called Puranas etc.

-Vasudevarao RaoSeptember 30, 2012 8:21 PM

Permanent link to this article: http://www.vedasudhe.com/%e0%b2%b5%e0%b3%87%e0%b2%a6%e0%b2%a6%e0%b2%bf%e0%b2%82%e0%b2%a6-%e0%b2%ae%e0%b2%be%e0%b2%a4%e0%b3%8d%e0%b2%b0-%e0%b2%8e%e0%b2%b2%e0%b3%8d%e0%b2%b2%e0%b2%b0%e0%b2%bf%e0%b2%97%e0%b3%82-%e0%b2%b8/

ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್ ಅವರ ಬಿಚ್ಚು ಮಾತುಗಳು

ವೇದಸುಧೆಯ ಅಭಿಮಾನಿಗಳಾದ ಸಿರ್ಸಿಯ ವೇದಾಧ್ಯಾಯೀ ಶ್ರೀ ಪರಮೇಶ್ವರ್  ಇವರು ಸಂಸ್ಕೃತ MA ಪದವೀದರರು. ಸಿರ್ಸಿಯಲ್ಲಿ ವೈದಿಕ ವೃತ್ತಿ ಮಾಡುತ್ತಿರುವ ಶ್ರೀಯುತರು ದಿನದಲ್ಲಿ ಬಹುಭಾಗವನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿರುವುದು ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಶ್ರೀಯುತರೊಡನೆ ಅಂತರ್ಜಾಲದಲ್ಲಿ ಕರೆಮಾಡಿ ನಮ್ಮ ಸಂಭಾಷಣೆಯನ್ನು ಅವರ ಅನುಮತಿ ಪಡೆದು ರೆಕಾರ್ಡ್ ಮಾಡಿರುವೆ. ಇಲ್ಲಿ ಪ್ರಕಟಿಸುವುದಾಗಿ ನಾನು ಶ್ರೀಯುತರ ಗಮನಕ್ಕೆ ತಂದಿಲ್ಲವಾದರೂ ವೇದಸುಧೆಯೊಡನೆ ಮಾಡಿದ ಸಂವಾದ ನಿಮಗಾಗಿ ತಾನೇ.  ಶ್ರೀಯುತರು ಈ ಮೇಲ್ ಮೂಲಕ ವ್ಯಕ್ತಪಡಿಸಿದ ಅವರ ಅಭಿಪ್ರಾಯಗಳ ಜೊತೆಗೆ ಸಂಭಾಷಣೆಯ ಆಡಿಯೋ ಇಲ್ಲಿದೆ.

ಶ್ರಿಧರರೆ,
ವೈದಿಕರ (ಪುರೋಹಿತರ) ಇಂದಿನ ಪರಿಸ್ಥಿತಿಗೆ ನಾಕಂಡಂತೆ ಮುಖ್ಯವೆನಿಸುವ ಕಾರಣಗಳು…
     ೧ ಅತೃಪ್ತಿ.
        ಸಾಮಾಜಿಕ ಏರು ಪೇರುಗಳಿಗೆ ನೇರವಾಗಿ ಬಲಿಯಾದ ಪುರೋಹಿತರು ಅತೃಪ್ತರಾಗಿದ್ದಾರೆ. ಗೌರವಮಾತ್ರದಿಂದ ಜೀವನ ನಿರ್ವಹಣೆ ಕಷ್ಟಸಾಧ್ಯ! ಪೌರೋಹಿತ್ಯವನ್ನು ಉದ್ಯೋಗ ಎನ್ನಲು ಸಾಧ್ಯವಾಗುತ್ತಿಲ್ಲಾ! ಹಾಗಂತ ಇವರು ನಿರುದ್ಯೋಗಿಗಳೂ ಅಲ್ಲ!
    ೨ ವಿದ್ಯಾರ್ಹತೆ ಕೊರತೆ.
      ಎಲ್ಲೂ ಸಲ್ಲದವ ಇಲ್ಲಿ ಸಲ್ಲುತ್ತಾನೆ! ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲಾ ಎಂಬ ವಿಶ್ವಾಸ. ಅಲ್ಲದೆ ಇಲ್ಲಿ ಓದಿದವನೂ-ಓದದವನೂ ಸಮಾನ ಸಂಮಾನಕ್ಕೆ ಒಳಗಾಗುತ್ತಾನೆ. ಸ್ವತಃ ಯಜಮಾನನಿಗೂ ವೈದಿಕದ ಜ್ಞಾನವಿಲ್ಲದಿರುವುದು. ಹೀಗೆ ಇಬ್ಬರಲ್ಲೂ ಅರ್ಹತೆ ಪ್ರಶ್ನಾತೀತವಾಗಿದೆ!!!
    ೩ ಅನಧಿಕೃತ ಸ್ಥಿತಿ.
       ಈ ಸಮಾಜದಲ್ಲಿ ಪುರೋಹಿತನ ನಿಲುವು ಅಧಿಕೃತವಾಗಿಲ್ಲ. ಎಲ್ಲಕಡೆಯಿಂದ ಮುಚ್ಚುಮರೆ ತುಂಬಿದೆ. (ಜಾತಿ-ಮತ-ಪಂಥ-ಮಡಿ-ಮೈಲಿಗೆ-ಬುಧ್ಧಿವಾದ-ಬುಧ್ಧಿಜೀವಿಗಳವಾದ-ಶ್ರದ್ಧೆ-ನಂಬಿಕೆ ಇತ್ಯಾದಿ)
    ೪ ಭವಿಷ್ಯವಾದಿಗಳ ಅಟ್ಟಹಾಸ.
       ಇಂದು ಭವಿಷ್ಯವಾದಿಗಳು ವೈದ್ಯರಂತೆಯೂ, ವೈದಿಕರು ಔಷಧಿವಿತರಕರಂತೆಯೂ ಆಗಿದ್ದಾರೆ. ಸಂಸ್ಕಾರವೋ, ಚಿತ್ತಶುದ್ಧಿಯೋ ಮೂಲವಾಗಬೇಕಿದ್ದ ಕರ್ಮ, ಇಂದು ಸ್ವಾರ್ಥ ಸಾಧನೆಗೆ ಹೆಚ್ಚು ಬಳಕೆಯಾಗುತ್ತಿದೆ.
     ೫ ಆಡಂಬರ ಮತ್ತು ಸಾಂಪ್ರದಾಯಿಕತೆ.
       ಆಡಂಬರ ಮುಖ್ಯವಾಗಿ ಸಂಸ್ಕಾರಕರ್ಮಗಳು ಅರ್ಥಹೀನವಾಗಿವೆ. ಮತ್ತು ಸಾಂಪ್ರದಾಯಿಕ ಆಚರಣೆ ಜನಜನಿತವಾಗಿ, ಅಲ್ಲಲ್ಲಿ ಹೊಸ ಹೊಸ ಸಂಪ್ರದಾಯಗಳು ಎದ್ದು, ಕರ್ಮವನ್ನೇ ತಿಂದುಹಾಕಿವೆ.
ಇನ್ನು ವೇದೋಕ್ತ ಕರ್ಮಗಳು ಎಂಬ ವಿಷಯವಾಗಿ…
ಶ್ರುತಿವಿಹಿತ ಕರ್ಮಗಳನ್ನು ಶ್ರೌತಕರ್ಮಗಳೆಂದೂ, ಸ್ಮೃತಿವಿಹಿತಕರ್ಮಗಳನ್ನು ಸ್ಮಾರ್ತಕರ್ಮಗಳೆಂದೂ ವಿಂಗಡಿಸಿದ್ದಾರೆ. ಹೆಚ್ಚಾಗಿ ನಮ್ಮ ಆಚರಣೆ ಸ್ಮಾರ್ತವೇ ಆಗಿದೆ. ಹೀಗೆ ಹಿನ್ನೆಲೆಯಿರುವ ಕರ್ಮ ಮುನ್ನೆಡೆಗೆ ಕಾರಣ ಎಂಬಲ್ಲಿ ಸಂಶಯವಿಲ್ಲಾ!
ಶ್ರುತಿ – ಸ್ಮೃತಿ – ಸೂತ್ರ – ಕಾರಿಕಾ – ಪ್ರಯೋಗ ಈ ಕ್ರಮದಲ್ಲಿ ಕರ್ಮಕ್ಕೆ ಹತ್ತಿರವಾದದ್ದು ಪ್ರಯೋಗ. ಸೂತ್ರಾದಿಯಾಗಿ ಪ್ರಯೋಗಾಂತ ಗ್ರಂಥಗಳು ಕಲ್ಪಗ್ರಂಥಗಳು. ಈ ಕಲ್ಪಗಳನ್ನು ಆಧರಿಸಿಬಂದ ಕರ್ಮಗಳನ್ನು ಮಾನ್ಯವೆಂದೂ, ಕಪೋಲ ಕಲ್ಪಿತ ಕರ್ಮಗಳನ್ನು ಅಮಾನ್ಯವೆಂದೂ ನಿರ್ಧರಿಸೋಣ ಅಲ್ಲವೇ!!!???

 

Permanent link to this article: http://www.vedasudhe.com/%e0%b2%b8%e0%b2%bf%e0%b2%b0%e0%b3%8d%e0%b2%b8%e0%b2%bf%e0%b2%af-%e0%b2%b5%e0%b3%87%e0%b2%a6%e0%b2%be%e0%b2%a7%e0%b3%8d%e0%b2%af%e0%b2%be%e0%b2%af%e0%b3%80-%e0%b2%b6%e0%b3%8d%e0%b2%b0%e0%b3%80/

Older posts «