ಜೀವನವೇದ-3

ಒಂದು ನೆಮ್ಮದಿಯ ಕುಟುಂಬದಲ್ಲಿನ ಯಜಮಾನನ ಅರ್ಹತೆಗಳ ಬಗ್ಗೆ ಅಥರ್ವಣ ವೇದದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರದ ಆಧಾರದಲ್ಲಿ ವಿಚಾರ ಮಾಡುತ್ತಿದ್ದೆವು. ಹಿಂದಿನ ಅಧ್ಯಾಯದಲ್ಲಿ ಮೊದಲ ಸಾಲಿನ ಎರಡು ಶಬ್ಧಗಳ ಬಗ್ಗೆ ಚರ್ಚಿಸಿದ್ದೇವೆ. ಇಲ್ಲಿ ಮುಂದಿನ ಭಾಗದ ಬಗ್ಗೆ ವಿಚಾರವನ್ನು ಮಾಡೋಣ. ವಿಮರ್ಶೆಮಾಡಬೇಕಾದ ಮಂತ್ರ ಭಾಗವೆಂದರೆ. . . . . . .
ಸುಮೇಧಾ:
ಮೇಧಾವಂತನಾಗಿರಬೇಕು. ಮೇಧಾ ಎಂದರೆ ಜ್ಞಾನ. ಎಲ್ಲಿ ಜ್ಞಾನವಿರುತ್ತದೆಯೋ ಅಲ್ಲಿ ಅಂಧವಿಶ್ವಾಸಗಳಿರುವುದಿಲ್ಲ. ಯಾವುದು ಧರ್ಮ ಯಾವುದು ಅಧರ್ಮ, ಎಂಬ ಅರಿವಿರುತ್ತದೆ. ಧರ್ಮಾಧರ್ಮಗಳ ವಿವೇಕವಿದ್ದಾಗ ಜೀವನವು ನಿರ್ಭಯದಿಂದ ಸಾಗುತ್ತದೆ. ಅವನು ಯಾವುದೇ ವ್ಯಾಮೋಹಕ್ಕೆ ಒಳಗಾಗುವುದಿಲ್ಲ. ಮನೆಯ ಸದಸ್ಯರಲ್ಲಿ ವ್ಯಾಮೋಹ ಹೊಂದದೆ ಪ್ರೀತಿ,ವಾತ್ಸಲ್ಯ, ಮಮಕಾರಗಳನ್ನು ಹೊಂದಿರುತ್ತಾನೆ. ಮನೆಯ ಹಿರಿಯನ ಈ ಗುಣಗಳು ಕಿರಿಯರ ಅಭ್ಯುದಯಕ್ಕೆ ಆಸ್ಪದ ನೀಡುತ್ತವೆ.
ಮನೆಯ ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ.. . . . .
ಅಘೋರೇಣ ಚಕ್ಷುಷಾಮಿತ್ರಿಯೇಣ|
ಶಾಂತವಾದ,ಸ್ನೇಹಪೂರ್ವಕ ದೃಷ್ಟಿಕೋನ ಹೊಂದಿದ ನಡೆಯುಳ್ಳವನು, ಎಂದು ಈ ಮಂತ್ರಭಾಗದ ಅರ್ಥ.
ಕೆಲವು ಮಕ್ಕಳು ತಮ್ಮ ಅಹವಾಲನ್ನು ತಾಯಿಯೊಡನೆ ಮಾತ್ರವೇ ಹೇಳಿಕೊಳ್ಳುತ್ತಾರೆ. ಇದಕ್ಕೆ ಕಾರಣ ಅಪ್ಪ ಎಲ್ಲಿ ಬೈದುಬಿಡುತ್ತಾರೋ! ಎಂಬ ಭಯ. ತಂದೆಯ ಬಗ್ಗೆ ಇಂತಹ ಭಯವು ಸರ್ವತಾ ಇರಕೂಡದು. ಇಲ್ಲಿ ತಪ್ಪು ಮಕ್ಕಳದ್ದಲ್ಲ ತಂದೆಯದು. ವೇದವು ಹೇಳುತ್ತದೆ ಮಕ್ಕಳನ್ನು ಸ್ನೇಹದಿಂದ ನೋಡು ಎಂದು. ಒಬ್ಬ ತಂದೆ ತನ್ನ ಮಕ್ಕಳನ್ನು ಭಯದಿಂದ ಇಟ್ಟುಕೊಂಡಿದ್ದಾನೆಂದರೆ ಅವನು ವೇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದೇ ಅರ್ಥ. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆದ್ದು ವಿಶ್ವಾಸದಿಂದ ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕೇ ಹೊರತೂ ಭಯದಿಂದಲ್ಲ.

ಮನೆಯ ಯಜಮಾನನ ಮತ್ತೊಂದು ಅರ್ಹತೆ ಎಂದರೆ.. . . .
ಸುಮನಾ: –
ಸುಮನಾ ಎಂದರೆ ಉತ್ತಮ ಮನಸ್ಸುಳ್ಳವನು ಎಂದರ್ಥ. ಒಬ್ಬ ಆದರ್ಶ ತಂದೆಯ ಮನಸ್ಸು ಉತ್ತಮವಾಗಿರಬೇಕಾದರೆ ಅವನು ಪವಿತ್ರಕಾಮದಿಂದ ಪೂರ್ಣವಾಗಿರಬೇಕು, ಪಾಪಮಯ ವಾಸನೆಯು ಹತ್ತಿರವೂ ಸುಳಿಯ ಕೂಡದು. ಪಾಪಮಯ ವಾಸನೆಗೆ ಬಲಿಯಾದದ್ದೇ ಆದರೆ ಅವನ ಮನಸ್ಸು ಉತ್ತಮ ಸ್ಥಿತಿಯಲ್ಲಿರಲು ಸಾಧ್ಯವಿಲ್ಲ.
ಯಜಮಾನನಿಗಿರಬೇಕಾದ ಮತ್ತೊಂದು ಅರ್ಹತೆ ಎಂದರೆ. . . . .
ವಂದಮಾನ:-
ಎಲ್ಲರಿಂದಲೂ ಗೌರವಕ್ಕೆ ಪಾತ್ರನಾಗಿರಬೇಕು. ಅಂದರೆ ಅವನಲ್ಲಿ ಹುಡುಕಿದರೂ ದೋಷ ಸಿಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣಬೇಕು.ಯಾರೊಡನೆಯೂ ಅತೀ ಸಲಿಗೆಯೂ ಇರಬಾರದು, ವೈರವೂ ಇರಬಾರದು. ಅನಗತ್ಯವಾದ ವಾದ ವಿವಾದಗಳು ವೈರತ್ವಕ್ಕೆ ಕಾರಣವಾಗುತ್ತದೆ.
ಹಲವು ಭಾರಿ ಬೇಡದ ವಿಷಯಗಳಿಗೆ ಚರ್ಚೆ ಆರಂಭವಾಗಿ ಅದು ಬೇರೆಯದೇ ಹಾದಿ ಹಿಡಿದುಬಿಡುತ್ತದೆ. ಯಾರೊಡನೆಯೂ ಅನಗತ್ಯವಾಗಿ ವಾದ ಮಾಡಬಾರದೆಂದು ತೀರ್ಮಾನಿಸಿದ್ದರೂ ಹಲವು ವೇಳೆ ನಮಗರಿವಿಲ್ಲದಂತೆ ನಮ್ಮ ಸುಮಧುರ ಮಾತುಗಳೂ ಕೂಡ ವಾದದತ್ತ ಹೊರಳಿರುತ್ತದೆ. ನಮಗೆ ಸತ್ಯವೆನಿಸಿದ್ದನ್ನು ನಾವು ಹೇಳುತ್ತಿದ್ದರೂ ಅದು ಎದುರು ಪಕ್ಷದವನಿಗೆ ರುಚಿಸದಾಗ ಮಾತು ವಾದದತ್ತ ನಮಗರಿವಿಲ್ಲದೆ ಹೊರಳುತ್ತದೆ. ಎದುರಾಳಿಯು ವಿತ್ತಂಡವಾದ ಮಾಡಲೆಂದೇ ಬಂದಿದ್ದರಂತೂ ನಮ್ಮ ಕಥೆ ಮುಗಿದಂತೆಯೇ. ಆದ್ದರಿಂದ ನಿಮ್ಮ ಮಾತನ್ನು ಒಪ್ಪದ ವ್ಯಕ್ತಿಯನ್ನು ಒಪ್ಪಿಸುವ ಪ್ರಯತ್ನ ಮಾಡದಿರುವುದೇ ಕ್ಷೇಮ. ಒಂದು ಉತ್ತಮ ವಿಚಾರವನ್ನು ತನ್ನ ವಿತ್ತಂಡವಾದದಿಂದ ಸೋಲಿಸಬೇಕೆಂದು ನಿರ್ಧರಿಸಿರುವ ವ್ಯಕ್ತಿಗೆ ನಷ್ಟವಾಗುತ್ತದೆಯೇ ಹೊರತೂ ನಿಮಗೇನೂ ನಷ್ಟವಿಲ್ಲ. ಅಲ್ಲವೇ? ಆದ್ದರಿಂದ ಎಲ್ಲರ ಪ್ರಶಂಸೆಗೆ ಪಾತ್ರನಾಗಬೇಕೆಂದರೆ ಅನಗತ್ಯ ವಾದ-ವಿವಾದ ಮಾಡಲೇ ಕೂಡದು!!
ಅಹಂಕಾರವು ಮನುಷ್ಯನ ದೊಡ್ದ ಶತ್ರುವಾಗಿದ್ದು, ಅಹಂಕಾರವು ಇವನ ಎಲ್ಲಾ ಸದ್ಗುಣಗಳನ್ನೂ ಮೆಟ್ಟಿ ಇವನನ್ನು ಅವನತಿಯತ್ತ ತಳ್ಳುತ್ತದೆ. ಆದ್ದರಿಂದ ಅಹಂಕಾರವು ಸುಳಿಯದಂತೆ ಎಚ್ಚರವಹಿಸಬೇಕು. ಹೀಗೆ ಒಬ್ಬ ಆದರ್ಶ ತಂದೆಯಾಗಿರಬೇಕಾದರೆ ಮೇಲಿನ ಆರು ಗುಣಗಳನ್ನು ಹೊಂದಿರಬೇಕು.
ಋಗ್ವೇದದ ಇನ್ನೊಂದು ಮಂತ್ರವು ತಂದೆ-ತಾಯಿಯ ಕರ್ತವ್ಯದ ಬಗ್ಗೆ ಸೊಗಸಾಗಿ ಹೇಳುತ್ತದೆ.ಆ ಮಂತ್ರದ ಬಗ್ಗೆ ವಿಚಾರ ಮಾಡೋಣ.

ತೇ ಸೂನವಃ ಸ್ವಪಸ: ಸುದಂಸಸೋ ಮಹೀ ಜಜ್ಞುರ್ಮಾತರಾ ಪೂರ್ವ ಚಿತ್ತಯೇ |
ಸ್ಥಾತುಶ್ಚ ಸತ್ಯಂ ಜಗತಶ್ಚ ಧರ್ಮಾಣಿ ಪುತ್ರಸ್ಯ ಪಾಥ: ಪದಮದ್ವಯಾವಿನ: ||

[ಋಗ್ವೇದ ಮಂಡಲ -೧ ಸೂಕ್ತ- ೧೫೯ ಮಂತ್ರ – ೩]

ಪದಾರ್ಥ:-
ಸ್ವಪಸಃ = ಉತ್ತಮ ಕರ್ಮಗಳು
ಸುದಂಸಸ: = ಅವುಗಳನ್ನು ಉತ್ತಮ ರೀತಿಯಲ್ಲಿ ಆಚರಣೆಗೆ ತರುವವರು
ಪೂರ್ವ ಚಿತ್ತಯೇ = ಅದಕ್ಕೆ ಅಗತ್ಯವಾದ ಸಿದ್ಧತೆಯನ್ನು ಮುಂಚಿತವಾಗಿ ಯೋಚಿಸುವವರು
ಜಗ್ನ್ಯುಃ = ಪ್ರಸಿದ್ಧರಾಗಿರುತ್ತಾರೆಯೋ
ತೇ = ಅವರು
ಮಹಿ = ಹಿರಿದಾದ
ಮಾತರ = ತಾಯಿಯನ್ನು
ಸ್ಥಾತುಃ = ಸ್ಥಿರ ಧರ್ಮವನ್ನಾಚರಿಸುವವನು
ಚ = ಮತ್ತು
ಜಗತಃ= ಜಗತ್ತಿಗೆ
ಧರ್ಮಾಣಿ = ಸಾಧಾರಣ ಧರ್ಮಗಳಲ್ಲಿ
ಅದ್ವಯಾವಿನಃ = ಏಕರೂಪದಲ್ಲಿರುವ
ಪುತ್ರಸ್ಯ = ಮಗನಿಗೆ
ಸತ್ಯ ಪದಂ = ಸ್ಥಿರವಾದ ಸ್ಥಾನವನ್ನು ಪಡೆಯುವಂತಹ
ಪಾಥಃ ಮಾರ್ಗವನ್ನು
ಸೂನವಃ = ಅವರ ಸಂತಾನಗಳು ನಿರಂತರ ಕೈಗೊಳ್ಳಬೇಕು
ಭಾವಾರ್ಥ :-
ಭೂಮಿ ಮತ್ತು ಸೂರ್ಯರು ಸ್ಥಿರ ಮತ್ತು ಜಂಗಮರೂಪವಾದ ಎಲ್ಲಾ ಜೀವಿಗಳನ್ನು ಹೇಗೆ ಪಾಲನೆ ಮಾಡುತ್ತಾರೋ, ಎಲ್ಲಾ ಜೀವಿಗಳಿಗೂ ಸಮಾನಧರ್ಮವನ್ನು ಹೇಗೆ ಅನ್ವಯಿಸುವಂತೆ ಮಾಡುತ್ತಾರೋ ಅದನ್ನು ಅರಿಯಬೇಕು. ತಂದೆತಾಯಿಯರು ಈ ವಿಸ್ಮಯ ಜಗತ್ತಿನ ರಹಸ್ಯವನ್ನು ಮಕ್ಕಳಿಗೆ ಹೇಳಿಕೊಟ್ಟು ಅವರೂ ಸಹ ಈ ಜಗತ್ತಿನಲ್ಲಿ ಕೃತಾರ್ಥರಾಗುವಂತೆ ಮಾಡಬೇಕು.
ಈ ಮಂತ್ರದ ಭಾವಾರ್ಥದ ಬಗ್ಗೆ ವಿಚಾರಮಾಡುವಾಗ ಪ್ರಕೃತಿಯ ಚಿತ್ರಣ ನಮ್ಮ ಕಣ್ಮುಂದೆ ಬರಬೇಕು. ಈ ಸೃಷ್ಟಿಯ ರಹಸ್ಯವು ಸಾಮಾನ್ಯರಾದ ನಮಗೆ ಅರ್ಥವಾಗುವುದು ಅಷ್ಟು ಸುಲಭವೇನಲ್ಲ. ಆದರೆ ಭಗವಂತನು ನಮಗೆ ಕೊಟ್ಟಿರುವ ಗಾಳಿ,ಬೆಳಕು,ನೀರಿನ ಬಗ್ಗೆ ನಾವೇನಾದರೂ ಕಿಂಚಿತ್ ಯೋಚಿಸಿದ್ದೇವೆಯೇ? ನಾವು ಬದುಕಲು ಬೇಕಾದ ಇಷ್ಟನ್ನೂ ನಮಗೆ ಭಗವಂತನು ಉಚಿತವಾಗಿ ನೀಡಿದ್ದಾನಲ್ಲಾ! ಅಷ್ಟೇ ಅಲ್ಲ, ಇವ ಒಳ್ಳೆಯವ, ಇವ ಕೆಟ್ಟವ, ಇವ ನಮ್ಮವ, ಇವ ಬೇರೆಯವ ಎಂದು ಭೇದ ಮಾಡಲೇ ಇಲ್ಲವಲ್ಲಾ!
ಈ ಮಂತ್ರವು ಹೇಳುತ್ತದೆ ಈ ಭೂಮಿ-ಸೂರ್ಯರ ಧರ್ಮವನ್ನು ತಂದೆತಾಯಿಯಾದವರು ತಮ್ಮ ಮಕ್ಕಳಿಗೆ ಹೇಳಿಕೊಡಿ. ಅಬ್ಭಾ! ಒಂದು ವೇಳೆ ಭಗವಂತನ ಈ ಸಮಾನ ಧರ್ಮವನ್ನು ಸರಿಯಾಗಿ ಅರಿತುಕೊಂಡಿದ್ದೇ ಆದರೆ ನಾವು ಪ್ರಕೃತಿಯ ನಾಶಕ್ಕೆ ಕಾರಣ ವಾಗುತ್ತಿರಲಿಲ್ಲ. ನಮ್ಮ ದುರಾಸೆಯ ಪರಿಣಾಮವಾಗಿ ನಾವು ಕಾಡನ್ನೂ ಬಿಡಲಿಲ್ಲ, ಕೆರೆಗಳನ್ನೂ ಬಿಡಲಿಲ್ಲ. ಕಾಡನ್ನು ನಾಶಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಿದೆವು. ಕೆರೆಗಳನ್ನು ನಾಶಮಾಡಿ ಮನೆ ಕಟ್ಟಿದೆವು! ಪರಿಣಾಮ ಕಾಡಿನಲ್ಲಿರಬೇಕಾದ ಮೃಗಗಳೆಲ್ಲಾ ಆಶ್ರಯವಿಲ್ಲದೆ ನಾಡಿಗೆ ನುಗ್ಗುತ್ತಿವೆ! ಕೆರೆಗಳನ್ನು ನಾಶಮಾಡಿದ ನಾವು ಅಂತರ್ಜಲ ಕುಸಿತವಾಗಿ ನೀರಿಗೆ ಹಾಹಾಕಾರ ಪಡುವಂತಾಗಿದೆ. ವೇದವಾದರೋ ನಮ್ಮನ್ನು ಸದಾಕಾಲ ಎಚ್ಚರಿಸುತ್ತಲೇ ಇದೆ, ಆದರೆ ವೇದದ ಮಾತು ನಮ್ಮ ಕಿವಿಗೆ ಬೀಳಬೇಕಷ್ಟೆ. ಕುಟುಂಬದಲ್ಲಿ ತಂದೆಯ ಕರ್ತವ್ಯಗಳಂತೆಯೇ ಉಳಿದ ಸದಸ್ಯರ ಕರ್ತವ್ಯಗಳೂ ಕೂಡ ಇವೆ.

Permanent link to this article: http://www.vedasudhe.com/%e0%b2%9c%e0%b3%80%e0%b2%b5%e0%b2%a8%e0%b2%b5%e0%b3%87%e0%b2%a6-3/

ಜೀವನವೇದ-2

ಸಂಮೃದ್ಧ ಮನೆ :
ಒಂದು ಸಂಮೃದ್ಧವಾದ ಮನೆ ಅಂದರೆ ಹೇಗಿರಬೇಕು? ಮನೆಯ ಯಜಮಾನ ಹೇಗಿರಬೇಕು? ಎಂಬ ವಿಚಾರವನ್ನು ಅಥರ್ವಣ ವೇದದಲ್ಲಿನ ಒಂದು ಮಂತ್ರದಲ್ಲಿ ಹೀಗೆ ಹೇಳಿದೆ.

ಇಮೇ ಗೃಹಾ ಮಯೋಭುವ ಊರ್ಜಸ್ವಂತ: ಪಯಸ್ವಂತ:|
ಪೂರ್ಣಾ ವಾಮೇನ ತಿಷ್ಠಂತಸ್ತೇ ನೋ ಜಾನಂತ್ವಾಯತ: ||

[ಅಥರ್ವಣವೇದದ ೭ನೇ ಕಾಂಡ ೬೦ನೇ ಸೂಕ್ತ ೨ನೇ ಮಂತ್ರ]

ಈ ಮಂತ್ರದ ಅರ್ಥವೇನೆಂದರೆ ನಮ್ಮ ಮನೆಗಳು ಆಹಾರಧಾನ್ಯಗಳಿಂದಲೂ ಹಾಲು ಮೊಸರಿನಿಂದಲೂ ತುಂಬಿದ್ದು, ಎಲ್ಲರಿಗೂ ಈ ಮನೆಯಲ್ಲಿ ಸುಖಶಾಂತಿ ನೆಮ್ಮದಿ ಸಿಗುವಂತಾಗಲೀ.
ಈ ಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಗೌರವಯುತ ಗೃಹವೆಂದರೆ ಆ ಮನೆಯಲ್ಲಿ ಆಹಾರಧಾನ್ಯದ ಸಂಗ್ರಹವಿರಬೇಕು. ಆಹಾರಧಾನ್ಯದ ಸಂಗ್ರಹವಿರಬೇಕೆಂದರೆ ಆ ಮನೆಯೊಡೆಯ ಆಹಾರಧಾನ್ಯವನ್ನು ಸಂಮೃದ್ಧವಾಗಿ ಬೆಳೆದಿರಬೇಕು. ಹಾಲು ಮೊಸರು ಸದಾಕಾಲವಿರುವಂತೆ ಹಸುಕರುಗಳನ್ನು ಸಾಕಿಕೊಂಡಿರಬೇಕು. ಮನೆಗೆ ಅತಿಥಿಗಳು ಸಂತೋಷದಿಂದ ಬಂದುಹೋಗುವಂತಿರಬೇಕು. ಮನೆಯಲ್ಲಿ ಸುಖಶಾಂತಿ ನೆಮ್ಮದಿ ನೆಲಸಿರಬೇಕು.
ಇಂದಿನ ಕಾಲಕ್ಕೆ ನಾವು ಈ ವೇದಮಂತ್ರವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ಒಂದು ಸಂಮೃದ್ಧವಾದ ಮನೆ ಅಂದರೆ ಮನೆಯ ಯಜಮಾನನು ಸತ್ಯಮಾರ್ಗದಲ್ಲಿ ದುಡಿದು ಸಂಪತ್ತನ್ನು ಗಳಿಸಿರಬೇಕು. ಆ ಸಂಪತ್ತಿನಿಂದ ಮನೆಗೆ ಬಂದ ಅತಿಥಿಗಳ ಸತ್ಕಾರವು ಚೆನ್ನಾಗಿ ನಡೆಯುತ್ತಿರಬೇಕು. ಅದು ಸುಸಂಕೃತ ಮನೆಯಾಗಿದ್ದು ಮನೆಯಲ್ಲಿ ಯಾವಾಗಲೂ ಸಂತಸದ ವಾತಾವರಣ ನೆಲಸಿರಬೇಕು.‘

ಮನೆಯ ಯಜಮಾನ ಹೇಗಿರಬೇಕು?

ಊರ್ಜಂ ಬಿಭ್ರದ್ವಸುವನಿಃ ಸುಮೇಧಾ ಅಘೋರೇಣ ಚಕ್ಷುಷಾ ಮಿತ್ರಿಯೇಣ|
ಗೃಹಾನೈಮಿ ಸುಮನಾ ವಂದಮಾನೋ ರಮಧ್ವಂ ಮಾ ಬಿಭೀತ ಮತ್||

[ಅಥರ್ವಣದ ೭ನೇ ಕಾಂಡದ ೬೦ನೇ ಸೂಕ್ತದ ೧ನೇ ಮಂತ್ರ]

ಈ ಮಂತ್ರದ ಅರ್ಥ ಹೀಗಿದೆ. ಮನೆಯ ಯಜಮಾನನು ಶಕ್ತಿವಂತನಾಗಿರಬೇಕು, ಧನಾರ್ಜನೆ ಮಾಡುತ್ತಿರಬೇಕು, ಮೇಧಾವಂತನಾಗಿರಬೇಕು, ಮನೆಯ ಸದಸ್ಯರೊಡನೆ ಕ್ರೋಧರಹಿತನೂ, ಸ್ನೇಹಪೂರ್ಣ ಕಣ್ಣುಗಳಿಂದ ನೋಡುವವನೂ, ಸುಪ್ರಸನ್ನ ಮನಸ್ಸುಳ್ಳವನೂ, ಎಲ್ಲರಿಂದ ಪ್ರಶಂಸಿಸಲ್ಪಡುವವನೂ ಆಗಿದ್ದು ಎಲ್ಲರೊಡನೆ ಆನಂದದಿಂದ ಪ್ರಸನ್ನನಾಗಿರಬೇಕು.

ಈ ಮಂತ್ರದ ಒಂದೊಂದೂ ಶಬ್ಧಗಳೂ ಅತ್ಯಂತ ಮಹತ್ವ ಉಳ್ಳವುಗಳೇ ಆಗಿವೆ. ಈ ಮಂತ್ರದ ಒಂದೊಂದೇ ಶಬ್ಧದ ಬಗ್ಗೆ ವಿಚಾರ ಮಾಡೋಣ. ಮನೆಯ ಯಜಮಾನನಿಗಿರಬೇಕಾದ ಪ್ರಥಮ ಅರ್ಹತೆ ಎಂದರೆ.. . . . . .

ಊರ್ಜಂ ಬಿಭ್ರತ್ :

ಊರ್ಜಮ್ ಎಂದರೆ ಪ್ರಾಣಬಲ ಅಥವಾ ಶಕ್ತಿ, ಬಿಭ್ರತ್ ಅಂದರೆ ಧಾರಣೆ ಮಾಡು. ಅಂದರೆ ಮನೆಯ ಯಜಮಾನನು ಶಕ್ತಿಯನ್ನು ಹೊಂದಿದವನಾಗಿರಬೇಕು. ಮನೆಯ ಯಜಮಾನನು ಶಕ್ತಿಶಾಲಿಯಾಗಿದ್ದರೆ ಅವನಲ್ಲಿ ಯಾರ ಬಗ್ಗೆಯೂ ದ್ವೇಷ,ಅಸೂಯೆ, ಮಾತ್ಸರ್ಯ ಭಾವನೆಗಳಿರದೆ ಎಲ್ಲರೊಡನೆ ಪವಿತ್ರವಾದ ಪ್ರೇಮಭಾವ ಇದ್ದು ಕುಟುಂಬವು ಸಂತಸದಿಂದ ಇರುತ್ತದೆ. ಯಜಮಾನನೇನಾದರೂ ಶಕ್ತಿಹೀನನಾಗಿದ್ದರೆ ಸಣ್ಣ ಸಣ್ಣ ವಿಷಯಗಳಿಗೂ ಎಲ್ಲರ ಮೇಲೆ ಕೋಪ ಮಾಡಿಕೊಂಡು ರೇಗಾಡುತ್ತಾ ಕುಟುಂಬದ ನೆಮ್ಮದಿಯು ಹಾಳಾಗುತ್ತದೆ. ಆದ್ದರಿಂದ ಗೃಹಸ್ಥನು ತನ್ನ ಶರೀರ ಮತ್ತು ಇಂದ್ರಿಯಗಳನ್ನು ಶಕ್ತಿಯುತವಾಗಿ ಇಟ್ಟುಕೊಳ್ಳಬೇಕೆಂಬುದು ವೇದದ ಆಶಯ. ಯಜಮಾನನಿಗಿರಬೇಕಾದ ಎರಡನೆಯ ಅರ್ಹತೆ ಎಂದರೆ. . . . . .
ವಸುವನೀ
ವಸುವನೀ ಎಂದರೆ ಉತ್ತಮ ಮಾರ್ಗದಲ್ಲಿ ಧರ್ಮದಿಂದ ಧನವನ್ನು ಸಂಪಾದಿಸುವವರು ಎಂದು ಅರ್ಥ. ವಾಮಮಾರ್ಗದಲ್ಲಿ ಎಂದೂ ಹಣವನ್ನು ಸಂಪಾದಿಸ ಕೂಡದು. ಇದು ವೇದದ ಆದೇಶ.
ಯಜುರ್ವೇದದ ೪೦ನೇ ಅಧ್ಯಾಯದ ೧೬ ನೇ ಮಂತ್ರದಲ್ಲಿ ಸಂಪತ್ತನ್ನು ಯಾವ ಮಾರ್ಗದಲ್ಲಿ ಗಳಿಸಬೇಕೆಂಬುದನ್ನು ತಿಳಿಸುತ್ತದೆ.ಆಮಂತ್ರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್ ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೂಧ್ಯಸ್ಮಜ್ಜುಹುರಾಣಮೇನೋ ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||

ಅರ್ಥ
ದೇವ = ದಿವ್ಯ ಸ್ವರೂಪನೇ
ಅಗ್ನೇ = ಪ್ರಕಾಶಮಯ ಭಗವಾನ್
ತೇ = ನಿನಗೆ
ಭೂಯಿಷ್ಠಾಮ್ = ಅತ್ಯಧಿಕವಾಗಿ
ನಮ ಉಕ್ತಿಂ ವಿಧೇಮ = ಸತ್ಕಾರಪೂರ್ವಕವಾಗಿ ನಮಸ್ಕರಿಸುತ್ತೇವೆ.
ವಿದ್ವಾನ್ = ಸರ್ವಜ್ಞನಾದ ನೀನು
ಅಸ್ಮತ್ = ನಮ್ಮಿಂದ
ಜುಹುರಾಣಮ್ = ಕುಟಿಲತೆಯನ್ನು
ಏನ: = ಪಾಪವನ್ನು
ಯುಯೋಧಿ = ಬೇರೆ ಮಾಡು
ಅಸ್ಮಾನ್ = ನಮ್ಮನ್ನು
ರಾಯೇ = ಸುಖಕ್ಕಾಗಿ
ಸುಪಥಾ = ಒಳ್ಳೆಯ ಮಾರ್ಗದಲ್ಲಿ ನಡೆಸು
ವಿಶ್ವಾನಿ ವಯುನಾನಿ = ನಮಗೆ ಸಕಲ ಪ್ರಶಸ್ತ ಜ್ಞಾನಗಳನ್ನು
ನಯ: = ಲಭಿಸುವಂತೆ ಮಾಡು

ಈ ಮಂತ್ರದ ಸಾರವೇನು?
ಜ್ಞಾನದಾತನಾದ ಪ್ರಭುವೇ, ನಮ್ಮಿಂದ ಕುಟಿಲತೆಯನ್ನೂ, ಪಾಪಾಚರಣೆಯನ್ನೂ ದೂರಮಾಡು.ನಮ್ಮನ್ನು ಸನ್ಮಾರ್ಗದಲ್ಲಿ ನಡೆಸುತ್ತಾ, ಸನ್ಮಾರ್ಗದಲ್ಲಿ ಸಂಪತ್ತನ್ನು ಗಳಿಸುವಂತೆಮಾಡು. ನಮ್ಮ ಕಲ್ಯಾಣಕ್ಕಾಗಿ ನಿನಗೆ ಅತ್ಯಧಿಕ ನಮಸ್ಕಾರಗಳನ್ನು ಮಾಡುತ್ತೇನೆ.
ಈ ಮಂತ್ರದಲ್ಲಿ ಒಂದು ಶಬ್ಧಪ್ರಯೋಗವಾಗಿದೆ. ಅದು ರಾಯೇ ಅಂದರೆ ನಮ್ಮ ಸುಖಕ್ಕಾಗಿ ಸಂಪತ್ತನ್ನು ಗಳಿಸಬೇಕೆಂಬುದೇ ವೇದದ ಆಶಯ. ಆದರೆ ಸಂಪತ್ತನ್ನು ಗಳಿಸುವಾಗ ಸನ್ಮಾರ್ಗದಲ್ಲಿ ಗಳಿಸಲು ದಾರಿಮಾಡಿಕೊಡು, ಎಂಬುದು ದೇವರಲ್ಲಿ ನಮ್ಮ ಪ್ರಾರ್ಥನೆ. ಇದರಿಂದ ಏನು ಅರ್ಥವಾಗುತ್ತದೆ ಎಂದರೆ ವೇದವು ಕೇವಲ ವೈರಾಗ್ಯವನ್ನು ಹೇಳುವುದಿಲ್ಲ.ಜೀವನದಲ್ಲಿ ಸುಖವಾಗಿರಿ. ಆದರೆ ಸುಖವಾಗಿರಲು ಅಗತ್ಯವಾದ ಹಣವನ್ನು ಸಂಪಾದಿಸಲು ವಾಮ ಮಾರ್ಗಹಿಡಿಯಬೇಡಿ. ಸನ್ಮಾರ್ಗದಲ್ಲಿ ಧನಾರ್ಜನೆ ಮಾಡಿ, ಜೀವನದಲ್ಲಿ ಸುಖವಾಗಿರಿ, ಎಂಬುದು ವೇದದ ಆಶಯ.
ಹಣವನ್ನು ಹೇಗೆ ಸಂಪಾದಿಸಬೇಕು? ಯಾರಿಗೂ ಕಷ್ಟವನ್ನು ಕೊಡದೆ, ದುರ್ಜನರಿಗೆ ತಲೆಬಾಗದೆ, ಸನ್ಮಾರ್ಗವನ್ನು ಬಿಡದೆ, ಸ್ವಲ್ಪ ದುಡಿದರೂ ಅದೇ ಬಹಳವೆಂದು ದುಡಿದ ಸಂಪಾದನೆಯೇ ಶ್ರೇಷ್ಠ ಎನ್ನುತ್ತದೆ ಮತ್ತೊಂದು ಸುಭಾಷಿತ.
ವಸುವನೀ ಪದದ ಬಗ್ಗೆ ವಿಮರ್ಶೆ ಮಾಡುತ್ತಿದ್ದೆವಲ್ಲವೇ? ವಸು ಎಂಬ ಪದಕ್ಕೆ ಯೋಗ್ಯ ಜೀವನವೆಂದೂ ಅರ್ಥವಿದೆ. ನಾವು ಎಷ್ಟು ಹಣ ಸಂಪಾದಿಸುತ್ತೇವೆಂಬುದಕ್ಕಿಂತ ಎಷ್ಟು ಸರಳವಾಗಿ ಕಡಿಮೆ ಖರ್ಚಿನಲ್ಲಿ ಜೀವನ ಮಾಡುತ್ತೇವೆಂಬುದೂ ಗಣನೆಗೆ ಬರುತ್ತದೆ. ಆದ್ದರಿಂದ ನೆಮ್ಮದಿಯ ಜೀವನಕ್ಕೆ ಹೆಚ್ಚು ಸಂಪಾದನೆ ಬೇಕೆಂದೇನೂ ಅಲ್ಲ, ಆದರೆ ದುಡಿಮೆಯನ್ನು ವ್ಯವಸ್ಥಿತವಾಗಿ ಖರ್ಚು ಮಾಡುತ್ತಾ ಸಂಸಾರ ಮಾಡುವವನನ್ನೂ ವಸುವನೀ ಎನ್ನಬಹುದು.
ಇನ್ನೊಂದು ಬಹಳ ಸತ್ಯವಾದ ವಿಚಾರವೆಂದರೆ ಮಿತವಾಗಿ ಹಣವನ್ನು ಬಳಸುವುದರಿಂದ ವಿಲಾಸೀ ಜೀವನಕ್ಕೆ ಅವಕಾಶವೇ ಇರುವುದಿಲ್ಲ. ಆಗ ಸಹಜವಾಗಿ ಯಾವ ರೋಗದ ಭಯ ಇರುವುದಿಲ್ಲ.ನ್ಯಾಯಮಾರ್ಗದಲ್ಲಿ ದುಡಿಯುವವನಿಗೆ ಭೋಗದ ಪ್ರಶ್ನೆಯೇ ಇಲ್ಲ. ಆಗ ರೋಗದ ಭಯವೆಲ್ಲಿ?

Permanent link to this article: http://www.vedasudhe.com/%e0%b2%9c%e0%b3%80%e0%b2%b5%e0%b2%a8%e0%b2%b5%e0%b3%87%e0%b2%a6-2/

ಜನರಿಗೆ ಸತ್ಯ ತಿಳಿಸುವವರಾರು?

ಜನರಿಗೆ ಸತ್ಯ ತಿಳಿಸುವವರಾರು? ಹಲವು ಸಂದರ್ಭದಲ್ಲಿ ನನ್ನ ಕಣ್ಮುಂದೆ ಈ ಪ್ರಶ್ನೆ ಹೆಮ್ಮರವಾಗಿ ನಿಲ್ಲುತ್ತದೆ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ ಅಸತ್ಯ-ಅಧರ್ಮ-ದಬ್ಬಾಳಿಕೆ-ಬೂಟಾಟಿಕೆ-ಭಯದ ವಾತಾವರಣ ಎದ್ದು ಕಾಣುತ್ತದೆ. ಬ್ರಷ್ಟಾಚಾರದ ವಿರುದ್ಧ ಹೋರಾಟಮಾಡುವ ಹೆಸರಲ್ಲಿ ಜನರಿಂದ ಸುಲಿಗೆ ಮಾಡುವವರಿಗೇನೂ ಕಮ್ಮಿ ಇಲ್ಲ. ಧರ್ಮದ ಹೆಸರಲ್ಲೂ ಸುಲಿಗೆ. ರಾಜಕಾರಣವಂತೂ ಹೊಲಸೆದ್ದು ಹೋಗಿದೆ, ಎಂದೇ ಹೇಳಬೇಕಾಗುತ್ತದೆ. ಸಾಮಾನ್ಯವಾದ ಪ್ರಾಮಾಣಿಕ ಸೇವಾಮನೋಭಾವನೆಯ ವ್ಯಕ್ತಿಯು ರಾಜಕೀಯ ಪ್ರವೇಶಮಾಡಿ ಒಂದು ನಗರಸಭೆಗೆ ಟಿಕೆಟ್ ಪಡೆಯಲು ಸಾಧ್ಯವಿಲ್ಲ. ಅಲ್ಲೂ ಹಣದ,ಜಾತಿಯ ಪ್ರಭಾವ. ಇನ್ನು ದೇವಾಲಯಗಳಲ್ಲಿ ಭಕ್ತರಲ್ಲಿಯೇ ತಾರತಮ್ಯ. ಶ್ರೇಣೀಕೃತ ಭಕ್ತರು! ಮಠಮಂದಿರಗಳಲ್ಲೂ ತಾರತಮ್ಯ. ಜಾತಿಗೆ ಪ್ರಾಶಸ್ತ್ಯ!

ಇದಕ್ಕೆಲ್ಲಾ ಕಾರಣ ಏನು ಗೊತ್ತೇ? ನಮಗೆ ಸತ್ಯದರ್ಶನವಾಗಿಲ್ಲ. ಸತ್ಯ ತಿಳಿದಿಲ್ಲ. ಭಗವಂತನ ಅಸ್ತಿತ್ವದ ಬಗ್ಗೆಯೇ ಸರಿಯಾದ ಅರಿವಿಲ್ಲ. ಭಗವಂತನು ನಿರಾಕಾರಿ, ಸರ್ವವ್ಯಾಪಿ, ಸರ್ವಶಕ್ತ ಎಂಬ ನಿಜದ ಅರಿವು ನಮಗುಂಟಾದರೆ, ಬದುಕಿನ ಉದ್ದೇಶ ತಿಳಿದರೆ ಮುಂದೆ ಯಾವಕ್ಷೇತ್ರವೂ ನಮಗೆ ಸಮಸ್ಯೆ ಎನಿಸುವುದೇ ಇಲ್ಲ. ಹಲವು ವೇಳೆ ನಾವು ಭಯದ ನೆರಳಲ್ಲೇ ಬದುಕು ಸಾಗಿಸುತ್ತೇವೆ. ಕಾರಣ ಬೇರೆ ಏನೂ ಅಲ್ಲ. ಸತ್ಯದ ಅರಿವಿರುವುದಿಲ್ಲ. ನಮ್ಮಲ್ಲಿ ಮನೆ ಮಾಡಿರುವ ಭಯ ಮತ್ತು ಮೌಢ್ಯ ಎರಡು ಸಂಗತಿಗಳು ದೂರವಾದರೆ ನಮ್ಮನ್ನು ಧರ್ಮದ ಹೆಸರಲ್ಲಿ ,ದೇವರಹೆಸರಲ್ಲಿ, ಕಾನೂನಿನ ಹೆಸರಲ್ಲಿ ಶೋಷಿಸುವ, ವಂಚಿಸುವ ಜನರನ್ನು ಮೆಟ್ಟಿ ನಿಲ್ಲಲು ಸಾಮರ್ಥ್ಯ ತಾನೇ ತಾನಾಗಿ ಬರುತ್ತದೆ.

ಸ್ವತಂತ್ರ ಭಾರತದಲ್ಲಿ ಆಗಬೇಕಾಗಿರುವುದು ಜನರಿಗೆ ಸತ್ಯವನ್ನು ತಿಳಿಸುವ ಕೆಲಸ. ವೇದದ ನಿಜವಾದ ಅರಿವಿದ್ದರೆ ಸತ್ಯವು ಮನವರಿಕೆಯಾಗುತ್ತದೆ. ವೇದದ ಹೆಸರಿನಲ್ಲಿಯೇ ನಡೆಯುತ್ತಿರುವ ಬೂಟಾಟಿಕೆಗಳೆಲ್ಲಾ ದೂರವಾಗ ಬೇಕಾದರೆ ವೇದದ ನಿಜ ಅರಿವು ಮೂಡಬೇಕು

ವೇದದ ಅರಿವು ಮೂಡಿದರೆ ಎಲ್ಲಾ ಸಮಸ್ಯೆ ಬಗೆಹರಿಯುತ್ತದೆಂದು ಹೇಗೆ ಹೇಳುವಿರಿ-ಎಂಬುದು ತಾನೇ ನಿಮ್ಮ ಪ್ರಶ್ನೆ.ಅದಕ್ಕೆ ವೇದದಲ್ಲಿಯೇ ಉತ್ತರವಿದೆ.

ನಾವು ಬಹುಪಾಲು ಭಯದಿಂದ ಬದುಕಿರುವುದು ದೇವರ ಹೆಸರಲ್ಲಿ. ಆ ದೇವರ ಬಗ್ಗೆ ಸ್ಪಷ್ಟ ಕಲ್ಪನೆ ವೇದದಲ್ಲಿ ದೊರೆಯುತ್ತದೆ. ಅದೊಂದು ಶಕ್ತಿ .ಇಡೀ ಬ್ರಹ್ಮಾಂಡದ ಎಲ್ಲಾ ಚಲನವಲನ-ಚಟುವಟಿಕೆಗಳ ನಿಯಂತ್ರಣ ಶಕ್ತಿ. ಅದನ್ನು ನೋಡಲು ಸಾಧ್ಯವೇ ಇಲ್ಲ.ಅನುಭವಿಸಬಹುದು ಅಷ್ಟೆ. ಆಶಕ್ತಿಯ ಸರಿಯಾದ ಅರಿವಿಲ್ಲದೆ ದೇವರವಾರಸುದಾರರೆಂದು ಬೀಗುವ ದಳ್ಳಾಳಿಗಳ ಆಟಾಟೋಪಕ್ಕೆ ನಾವೆಲ್ಲಾ ಬಲಿಯಾಗಿದ್ದೇವೆಂದರೆ ನನಗೆಲ್ಲೋ ತಲೆಕೆಟ್ಟಿದೆ-ಎನಿಸಬಹುದು.ಆದರೆ ಅದೇ ಸತ್ಯ.

ಭಗವಂತನು ನಿಮ್ಮಲ್ಲಿ, ನನ್ನಲ್ಲಿ, ಒಂದು ಹುಳುವಿನಲ್ಲೂ ಇದ್ದಾನೆ.ಎಲ್ಲವನ್ನೂ ನಡೆಸುತ್ತಿದ್ದಾನೆ.ಅವನು ಒಬ್ಬನೇ.ಅವನ ಹೆಸರಲ್ಲಿ ಕಿತ್ತಾಟ ನಡೆಯುತ್ತಿಲ್ಲವೇ? ಬೇಕೇ?

ಇನ್ನು ಜಾತಿಯ ಬಗ್ಗೆ ಸಂಘರ್ಷ. ವೇದದಲ್ಲಿ ಜಾತಿಯ ಸುಳಿವೂ ಇಲ್ಲ. ಮಾನವರೆಲ್ಲರೂ ಒಬ್ಬ ತಾಯಿಯ ಮಕ್ಕಳೆಂದು ವೇದವು ಸಾರುತ್ತದೆ. ಆದರೂ ವೇದದ ಹೆಸರಲ್ಲೇ ಜಾತೀಯತೆ ನಡೆಯುತ್ತದೆ.ಈ ಬಗ್ಗೆ ಸರಿಯಾದ ತಿಳುವಳಿಕೆ ಕೊಡುವವರಾರು?

ಸ್ವಾತಂತ್ರ್ಯ ಬಂದು ಏಳು ದಶಕಗಳು ಮುಗಿಯುತ್ತಾ ಬಂತು. ಯಾವ ಋಷಿಮುನಿಗಳ ತಪಸ್ಸಿನಿಂದ ನಮಗೆ “ವೇದವೆಂಬ” ಒಂದು ಜ್ಞಾನ ಭಂಡಾರ ಲಭ್ಯವಾಗಿದೆಯೋ ಅದರ ಸೂತ್ರಗಳ ಮೇಲೆ ನಮ್ಮ ವ್ಯವಸ್ಥೆಯನ್ನು ಬಲಪಡಿಸುತ್ತಾ ಹೋಗಿದ್ದರೆ ನಮ್ಮ ದೇಶವು ಇಂದಿನ ಕೆಟ್ಟಸ್ಥಿತಿಯಲ್ಲಿರಬೇಕಾಗಿರಲಿಲ್ಲ. ಇನ್ನೂ ಕಾಲಮಿಂಚಿಲ್ಲ. ನಮ್ಮ ದೇಶವನ್ನು ಮುನ್ನಡೆಸುವುದಕ್ಕೆ ಹೊರಗಿನಿಂದ ಶಿಕ್ಷಣ ಪಡೆಯಬೇಕಾಗಿಲ್ಲ. ವೇದವೆಂಬ ಜ್ಞಾನ ಭಂಡಾರದ ವ್ಯಾಪಕ ಅಧ್ಯಯನ ಆಗಬೇಕು. ಇಲ್ಲಿ ಒಂದು ತಪ್ಪು ಭಾವನೆ ಕೂಡ ಇದೆ. ವೇದವೆಂದರೆ ಹೋಮಹವನಗಳನ್ನು ಮಾಡಿಸಲು ಬೇಕಾದ ಮಂತ್ರಗಳನ್ನು ಕಲಿಯುವುದು! ಈ ಭಾವನೆ ದೂರವಾಗಬೇಕು. ವೇದವೆಂದರೆ ಸಮಸ್ತ ಬದುಕಿನ ಜ್ಞಾನ ಭಂಡಾರ. ಅದರ ಆಮೂಲಾಗ್ರ ಅಧ್ಯಯನ ಆದರೆ ನಮ್ಮ ಸಾಮಾಜಿಕ ಬದುಕಿನ, ವೈಯಕ್ತಿಕ ಬದುಕಿನ, ರಾಷ್ಟ್ರದ ಅಭಿವೃದ್ಧಿಯ ಎಲ್ಲಾ ವಿಚಾರಕ್ಕೂ ಮಾರ್ಗದರ್ಶನ ಸಾಧ್ಯ. ಈ ಬಗ್ಗೆ ಒತ್ತಾಯ ಮಾಡುವ ಶಕ್ತಿ ವೃದ್ಧಿಯಾಗಬೇಕಾಗಿದೆ.

Permanent link to this article: http://www.vedasudhe.com/%e0%b2%9c%e0%b2%a8%e0%b2%b0%e0%b2%bf%e0%b2%97%e0%b3%86-%e0%b2%b8%e0%b2%a4%e0%b3%8d%e0%b2%af-%e0%b2%a4%e0%b2%bf%e0%b2%b3%e0%b2%bf%e0%b2%b8%e0%b3%81%e0%b2%b5%e0%b2%b5%e0%b2%b0%e0%b2%be%e0%b2%b0%e0%b3%81/

ಜೀವನವೇದ-1

ವೇದಭಾರತಿಯ ಕಾರ್ಯಕ್ರಮಗಳ ಒತ್ತಡದಲ್ಲಿ ವೇದಸುಧೆಯನ್ನು ಗಮನಿಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ನನ್ನ ಪುಸ್ತಕ “ಜೀವನವೇದ” ಲೋಕಾರ್ಪಣೆಯಾಗಿದೆ. ಪುಸ್ತಕವನ್ನು ಲೋಕಾರ್ಪಣೆಮಾಡಿದ ಸಂಸ್ಕೃತ ವಿ.ವಿ.ಯ ವಿಶ್ರಾಂತ ಕುಲಪತಿ ಶ್ರೀ ಮಲ್ಲೇಪುರಮ್ ವೆಂಕಟೇಶ್ ಮತ್ತು ಪುಸ್ತಕವನ್ನು ಕುರಿತು ಮಾತನಾಡಿದ ವಿಕ್ರಮ ಸಾಪ್ತಾಹಿಕ ಪತ್ರಿಕೆಯ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ಮಾತುಗಳನ್ನು ಕೇಳಿ.ನಾಳೆ ಉಗಾದಿ ಹಬ್ಬದಿಂದ ಆರಂಭಿಸಿ ಪ್ರತಿ ಭಾನುವಾರ “ಜೀವನವೇದದ” ಒಂದೊಂದು ಲೇಖನವನ್ನು ಇಲ್ಲಿ ಪ್ರಕಟಿಸಲಾಗುವುದು. ಶ್ರೀಸುಧಾಕರಶರ್ಮರ ಆರೋಗ್ಯವನ್ನು ನೋಡಿಕೊಂಡು ಅವರ ಉಪನ್ಯಾಸವನ್ನೂ ಸಹ ವಾರಕ್ಕೊಂದಾದರೂ ಪ್ರಕಟಿಸಬೇಕೆಂಬ ಆಸೆ ಇದೆ.ಎಂದಿನಂತೆ ಸಹಕರಿಸುತ್ತೀರಾಗಿ ನಂಬಿಕೆ ಇದೆ. ಹೊಸವರ್ಷವು ಎಲ್ಲರಿಗೂ ಶುಭವನ್ನು ತರಲಿ.

 

 

 

 

ಭಾಗ-೧

ಜೀವನ ಎಂದರೆ ಹಿಡಿಯಷ್ಟು ಸುಖ, ಬೆಟ್ಟದಷ್ಟು ಕಷ್ಟ- ಎಂಬುದು ಸಾಮಾನ್ಯರ ಮಾತು. ಯಾಕೆ ಹೀಗೆ? ಜೀವನದಲ್ಲಿ ನೆಮ್ಮದಿ ಸಿಗುವುದು ಯಾಕೆ ದುಸ್ತರವಾಗುತ್ತದೆ? ಸುಖೀಕುಟುಂಬ ಎಂಬುದು ಗಗನಕುಸುಮವೇ? ಜೀವನದಲ್ಲಿ ಸುಖವಾಗಿರಲು, ನೆಮ್ಮದಿಯಾಗಿರಲು ನಮ್ಮ ಋಷಿಮುನಿಗಳು ಏನಾದರೂ ಸೂತ್ರಗಳನ್ನು ನೀಡಿದ್ದಾರೆಯೇ? ನಮ್ಮ ಆಧುನಿಕ ವಿಜ್ಞಾನದ ಸಲಕರಣೆಗಳು ಜೀವನಕ್ಕೆ ಎಷ್ಟು ನೆಮ್ಮದಿಯನ್ನು ಕೊಟ್ಟಿದೆ? ಎಷ್ಟು ನೆಮ್ಮದಿ ಹಾಳಾಗಿದೆ? ಹೀಗೆಲ್ಲಾ ಯೋಚಿಸುವಾಗ ಕಟ್ಟ ಕಡೆಗೆ ನಾವು ಆಶ್ರಯಿಸುವುದು ನಮ್ಮ ಋಷಿ ಮುನಿಗಳು ನೀಡಿದ ಮಾರ್ಗವನ್ನು. ಆ ಹೊತ್ತಿಗೆ ನಮ್ಮ ಜೀವನದ ಆಯುಷ್ಯವು ಬಹುಪಾಲು ಮುಗಿದಿರುತ್ತದೆ. ಕಡೆಯ ದಿವಸಗಳನ್ನು ಭಗವಚ್ಚಿಂತನೆಯಲ್ಲಿ ಕಳೆಯುತ್ತಾ ಅಂತಿಮ ದಿನಗಳನ್ನು ಎಣಿಸುವಂತಹ ಸ್ಥಿತಿ ಬರಬೇಕೇ? ಅಧ್ಯಾತ್ಮ ಚಿಂತನೆ ಎಂದರೆ ವೃದ್ಧಾಪ್ಯದಲ್ಲಿ ಮಾಡಬೇಕಾದ್ದೇ? ನಮ್ಮ ಜೀವನಕ್ಕೆ ನಿಜವಾಗ ಮಾರ್ಗದರ್ಶನ ಎಲ್ಲಿದೆ? ಇನ್ನು ಮುಂದೆ ಚಿಂತನೆ ಮಾಡುತ್ತಾ ಸಾಗೋಣ, ನನ್ನೊಡನೆ ನೀವೂ ಬರುವಿರಾ? ಸ್ವರ್ಗ ಎಲ್ಲಿದೆ? ಸತ್ತಮೇಲೆ ಸ್ವರ್ಗ-ನರಕಗಳೋ? ಬದುಕಿದ್ದಾಗಲೋ? ಸ್ವರ್ಗವೆಲ್ಲಿದೆಯೋ ಗೊತ್ತಿಲ್ಲ.ಆದರೆ ಹಲವಾರು ಮನೆಗಳು ನಿತ್ಯ ನರಕವಾಗಿ ಇರುವುದಂತೂ ಸತ್ಯ. ಹಾಗಾದರೆ ಮನೆಗಳನ್ನು ಸ್ವರ್ಗವಾಗಿ ಮಾಡಲು ಸಾಧ್ಯವಿಲ್ಲವೇ? ಸಾಧ್ಯ, ಎನ್ನುತ್ತದೆ ವೇದ. ಮನೆಯು ಸ್ವರ್ಗದಂತಿರಬೇಕಾದರೆ ಹೀಗಿರಬೇಕು ಎಂದು ವೇದವು ಕೆಲವು ಜೀವನ ಸೂತ್ರಗಳನ್ನು ಹೇಳುತ್ತದೆ. ಅದನ್ನು ಅನುಸರಿಸಿದ್ದೇ ಆದರೆ ಮನೆಯನ್ನು ಸ್ವರ್ಗ ಮಾಡುವುದೇನೂ ಕಷ್ಟಸಾಧ್ಯವಲ್ಲ. ಹಿಂದುಗಳಲ್ಲಿ ವಿವಾಹ ಸಂದರ್ಭದಲ್ಲಿ ಸಪ್ತಪದೀ ಎಂಬ ಒಂದು ವಿಧಿ ಇರುತ್ತದೆ. ಪುರೋಹಿತರು ಮಂತ್ರ ಹೇಳುತ್ತಾರೆ. ವಧು-ವರರು ಒಟ್ಟು ಏಳು ಹೆಜ್ಜೆ ಹಾಕುತ್ತಾರೆ. ಆ ಏಳು ಮಂತ್ರಗಳು ಒಂದೊಂದೂ ಉತ್ಕೃಷ್ಟ. ಅದರಲ್ಲಿ ಒಂದು ಮಂತ್ರದ ಅರ್ಥವನ್ನು ಇಲ್ಲಿ ತಿಳಿಯೋಣ.

 ಸಖೇ ಸಪ್ತಪದೀ ಭವ

ನೀನು ನನಗೆ ಮಿತ್ರಳಂತೆ ಇರು/ನೀನು ನನಗೆ ಮಿತ್ರನಂತೆ ಇರು ಇದು ವಿವಾಹ ಸಂದರ್ಭದಲ್ಲಿ ಗಂಡು-ಹೆಣ್ಣು ಪರಸ್ಪರ ಹೇಳಿಕೊಳ್ಳುವ ಮಾತು. ನಾನೂ ನೀನೂ ಪರಸ್ಪರ ಮಿತ್ರರಂತೆ ಇರೋಣ ಎಂಬ ಸಂಕಲ್ಪವನ್ನು ನೂರಾರು ಜನರ ಮುಂದೆ ಮಾಡುವುದೇ ಸಪ್ತಪದೀ. ಎಷ್ಟು ಜನರಿಗೆ ಇದು ಆ ಸಂದರ್ಭದಲ್ಲಿ ಅರ್ಥವಾಗುತ್ತದೋ ಗೊತ್ತಿಲ್ಲ. ಒಂದು ವೇಳೆ ಅರ್ಥವಾಗಿ ಅದರಂತೆ ಜೀವನ ಮಾಡಿದ್ದೇ ಆದರೆ ಅದೇ ಸ್ವರ್ಗ. ಸ್ವರ್ಗ ಇನ್ನೆಲ್ಲೂ ಇಲ್ಲ. ಪತಿ-ಪತ್ನಿಯರು ಪರಸ್ಪರ ಮಿತ್ರರಂತೆ ಇದ್ದರೆ ಆ ದಾಂಪತ್ಯ ಹೇಗಿದ್ದೀತು? ದಾಂಪತ್ಯವು ಗಟ್ಟಿಯಾಗಿ ಸದಾಕಾಲ ಸಂತೋಷವಾಗಿರಲೆಂದು ನಮ್ಮ ಹಿರಿಯರು ಕೊಟ್ಟ ಸೂತ್ರ ಸಪ್ತಪದೀ. ಸಖೇ ಸಪ್ತಪದೀ ಭವ ಎಂಬ ಮಂತ್ರವನ್ನು ಹೇಳಿ ಮದುವೆಯಾಗಿದ್ದೇನೆ. ಇದಕ್ಕೆ ಮದುವೆಗೆ ಬಂದ ನೂರಾರು ಜನರು ಸಾಕ್ಷಿಯಾಗಿದ್ದಾರೆ, ಎಂದು ಯಾರಾದರೂ ಮದುವೆಯ ನಂತರ ಯೋಚಿಸಿದ್ದಾರೆಯೇ? ಹಾಗೆ ಒಂದು ವೇಳೆ ಮಂತ್ರದ ಅರ್ಥವನ್ನು ತಿಳಿದು ಮನ: ಪೂರ್ವಕವಾಗಿ ವಧು-ವರರು ಈ ಮಂತ್ರವನ್ನು ಹೇಳಿದ್ದೇ ಆದರೆ ಈಗ ನಡೆಯುತ್ತಿರುವಂತಹ ಡೈವರ್ಸ್ ಗಳು ನಡೆಯಲು ಸಾಧ್ಯವೇ? ಡೈವರ್ಸ್ ಗಳ ವಿಚಾರದಲ್ಲಿ ಎಂತಹ ಚರ್ಚೆಗಳು ಟಿ.ವಿ. ಮಾಧ್ಯಮಗಳಲ್ಲಿ ನಡೆಯುತ್ತವೆ! ಗಂಡು-ಹೆಣ್ಣಿಗೆ ಹೊಂದಾಣಿಕೆ ಆಗದಿದ್ದಮೇಲೆ ಜೀವನ ಪರ್ಯಂತ ಹೀಗೆಯೇ ಕಾಲ ಹಾಕಲು ಸಾಧ್ಯವೇ? ಅದಕ್ಕೆ ನನ್ನ ಮಗಳಿಗೆ ಡೈವರ್ಸ್ ಕೊಟ್ಟು ಬಾ ಎಂದು ಹೇಳಿದೆ ಎಂದು ಒಬ್ಬ ತಾಯಿಯು ಹೇಳುತ್ತಾಳೆಂದರೆ,ಎಂತಹ ಸಂದರ್ಭದಲ್ಲಿ ಈ ಸಮಾಜವಿದೆ! ಎಂಬುದನ್ನು ಸ್ವಲ್ಪ ಆಳವಾಗಿ ಚಿಂತನೆ ನಡೆಸಬೇಡವೇ? ಡೈವರ್ಸ್ ಕೊಡುವ ಪರಿಸ್ಥಿತಿ ಯಾಕೆ ಬಂತು? ಈ ಬಗ್ಗೆ ಪತಿ-ಪತ್ನಿಯರಾಗಲೀ ಅಥವಾ ಅವರ ಅಪ್ಪ-ಅಮ್ಮನಾಗಲೀ ವಿಚಾರ ಮಾಡುತ್ತಾರೆಯೇ? ಮದುವೆಗೆ ಮುಂಚೆ ಹಣಕ್ಕೋ, ಪದವಿಗೋ, ರೂಪಕ್ಕೋ ಬಲಿಯಾಗಿ ಮದುವೆಯಾದಮೇಲೆ ಈಗ ಸಂಸಾರದಲ್ಲಿ ಸುಖವಿಲ್ಲ ಎಂದರೆ ಹೇಗೆ ಸಿಗಲು ಸಾಧ್ಯ? ಆ ಬಗ್ಗೆ ಮದುವೆಗೆ ಮುಂಚೆ ಯೋಚಿಸಬೇಕಿತ್ತು , ಅಲ್ಲವೇ? ಮದುವೆ ಎಂದರೆ ಇದು ಜೀವನ ಪರ್ಯಂತದ ಕುಟುಂಬವ್ಯವಸ್ಥೆ.ಅದು ಸುಭದ್ರವಾಗಿರಬೇಕೆಂದರೆ ಗಂಡು-ಹೆಣ್ಣಿನ ನಡುವೆ ಹೊಂದಾಣಿಕೆಗೆ ನೋಡಬೇಕಾದ ಅಂಶಗಳೇನೆಂಬ ಬಗ್ಗೆ ನಮಗೆ ಅರಿವಿರಬೇಕಲ್ಲವೇ? ಸಾಮಾನ್ಯವಾಗಿ ಮದುವೆ ಮಾಡುವಾಗ ಹಿಂದು ಸಮಾಜದಲ್ಲಿ ಹೆಚ್ಚು ಮಹತ್ವಕೊಡುವುದು ಗಂಡು-ಹೆಣ್ಣಿನ ಜಾತಕಕ್ಕೆ. ಇಷ್ಟು ಗುಣಗಳಿದ್ದರೆ ಮದುವೆ ಮಾಡಿಕೊಳ್ಳಬಹುದು,ಇಲ್ಲದಿದ್ದರೆ ಇಲ್ಲ. ಮದುವೆಯಾಗಬೇಕಾದ ಹುಡುಗ-ಹುಡುಗಿರ ವಿದ್ಯೆ, ರೂಪ, ಸ್ವಭಾವಗಳ ಹೊಂದಾಣಿಕೆಯಾಗಬೇಕಲ್ಲವೇ? ಹುಡುಗಿ ಅತ್ಯಂತ ಶ್ರೀಮಂತ ಮನೆಯವಳಾಗಿದ್ದು ಹಣದಾಸೆಯಿಂದ ಹುಡುಗನು ಆಕೆಯನ್ನು ಮದುವೆಯಾಗಿದ್ದರೆ ಈ ದಂಪತಿಗಳ ಜೀವನದಲ್ಲಿ ಹೊಂದಾಣಿಕೆ ಬರಲು ಸಾಧ್ಯವೇ? ಶ್ರೀಮಂತರಾದವರೆಲ್ಲಾ ಕೆಟ್ಟವರಲ್ಲ. ಶ್ರೀಮಂತ ಮನೆಯ ಹುಡುಗ-ಹುಡುಗಿಯರಲ್ಲೂ ಬಡವರನ್ನು ಮದುವೆ ಯಾಗಬೇಕೆಂದು ಬಯಸುವವರೂ ಇದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಶ್ರೀಮಂತಿಕೆ-ಬಡತನ ಗಣನೆಗೆ ಬರುವುದಿಲ್ಲ ಬದಲಾಗಿ ಅವರ ಸ್ವಭಾವಗಳು, ಸದ್ಗುಣಗಳು ಗಣನೆಗೆ ಬರುತ್ತವೆ.ಈ ವಿಚಾರಗಳನ್ನು ಗಮನಿಸದೆ ಎಲ್ಲವೂ ಸರಿಯಾಗಿದೆ ಜಾತಕ ಒಂದು ಕೂಡಿಬಂದರೆ ಮದುವೆ ಆದಂತೆಯೇ ಎಂಬ ವಿಚಾರವಿದ್ದರೆ ಅದೇ ಬಲು ಅಪಾಯದ ಅಂಶವೆಂಬುದು ಹಲವರಿಗೆ ಅರ್ಥವಾಗುವುದೇ ಇಲ್ಲ. ಸುಖ ದಾಂಪತ್ಯಕ್ಕೆ ವೇದವು ಏನು ಹೇಳುತ್ತದೆ? ನೋಡೋಣ. ಅಥರ್ವಣ ವೇದದ ಒಂದು ಮಂತ್ರವು ಇನ್ನೂ ಅದ್ಭುತವಾಗಿ ಹೇಳುತ್ತದೆ.

 ಇಹೇಮಾವಿಂದ್ರ ಸಂ ನುದ ಚಕ್ರವಾಕೇವ ದಂಪತೀ| [ಕಾಂಡ ೧೪ ಸೂಕ್ತ ೨ ಮಂತ್ರ ೬೪]

ಅರ್ಥ:- ಪತಿ ಪತ್ನಿಯರಿಬ್ಬರೂ ಚಕ್ರವಾಕ ಪಕ್ಷಿಗಳಂತೆ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲಿ. ವೇದ ಮಂತ್ರಗಳೆಂದರೆ ಕೇವಲ ಪೂಜೆ ಪುನಸ್ಕಾರಕ್ಕೆ ಇರುವ ಮಂತ್ರಗಳೇ? ಈ ಮೇಲಿನ ಮಂತ್ರದ ಅರ್ಥವನ್ನು ಗ್ರಹಿಸಿದಾಗ ಆಶ್ಚರ್ಯವಾಗದೇ ಇರದು. ಚಕ್ರವಾಕ ಪಕ್ಷಿಗೆ ಕೋಕ ಪಕ್ಷಿ ಎಂತಲೂ ಹೇಳುತ್ತಾರೆ. ಗಂಡು ಹೆಣ್ಣು ಸದಾಕಾಲ ಒಟ್ಟೊಟ್ಟಿಗೆ ಇದ್ದು ಸಾಯುವವರೆಗೂ ಸಂತೋಷ ಅನುಭವಿಸಿಯೇ ಸಾಯುತ್ತವೆ. ಅಂತಹ ಪಕ್ಷಿಗಳಂತೆ ಪತಿ ಪತ್ನಿಯರು ಪರಸ್ಪರ ಪ್ರೀತಿಯಿಂದಿರಬೇಕು-ಎಂಬುದು ವೇದದ ಆಶಯ. ಈಗ ಹೇಳಿ, ವೇದವು ವೈರಾಗ್ಯವನ್ನು ಹೇಳುವುದೇ? ಇಲ್ಲಿ ಕೋಕ ಪಕ್ಷಿಯಂತೆ ಪರಸ್ಪರ ಪ್ರೀತಿಯಿಂದ ಪತಿ ಪತ್ನಿಯರು ಇರಬೇಕೆಂಬುದು ಸ್ವಲ್ಪ ವಿಪರೀತವೆನಿಸಿದರೂ ಜೀವನದ ಹಲವು ಘಟ್ಟಗಳಲ್ಲಿ ನಾವು ಹೇಗೆ ಜೀವನವನ್ನು ನಿರ್ವಹಿಸಬೇಕೆಂಬ ಸರಿಯಾದ ಮಾರ್ಗದರ್ಶನವನ್ನು ವೇದವು ನಮಗೆ ನೀಡುತ್ತದೆ.

 

 

 

Permanent link to this article: http://www.vedasudhe.com/%e0%b2%9c%e0%b3%80%e0%b2%b5%e0%b2%a8%e0%b2%b5%e0%b3%87%e0%b2%a6-1/

ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ

ಸಾನ್ನಿಧ್ಯ : ಪೂಜ್ಯ ಸ್ವಾಮೀ ಚಿದ್ರೂಪಾನಂದ ಸರಸ್ವತೀ
 ಸ್ಥಳ :  ಆರ್ಷ ವಿದ್ಯಾನಿಕೇತನ , ಮಲಗುಂದ , ಹಾನಗಲ್ -ತಾ||, ಹಾವೇರಿ ಜಿಲ್ಲೆ.   ದಿನಾಂಕ : 10.02.2015  ಮಂಗಳವಾರ ಆಸಕ್ತರೆಲ್ಲರಿಗೂ  ಮುಕ್ತ ಅವಕಾಶ. 

ಹಾವೇರಿ  ಸಮೀಪ ಮಲಗುಂದದಲ್ಲಿ ಪೂಜ್ಯ ಚಿದ್ರೂಪಾನಂದಸರಸ್ವತೀ ಸ್ವಾಮೀಜಿಯವರ ಆಶ್ರಮದಲ್ಲಿ  ದಿನಾಂಕ 10.2.2015 ರಂದು ಒಂದು ಸಾವಿರ ಜನರಿಂದ ಸಾಮೂಹಿಕ ಅಗ್ನಿಹೋತ್ರ ನಡೆಯಲಿದ್ದು ಆಸಕ್ತರು ಪಾಲ್ಗೊಳ್ಳಲು ಅವಕಾಶವಿದೆ. ಹಾಸನದಿಂದ ಸುಮಾರು ಒಂದು ನೂರು ವೇದಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ 9.2.2015 ರಂದು ಸೋಮವಾರ ರಾತ್ರಿ 12.30 ಕ್ಕೆ ಹಾಸನದಿಂದ ರೈಲಿನಲ್ಲಿ ಹೊರಟು 10.2.2015 ಬೆಳಿಗ್ಗೆ 6.00 ಕ್ಕೆ  ಹಾವೇರಿ ತಲುಪಿ, ಅಲ್ಲಿಂದ ಆಶ್ರಮದ ಬಸ್ ಗಳಲ್ಲಿ  ಕಾರ್ಯಕ್ರಮ ಸ್ಥಳಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಇರುತ್ತದೆ. ಅಂದೇ ರಾತ್ರಿ 10.30 ಕ್ಕೆ ಹಾವೇರಿಯಿಂದ ರೈಲಿನಲ್ಲಿ ಹೊರಟು ಬೆಳಿಗ್ಗೆ 4.30 ಕ್ಕೆ ಹಾಸನಕ್ಕೆ ಹಿಂದಿರುಗಬಹುದಾಗಿದೆ. ಆಸಕ್ತರು ರೈಲಿನಲ್ಲಿ ಹೋಗಿಬರುವ  ಪ್ರಯಾಣದ ಖರ್ಚು ಒಬ್ಬರಿಗೆ  ರೂ 400.00 ನ್ನು ದಿನಾಂಕ 10.1.2015 ರೊಳಗೆ ಹರಿಹರಪುರಶ್ರೀಧರ್, ಮೊಬೈಲ್ ನಂಬರ್-9663572406,  ಈಶಾವಾಸ್ಯಮ್, ಶಕ್ತಿ ಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ, ಹಾಸನ-ಇವರಿಗೆ ತಲುಪಿಸಿ ಅಗ್ನಿಹೋತ್ರಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿರುತ್ತದೆ.

ಈ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ ಆಸಕ್ತರು ಪಾಲ್ಗೊಳ್ಲಲು ಅವಕಾಶವಿದ್ದು ಪಾಲ್ಗೊಳ್ಳ  ಬಯಸುವವರು ಮೇಲ್ಕಂಡ ನನ್ನ ಮೊಬೈಲ್ ಗೆ ಕರೆಮಾಡಿ ತಿಳಿಸಲು ಕೋರುವೆ. ಮೇಲೆ ತಿಳಿಸುವ ರೈಲು ಮೈಸೂರು-ಧಾರವಾಡ ಟ್ರೈನ್ ಆಗಿದ್ದು ಅದು  ರಾತ್ರಿ 10.30 ಕ್ಕೆ ಮೈಸೂರು ಬಿಟ್ಟು ರಾತ್ರಿ 12.30ಕ್ಕೆ ಹಾಸನ ತಲುಪುತ್ತದೆ.ಅದೇ ರಲಿನಲ್ಲಿ ಹಾಸನದಿಂದ ನಾವು ನೂರು ಜನರು ಹೊರಟು ಹಾವೇರಿಯನ್ನು ಬೆಳಿಗ್ಗೆ 6.00 ಕ್ಕೆ ತಲುಪುತ್ತೇವೆ. ಅಲ್ಲಿಂದ ಆಶ್ರಮದ ಬಸ್ ನಲ್ಲಿ ಮಲಗುಂದಕ್ಕೆ ಹೋಗುವ ವ್ಯವಸ್ಥೆ ಎಲ್ಲರಿಗೂ ಇದೆ.

ಬೆಂಗಳೂರಿನಿಂದ ಹಾಗೂ ಉಳಿದ ನಗರಗಳಿಂದಲೂ ಹಾವೇರಿಗೆ ರೈಲು ವ್ಯವಸ್ಥೆ ಇದೆ. ಹಾವೇರಿಯಿಂದ ಆಶ್ರಮದ ವ್ಯವಸ್ಥೆಯಲ್ಲಿ ಮಲಗುಂದ ಕ್ಕೆ ಹೋಗ ಬೇಕೆಂದರೆ ಬೆಳಿಗ್ಗೆ 6.00 ಗಂಟೆಗೆ ಹಾವೇರಿ ತಲುಪಿರಬೇಕು. ಸಮಯ ವೆತ್ಯಾಸದಲ್ಲಿ ಹಾವೇರಿ ತಲುಪಿದರೆ ಹಾವೇರಿಯಿಂದ  ಅಕ್ಕಿಆಲೂರಿಗೆ KSRTC ಬಸ್ ನಲ್ಲಿ ಬಂದು ಅಲ್ಲಿಂದ ಆಟೋರಿಕ್ಷಾದಲ್ಲಿ ಮಲಗುಂದ ಆಶ್ರಮ ತಲುಪಬಹುದು.

 ಸಹಯೋಗ:  ವೇದಭಾರತೀ , ಹಾಸನ 

ವಿವರಗಳಿಗೆ vedasudhe@gmail.com   ಗೆ  ಮೇಲ್ ಮಾಡಿ. 

ಸ್ವಲ್ಪ ತಾಳ್ಮೆ ಇರಲಿ- ಕ್ಲಿಕ್ ಮಾಡಬೇಡಿ. ಇದೀಗ ನೀವು ಅಗ್ನಿಹೋತ್ರ ಮಂತ್ರ ಕೇಳುವಿರಿ.

Permanent link to this article: http://www.vedasudhe.com/%e0%b2%92%e0%b2%82%e0%b2%a6%e0%b3%81-%e0%b2%b8%e0%b2%be%e0%b2%b5%e0%b2%bf%e0%b2%b0-%e0%b2%9c%e0%b2%a8%e0%b2%b0%e0%b2%bf%e0%b2%82%e0%b2%a6-%e0%b2%b8%e0%b2%be%e0%b2%ae%e0%b3%82%e0%b2%b9%e0%b2%bf/

ನಮ್ಮೊಳಗಡಗಿರುವ ದುಷ್ಟಪ್ರಾಣಿಗಳು

ಋಗ್ವೇದದ ಈ ಒಂದು ಮಂತ್ರದ ಬಗ್ಗೆ ವಿಚಾರಮಾಡೋಣ.

ಉಲೂಕಯಾತುಂ ಶುಶುಲೂಕಯಾತುಂ ಜಹಿ ಶ್ವಯಾತುಮುತ ಕೋಕಯಾತುಮ್|
ಸುಪರ್ಣಯಾತುಮುತ ಗೃಧ್ರಯಾತುಂ ದೃಷದೇವ ಪ್ರಮೃಣ ರಕ್ಷ ಇಂದ್ರ
[ಋಗ್ವೇದ ಮಂಡಲ ೭ ಸೂಕ್ತ ೧೦೪ ಮಂತ್ರ ೨೨]

ಪದಾರ್ಥ :

ಉಲೂಕಯಾತುಂ=ಗೂಬೆಯ ನಡೆಯೆಂಬ
ರಕ್ಷಃ = ಅವಗುಣ [ಮೋಹ]
ಶುಶುಲೂಕಯಾತುಂ= ತೋಳನನಡೆ
ರಕ್ಷಃ = ಅವಗುಣ [ಕ್ರೋಧ]
ಶ್ವಯಾತುಮ್=ನಾಯಿಯ ನಡೆ
ರಕ್ಷಃ = ಅವಗುಣ [ಲೋಭ]
ಉತ= ಮತ್ತು
ಕೋಕಯಾತುಮ್= ಜಕ್ಕವಕ್ಕಿಯನಡೆ
ರಕ್ಷಃ = ಅವಗುಣ [ಕಾಮ]
ಜಹಿ = ಹೊಡೆದುಹಾಕು
ಸುಪರ್ಣಯಾತುಮ್= ಗರುಡಪಕ್ಷಿಯ ನಡೆ
ರಕ್ಷಃ = ಅವಗುಣ [ಮದ]
ಉತ= ಮತ್ತು
ಗೃಧ್ರಯಾತುಂ= ಹದ್ದಿನ ನಡೆ
ರಕ್ಷಃ = ಅವಗುಣ [ಮಾತ್ಸರ್ಯ]
ದೃಷದಾ ಇವ = ಕಲ್ಲಿನಂತಹ ಕಠೋರವಾದ ಸಾಧನದಿಂದ
ಪ್ರಮೃಣ = ಚೆನ್ನಾಗಿ ಹೊಸಕಿ ಹಾಕು

ಈ ವೇದ ಮಂತ್ರದಲ್ಲಿ ನಮ್ಮೊಳಗಿರುವ ದುಷ್ಟಗುಣಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದೆ. ಈ ದುಷ್ಟಗುಣಗಳನ್ನು ಒಂದೊಂದು ಪ್ರಾಣಿಯ ಅವಗುಣಕ್ಕೆ ಹೋಲಿಸಿ ಮನದಟ್ಟು ಮಾಡಲಾಗಿದೆ. ನಮ್ಮೊಳಗಡಗಿರುವ ಈ ದುಷ್ಟಪ್ರಾಣಿಗಳು ಯಾವುವೆಂದು ನೋಡೋಣ.
ಉಲೂಕಯಾತುಂ ಅಂದರೆಗೂಬೆಯ ನಡೆ. ನಮ್ಮೆಲ್ಲರೊಳಗೆ ಗೂಬೆಗಳು ಸೇರಿಬಿಟ್ಟಿವೆ.ಗೂಬೆಗಳಿಗೆ ಬೆಳಕು ಕಂಡರೆ ಆಗುವುದಿಲ್ಲ. ಬೆಳಕು ಕಂಡೊಡನೆಯೇ ಓಡಿಹೋಗಿಬಿಡುತ್ತವೆ. ನಮ್ಮೊಳಗಿರುವ ಗೂಬೆಯಂತಹ ಗುಣಕ್ಕೂ ಹಾಗೆಯೇ. ಜ್ಞಾನವೆಂಬ ಬೆಳಕನ್ನು ಕಂಡರೆ ಆಗುವುದಿಲ್ಲ. ಜ್ಞಾನವೆಂಬ ಬೆಳಕನ್ನು ಕಂಡಕೂಡಲೇ ಓಡಿಹೋಗುವ ಸ್ವಭಾವವಿದೆಯಲ್ಲಾ ಇದು ಗೂಬೆಯ ಸ್ವಭಾವ. ಇದು ನಮ್ಮೊಳಗಿದೆ.ಈ ಗುಣವಿದ್ದಾಗ ಕತ್ತಲೆಯಲ್ಲಿ ಏನು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಅಜ್ಞಾನವೆಂಬ ಅಂಧಕಾರವಿದ್ದಾಗ ನಮಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಾಗುವುದೇ ಇಲ್ಲ. ಇದಕ್ಕೆ ಮೋಹವೆಂದೂ ಹೇಳಬಹುದು. ಮೋಹಕ್ಕೆ ಬಲಿಯಾದಾಗ ನಮಗೆ ಎಲ್ಲವೂ ಸರಿಯಾಗಿಯೇ ಕಾಣುತ್ತದೆ. ಈ ಮೋಹದ ಪರಿಣಾಮದಿಂದ ನಮ್ಮ ಮನೆಯಲ್ಲಿ ಏನು ತಪ್ಪುಗಳು ನಡೆದರೂ ನಮಗೆ ಗೊತ್ತಾಗುವುದೇ ಇಲ್ಲ. ಮೋಹದ ಪಾಶಕ್ಕೆ ನಾವು ಒಳಗಾಗಿರುತ್ತೇವೆ.
ನಮ್ಮೊಳಗಿರುವ ಎರಡನೆಯ ಪ್ರಾಣಿಸಹಜಗುಣವೆಂದರೆ ತೋಳನ ಗುಣ. ಶುಶುಲೂಕಯಾತುಂ ಅಂದರೆ ತೋಳನನಡೆ. ತೋಳನ ನಡೆಯು ಸಾಮಾನ್ಯವಾಗಿ ಯಾವಾಗಲೂ ಗುರ್ ಗುಟ್ಟುವ ಸ್ವಭಾವ. ಅದು ಕ್ರೋಧದ ಸಂಕೇತ.ಬೇಗ ತಾಳ್ಮೆಯನ್ನು ಕಳೆದುಕೊಳ್ಳುವ ಸ್ವಭಾವ. ಇಂತಹ ತೋಳನ ಸ್ವಭಾವ ನಮ್ಮೊಳಗಿದೆ. ಮುಖದ ಮೇಲೆ ತೋರ್ಗೊಡದಿದ್ದರೂ ಒಳಗೆ ತಾಳ್ಮೆಇಲ್ಲವಾದರೆ ತೋಳನ ಸ್ವಭಾದಲ್ಲಿ ಸಿಲುಕಿದ್ದೇವೆಂದೇ ಅರ್ಥ. ಬಾಯ್ಮಾತಿನಲ್ಲಿ ಒಳ್ಳೆಯ ಮಾತನಾಡುತ್ತಿದ್ದರೂ ಒಳಗೆ ಕ್ರೋಧ ತುಂಬಿರುತ್ತದೆ.

ಮುಂದಿನ ಗುಣ ನಾಯಿಯ ಗುಣ. ಶ್ವಯಾತುಮ್ ಅಂದರೆ ನಾಯಿಯ ನಡೆ. ಇದು ಮಾತ್ಸರ್ಯದ ಸಂಕೇತ. ನಾಯಿಯ ಮುಂದೆ ಯಾವುದೋ ಆಹಾರವಿದೆ ಎಂದಿಟ್ಟುಕೊಳ್ಳಿ. ಅದನ್ನು ತಾನೂ ತಿನ್ನುವುದಿಲ್ಲ, ಬೇರೆ ಯಾವ ಪ್ರಾಣಿಯೂ ಮುಟ್ಟಲೂ ಬಿಡುವುದಿಲ್ಲ. ಇಂತಹ ಸ್ವಭಾವಕ್ಕೆ ಮಾತ್ಸರ್ಯ ಅಥವಾ ಹೊಟ್ಟೆ ಉರಿ ಎನ್ನಬಹುದು. ಇಂತಹ ಸ್ವಭಾವ ನಮ್ಮೊಳಗಿಲ್ಲವೇ? [ಇದು ನಾಯಿಯ ಒಂದು ಸ್ವಭಾವ ಅಷ್ಟೆ. ಆದರೆ ನಾಯಿಗೆ ಬೇರೆ ಉತ್ತಮ ಗುಣಗಳಿಲ್ಲವೆಂದು ಇದರ ಅರ್ಥವಲ್ಲ] ಆದರೆ ನಾಯಿಯ ಈ ದುಷ್ಟಸ್ವಾಭಾವವಿದೆಯಲ್ಲಾ, ಅದು ನಾಯಿಗಿಂತಲೂ ನಮ್ಮೊಳಗೇ ಜಾಸ್ತಿ ಇದೆ. ನಮ್ಮೆದುರು ಬೇರೆಯವರು ಚೆನ್ನಾಗಿ ಬದುಕಬಾರದು. ಅವರ ಬಗ್ಗೆ ನಮಗೆ ಮಾತ್ಸರ್ಯ. ನಮಗೆ ಅವರಂತೆ ಬದುಕಲು ಸಾಧ್ಯವಾಗುವುದಿಲ್ಲ. ಬೇರೆಯವರು ಬದುಕುವುದನ್ನು ಸಹಿಸುವುದಿಲ್ಲ. ಈ ಕೆಟ್ಟ ಸ್ವಭಾವ ನಮ್ಮಲ್ಲಿ ತುಂಬಿ ತುಳುಕುತ್ತಿಲ್ಲವೇ?
ಮುಂದಿನ ಸ್ವಭಾವ ಜಕ್ಕವಕ್ಕಿಯ ಸ್ವಭಾವ. ಕೋಕಯಾತುಮ್ ಅಂದರೆ ಜಕ್ಕವಕ್ಕಿಯನಡೆ. ಈ ಪಕ್ಷಿ ಇಂದಿನ ಜನರಿಗೆ ಪರಿಚಯವಿಲ್ಲದಿರಬಹುದು.ನೈಟಿಂಗ್ ಗೇಲ್[ಬುಲ್‌ಬುಲ್‌ಹಕ್ಕಿ] ಪಕ್ಷಿಗೆ ಹೋಲಿಸಬಹುದು. ರಾತ್ರಿ ವೇಳೆಯಲ್ಲಿ ಹಾಡುವ ಹಕ್ಕಿ. ಇದು ಕಾಮದ ಸ್ವಭಾವ. ಸದಾ ಕಾಮದಲ್ಲಿ ತೊಡಗಿರುವ ಹಕ್ಕಿ. ಎಷ್ಟರ ಮಟ್ಟಿಗೆ ಕಾಮದ ಚಟುವಟಿಕೆ ನಡೆಸುತ್ತದೆಂದರೆ ಅದು ಕಾಮದಲ್ಲಿ ತೊಡಗಿರುವಾಗಲೇ ಪ್ರಾಣವನ್ನು ಬಿಡುತ್ತದೆ. ಅಂದರೆ ಇಂದ್ರಿಯ ಭೋಗದ ಸಂಕೇತ ಈ ಕೋಕ ಪಕ್ಷಿ. ಸದಾಕಾಲವೂ ಅದು ಬೇಕು, ಇದು ಬೇಕು, ಭೋಗಿಸಬೇಕು ಎಂಬ ತವಕದ ಸಂಕೇತವೇ ಈ ಹಕ್ಕಿ. ಕಾಮನೆ ಎಂದರೆ ಗಂಡು ಹೆಣ್ಣಿನ ಕೂಡುವಿಕೆಯೇ ಆಗಬೇಕೆಂದೇನೂ ಅರ್ಥವಲ್ಲ. ಸದಾಕಾಲ ಬೇಕು ಬೇಕೆಂಬ ಬಯಕೆ. ನಮ್ಮ ಅಂತರಂಗಕ್ಕೆ ಪ್ರಶ್ನೆ ಮಾಡಿಕೊಳ್ಳೋಣ. ನಮ್ಮಲ್ಲಿ ಈ ಮೃಗೀಯ ಗುಣ ಇಲ್ಲವೇ?
ಮುಂದಿನ ಸ್ವಭಾವ ಗರುಡಪಕ್ಷಿಯ ನಡೆ. ಸುಪರ್ಣಯಾತುಮ್ ಅಂದರೆ ಗರುಡಪಕ್ಷಿಯ ನಡೆ. ಸಾಮಾನ್ಯವಾಗಿ ಎತ್ತರದಲ್ಲಿ ಹಾರುವ ಗರುಡಪಕ್ಷಿಯು ಕೆಳಗೆ ಬಂದು ಕುಳಿತುಕೊಳ್ಳುವಾಗಲೂ ಎತ್ತರದ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಇದು ಮದದ ಸಂಕೇತ. ಅಂದರೆ ನಾನು ಎಲ್ಲರಿಗಿಂತ ದೊಡ್ದವ, ನನ್ನ ಸಮಾನ ಯಾರಿದ್ದಾರೆಂಬ ಭಾವ. ಈ ಪ್ರಾಣಿಸಹಜಗುಣ ನಮ್ಮೊಳಗೆ ನಮ್ಮನ್ನು ನಾಶಮಾಡುತ್ತಿರುವ ಒಂದು ಅವಗುಣ.
ಮುಂದಿನದು ಗೃಧ್ರಯಾತುಂ ಅಂದರೆ ಹದ್ದಿನ ನಡೆ. ಹದ್ದು ಲೋಭದ ಸಂಕೇತ. ಅಂದರೆ ದುರಾಸೆಯ ಸಂಕೇತ. ಕಾಮಕ್ಕೂ ಲೋಭಕ್ಕೂ ಸ್ವಲ್ಪ ವೆತ್ಯಾಸವಿದೆ. ಕಾಮ ಎಂದರೆ ಬೇಕು, ಬೇಕು, ಬೇಕೆಂದು ಅನುಭವಿಸಿ ಬಿಡುವುದು, ಲೋಭವೆಂದರೆ ಬೇಕು, ಬೇಕು, ಬೇಕೆಂದು ಗಳಿಸಿ ಸಂಗ್ರಹ ಮಾಡಿಡುವುದು.ಲೋಭಿಯು ತಾನು ಅನುಭವಿಸುವುದಕ್ಕಿಂತ ಇಡುವುದೇ ಹೆಚ್ಚು.
ಹೀಗೆ ಅದೆಷ್ಟು ತರದ ಹದ್ದುಗಳು, ಅದೆಷ್ಟು ತರದ ತೋಳಗಳು, ನಾಯಿಗಳು,ಕೋಕಪಕ್ಷಿಗಳು, ಗರುಡಗಳು,ಗೂಬೆಗಳು ನಮ್ಮೊಳಗೆ ವಾಸಿಸುತ್ತಿರಬಹುದು? ಹೀಗಿರುವಾಗಲೂ ನಮ್ಮ ಅಂತರಂಗವು ಪರಿಶುದ್ಧವಾಗಿರಬೇಕೆಂಬುದು ನಮ್ಮ ಆಸೆ.ಇಂತ ಪರಿಸ್ಥಿತಿಯಲ್ಲಿ ಆನಂದದ ಅನುಭವವು ಆಗಬೇಕೆಂದರೆ ಸಿಗುವ ಬಗೆಯಾದರೂ ಹೇಗೆ? ಹಾಗಾದರೆ ಇಂತಹಾ ಪರಿಸ್ಥಿಯಲ್ಲಿ ಆನಂದ ಸಿಗಬೇಕಾದರೆ ಏನು ಮಾಡಬೇಕು? ಈ ಮಂತ್ರದ ಕೊನೆಯ ಭಾಗದಲ್ಲಿ ಉತ್ತರವಿದೆ.

ದೃಷದೇವ ಪ್ರಮೃಣ ರಕ್ಷ ಇಂದ್ರ
ಇಲ್ಲಿ ಇಂದ್ರ ಎಂಬ ಪದವಿದೆ.ನಾವು ಈಗಾಗಲೇ ವಿಚಾರಮಾಡಿರುವಂತೆ ಇಂದ್ರ, ಅಗ್ನಿ, ಯಮ. . . . . . ಇತ್ಯಾದಿ ಏನೇ ಹೆಸರಿದ್ದರೂ ಅದು ಸರ್ವಶಕ್ತ ಭಗವಂತನ ಹೆಸರೇ ಆಗಿದೆ. ಇಂದ್ರ ಪದವನ್ನು ಅರ್ಥಮಾಡಿಕೊಳ್ಳ ಬೇಕಾದರೆ ಅದರ ಮೂಲ ಧಾತುವನ್ನು ಅರ್ಥಮಾಡಿಕೊಳ್ಳಬೇಕು. ಮೂಲ ಧಾತುವನ್ನು ಹುಡುಕಿದಾಗ..
ಇದಿ ಪರಮೈಶ್ವರ್ಯೇ ಎಂದು ತಿಳಿಯುತ್ತದೆ. ಅಂದರೆ ಪರಮ ಐಶ್ವರ್ಯಶಾಲಿಯಾದ ಭಗವಚ್ಛಕ್ತಿಯ ಹೆಸರು ಇಂದ್ರ. ಇಡೀ ಬ್ರಹ್ಮಾಂಡವು ಯಾರ ವಶದಲ್ಲಿದೆಯೋ ಅಂತಹ ವಿಶ್ವಚೇತನ ಭಗವಚ್ಛಕ್ತಿಯೇ ಇಂದ್ರ. ನಮ್ಮ ಅಂತರಂಗದಲ್ಲಿ ಭಗವಂತನಲ್ಲಿ ನಾವು ಪ್ರಾರ್ಥಿಸುತ್ತಿದ್ದೇವೆ ಹೇ, ಇಂದ್ರ ಈ ದುಷ್ಟಪ್ರಾಣಿಗಳೆಲ್ಲಾ ನಮ್ಮೊಳಗೆ ಸೇರಿ ನಮಗೆ ಹಿಂಸೆ ಕೊಡುತ್ತಿವೆ.ಇವುಗಳಿಂದ ನಮ್ಮನ್ನು ರಕ್ಷಿಸು.
ರಕ್ಷಇಂದ್ರ ರಕ್ಷ ಎಂದರೆ ರಕ್ಷಿಸು ಎಂದು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಆ ರಾಕ್ಷಸೀ ಶಕ್ತಿಗಳಿಗೆ ಹೆಸರು ರಕ್ಷ . ರಕ್ಷ ಪದದಿಂದಲೇ ರಾಕ್ಷಸ ಪದ ನಿರ್ಮಾಣವಾಗಿದೆ. ಯಾವುದರಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕೋ ಅಂತಹ ದುಷ್ಟಶಕ್ತಿಗಳಿಗೆ ರಾಕ್ಷಸೀ ಶಕ್ತಿಗಳೆಂದು ಹೆಸರು. ಇಂತಹ ದುಷ್ಟಶಕ್ತಿಗಳನ್ನು ನಮ್ಮಿಂದ ಹೇಗೆ ದೂರಮಾಡಬೇಕೆಂಬುದನ್ನು ಮಂತ್ರದ ಮುಂದಿನ ಭಾಗ ತಿಳಿಸುತ್ತದೆ. . . . . .
ದೃಷದೇವ ಪ್ರಮೃಣ ದೃಷದಾ ಇವ ಅಂದರೆ ಕಲ್ಲಿನಂತಹ ಕಠೋರವಾದ ಸಾಧನದಿಂದ, ಪ್ರಮೃಣ ಅಂದರೆ ಚೆನ್ನಾಗಿ ಹೊಸಕಿ ಹಾಕು. ಕಲ್ಲಿನಿಂದ ಅರೆಯುವಂತೆ ಅರೆದುಬಿಡು. ಕಲ್ಲಿನಿಂದ ಅರೆಯುವುದೆಂದರೇನು? ಕಲ್ಲಿನಿಂದ ಅರೆಯುವ ಮಾತಿನ ಹಿಂದಿನ ತೀವ್ರತೆಯನ್ನು ಗಮನಿಸಬೇಕು. ಈ ದುಷ್ಟ ಪ್ರಾಣಿಗಳು ನನ್ನೊಳಗೆ ಸೇರಿ ನನಗೆ ಕೊಡುತ್ತಿರುವ ಕಾಟವನ್ನು ನಾನು ತಡೆಯಲಾರೆ ಆದ್ದರಿಂದ ಕಲ್ಲಿನಿಂದ ಹೊಸಕಿಹಾಕಿಬಿಡು ಹೀಗೆ ನಮ್ಮ ಅಂತರ್ಯದಲ್ಲಿ ಇಂತಹ ಮೊರೆಯನ್ನು ಭಗವಂತನಲ್ಲಿ ಮಾಡಬೇಕು.
ಈ ಮಂತ್ರವನ್ನು ಅರ್ಥಮಾಡಿಕೊಂಡಾಗ ಭಗವಂತನಿಗಾಗಿ ನಮ್ಮ ಅಂತರಂಗದಲ್ಲಿ ಮೊರೆಇಡಬೇಕೇ ಹೊರತೂ ಬಾಹ್ಯಕ್ರಿಯೆಗಳಿಂದಲ್ಲ, ಎಂಬುದು ನಮಗೆ ಅರಿವಾಗುತ್ತದೆ. ಅಂದರೆ ನಮ್ಮ ಅಂತರರಂಗದ ಕೊಳೆಯನ್ನು ಪೂರ್ಣವಾಗಿ ತೆಗೆದುಹಾಕಲು ಭಗವಂತನಲ್ಲಿ ಮೊರೆಯಿಟ್ಟು ಅವನಲ್ಲಿ ಶರಣಾದಾಗ ನಮಗೆ ಆನಂದವನ್ನು ಪಡೆಯುವ ಹಾದಿ ಸುಗುಮವಾಗುತ್ತದೆ. ಅಂದರೆ ಅಂತರ್ಯದಲ್ಲಿರುವ ಕಾಮ,ಕ್ರೋಧ,ಲೋಭ, ಮೋಹ, ಮದ ,ಮತ್ಸರ್ಯಗಳನ್ನು ನಮ್ಮಿಂದ ಕಿತ್ತು ಹೊರಗೆ ಹಾಕುವ ತೀವ್ರವಾದ ಸಂಕಲ್ಪ ನಮ್ಮೊಳಗೆ ಮಾಡಿ, ಅದಕ್ಕೆ ತಕ್ಕಂತೆ ನಾವು ವ್ಯವಹರಿಸಿದರೆ ನಮ್ಮ ಅಂತರಂಗವು ಶುದ್ಧವಾಗುತ್ತದೆ ಆಗ ಆನಂದದ ಅನುಭವವು ನಮ್ಮ ಅಂತರಂಗದಲ್ಲಿಯೇ ಆಗುತ್ತದೆ.
ಆದ್ದರಿಂದ ಆನಂದಕ್ಕಾಗಿ ಹೊರಗೆಲ್ಲೂ ಹುಡುಕಬೇಕಾಗಿಲ್ಲ. ನಮ್ಮ ಅಂತರಂಗವನ್ನು ಶುದ್ಧಮಾಡಿಕೊಂಡು ನಮ್ಮ ನಡೆ, ನುಡಿ, ವ್ಯವಹಾರದಲ್ಲಿ ಸತ್ಯ, ಅಹಿಂಸೆ, ಅಸ್ತೇಯ, ಅಪರಿಗ್ರಹ,ಬ್ರಹ್ಮಚರ್ಯ, ಶೌಚ,ಸಂತೋಷ, ತಪಸ್ಸು,ಸ್ವಾಧ್ಯಾಯ, ಈಶ್ವgಪ್ರಣೀಧಾನ, ಇವುಗಳನ್ನು ಬಲು ಶ್ರದ್ಧೆಯಿಂದ ಪಾಲನೆ ಮಾಡಿದ್ದೇ ಆದರೆ ಭಗವಂತನ ಸಾಕ್ಷಾತ್ಕಾರ ಸಾಧ್ಯ.

Permanent link to this article: http://www.vedasudhe.com/%e0%b2%a8%e0%b2%ae%e0%b3%8d%e0%b2%ae%e0%b3%8a%e0%b2%b3%e0%b2%97%e0%b2%a1%e0%b2%97%e0%b2%bf%e0%b2%b0%e0%b3%81%e0%b2%b5-%e0%b2%a6%e0%b3%81%e0%b2%b7%e0%b3%8d%e0%b2%9f%e0%b2%aa%e0%b3%8d%e0%b2%b0%e0%b2%be/

ಯಜ್ಞಕ್ಕೆ ಸಮರ್ಪಿಸುವ ಹೋಮದ್ರವ್ಯಗಳು ಹೇಗಿರಬೇಕು?

 

ಸಮಿಧಾಗ್ನಿಂ ದುವಸ್ಯತ ಘೃತೈರ್ಬೊಧಯತಾತಿಥಿಂ |

ಆಸ್ಮಿನ್ ಹವ್ಯಾ ಜುಹೋತನ | [ಯಜು, ಅಧ್ಯಾಯ-೩, ಮಂತ್ರ-೧ ]
ಅನ್ವಯ :
ಸಮಿಧಾ = ಅಗ್ನಿಯು ಪ್ರಜ್ವಲಿಸಲ್ಪಡುವಂತಹ ಸಮಿತ್ತಿನಿಂದ
ಅಗ್ನಿಂ = ಅಗ್ನಿಯನ್ನು
ದುವಸ್ಯತ = ಸೇವಿಸಿರಿ
ಘೃತೈಃ = ತುಪ್ಪ ಮೊದಲಾದುವುಗಳಿಂದ
ಬೋಧಯತ = ಉದ್ದೀಪನ ಗೊಳಿಸಿರಿ
ಅತಿಥಿಮ್ = ಅತಿಥಿಯಂತೆ ಅಗ್ನಿಯನ್ನು ಭಾವಿಸಿರಿ
ಆಸ್ಮಿನ್ = ಈ ಅಗ್ನಿಯಲ್ಲಿ
ಹವ್ಯಾ = ಹೋಮಮಾಡಲು ಯೋಗ್ಯವಾದ [ ಅಗ್ನಿಯಲ್ಲಿ ಸುಲಭವಾಗಿ ಪಚನವಾಗುವಂತಹ] ದ್ರವ್ಯಗಳನ್ನು ಅಂದರೆ ಕಸ್ತೂರಿ,ಕೇಸರಿ,ಮುಂತಾದ ಸುಗಂಧದ್ರವ್ಯ, ಬೆಲ್ಲ,ಸಕ್ಕರೆ ಮುಂತಾದ ಪಿಷ್ಟದ್ರವ್ಯ,ತುಪ್ಪ,ಹಾಲು ಮುಂತಾದ ಪುಷ್ಟಿಕಾರಕ ದ್ರವ್ಯ, ಅಮೃತಬಳ್ಳಿ ಮುಂತಾದ ರೋಗನಾಶಕ ಓಷಧೀ ದ್ರವ್ಯಗಳನ್ನು
ಜುಹೋತನ = ಪೂರ್ಣವಾಗಿ ಹೋಮ ಮಾಡಿರಿ
ಭಾವಾರ್ಥ :
ಅಗ್ನಿಯು ಪ್ರಜ್ವಲಿಸಲ್ಪಡುವಂತಹ ಸಮಿತ್ತಿನಿಂದ ಅಗ್ನಿಯನ್ನು ಸೇವಿಸಿರಿ.ತುಪ್ಪವನ್ನು ಅರ್ಪಿಸಿ ಅಗ್ನಿಯನ್ನು ಉದ್ದೀಪನ ಗೊಳಿಸಿರಿ. ಮನೆಗೆ ಬರುವ ಅತಿಥಿಯಂತೆ ಅಗ್ನಿಯನ್ನು ಭಾವಿಸಿ, ಅತಿಥಿಯನ್ನು ಸತ್ಕರಿಸುವಂತೆ ಈ ಅಗ್ನಿಯಲ್ಲಿ ಹೋಮ ಮಾಡಲು ಯೋಗ್ಯವಾದ ಅಂದರೆ ಸುಲಭವಾಗಿ ಅಗ್ನಿಯಲ್ಲಿ ಪಚನವಾಗುವಂತಹ ಕೇಸರೀ, ಕಸ್ತೂರಿ ಮೊದಲಾದ ಸುಗಂಧದ್ರವ್ಯಗಳನ್ನೂ, ಬೆಲ್ಲ,ಸಕ್ಕರೆ ಮುಂತಾದ ಪಿಷ್ಟದ್ರವ್ಯಗಳನ್ನೂ, ತುಪ್ಪ,ಹಾಲು ಮುಂತಾದ ಪುಷ್ಟಿಕಾರಕ ದ್ರವ್ಯಗಳನ್ನೂ, ಅಮೃತಬಳ್ಳಿ ಮುಂತಾದ ರೋಗನಾಶಕ ಓಷಧೀ ದ್ರವ್ಯಗಳನ್ನೂ ಪೂರ್ಣವಾಗಿ ಯಜ್ಞದಲ್ಲಿ ಸಮರ್ಪಿಸಿ ಹೋಮವನ್ನು ಮಾಡಿ.
ಅಗ್ನಿಹೋತ್ರವನ್ನು ಮಾಡುವಾಗ ಅಗ್ನಿಜ್ವಲನ ನಂತರ ಅಗ್ನಿಯಲ್ಲಿ ಸಮಿತ್ತನ್ನು ಅರ್ಪಿಸುವಾಗ ಹೇಳುವ ಮಂತ್ರವಿದು. ಮಂತ್ರ ಬಲು ಚಿಕ್ಕದು. ಅದರ ಅರ್ಥ ಅಪಾರ. ಯಜ್ಞದಲ್ಲಿ ಎಂತಹ ದ್ರವ್ಯಗಳನ್ನು ಅರ್ಪಿಸಬೇಕು, ಎಂಬುದನ್ನು ಈ ಮಂತ್ರದ ಸಮಿಧಾ ಎಂಬ ಪದವು ಸ್ಪಷ್ಟಪಡಿಸುತ್ತದೆ. ಅಗ್ನಿಯು ಪ್ರಜ್ವಲಿಸಲ್ಪಡುವಂತಹ ಸಮಿತ್ತುಗಳನ್ನೇ ಉಪಯೋಗಿಸಬೇಕೆನ್ನುತ್ತದೆ ಈ ಮಂತ್ರ. ನಂತರ ತುಪ್ಪ ಮೊದಲಾದುವುಗಳಿಂದ ಉದ್ದೀಪನ ಗೊಳಿಸಿರಿ. ಅತಿಥಿಯಂತೆ ಭಾವಿಸಿ ಹೋಮದಲ್ಲಿ ಯೋಗ್ಯದ್ರವ್ಯಗಳನ್ನು ಸಮರ್ಪಿಸಿ ಹೋಮ ಮಾಡಿರಿ, ಎಂಬುದು ಅರ್ಥವಾದರೆ ಹೋಮದಲ್ಲಿ ನಾವು ಅರ್ಪಿಸುವ ಹವಿಸ್ಸುದ್ರವ್ಯಗಳು ಹೇಗಿರಬೇಕೆಂಬುದು ಅರ್ಥವಾದೀತು.
ಮನೆಗೆ ಸಾಮಾನ್ಯವಾಗಿ ಬರುವ ಅತಿಥಿಗಳನ್ನು ನಾವು ಹೇಗೆ ಉಪಚರಿಸುತ್ತೇವೆ? ಸಾಮಾನ್ಯವಾಗಿ ಬಂದಕೂಡಲೇ ಕುಡಿಯಲು ಏನಾದರೂ ಪಾನೀಯ ಕೊಟ್ಟು ನಂತರ ತಮ್ಮ ಮನೆಯಲ್ಲಿ ಮಾಡಬಹುದಾದ ರುಚಿಕರ ಮತ್ತು ಅತ್ಯಂತ ಗುಣಮಟ್ಟದ ತಿನಿಸುಗಳನ್ನು ಸಿದ್ಧಗೊಳಿಸುತ್ತೇವಲ್ಲವೇ? ತಿಂಡಿಯನ್ನೋ, ಊಟವನ್ನೋ ಬಡಿಸುವಾಗ ಸಂತೋಷವಾಗಿ ಮಾತನಾಡಿಕೊಂಡು ಬಂದವರಿಗೆ ಹಿತವಾಗುವಂತೆ ಬಡಿಸುತ್ತೇವೆ, ಅಲ್ಲವೇ? ಬಂದ ಅತಿಥಿಗಳು ಅದನ್ನು ಸ್ವೀಕರಿಸಿ ಅವರು ಬಹಳ ರುಚಿಯಾಗಿತ್ತು, ಅದ್ಭುತವಾಗಿತ್ತು ಎಂದಾಗ ನಾವು ಸಾರ್ಥಕ ಭಾವ ಹೊಂದುತ್ತೇವಲ್ಲವೇ?
ಯಜ್ಞದಲ್ಲಿ ಹವಿಸ್ಸು ಅರ್ಪಿಸುವಾಗಲೂ ಇದೇ ಭಾವ ಇರಬೇಕು, ಇದೇ ವಿಚಾರ ಮನದಲ್ಲಿರಬೇಕು. ಎನ್ನುತ್ತದೆ ಈ ಮಂತ್ರ. ಅರ್ಪಿಸಿದ ಹವಿಸ್ಸು ಯಜ್ಞದಲ್ಲಿ ಪಚನವಾಗಿ,ಅದರ ಪರಿಣಾಮವಾಗಿ ಸುಗಂಧಭರಿತ ಧೂಮವು ಪರಿಸರದಲ್ಲಿ ಹರಡಬೇಕು, ಗಾಳಿಯಲ್ಲಿ ಅದು ಸೇರಿ ಇಡೀ ವಾತಾವರಣ ಶುದ್ಧವಾಗಬೇಕು.
ಹೀಗಾಗಬೇಕಾದರೆ ಯಜ್ಞದಲ್ಲಿ ನಾವು ಅರ್ಪಿಸಬೇಕಾದ ಹೋಮದ್ರವ್ಯಗಳು ಹೇಗಿರಬೇಕೆಂಬುದನ್ನು ನಾವು ಚಿಂತಿಸಬೇಕಲ್ಲವೇ? ರೇಶ್ಮೆಸೀರೆಯನ್ನಾಗಲೀ, ರೂಪಾಯಿ ನಾಣ್ಯಗಳನ್ನಾಗಲೀ, ಅರಿಶಿನ-ಕುಂಕುಮ ತುಂಬಿದ ಪ್ಲಾಸ್ಟಿಕ್ ಪ್ಯಾಕೆಟ್ ಗಳನ್ನಾಗಲೀ, [ಅರಿಶಿನ ಕೊನೆಯಿಂದ ತಯಾರಾಗಿರುವ ಅರಿಶಿ-ಕುಂಕುಮದ ಬದಲು ಅಂಗಡಿUಳಲ್ಲಿ ಬಣ್ಣವನ್ನೇ ಮಾರಾಟಮಾಡುವುದನ್ನು ಕಾಣುತ್ತೇವೆ] ಅಥವಾ ಬಳೆ-ಬಿಚ್ಚೋಲೆ ಇತ್ಯಾದಿಯನ್ನಾಗಲೀ, ಯಜ್ಞದಲ್ಲಿ ಸಮರ್ಪಿಸಿದರೆ ವಾಯು ಶುದ್ಧಿಯಾಗಲು ಸಾಧ್ಯವೇ? ನಾವು ಚಿಂತನೆ ಮಾಡ ಬೇಕು. ಭಕ್ತಿಯ ಹೆಸರಲ್ಲಿ ನಾವು ಮಾಡುವ ಕ್ರಿಯೆಗಳ ಪರಿಣಾಮದ ಅರಿವು ನಮಗಿರಬೇಕು. ಈ ಮಂತ್ರದಲ್ಲಿ ಅತಿಥಿಯಂತೆ ಯಜ್ಞವನ್ನು ಭಾವಿಸಿ ಯೋಗ್ಯವಾದ ಹವಿಸ್ಸನ್ನು ಅರ್ಪಿಸಿಸಿರಿ ಎಂಬುದನ್ನು ನಾವು ಇಷ್ಟು ಆಳವಾಗಿ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಯಜ್ಞದ ನಿರೀಕ್ಷಿತ ಫಲ ಸಿಗಲು ಸಾಧ್ಯ.

ಮೇಲಿನ ವಿಚಾರಕ್ಕೆ ಪುಷ್ಟಿಕೊಡುವ ಇನ್ನೊಂದು ಮಂತ್ರವನ್ನು ನೋಡೋಣ.

ಸುಸಮಿದ್ಧಾಯ ಶೋಚಿಷೇ ಘೃತಂ ತೀವ್ರಂ ಜುಹೋತನ|
ಅಗ್ನಯೇ ಜಾತವೇದಸೇ [ಯಜು, ಅಧ್ಯಾಯ-೩, ಮಂತ್ರ-೨]

ಅನ್ವಯ :
ಸುಸಮಿದ್ಧಾಯ = ಚೆನ್ನಾಗಿ ಪ್ರಜ್ವಲಿತವಾಗಿ ಪ್ರಕಾಶಿಸುವ
ಶೋಚಿಷೇ = ಶೋಧಿಸಲ್ಪಟ್ಟು ದೋಷ ನಿವಾರಕವಾದ ಅಗ್ನಿಯಲ್ಲಿ
ಘೃತಮ್ = ತುಪ್ಪವನ್ನು
ತೀವ್ರಮ್ = ಸರ್ವದೋಷಗಳನ್ನೂ ನಿವಾರಣೆ ಮಾಡುವಲ್ಲಿ ತೀಕ್ಷ್ಣವಾದ ಸ್ವಭಾವವುಳ್ಳ ದ್ರವ್ಯವನ್ನು
ಅಗ್ನಯೇ = ಹೋಮ ದ್ರವ್ಯಗಳನ್ನು ಪಚನ ಮಾಡುವ ಗುಣವುಳ್ಳ ಅಗ್ನಿಯಲ್ಲಿ
ಜಾತವೇದಸೇ = ಸರ್ವಾಗ್ರಣೀ ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ
[ಸ್ವಾಹಾ = ಮಂಗಳಕರವಾz,ಸತ್ಯವಾದ ವಾಣಿಯನ್ನು ಹೇಳುತ್ತಾ ಹವಿಸ್ಸನ್ನು ಅರ್ಪಿಸುತ್ತೇನೆ]
ಭಾವಾರ್ಥ:
ಸರ್ವದೋಷಗಳನ್ನೂ ನಿವಾರಣೆ ಮಾಡುವಲ್ಲಿ ತೀಕ್ಷ್ಣವಾದ ಸ್ವಭಾವವುಳ್ಳ ದ್ರವ್ಯವನ್ನು ಮತ್ತು ತುಪ್ಪವನ್ನು ಚೆನ್ನಾಗಿ ಪ್ರಜ್ವಲಿತವಾಗಿ ಪ್ರಕಾಶಿಸುವ, ಶೋಧಿಸಲ್ಪಟ್ಟ ದೋಷ ನಿವಾರಕವಾದ,ಅಗ್ನಿಯಲ್ಲಿಸರ್ವಾಗ್ರಣೀ ಪರಮಾತ್ಮನ ಸಾಕ್ಷಾತ್ಕಾರಕ್ಕಾಗಿ ಮಂಗಳಕರವಾದ, ಸತ್ಯವಾದ ವಾಣಿಯನ್ನು ಹೇಳುತ್ತಾ ಹವಿಸ್ಸನ್ನು ಅರ್ಪಿಸುತ್ತೇನೆ.
ದೋಷನಿವಾರಕವಾದ ಶೋಧಿಸಲ್ಪಟ್ಟ ಅಗ್ನಿಯಲ್ಲಿ ಸತ್ಯವಾದ ವಾಣಿಯಿಂದ ಹವಿಸ್ಸನ್ನು ಅರ್ಪಿಸುತ್ತೇನೆ. ಎಂಬ ಅಂಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಶೋಧಿಸಲ್ಪಟ್ತ ಅಗ್ನಿ ಎಂದರೆ ಅಗ್ನಿಯನ್ನು ನಾವು ಎಂತಹ ಸಮಿತ್ತಿನಿಂದ ಪ್ರಜ್ವಲಿಸಬೆಕೆಂಬುದನ್ನು ಅರಿತಿರಬೇಕು. ಅರಳೀ ಕಡ್ಡಿ ಹಾಗೂ ಇನ್ನೂ ಹಲವು ಔಷಧೀಯಗುಣವಿರುವ ಸಮಿತ್ತನ್ನು ಮಾತ್ರವೇ ಯಜ್ಞಕ್ಕೆ ಉಪಯೋಗಿಸಬೇಕು. ಯಾವುದೋ ಕಟ್ಟಿಗೆಯನ್ನು ಉಪಯೋಗಿಸಿ ಯಜ್ಞವನ್ನು ಮಾಡಿದರೆ ಪರಿಸರವನ್ನು ಶುದ್ಧಗೊಳಿಸುವ ಬದಲು ಇನ್ನಷ್ಟು ಕೆಡಿಸಿದಂತಾದೀತು. ಆದ್ದರಿಂದ ಯಾವ ಸಮಿತ್ತನ್ನು ಉಪಯೋಗಿಸಬೇಕು, ಯಾವ ಹವಿಸ್ಸನ್ನು ಉಪಯೋಗಿಸಬೇಕೆಂಬ ಬಗ್ಗೆ ಯಜ್ಞ ಮಾಡುವವರಿಗೆ ಅರಿವಿರಬೇಕು.
ಇದೇ ವಿಚಾರಕ್ಕೆ ಪುಷ್ಟಿಕೊಡುವ ಇನ್ನೊಂದು ಮಂತ್ರವನ್ನು ನೋಡೋಣ.
ತಂತ್ವಾ ಸಮಿದ್ಭಿರಂಗಿರೋ ಘೃತೇನ ವರ್ಧಯಾಮಸಿ
ಬೃಹಚ್ಛೋಚಾ ಯವಿಷ್ಠ್ಯ || [ಯಜು, ಅಧ್ಯಾಯ-೩, ಮಂತ್ರ-೩]
ತಮ್ = ಈ ಭೌತಿಕವಾದ ಅಗ್ನಿಯನ್ನು
ತ್ವಾ = ಯಾವ ಅಗ್ನಿಯು
ಸಮಿದ್ಭಿಃ = ಸಮಿತ್ತುಗಳಿಂದ
ಅಂಗಿರಃ = ಸುಖವನ್ನು ಉಂಟುಮಾಡುತ್ತದೋ ಅಂತಹ ಅಗ್ನಿಯನ್ನು
ಘೃತೇನ = ತುಪ್ಪ ಮುಂತಾದುವುಗಳಿಂದ
ವರ್ಧಯಾಮಸಿ = ವೃದ್ಧಿಪಡಿಸುತ್ತೇವೆ
ಬೃಹತ್ = ದೊಡ್ಡದಾಗುವಂತೆ
ಶೋಚ = ಪ್ರಕಾಶಿಸುತ್ತದೆ
ಯವಿಷ್ಠ್ಯ = ಪದಾರ್ಥಗಳನ್ನು ಬೇರೆ ಬೇರೆ ಸೂಕ್ಷ್ಮ ಕಣಗಳಾಗಿ ವಿಭಜಿಸಬಲ್ಲ ಅಗ್ನಿಯಲ್ಲಿ
[ಸ್ವಾಹಾ = ಮಂಗಳಕರವಾz,ಸತ್ಯವಾದ ವಾಣಿಯನ್ನು ಹೇಳುತ್ತಾ ಹವಿಸ್ಸನ್ನು ಅರ್ಪಿಸುತ್ತೇನೆ]
ಭಾವಾರ್ಥ:
ಯಾವ ಅಗ್ನಿಯು ಸುಖವನ್ನು ಉಂಟುಮಾಡುತ್ತದೋ ಅಂತಹ ಅಗ್ನಿಯನ್ನು ತುಪ್ಪ ಮುಂತಾದುವುಗಳಿಂದ ವೃದ್ಧಿಪಡಿಸುತ್ತೇವೆ. ಪದಾರ್ಥಗಳನ್ನು ಬೇರೆ ಬೇರೆ ಸೂಕ್ಷ್ಮ ಕಣಗಳಾಗಿ ವಿಭಜಿಸಬಲ್ಲ ಅಗ್ನಿಯಲ್ಲಿ ಮಂಗಳಕರವಾz,ಸತ್ಯವಾದ ವಾಣಿಯನ್ನು ಹೇಳುತ್ತಾ ಹವಿಸ್ಸನ್ನು ಅರ್ಪಿಸುತ್ತೇನೆ.
ಯಜ್ಞದಲ್ಲಿ ಹೋಮಮಾಡಿದ ಹವಿಸ್ಸು ಸೂಕ್ಷ್ಮ ಕಣಗಳಾಗಿ ವಿಭಜಿಸಿ ವಾಯು ಮಂಡಲವನ್ನು ಸೇರಿ ವಾಯುವನ್ನು ಶುದ್ಧಿಮಾಡಬೇಕಾದ್ದರಿಂದ ನಾವು ಯಾವ ಸಮಿತ್ತಿನಿಂದ ಅಗ್ನಿಯನ್ನು ಪ್ರಜ್ವಲಿಸುತ್ತೇವೆ, ಮತ್ತು ಯಜ್ಞದಲ್ಲಿ ಯಾವ ಹವಿಸ್ಸನ್ನು ಅರ್ಪಿಸುತ್ತೇವೆಂಬುದು ಅತ್ಯಂತ ಪ್ರಮುಖವಾದ ಸಂಗತಿ.
ಈ ಮಂತ್ರಗಳ ಭೌತಿಕ ಅರ್ಥವನ್ನು ಮಾತ್ರ ಇಲ್ಲಿ ತಿಳಿಸಲಾಗಿದೆ. ಇದೇ ಮಂತ್ರವನ್ನು ಆಧ್ಯಾತ್ಮಿಕ ನೆಲೆಯಲ್ಲಿ ಅರ್ಥಮಾಡಿಕೊಂಡು ಹೋಮ ಮಾಡಿದರೆ ಇನ್ನೂ ಅದ್ಭುತವಾದ ಅರ್ಥವು ನಮಗೆ ಲಭ್ಯವಾಗುತ್ತದೆ.

Permanent link to this article: http://www.vedasudhe.com/%e0%b2%af%e0%b2%9c%e0%b3%8d%e0%b2%9e%e0%b2%95%e0%b3%8d%e0%b2%95%e0%b3%86-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%b8%e0%b3%81%e0%b2%b5-%e0%b2%b9%e0%b3%8b%e0%b2%ae%e0%b2%a6%e0%b3%8d/

ನಮ್ಮ ನಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣವೇ?

ಸುಖೀ ಕುಟುಂಬದಲ್ಲಿ ಪತ್ನಿಯ ಜವಾಬ್ದಾರಿ
ಒಂದು ಕುಟುಂಬ ಸುಖವಾಗಿರಲು ಕುಟುಂಬದ ಎಲ್ಲರ ಜವಾಬ್ದಾರಿ ಇದೆಯಲ್ಲವೇ? ವೇದವು ಹಲವು ಮಂತ್ರಗಳಲ್ಲಿ ಕುಟುಂಬದ ಎಲ್ಲಾ ಸದಸ್ಯರ ಜವಾಬ್ದಾರಿಯ ಬಗ್ಗೆಯೂ ಹೇಳಿದೆ. ಇಂದು ಒಂದು ಕುಟುಂಬಕ್ಕೆ ಹೊಸದಾಗಿ ಬಂದು ಸೇರುವ ನವವಧುವಿನ ಬಗ್ಗೆ ತಿಳಿಯೋಣ.
ಅಘೋರಚಕ್ಷುರಪತಿಘ್ನೀ ಸ್ಯೋನಾ ಶಗ್ಮಾ ಸುಶೇವಾ ಸುಯನಾ ಗೃಹೇಭ್ಯಃ |
ವೀರಸೂರ್ದೇವೃಕಾಮಾ ಸಂ ತ್ವಯೈಧಿಘೀಮಹಿ ಸುಮನಸ್ಯಮಾನಾ||
[ಅಥರ್ವ: ೧೪ ನೇ ಕಾಂಡ, ೨ನೇ ಸೂಕ್ತ ೧೭ ನೇ ಮಂತ್ರ]

ಅನ್ವಯ :
ಈ ಮಂತ್ರವು ನವ ವಧುವನ್ನು ಕುರಿತು ಹೇಳಿದ್ದು
ಗೃಹೇಭ್ಯಃ = ಮನೆಗಳಿಗೆ
ಅಘೋರ ಚಕ್ಷುಃ = ಕ್ರೂರ ದೃಷ್ಟಿ ಇಲ್ಲದವಳೂ [ಸೌಮ್ಯದೃಷ್ಟಿಯುಳ್ಳವಳೂ]
ಅಪತಿಘ್ನೀಃ = ಪತಿಯ ಬಗ್ಗೆ ಪ್ರೇಮಯುಕ್ತಳೂ,ಪತಿಯನ್ನು ನೋಯಿಸದವಳು
ಸ್ಯೋನಾ = ಮಂಗಳಕಾರಿಣಿಯೂ
ಶಗ್ಮಾ = ದುಃಖ ಶಮನ ಕಾರಿಣಿಯೂ
ಸುಶೇವಾ = ಉತ್ತಮವಾಗಿ ಸೇವೆ ಮಾಡುವವಳೂ
ಸುಯಮಾ = ಯಮ-ನಿಯಮಗಳ ಸೇವನೆಮಾಡುವವಳೂ, ಸುವ್ಯವಸ್ಥಿತ ಜೀವನ ಮಾಡುವವಳೂ
ವೀರಸೂ = ವೀರ ಸಂತಾನಕ್ಕೆ ಜನ್ಮ ನೀಡುವವಳೂ
ದೇವೃಕಾಮಾ = ಮೈದುನರ ಪಾಲಿಗೆ ವಾತ್ಸಲ್ಯಭರಿತೆಯಾಗಿ
ಸುಮನಸ್ಯ ಮಾನಾ = ಸದಾ ಪ್ರಸನ್ನ ಮನಸ್ಸುಳ್ಳುವಳೂ
ತ್ವಯಾ = ನಿನ್ನೊಂದಿಗೆ
ಸಮ್ ಏಷಧೀಮಹಿ = ಸುಖ ಸಂಪತ್ತನ್ನು ಹೊಂದೋಣ.

ಕ್ರೂರ ದೃಷ್ಟಿ ಇಲ್ಲದವಳೂ [ಸೌಮ್ಯದೃಷ್ಟಿಯುಳ್ಳವಳೂ], ಪತಿಯ ಬಗ್ಗೆ ಪ್ರೇಮಯುಕ್ತಳೂ, ಮಂಗಳಕಾರಿಣಿಯೂ, ದುಃಖ ಶಮನ ಕಾರಿಣಿಯೂ, ಉತ್ತಮವಾಗಿ ಸೇವೆ ಮಾಡುವವಳೂ ಯಮ- ನಿಯಮಗಳ ಸೇವನೆಮಾಡುವವಳೂ, ಸುವ್ಯವಸ್ಥಿತ ಜೀವನ ಮಾಡುವವಳೂ ವೀರ ಸಂತಾನಕ್ಕೆ ಜನ್ಮ ನೀಡುವವಳೂ, ಮೈದುನರ ಪಾಲಿಗೆ ವಾತ್ಸಲ್ಯಭರಿತೆಯಾಗಿ ಸದಾ ಪ್ರಸನ್ನ ಮನಸ್ಸುಳ್ಳುವಳೂ ಆದ ನಿನ್ನೊಂದಿಗೆ ಸುಖ ಸಂಪತ್ತನ್ನು ಹೊಂದೋಣ.
ಇಂತಹ ಒಂದು ವೇದಮಂತ್ರವನ್ನು ಇದು ಸ್ತ್ರೀ ವಿರೋಧಿ,ಸ್ತ್ರೀಯನ್ನು ಶೋಷಣೆ ಮಾಡುವ ಮಂತ್ರವೆಂದೆಲ್ಲಾ ದೂಷಿಸುವ ಜನರಿದ್ದಾರೆ. ಯಾವುದೇ ಮಂತ್ರವನ್ನಾಗಲೀ, ಕಾವ್ಯವನ್ನಾಗಲೀ, ಕಥೆಯನ್ನಾಗಲೀ ವಿಮರ್ಷಿಸುವಾಗ ಅದರ ಒಳತಿರುಳನ್ನು ನೋಡುವ ಪ್ರಯತ್ನವನ್ನು ಮಾಡಿದರೆ ಅದರಿಂದ ಬಹಳ ಲಾಭವಾಗುತ್ತದೆ. ಹಾಗಾಗದೆ ಅದನ್ನು ವಿರೋಧಿಸಲೇಬೇಕೆಂದರೆ ತಮಗೆ ಬೇಕಾದಂತೆ ವ್ಯಾಖ್ಯಾನಿಸಬಹುದು.
ಈ ಮಂತ್ರದ ಕರೆ ಏನೆಂದು ವಿಚಾರ ಮಾಡೋಣ. ಒಂದು ಹೆಣ್ಣು ತಾನು ಮದುವೆಯಾಗಿ ಪತಿಯ ಮನೆಗೆ ಬರುವಾಗ ಆ ಹೆಣ್ಣು ಪತಿಗೆ ಪತ್ನಿ ಮಾತ್ರವೇ? ಅಥವಾ ಪತಿಯ ಮನೆಯಲ್ಲಿ ಅವಳು ಹೇಗಿದ್ದರೆ ಆ ಕುಟುಂಬ ಸಂತೋಷವಾಗಿರಲು ಸಾಧ್ಯ? ಹೊಸಮನೆಗೆ ಕಾಲಿಟ್ಟ ಆ ಹೆಣ್ಣಿನ ಜವಾಬ್ದಾರಿ ಏನೆಂಬುದನ್ನು ಸೂತ್ರ ರೂಪದಲ್ಲಿ ಈ ವೇದ ಮಂತ್ರವು ತಿಳಿಸುತ್ತದೆ. ಅಂದಮಾತ್ರಕ್ಕೆ ಪುರುಷರ ಜವಾಬ್ದಾರಿ ಇಲ್ಲವೆಂದಲ್ಲ.ಎಲ್ಲರ ಜವಾಬ್ದಾರಿ ಬಗ್ಗೆಯೂ ತಿಳಿಸುವ ಹಲವು ವೇದ ಮಂತ್ರಗಳಿವೆ. ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೂ ಅವನದೇ ಜವಾಬ್ದಾರಿಗಳಿವೆ. ಅದರಂತೆ ಕರ್ತವ್ಯವನ್ನು ನಿರ್ವಹಿಸಿದಾಗ ಮಾತ್ರ ಆ ಮನೆಯು ಸುಖೀಕುಟುಂಬ ಎನಿಸಲು ಸಾಧ್ಯ. ನವವಧುವಿನ ಜವಾಬ್ದಾರಿಯ ಬಗ್ಗೆ ಈ ವೇದ ಮಂತ್ರದಲ್ಲಿ ತಿಳಿಸಲಾಗಿದೆ.
ಕುಟುಂಬದ ಯಜಮಾನ ಹೇಗಿರಬೇಕೆಂಬುದನ್ನು ತಿಳಿಸುವಾಗ ಒಂದು ವೇದಮಂತ್ರವು ತಿಳಿಸುತ್ತದೆ. . . . . . .
ಅಘೋರೇಣ ಚಕ್ಷುಷಾಮಿತ್ರಿಯೇಣ|
ಅಂದರೆ ಶಾಂತವಾದ,ಸ್ನೇಹಪೂರ್ವಕ ದೃಷ್ಟಿಕೋನ ಹೊಂದಿದ ನಡೆಯುಳ್ಳವನು ಎಂದು ಅರ್ಥ.
ವೇದವು ಹೇಳುತ್ತದೆ ಮಕ್ಕಳನ್ನು ಸ್ನೇಹದಿಂದ ನೋಡು ಎಂದು. ಒಬ್ಬ ತಂದೆ ತನ್ನ ಮಕ್ಕಳನ್ನು ಭಯದಿಂದ ಇಟ್ಟುಕೊಂಡಿದ್ದಾನೆಂದರೆ ಅವನು ವೇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾನೆಂದೇ ಅರ್ಥ. ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆದ್ದು ವಿಶ್ವಾಸದಿಂದ ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಬೇಕೇ ಹೊರತೂ ಭಯದಿಂದಲ್ಲ. ಎಂದು ತಂದೆಯಬಗ್ಗೆ ಹೇಳುತ್ತದೆ.
ಇದೇ ರೀತಿ ಮನೆಗೆ ಸೊಸೆಯಾಗಿ ಬಂದ ಹೆಣ್ಣು ಮುಂದೆ ತಾಯಿಯ ಸ್ಥಾನವನ್ನು ಪಡೆಯುವವಳೇ .ಅವಳ ಬಗ್ಗೆ ಈ ವೇದಮಂತ್ರವು ಹೇಳುತ್ತದೆ..

ಅಘೋರಚಕ್ಷು :
ತಾಯಿಯ ದೃಷ್ಟಿ ಹೇಗಿರಬೇಕು? ಕ್ರೂರ ದೃಷ್ಟಿ ಸರ್ವಥಾ ಇರಲೇ ಕೂಡದು.ಸದಾ ಪ್ರಸನ್ನಚಿತ್ತಳಾಗಿದ್ದು ಅವಳ ದೃಷ್ಟಿಯಲ್ಲಿ ಪ್ರೇಮವು ತುಂಬಿರಬೇಕು. ಇದಕ್ಕೆ ಪುಷ್ಟಿಕೊಡುವ ಮತ್ತೊಂದು ಮಂತ್ರವೂ ಇದೆ.
ಮೃದುರ್ನಿಮನ್ಯುಃ ಕೇವಲೀ ಪ್ರಿಯವಾದಿನ್ಯನುವ್ರತಾ || [ಅಥರ್ವ ೩.೨೫.೪]
ಈ ಮಂತ್ರಭಾಗದ ಅರ್ಥವನ್ನು ನೋಡಿ.
ಮೃದುಃ = ಕೋಮಲೆಯಾಗಿ
ನಿಮನ್ಯುಃ = ಮುನಿಸಿಕೊಳ್ಳದೆ
ಪ್ರಿಯವಾದಿನೀ = ಪ್ರಿಯವಾದ ಮಾತನಾಡುತ್ತಾ
ಅನುವ್ರತಾ = ನನ್ನನ್ನು ಅನುಸರಿಸು
ಕೇವಲೀ = ಕೇವಲ ನನ್ನನ್ನು ಮಾತ್ರ ಬಯಸು
ಈ ಮಂತ್ರಭಾಗದಲ್ಲಿ ಹೆಣ್ಣಿಗೆ ಹೇಳಿರುವಂತೆ ಬೇರೆ ಮಂತ್ರಗಳಲ್ಲಿ ಪುರುಷನಿಗೂ ತನ್ನ ಹೊಣೆಯನ್ನು ವೇದ ಮಂತ್ರವು ತಿಳಿಸಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಮಂತ್ರಭಾಗದ ಬಗ್ಗೆ ವಿಚಾರ ಮಾಡೋಣ.
ನೀನು ಕೋಮಲೆಯಾಗಿ, ಯಾರೊಡನೆಯೂ ಮುನಿಸಿಕೊಳ್ಳದೆ, ಪ್ರಿಯವಾದ ಮಾತನಾಡುತ್ತಾ, ಪತಿಯನ್ನು ಅನುಸರಿಸು, ನಿನ್ನ ಬಯಕೆಗಳನ್ನು ಅವನಲ್ಲಿ ಮಾತ್ರವೇ ತಿಳಿಸು.
ನಾಲ್ಕು ಶಬ್ಧಗಳಲ್ಲಿ ಜೀವನದ ಹೊಂದಾಣಿಕೆಯ ಸೂತ್ರವನ್ನು ಎಷ್ಟು ಸುಂದರವಾಗಿ ಈ ಮಂತ್ರವು ಬಣ್ಣಿಸಿದೆ! ಒಂದು ಕುಟುಂಬವು ಸುಖವಾಗಿರಲು ಇಷ್ಟು ಅನುಸರಿಸಿದರೆ ಸಾಲದೇ?
ಇಂತಾ ಮಂತ್ರಾರ್ಥವನ್ನು ತಿಳಿಯುವಾಗ ಒಮ್ಮೆ ಅಂತರ್ವೀಕ್ಷಣೆ ಮಾಡಿಕೊಳ್ಳಬೇಡವೇ? ನಮ್ಮ ಸಂಸಾರ ಸುಖವಾಗಿರಬೇಕೆಂಬುದು ನಮ್ಮ ಇಚ್ಛೆಯಲ್ಲವೇ? ಆದ್ದರಿಂದ ನಮ್ಮಲ್ಲಿ ಈ ಗುಣಗಳಿವೆಯೇ? ಎಂದು ಒಮ್ಮೆ ನಾವು ಆತ್ಮಾವಲೋಕನ ಮಾಡಿಕೊಂಡು ಇಂತಹಾ ಗುಣಗಳಿಲ್ಲದಿದ್ದರೆ ನಮ್ಮ ಸ್ವಭಾವವನ್ನು ತಿದ್ದಿಕೊಳ್ಳಬೇಕಲ್ಲವೇ?
ಈ ಲೇಖನದ ಆರಂಭದ ಮಂತ್ರದಲ್ಲಿ ಮತ್ತೊಂದು ಅಪತಿಘ್ನೀ ಎಂಬ ಶಬ್ದವಿದೆ.

ಅಪತಿಘ್ನೀ-ಎಂದರೆ ಪತಿಯನ್ನು ನೋಯಿಸದವಳು, ಪ್ರೇಮಯುಕ್ತಳು ಎಂದು ಅರ್ಥ. ಪತಿ-ಪತ್ನಿಯ ಮಧ್ಯೆ ನಿತ್ಯ ಜಗಳ, ಮನಸ್ತಾಪವನ್ನು ನಿತ್ಯವೂ ಹಲವು ಕುಟುಂಬಗಳಲ್ಲಿ ಕಾಣಬಹುದಲ್ಲವೇ? ಚಿಕ್ಕಪುಟ್ಟ ಕಾರಣಗಳಿಗಾಗಿ ಮನಸ್ತಾಪ. ಈ ಬಗ್ಗೆ ಎಚ್ಚರಿಕೆಯನ್ನು ಈ ಮಂತ್ರವು ನೀಡುತ್ತದೆ. ಪತ್ನಿಯು ಪತಿಯ ಮನಸ್ಸನ್ನು ಅರ್ಥಮಾಡಿಕೊಂಡು ಅವನಿಗೆ ನೋಯಿಸದಿರದಂತೆ ಇರಬೇಕೆಂಬುದು ಈ ಮಂತ್ರದ ಆಶಯ.
ಪತ್ನಿಯ ಮೂರನೆಯ ಗುಣದಬಗ್ಗೆ ಈ ಮಂತ್ರವು ತಿಳಿಸುತ್ತದೆ. . . . .
ಸ್ಯೋನಾ : ಅಂದರೆ ಪತಿಗೆ ಪತ್ನಿಯಾದವಳು, ಮನೆಗೆ ಸೊಸೆಯಾದವಳು ಹೇಗಿರಬೇಕು? ಅವಳು ಮಂಗಳಕಾರಿಣಿಯಾಗಿರಬೇಕು. ಮನೆಗೆ ಗೃಹಲಕ್ಷ್ಮಿಯಾಗಿರಬೇಕು. ಮನೆಯಲ್ಲಿರುವ ಸದಸ್ಯರೆಲ್ಲರಿಗೆ ಸುಖ ಶಾಂತಿ ನೆಮ್ಮದಿ ಸಿಗುವಂತೆ ಇವಳ ಆಚರಣೆ ಇರಬೇಕು. ಪತ್ನಿ, ಸೊಸೆ,ತಾಯಿಯ ಬಗ್ಗೆ ಇದಕ್ಕೆ ಪೂರಕವಾದ ಇನ್ನೂ ಹಲವು ಮಂತ್ರಗಳಿವೆ.
ಪತ್ನಿಗಿರಬೇಕಾದ ಮತ್ತೊಂದು ಗುಣ.. . . .
ಶಗ್ಮಾ : ಈ ಪದಕ್ಕೆ ದುಃಖ ಶಮನಕಾರಿಣಿ, ಕಾರ್ಯದಕ್ಷತೆ ಉಳ್ಳವಳು,ಕೆಲಸದಲ್ಲಿ ಸುಖವನ್ನು ಕಾಣುವಳು-ಎಂಬ ಅರ್ಥಗಳಿವೆ. ಮನೆಯೊಡತಿಗೆ ಇಂತಹ ಗುಣ ಇದ್ದರೆ ಎಷ್ಟು ಚೆನ್ನ ಅಲ್ಲವೇ? ಮನೆಯ ಕುಟುಂಬದಲ್ಲಿನ ದುಃಖವನ್ನು ಶಮನ ಮಾಡುವಳು, ಅತ್ಯಂತ ದಕ್ಷತೆಯಿಂದ ಕಾರ್ಯ ಮಾಡುವವಳು, ಮತ್ತು ತಾನು ಮಾಡುವ ಕೆಲಸದಲ್ಲಿ ಸಂತೋಷವನ್ನು ಕಾಣುವವಳು. ಇದು ಮನೆಯೊಡತಿಯನ್ನು ಕುರಿತು ಹೇಳಿದ ಮಾತಾದರೂ ಮನೆಯಲ್ಲಿ ಪ್ರತಿಯೊಬ್ಬ ಸದಸ್ಯನಲ್ಲೂ ಈ ಗುಣಗಳಿರಬೇಕಲ್ಲವೇ?
ವಿವಾಹ ಸಂಸ್ಕಾರ ಸಂದರ್ಭದಲ್ಲಿ ವಧುವಿಗೆ ಸೂರ್ಯನ ದರ್ಶನ ಮಾಡಿಸುತ್ತಾ ಈ ಕೆಳಕಂಡ ಮಂತ್ರವನ್ನು ಹೇಳುತ್ತಾರೆ..
ಪಶ್ಯ ಸೂರ್ಯಸ್ಯ ಶ್ರೇಮಾನಂ ಯೋ ನ ತಂದ್ರನತೇ ಚರನ್ ||
ಇದರರ್ಥ ಹೀಗಿದೆ- ಸೂರ್ಯನನ್ನು ನೋಡು, ಅವನು ಎಂದಾದರೂ ದಣಿಯುತ್ತಾನೆಯೇ? ಅವನಂತೆಯೇ ನೀನು ಕ್ರಿಯಾಶೀಲಳಾಗು, ಆಗ ನೀನೂ ಕೂಡ ಅವನಂತೆಯೇ ಪ್ರಕಾಶಿಸುತ್ತೀಯೇ. ಮನೆಗೆ ಬೆಳಕಾಗಿರುತ್ತೀಯೆ. ಎಂತಹ ಸುಂದರ ಹೋಲಿಕೆಯಲ್ಲವೇ?
ಇನ್ನೂ ಹಲವು ಗುಣಗಳ ಬಗ್ಗೆ ವಿಚಾರಮಾಡಬೇಕಾಗಿದೆ. ಅವುಗಳನ್ನು ಸಂಕ್ಷಿಪ್ತವಾಗಿ ತಿಳಿಸುವೆ. ಉತ್ತಮವಾಗಿ ಸೇವೆ ಮಾಡುತ್ತಾ, ವೀರ ಸಂತಾನಕ್ಕೆ ಜನ್ಮಕೊಟ್ಟು, ಮೈದುನರ ಪಾಲಿಗೆ ವಾತ್ಸಲ್ಯಭರಿತೆಯಾಗಿ ಸದಾ ಪ್ರಸನ್ನ ಮನಸ್ಸುಳ್ಳುವಳಾಗಿ ಪತಿಯೊಡನೆ ಸುಖ ಸಂಪತ್ತನ್ನು ಹೊಂದಿ ಬಾಳಬೇಕೆಂಬುದು ವೇದದ ಕರೆ.
ಕುಟುಂಬಗಳಲ್ಲಿ ಶಾಂತಿ,ನೆಮ್ಮದಿ,ಸುಖದ ಕೊರತೆ ಇದ್ದರೆ ವೇದದ ಈ ಮಾರ್ಗದರ್ಶನವು ಸಹಾಯವಾಗಲಾರದೇ? ನಮ್ಮ ನಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳೋಣವೇ?

Permanent link to this article: http://www.vedasudhe.com/%e0%b2%a8%e0%b2%ae%e0%b3%8d%e0%b2%ae-%e0%b2%a8%e0%b2%ae%e0%b3%8d%e0%b2%ae-%e0%b2%95%e0%b3%81%e0%b2%9f%e0%b3%81%e0%b2%82%e0%b2%ac%e0%b2%a6-%e0%b2%ac%e0%b2%97%e0%b3%8d%e0%b2%97%e0%b3%86-%e0%b2%86/

Page 1 of 51123..1020..Last »